ಬುಧವಾರ, ಮೇ 12, 2021
24 °C

ಫುಟ್‌ಬಾಲ್: ಅರ್ಜೆಂಟೀನಾಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): `ಸಿಟಿ ಆಫ್ ಜಾಯ್~ ನಗರದಲ್ಲಿ ಎಲ್ಲೆಲ್ಲೂ ಫುಟ್‌ಬಾಲ್ ಜ್ವರ. ಲಿಯೊನೆಲ್ ಮೆಸ್ಸಿ ಅವರ ಮಾಂತ್ರಿಕ ಆಟಕ್ಕೆ ಮನಸೋಲದ ಪ್ರೇಕ್ಷಕನಿಲ್ಲ. ಸಿನಿಮಾ, ರಾಜಕೀಯ, ಕಾರ್ಪೊರೇಟ್ ಲೋಕದ ಚಿತ್ತವೆಲ್ಲಾ ಶುಕ್ರವಾರ ಸಾಲ್ಟ್ ಲೇಕ್‌ನ ಯುವ ಭಾರತಿ ಕ್ರೀಡಾಂಗಣದತ್ತ ಹರಿದಿತ್ತು.ಕಾರಣ ಅರ್ಜೆಂಟೀನಾ ಹಾಗೂ ವೆನಿಜುವೆಲಾ ನಡುವಿನ ಫಿಫಾ ಅಂತರರಾಷ್ಟ್ರೀಯ ಫುಟ್‌ಬಾಲ್ ಸೌಹಾರ್ದ ಪಂದ್ಯ. ಈ ಪಂದ್ಯದಲ್ಲಿ ಗೆಲುವಿನ ನಗು ಬೀರಿದ್ದು ಮೆಸ್ಸಿ ಸಾರಥ್ಯದ ಅರ್ಜೆಂಟೀನಾ. ಈ ತಂಡದವರು 1-0 ಗೋಲಿನಿಂದ ಜಯಭೇರಿ ಮೊಳಗಿಸಿದರು.ಫುಟ್‌ಬಾಲ್ ದಂತಕತೆ ಮೆಸ್ಸಿ ಗೋಲು ಗಳಿಸಲಿಲ್ಲ. ಆದರೆ 90 ನಿಮಿಷ ಕ್ರೀಡಾಂಗಣದಲ್ಲಿ ಅವರೊಬ್ಬ ಕಲಾವಿದರಾಗಿದ್ದರು. ಚೆಂಡಿನ ಮೇಲೆ ಪಾರಮ್ಯ ಸಾಧಿಸಿ ಎದುರಾಳಿ ಆವರಣದೊಳಗೆ ಪದೇಪದೇ ಚೆಂಡು ತೆಗೆದುಕೊಂಡು ಹೋಗುತ್ತಿದ್ದರು.80 ಸಾವಿರಕ್ಕೂ ಅಧಿಕ ಮಂದಿ ಈ ಪಂದ್ಯ ವೀಕ್ಷಿಸಿದರು. ಮೆಸ್ಸಿ ಎದುರಾಳಿ ಆಟಗಾರರನ್ನು ತಪ್ಪಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಚಪ್ಪಾಳೆಯ ಅಲೆ ಏಳುತಿತ್ತು. ಪ್ರತಿ ಕ್ಷಣವನ್ನು ಕಣ್ತುಂಬಿಕೊಂಡು ಆನಂದಿಸಿದರು. ಭಾರತದ ನೆಲದಲ್ಲಿ ನಡೆದ ಅತಿ ದೊಡ್ಡ ಪಂದ್ಯವಿದು.ಮೊದಲ ಅವಧಿಯಲ್ಲಿ ಗೋಲು ಬರಲಿಲ್ಲ. ಗೋಲು ಗಳಿಸಲು ಅರ್ಜೆಂಟೀನಾ ನಡೆಸಿದ ಯತ್ನವನ್ನೆಲ್ಲಾ ವೆನಿಜುವೆಲಾ ವಿಫಲಗೊಳಿಸಿತು.ಆದರೆ ದ್ವಿತೀಯಾರ್ಧದಲ್ಲಿ ಬಂದ ಗೋಲಿನಿಂದ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು. 67ನೇ ನಿಮಿಷದಲ್ಲಿ ಈ ಗೋಲು ಗಳಿಸಿದ್ದು ನಿಕೊಲಾಸ್ ಒಟಾಮೆಂಡಿ. ಕಾರ್ನರ್ ಮೂಲಕ ಮೆಸ್ಸಿ ಕಳುಹಿಸಿದ ಚೆಂಡನ್ನು ನಿಕೊಲಾಸ್ ಗೋಲಾಗಿ ಪರಿವರ್ತಿಸಿದರು.ಅರ್ಜೆಂಟೀನಾ ತಂಡದ ನೂತನ ಕೋಚ್ ಆಗಿ ನೇಮಕವಾಗಿರುವ ಕೋಚ್ ಅಲೆಜ್ಯಾಂಡ್ರೊ ಸಬೆಲ್ಲಾ ಅವರಿಗೆ ಇದು ಮೊದಲ ಪಂದ್ಯ. ಚೆಂಡಿನ ಮೇಲಿನ ನಿಯಂತ್ರಣ ಹಾಗೂ ಪಾಸ್‌ಗಳಿಗೆ ಅವರು ಹೆಚ್ಚು ಒತ್ತು ನೀಡಿದಂತಿತ್ತು. ಮಿಡ್‌ಫೀಲ್ಡ್ ವಿಭಾಗದಲ್ಲಿ ಅರ್ಜೆಂಟೀನಾ ತಂಡವೇ ಪಾರಮ್ಯ ಸಾಧಿಸಿತು. ಆದರೆ ಗೋಲಾಗಿ ಪರಿವರ್ತಿಸುವಲ್ಲಿ ಈ ತಂಡದವರು ಎಡವಿದರು.ವೆನಿಜುವೆಲಾ ತಂಡಕ್ಕೆ 16ನೇ ನಿಮಿಷದಲ್ಲಿ ಗೋಲು ಗಳಿಸುವ ಒಂದು ಅವಕಾಶ ಲಭಿಸಿತ್ತು. ಆದರೆ ಜೋಸ್ ಸಲೊಮನ್ ರೊಂಡನ್ ಆ ಅವಕಾಶವನ್ನು ಹಾಳು ಮಾಡಿಕೊಂಡರು.ಹಾಗೇ, 29ನೇ ನಿಮಿಷದಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆದ ಮೆಸ್ಸಿ ಮುನ್ನುಗ್ಗಿದರು. ಆದರೆ ಚೆಂಡು ನೇರವಾಗಿ ವೆನಿಜುವೆಲಾ ತಂಡದ ಗೋಲ್ ಕೀಪರ್ ಸರ್ಜಿಯೊ ರೊಮೆರೊ ಕೈಸೇರಿತು. ಮೆಸ್ಸಿಗೆ ಹಿಡಿತಕ್ಕೆ ಚೆಂಡು ಸಿಕ್ಕಿದ ತಕ್ಷಣ ಕ್ರೀಡಾಂಗಣದಲ್ಲಿ ಮೆಸ್ಸಿ ಹೆಸರು ಪ್ರತಿಧ್ವನಿಸುತಿತ್ತು.ವೆನಿಜುವೆಲಾ ಎದುರು ಅರ್ಜೆಂಟೀನಾಕ್ಕೆ ಸಿಕ್ಕ ಸತತ 18ನೇ ಗೆಲುವು ಇದು. ಅರ್ಜೆಂಟೀನಾ ಹಾಗೂ ವೆನಿಜುವೆಲಾಕ್ಕೆ ಇದೊಂದು ತಾಲೀಮು ಪಂದ್ಯ. ಕಾರಣ 2014ರ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಪ್ರವೇಶ ಪಡೆಯಲು ಅರ್ಹತಾ ಸುತ್ತಿನ ಪಂದ್ಯದಲ್ಲಿ ಉಭಯ ತಂಡಗಳು ಅಕ್ಟೋಬರ್ 11ರಂದು ಪೈಪೋಟಿ ನಡೆಸಲಿವೆ.ಲೋಡ್ ಶೆಡ್ಡಿಂಗ್: ಪಂದ್ಯ ಮುಗಿದ ತಕ್ಷಣವೇ ವಿದ್ಯುತ್ ಕೈಕೊಟ್ಟಿದ್ದು ಸಂಘಟಕರಿಗೆ ಮುಜುಗರ ಉಂಟು ಮಾಡಿತು. ಈ ಕಾರಣ ವೆನಿಜುವೆಲಾ ತಂಡದ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಲಾಯಿತು. ಪಂದ್ಯ ವೀಕ್ಷಿಸಿದ ಗಣ್ಯರು: ಬಾಲಿವುಡ್ ನಟರಾದ ರಣಬಿರ್ ಕಪೂರ್, ನೇಹಾ ದೂಪಿಯಾ, ರಾಹುಲ್ ಬೋಸ್ ಹಾಗೂ ಅನುರಾಗ್ ಬಸು ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.