ಸೋಮವಾರ, ಜೂನ್ 14, 2021
26 °C

ಬಂದ್‌: ಪರದಾಡಿದ ಪ್ರಯಾಣಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸ್ವಯಂ ಪ್ರೇರಿತ ಬಂದ್‌ ನಡೆದ ಹಿನ್ನೆಲೆಯಲ್ಲಿ ಉಡುಪಿ ಮತ್ತು ಮಂಗಳೂರು ಮಧ್ಯೆ ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ ಸಂಚಾರ ಸ್ಥಗಿತಗೊಂಡು ಜನರು ತೊಂದರೆ ಅನುಭವಿಸಿದರು.ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮೂಲಕ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ಹೋಗಬೇಕಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳೂ ಕಾರ್ಯಾಚರಿಸಲಿಲ್ಲ. ಇದರಿಂದಾಗಿ ಮಂಗಳೂರು ಮತ್ತು ವಿವಿಧ ಊರುಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಬಂದ್‌ ಸುದ್ದಿ ಮೊದಲೇ ಗೊತ್ತಿದ್ದ ಕಾರಣ ಸ್ಥಳೀಯರು ಬಹುತೇಕ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದರು.ಆದರೆ ಬೇರೆ ಊರುಗಳಿಂದ ಉಡುಪಿಗೆ ಬಂದು ಮಂಗಳೂರು ಮುಂತಾದೆಡೆ ಹೋಗಬೇಕಿದ್ದವರು ಬಸ್‌ಗಳಿಲ್ಲದೆ ಪರದಾಡಿದರು.

ಖಾಸಗಿ ಬಸ್‌ ಸಂಚಾರ ಇಲ್ಲ ಎಂದು ಗೊತ್ತಾದ ನಂತರ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದು ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಮಣಿಪಾಲ – ಮಂಗಳೂರು ವೋಲ್ವೋ ಬಸ್‌ ಸೇರಿದಂತೆ ಮಂಗಳೂರು ಮಾರ್ಗವಾಗಿ ಸಂಚರಿಸ­ಬೇಕಾಗಿದ್ದ ಎಲ್ಲ ಬಸ್‌ಗಳ ಓಡಾಟ ಸ್ಥಗಿತ­ಗೊಳಿಸ­ಲಾಯಿತು. ಸಂಜೆ ಆರು ಗಂಟೆಯ ನಂತರ ಬಸ್‌ಗಳು ಸಂಚಾರ ಆರಂಭಿಸಿದವು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.ಉಡುಪಿ ನಗರ ಬಸ್‌ಗಳ ಸಂಚಾರ ಎಂದಿನಂತೆ ಇತ್ತು. ಕಾರ್ಕಳ, ಕುಂದಾಪುರ, ಶಿವಮೊಗ್ಗ ಮಾರ್ಗದಲ್ಲಿ ಬಸ್‌ ಸಂಚಾರ ಮಾಮೂಲಿ­ಯಂತಿತ್ತು. ಮಂಗಳೂರು– ಶಿವಮೊಗ್ಗ ಬಸ್‌ಗಳು ಮಂಗಳೂರಿನ ಬದಲು ಉಡುಪಿಯನ್ನು ಆರಂಭಿಕ ಪಾಯಿಂಟ್‌ ಮಾಡಿಕೊಂಡು ಸಂಚರಿಸಿ­ದವು. ಮಂಗಳೂರಿನಿಂದ ಬೆಳಿಗ್ಗೆ ಸಂಚಾರ ಆರಂಭಿಸ­ಬೇಕಿದ್ದ ಎಲ್ಲ ಬಸ್‌ಗಳು ಭಾನುವಾರ ರಾತ್ರಿ ಮಂಗಳೂರಿಗೆ ಹೋಗದೆ ಉಡುಪಿಯಲ್ಲಿಯೇ ಉಳಿದಿದ್ದವು.ಸರ್ಕಾರಿ ಕಚೇರಿ ಮತ್ತು ಬ್ಯಾಂಕ್‌ಗಳಲ್ಲಿ ಗೈರು ಉದ್ಯೋಗಿಗಳ ಹಾಜರಿಯ ಸಂಖ್ಯೆ ಎಂದಿಗಿಂತ ಸ್ವಲ್ಪ ಹೆಚ್ಚಿತ್ತು. ಶಾಲಾ ವಿದ್ಯಾರ್ಥಿಗಳೂ  ಸ್ವಲ್ಪ  ತೊಂದರೆ ಅನುಭವಿಸಿದರು. ಮಂಗಳೂರು ಬಸ್‌ಗಳು ಇಲ್ಲದ ಕಾರಣ ಉಡುಪಿಯ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸುಗಮವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.