ಮಂಗಳವಾರ, ಮೇ 18, 2021
30 °C

`ಫಲಿತಾಂಶ ಸುಧಾರಣೆಗೆ ವಾಮಮಾರ್ಗ ಬೇಡ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಹತ್ತನೇ ವರ್ಗದ ಫಲಿತಾಂಶ ಸುಧಾರಣೆಗೆ ತರಬೇಕು ಎಂಬ ಏಕೈಕ ಕಾರಣಕ್ಕೆ ಮಕ್ಕಳನ್ನು ತಪ್ಪುಹಾದಿಗೆ ಎಳೆಯುವುದು ಇಲ್ಲವೇ ಶಿಕ್ಷಕರು ಸಾಮೂಹಿಕ ನಕಲಿಯಂಥ ವಾಮಮಾರ್ಗಕ್ಕೆ ಯತ್ನಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ವೀರಣ್ಣ ಶಿಕ್ಷಕರಿಗೆ ಕರೆ ನೀಡಿದರು.ನಗರದ ಮಾಂತಗೊಂಡ ನೀಲಮ್ಮ ಮೂಕಪ್ಪ ಸ್ಮಾರಕ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ವಿಭಾಗದಲ್ಲಿ ಗುರುವಾರ ಗಣಿತ ಶಿಕ್ಷಕರ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಾ ಪರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಫಲಿತಾಂಶ ಸುಧಾರಿಸಬೇಕು ಎಂದು ಮ್ಯಾಜಿಕ್ ಮಾಡಿದರೆ ಕೇವಲ ಬೆರಳೆಣಿಕೆಯಷ್ಟು ದಿನಗಳಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಉತ್ತಮ ಫಲಿತಾಂಶಕ್ಕಾಗಿ ನಿರಂತರ ಪರಿಶ್ರಮ ಅಗತ್ಯ. ಈಗಿನಿಂದಲೇ ಶಿಕ್ಷಕರು ಕ್ರೀಯಾಯೋಜನೆ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ ಎಂದರು.2012-13ನೇ ಸಾಲಿನ ಫಲಿತಾಂಶದಲ್ಲಿ 27ನೇ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 16ನೇ ಸ್ಥಾನಕ್ಕೆ ಬಂದಿರುವುದು ಸಂತಸ. ಆದರೆ ಅದರಲ್ಲೆ ಮೈಮರೆಯುವಂತಿಲ್ಲ. ಇನ್ನಷ್ಟು ಸ್ಥಾನ ಮೇಲಕ್ಕೇರಲು ಎಲ್ಲ ಶಿಕ್ಷಕರ ಸಾಮೂಹಿಕ ಯತ್ನ ಅಗತ್ಯ ಎಂದರು.ಜಿಲ್ಲೆಯ ಫಲಿತಾಂಶದಲ್ಲಿ ಯಲಬುರ್ಗಾ ಮೊದಲ ಸ್ಥಾನದಲ್ಲಿದ್ದರೆ ಕುಷ್ಟಗಿ, ಗಂಗಾವತಿ, ಕೊಪ್ಪಳ ನಂತರದ ಸ್ಥಾನದಲ್ಲಿವೆ. ವಿಷಯವಾರು ಗಣಿತದಲ್ಲಿ 3, ಇಂಗ್ಲಿಷ್ 4, ವಿಜ್ಞಾನ 5 ಹಾಗೂ ಕನ್ನಡದಲ್ಲಿ ಗಂಗಾವತಿ 6ನೇ ಸ್ಥಾನದಲ್ಲಿದೆ. ಇದು ಸುಧಾರಣೆಯಾಗಬೇಕು ಎಂದು ಸಲಹೆ ನೀಡಿದರು.ಬಿಇಒ ಸೋಮಶೇಖರಗೌಡ, ಶಿಕ್ಷಣ ಇಲಾಖೆ ಸಂಘದ ಪ್ರಮುಖರಾದ ಗುರುಬಸವರಾಜ, ಪಂಡಿತ್ ಯಲ್ಲಪ್ಪ, ಪಂಪನಗೌಡ, ಹುಂಬಣ್ಣ ರಾಠೋಡ್, ಮಲ್ಲನಗೌಡಗೌಡರ್, ಸುಬ್ರಹ್ಮಣ್ಯ ರಾಯ್ಕರ್, ಆರ್.ಟಿ.ನಾಯಕ್, ನಾಗಭೂಷಣ, ವಿಜಯಕುಮಾರ, ರಾಮಣ್ಣ, ಶರಣಯ್ಯ ಮೊದಲಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.