ಸೋಮವಾರ, ಜನವರಿ 20, 2020
18 °C

ಬಂಗಾರದ ತೋಟದಲ್ಲಿ ಜನನಾಯಕನಿಗೆ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಲ್ಲಿ ಕುಟುಂಬ ವರ್ಗವಿತ್ತು. ಬಂಧು-ಮಿತ್ರರಿದ್ದರು. ಅಭಿಮಾನಿಗಳು, ಶಿಷ್ಯರು ಸೇರಿದ್ದರು. ರಾಜಕೀಯ ಮುಖಂಡರು, ಗುರು-ಹಿರಿಯರೂ, ಚಿತ್ರರಂಗದ ಗಣ್ಯರು ಆಗಮಿಸಿದ್ದರು.ಅದು ಜನನಾಯಕ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮ. ಕಳೆದ ಡಿ. 26ರಂದು ನಿಧನರಾದ ಸಮಾಜವಾದಿ ಎಸ್. ಬಂಗಾರಪ್ಪ ಅವರಿಗೆ ಶಾಂತಿ ಕೋರಲು ಅವರ ಕರ್ಮಭೂಮಿ ಸೊರಬದ ಆನವಟ್ಟಿ ಹೋಬಳಿಯ ಸಮನವಳ್ಳಿಯ `ಬಂಗಾರ ತೋಟ~ದಲ್ಲಿ ಗುರುವಾರ ಈ ಎಲ್ಲರೂ ಸೇರಿದ್ದರು.ಇದಕ್ಕೂ ಮೊದಲು ಬೆಳಿಗ್ಗೆ 8ಗಂಟೆ ಸುಮಾರಿಗೆ ಬಂಗಾರಪ್ಪ ಅವರ ಹುಟ್ಟೂರು ಕುಬಟೂರಿನ `ಬಂಗಾರ ನಿವಾಸ~ದಲ್ಲಿ ಕುಟುಂಬ ವರ್ಗದಿಂದ ಪೂಜಾ ಕಾರ್ಯಕ್ರಮ ನಡೆಯಿತು. 10ಗಂಟೆ ಸುಮಾರಿಗೆ ಬಂಗಾರಪ್ಪ ಅವರ ಅಂತ್ಯಕ್ರಿಯೆ ನಡೆದ ಸೊರಬ ಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮೀಪದ ಸ್ಥಳದಲ್ಲಿ ಕುಟುಂಬ ವರ್ಗದಿಂದ ಹಾಗೂ ಅಭಿಮಾನಿಗಳಿಂದ ಪೂಜಾ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.ಪ್ರಕೃತಿ ಆರಾಧಕರಾಗಿದ್ದ ಬಂಗಾರಪ್ಪ ಅವರ ಪ್ರೀತಿಯ ತೋಟದಲ್ಲೇ ಅವರಿಗೆ ಶ್ರದ್ಧಾಂಜಲಿ ಹಮ್ಮಿಕೊಳ್ಳಲಾಗಿತ್ತು. ಗಾಯಕರೂ ಆಗಿದ್ದ ಬಂಗಾರಪ್ಪ ಹಾಡಿದ್ದ `ಉಳ್ಳವರು ಶಿವಾಲಯ ಮಾಡುವರಯ್ಯ~ ಹಾಡು ಧ್ವನಿವರ್ಧಕದಲ್ಲಿ ಅಲೆಅಲೆಯಾಗಿ ತೇಲಿಬರುತ್ತಿತ್ತು. ಅವರು ಬಹುವಾಗಿ ಮೆಚ್ಚುತ್ತಿದ್ದ ಲಾವಣಿ, ವಚನ ಗೀತೆಗಳನ್ನು ಸ್ಥಳೀಯ ಕಲಾವಿದರೇ ಪ್ರಸ್ತುತ ಪಡಿಸಿದರು.ಬಂಗಾರಪ್ಪ ಅವರ ಜೀವನದ ಮೂರು ಘಟ್ಟಗಳನ್ನು ಪ್ರತಿಬಿಂಬಿಸುವ ಆಳೆತ್ತರದ ಭಾವಚಿತ್ರಗಳನ್ನು ಹೂವಿನೊಂದಿಗೆ ವಿಶೇಷ ವಿನ್ಯಾಸದಲ್ಲಿ ವೇದಿಕೆಯಲ್ಲಿ ಜೋಡಿಸಲಾಗಿತ್ತು. ಬಂಗಾರಪ್ಪ ಅವರ ಕಷ್ಟ-ಸುಖಗಳಲ್ಲಿ ಒಂದಾಗಿದ್ದ ಪತ್ನಿ ಶಕುಂತಲಾ ಬಂಗಾರಪ್ಪ ಅವರು ಕುಟುಂಬ ವರ್ಗದ ಜತೆ ವೇದಿಕೆ ಹತ್ತಿ ದೀಪ ಬೆಳಗಿಸಿದರು. ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.ಮಕ್ಕಳಾದ ಮಧು ಬಂಗಾರಪ್ಪ, ಸುಜಾತಾ, ಗೀತಾ, ಅನಿತಾ ಹಾಗೂ ಅಳಿಯಂದಿರಾದ `ಡೆಕ್ಕನ್ ಹೆರಾಲ್ಡ್~ ಪತ್ರಿಕೆ ಸಂಪಾದಕ ಕೆ.ಎನ್. ತಿಲಕ್‌ಕುಮಾರ್, ನಟ ಶಿವರಾಜಕುಮಾರ್, ಉದ್ಯಮಿ ಪವನ್‌ಕುಮಾರ್ ಹಾಗೂ ಅನಿತಾ ಮಧು, ಭೀಮಣ್ಣನಾಯ್ಕ, ಮೊಮ್ಮಕ್ಕಳು ಪುಷ್ಪ ನಮನ ಸಲ್ಲಿಸಿದರು. ಕೊಟ್ಟೂರು ಸಿದ್ದಲಿಂಗ ಸ್ವಾಮೀಜಿ, ಸೊಲೂರು ಈಡಿಗ ಮಾರಯ್ಯ ರೇಣುಕಾನಂದ  ಸ್ವಾಮೀಜಿ, ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸ್ವಾಮೀಜಿ, ಸಿದ್ದ ಬಸವ ಕಬೀರ ಸ್ವಾಮೀಜಿ ಹಾಗೂ ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ, ಸ್ಥಳೀಯ ಮುಸ್ಲಿಂ ಮೌಲ್ವಿ ಸಾಕ್ಷಿಯಾಗಿ, ಬಂಗಾರಪ್ಪ ಎಂಬ ಜೀವಚೇತನ ಪ್ರಭಾವಿಸಿದ ಬಗೆಯನ್ನು ತಮ್ಮದೇ ಧಾಟಿಯಲ್ಲಿ ವ್ಯಾಖ್ಯಾನಿಸಿ, ಸ್ಮರಿಸಿದರು.ವೇದಿಕೆ ಮಧ್ಯಭಾಗದಲ್ಲಿ ಗಣ್ಯರಿಗೆ ಪುಷ್ಪನಮನ ಸಲ್ಲಿಸುವ ಅವಕಾಶ ಮಾಡಿಕೊಟ್ಟರೆ, ಅಭಿಮಾನಿಗಳಿಗೆ ವೇದಿಕೆ ಅಕ್ಕ-ಪಕ್ಕ ಅವಕಾಶ ಕಲ್ಪಿಸಲಾಗಿತ್ತು. ಸಾಹಸ್ರಾರು ಅಭಿಮಾನಿಗಳು, ಗಣ್ಯರು ಆಗಮಿಸಿ ತಮ್ಮ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಂಸತ್ ಸದಸ್ಯ ಚೆಲುವರಾಯಸ್ವಾಮಿ, ಶಾಸಕ ಜಮೀರ್ ಅಹಮದ್, ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಾಲೀಕಯ್ಯ ಗುತ್ತೇದಾರ್ ಮತ್ತಿತರ ರಾಜಕೀಯ ಮುಖಂಡರು, ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)