ಮಂಗಳವಾರ, ಮೇ 17, 2022
27 °C

ಬಂಡವಾಳದ ವಿಶ್ವರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡವಾಳದ ವಿಶ್ವರೂಪ

ಜಾಗತಿಕ ಆರ್ಥಿಕ ತಲ್ಲಣ ಮತ್ತು ಅದರಿಂದ ದೇಶದ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮಗಳು ಆಗಿರುವ ಸಂದರ್ಭದಲ್ಲಿಯೇ, ಬೆಂಗಳೂರಿನಲ್ಲಿ ಮುಂದಿನ ವಾರ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ (`ಜಿಐಎಂ-2012~)  ಸಿದ್ಧತೆಗಳೆಲ್ಲ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಆಡಳಿತಾರೂಢ ಬಿಜೆಪಿಯಲ್ಲಿನ ಬಣಗಳ ಭಿನ್ನಾಭಿಪ್ರಾಯವು ರಾಜ್ಯ ಸರ್ಕಾರದ ಸ್ಥಿರತೆಗೆ ಬೆದರಿಕೆ ಒಡ್ಡಿರುವ ಸಂದರ್ಭದಲ್ಲಿಯೇ ಈ ಸಮಾವೇಶ  ನಡೆಯುತ್ತಿರುವುದು ದೊಡ್ಡ ಸಮಾಧಾನ.ಸದ್ಯದಲ್ಲೇ ನಡೆಯಲಿರುವ `ಜಿಮ್~, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಎರಡನೆ ಸಮಾವೇಶ. 2010ರ ಜೂನ್ ತಿಂಗಳ ಮೊದಲ ವಾರದಲ್ಲಿ ನಡೆದಿದ್ದ ಮೊದಲ ಸಮಾವೇಶದಲ್ಲಿ ರೂ 5 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ದೇಶ - ವಿದೇಶಗಳ ಪ್ರಮುಖ ಕೈಗಾರಿಕೋದ್ಯಮಿಗಳ ಗಮನ ಸೆಳೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿತ್ತು. ಹಲವಾರು ಖನಿಜ ಆಧಾರಿತ ಯೋಜನೆಗಳನ್ನು ಆರಂಭಿಸಲು ಖ್ಯಾತ ಉದ್ಯಮಿಗಳೂ ಮುಂದೆ ಬಂದಿದ್ದರು. ಆದರೆ, ಎರಡು ವರ್ಷಗಳಲ್ಲಿನ ಬೆಳವಣಿಗೆಗಳನ್ನು ನೋಡಿದರೆ ನಿರಾಶೆಯಾಗುತ್ತದೆ. ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಜಡತ್ವ ಕಂಡು ಬಂದಿದೆ. ಹಲವಾರು ಕಾರಣಗಳಿಗಾಗಿ ಯೋಜನೆಗಳು ಮಂದಗತಿಯಲ್ಲಿ ಕಾರ್ಯಗತಗೊಳ್ಳುತ್ತಿವೆ.  ಆದರೂ, ಹಿಂದಿನ ಸಮಾವೇಶದಿಂದ ರಾಜ್ಯ ಸರ್ಕಾರ ಸಾಕಷ್ಟು ಪಾಠಗಳನ್ನು ಕಲಿತಿದೆ ಎನ್ನುವುದು ಸ್ಪಷ್ಟವಾಗಿದೆ.ಜಾಗತಿಕ ಹಣಕಾಸು ವ್ಯವಸ್ಥೆಯು ತೀವ್ರ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿಯೇ ಈ ಬಾರಿಯ  `ಜಿಮ್~ ನಡೆಯುತ್ತಿದೆ. ಹೀಗಾಗಿ ಉದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರ ಪರಿಣಾಮಕಾರಿಯಾದ ಪಾಲ್ಗೊಳ್ಳುವಿಕೆ ಬಗ್ಗೆ ಸಾಕಷ್ಟು ಅನುಮಾನಗಳೂ ಇದ್ದೇ ಇದೆ. ಆದರೆ ವಿದೇಶಗಳಲ್ಲಿ ರಾಜ್ಯ ಸರ್ಕಾರ ನಡೆಸಿದ `ಜಿಮ್~ ಪ್ರಚಾರಕ್ಕೆ ಉತ್ತಮ ಸ್ಪಂದನ ಸಿಕ್ಕಿದೆ. ಜಪಾನ್ ಮತ್ತು ಮೆಕ್ಸಿಕೊ ದೇಶಗಳು, ಸಮಾವೇಶದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿರುವುದು ಒಳ್ಳೆಯ ಬೆಳವಣಿಗೆ.ಹೂಡಿಕೆದಾರರನ್ನು ರಾಜ್ಯಕ್ಕೆ ಆಹ್ವಾನಿಸಲು ಸರ್ಕಾರವು ಕೈಗೊಂಡ ಪ್ರಚಾರ ಅಭಿಯಾನದ ಪ್ರಭಾವ ಏನೇ ಇರಲಿ, ರಾಜ್ಯದಲ್ಲಿ ಉದ್ದಿಮೆ ಸ್ಥಾಪಿಸಲು ಆಸಕ್ತರಾದ ಕೈಗಾರಿಕೋದ್ಯಮಿಗಳು, ಇಲ್ಲಿ ಹಣ ತೊಡಗಿಸಲು ತಮ್ಮೆದುರಿಗೆ ಇರುವ ಎಲ್ಲ ಆಯ್ಕೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿಯೇ ನಿರ್ಧಾರಕ್ಕೆ ಬರುತ್ತಾರೆ. ರಾಜ್ಯದಲ್ಲಿ ತಮ್ಮ ವಹಿವಾಟು ಲಾಭದಾಯಕವಾಗಿರಲು ಪೂರಕ ಪರಿಸರ ಇದೆಯೇ ಇಲ್ಲವೇ ಎನ್ನುವುದನ್ನೂ ಗಣನೆಗೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಕರ್ನಾಟಕವು ದೇಶದ ಇತರ ರಾಜ್ಯಗಳಿಗಿಂತ ಹೇಗೆ ಭಿನ್ನವಾಗಿದೆ, ಸೌಲಭ್ಯಗಳನ್ನು ನೀಡುವಲ್ಲಿ ಅದೆಷ್ಟು ಸ್ಪರ್ಧಾತ್ಮಕವಾಗಿದೆ, ಇಲ್ಲಿರುವ ಸೌಲಭ್ಯ, ರಿಯಾಯ್ತಿಗಳು ಯಾವುವು ಎನ್ನುವುದೆಲ್ಲ ಉದ್ಯಮಿಗಳ ಪಾಲಿಗೆ ತುಂಬ ಮಹತ್ವದ್ದಾಗಿರುತ್ತದೆ.ಯಾವುದೇ ಯೋಜನೆ ಕಾರ್ಯಗತಗೊಳ್ಳಲು ಭೂಮಿ ಸ್ವಾಧೀನ ಪ್ರಕ್ರಿಯೆಯೇ ಮೊದಲ ಹೆಜ್ಜೆಯಾಗಿರುತ್ತದೆ. ಒಂದು ವೇಳೆ ಈ ಪ್ರಕ್ರಿಯೆ ಸುಸೂತ್ರವಾಗಿ ನಡೆದರೆ, ಉದ್ಯಮಿಗಳ ಮುಖ್ಯ ತಲೆನೋವು ದೂರವಾದಂತೆಯೇ ಸರಿ. ರಾಜ್ಯದಲ್ಲಿ ಕಠಿಣ ಸ್ವರೂಪದ ಭೂ ಕಾಯ್ದೆಗಳು ಜಾರಿಯಲ್ಲಿದ್ದು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಕೈಗಾರಿಕೆಗಳಿಗೆ ಅಗತ್ಯವಾಗಿ ಬೇಕಾಗುವ ಭೂಮಿ ಸುಲಭವಾಗಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ.ನೆರೆಹೊರೆಯ ರಾಜ್ಯಗಳಲ್ಲಿ ನಮ್ಮಲ್ಲಿ ಇರುವಷ್ಟು ಕಠಿಣ ಸ್ವರೂಪದ ಭೂ ಕಾಯ್ದೆಗಳು ಜಾರಿಯಲ್ಲಿ ಇಲ್ಲ. ಹೀಗಾಗಿ ಕೈಗಾರಿಕೋದ್ಯಮಿಗಳಿಗೆ ಭೂಮಿ ಮಂಜೂರು ಮಾಡುವ ಮತ್ತು ಹೂಡಿಕೆದಾರರನ್ನು ಆಕರ್ಷಿಸುವ  ವಿಷಯದಲ್ಲಿ ಅಕ್ಕಪಕ್ಕದ ರಾಜ್ಯಗಳು ನಮಗಿಂತ ಒಂದು ಹೆಜ್ಜೆ ಮುಂದೆಯೇ ಇವೆ. ಇದೇ ಕಾರಣಕ್ಕಾಗಿಯೇ ರಾಜ್ಯದಲ್ಲಿ ಮತ್ತು ನೆರೆಯ ರಾಜ್ಯಗಳಲ್ಲಿ ಭೂಮಿಯ ಬೆಲೆಯಲ್ಲಿಯೂ ಗಮನಾರ್ಹ  ವ್ಯತ್ಯಾಸ ಇದೆ. ಭೂಮಿ ಬೆಲೆಯೂ ಬಂಡವಾಳದಾರರ ಹಣ ಹೂಡಿಕೆ ನಿರ್ಧಾರದ ಮೇಲೆ ಪ್ರಭಾವ ಬೀರುತ್ತದೆ. ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ವಿದ್ಯುತ್ ಲಭ್ಯತೆ, ಗುಣಮಟ್ಟದ, ಸಮರ್ಪಕ ಪೂರೈಕೆಯ ಸದ್ಯದ ಪರಿಸ್ಥಿತಿ ಕಾಯ್ದುಕೊಂಡು ಇನ್ನಷ್ಟು ಸುಧಾರಣೆ ನಿಟ್ಟಿನತ್ತ ಸರ್ಕಾರ ಕಾರ್ಯಪ್ರವೃತ್ತವಾಗಬೇಕಾಗಿದೆ.ದೇಶದಲ್ಲಿಯೇ ಅತಿ ಹೆಚ್ಚು ಪ್ರಮಾಣದ  ತೆರಿಗೆ ದರಗಳು ಇರುವ ರಾಜ್ಯ ಎನ್ನುವ ಕುಖ್ಯಾತಿಗೂ ಕರ್ನಾಟಕ ಪಾತ್ರವಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಎಸ್‌ಡಿಪಿ) ತೆರಿಗೆಗಳ ಅನುಪಾತ ಶೇ 12ರಷ್ಟಿದೆ. ಇದು ದೇಶದಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ.  ಇದು ಬಂಡವಾಳ ಹೂಡಿಕೆದಾರರನ್ನು ಸಹಜವಾಗಿಯೇ ನಿರುತ್ತೇಜನಗೊಳಿಸುತ್ತದೆ. ಪೆಟ್ರೋಲ್ ಉತ್ಪನ್ನಗಳ ಮೇಲಿನ ತೆರಿಗೆ ದರಗಳೂ ಗರಿಷ್ಠ ಪ್ರಮಾಣದಲ್ಲಿ ಇರುವುದು, ಇದಕ್ಕೆ ಉತ್ತಮ ಉದಾಹರಣೆ.. ಈ ಬಗ್ಗೆ ರಾಜ್ಯ ಸರ್ಕಾರ ಆತ್ಮಾವಲೋಕನ ಮಾಡಿಕೊಂಡು, ತೆರಿಗೆ ದರಗಳನ್ನು ಇಳಿಸಲು ಪರಿಶೀಲನೆ ನಡೆಸಬೇಕು.ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ, ಆಡಳಿತಾರೂಢ ಬಿಜೆಪಿ ಬಣಗಳ ಒಳಜಗಳ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪ - ಬಂಧನ ಮುಂತಾದ ಬೆಳವಣಿಗೆಗಳು ರಾಜ್ಯಕ್ಕೆ ಸಾಕಷ್ಟು ಕುಖ್ಯಾತಿ ತಂದು ಕೊಟ್ಟಿವೆ.ಇತರ ರಾಜ್ಯ, ದೇಶಗಳಿಂದ ಹೊಸ ಬಂಡವಾಳ ಹೂಡಿಕೆಗಳಿಗಷ್ಟೇ `ಜಿಮ್~ ಗಮನ ಕೇಂದ್ರೀಕರಿಸುವುದು ಕೂಡ ಆಶ್ಚರ್ಯಗೊಳಿಸುವ ಸಂಗತಿ.  ಸ್ಥಳೀಯ  ಕಿರು, ಸಣ್ಣ, ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಯಶೋಗಾಥೆಗಳ ಬಗ್ಗೆಯೂ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಸರ್ಕಾರ ಗಮನ ಹರಿಸಬೇಕಾಗಿದೆ. ಭೂ ಸ್ವಾಧೀನ ಮತ್ತಿತರ ಕಾರಣಗಳಿಗಾಗಿ ತಮ್ಮ ಉದ್ದಿಮೆ ವಹಿವಾಟು ವಿಸ್ತರಿಸಲಾಗದ `ಎಂಎಸ್‌ಎಂಇ~ಗಳ ಅಹವಾಲುಗಳಿಗೂ ಕಿವಿಗೊಡಬೇಕಾಗಿದೆ. ಇಂತಹ ಸಣ್ಣ, ಮಧ್ಯಮ ಪ್ರಮಾಣದ ಉದ್ದಿಮೆಗಳು ಭಾರಿ ಪ್ರಮಾಣದಲ್ಲಿ ಯಶಸ್ವಿಯಾಗಿ, ಅಭಿವೃದ್ಧಿ ಗತಿ ತ್ವರಿತವಾಗಿ ಬದಲಾಯಿಸಲು ನೆರವಾಗುವುದಿಲ್ಲ ಎನ್ನುವುದು ನಿಜವಾದರೂ, ರಾಜ್ಯದ ಕೈಗಾರಿಕಾ ಪ್ರಗತಿಯಲ್ಲಿ ಅವುಗಳ  ಪಾತ್ರವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಹೊರರಾಜ್ಯ ಮತ್ತು ಹೊರದೇಶಗಳ ಹೂಡಿಕೆದಾರರನ್ನು ನೆಚ್ಚಿಕೊಳ್ಳುವುದಕ್ಕಿಂತ ರಾಜ್ಯದಲ್ಲಿಯೇ ಇರುವ ಉದ್ಯಮಿಗಳನ್ನೇ ಹೆಚ್ಚಾಗಿ ಅವಲಂಬಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಬೇಕು.ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಇದೇ ಬಗೆಯ ಹೂಡಿಕೆದಾರರ ಸಮಾವೇಶವು ಅಭೂತಪೂರ್ವ ಯಶಸ್ಸು ಕಂಡಿದೆ. ರೂ 10 ಲಕ್ಷ ಕೋಟಿಗಳಷ್ಟು ಮೊತ್ತವನ್ನು ಗುಜರಾತ್‌ನಲ್ಲಿ ಹೂಡಿಕೆ ಮಾಡುವುದಾಗಿ ಬಂಡವಾಳ ಹೂಡಿಕೆದಾರರು ವಾಗ್ದಾನ ನೀಡಿದ್ದಾರೆ. ಕರ್ನಾಟಕ ಸರ್ಕಾರದ ಈ ಬಾರಿಯ `ಜಿಮ್~ನಲ್ಲಿ ಜಪಾನ್, ಭಾರಿ ಪ್ರಮಾಣದ ಹೂಡಿಕೆ ಮತ್ತು ಅಚ್ಚರಿದಾಯಕ ಯೋಜನೆಗಳನ್ನು  ಪ್ರಕಟಿಸಲಿದೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ. ಬಂಡವಾಳ ಹೂಡಿಕೆಗಾಗಿಯೇ ರಾಜ್ಯ ಸರ್ಕಾರವು ಪ್ರತ್ಯೇಕ ಖಾತೆ - ಸಚಿವರನ್ನು ನೇಮಿಸಬೇಕು ಎಂದು ನಾನು ಹಿಂದಿನ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೆ. ಅನುಭವಿಗಳನ್ನೇ ಈ ಖಾತೆಯ ಸಚಿವರನ್ನಾಗಿ ನೇಮಿಸಬೇಕು. ಬಂಡವಾಳ ಹೂಡಿಕೆಯ ಪ್ರಸ್ತಾವಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದೇ ಈ ಖಾತೆಯ ಮುಖ್ಯ ಉದ್ದೇಶವಾಗಿರಬೇಕು. ಈ ಖಾತೆಯನ್ನು ಕೈಗಾರಿಕಾ ಸಚಿವರ ಸುಪರ್ದಿಗೆ ಒಪ್ಪಿಸಿರುವ ಸದ್ಯದ ವ್ಯವಸ್ಥೆಯೇ ಸರಿಯಾಗಿಲ್ಲ.  ದೇಶದ ಅರ್ಥ ವ್ಯವಸ್ಥೆಯಲ್ಲಿ ಸೇವಾ ವಲಯವು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದರಿಂದ ಅದಕ್ಕಾಗಿ ವಿಶೇಷ ಗಮನ ಹರಿಸುವುದು ಅಗತ್ಯವಾಗಿದೆ.ಒಂದು ವೇಳೆ ಸರ್ಕಾರವು ಬಂಡವಾಳ ಹೂಡಿಕೆಗೆಂದೇ ಪ್ರತ್ಯೇಕ ಸಚಿವರನ್ನು ನೇಮಿಸಿದರೆ, ಈ ಸಂಗತಿಯನ್ನು ಗಂಭೀರವಾಗಿ ತೆಗೆದುಕೊಂಡಿರುವುದು ಮತ್ತು ಅದರ ಬದ್ಧತೆ ಬಗ್ಗೆ ಹೂಡಿಕೆದಾರರಿಗೆ ಸಕಾರಾತ್ಮಕ ಸಂದೇಶ ನೀಡಲಿದೆ. ಈ  ಪ್ರತ್ಯೇಕ ಸಚಿವಾಲಯವು ವಿವಿಧ ವಲಯಗಳಲ್ಲಿನ ಬಂಡವಾಳ ಹೂಡಿಕೆಯ ಪ್ರಗತಿಯ ಮೇಲ್ವಿಚಾರಣೆ ನಡೆಸಬಹುದು. ಸಮಾವೇಶದ ಕೊನೆಗೊಂಡ ನಂತರ ನಿರ್ಲಕ್ಷ್ಯಕ್ಕೆ ಒಳಗಾಗುವ ಹೂಡಿಕೆ  ಪ್ರಕ್ರಿಯೆ ನಿಧಾನಗೊಳ್ಳದಂತೆಯೂ ಎಚ್ಚರವಹಿಸಬಹುದು. ಹೊಸ ಖಾತೆ ಪ್ರಕಟಿಸಲು `ಜಿಮ್-2012~ ಸೂಕ್ತ ವೇದಿಕೆಯೂ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.