ಶನಿವಾರ, ಫೆಬ್ರವರಿ 27, 2021
31 °C

ಬಂಧಮುಕ್ತ ಹಕ್ಕಿಗಳ ಮನದಾಳ

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಬಂಧಮುಕ್ತ ಹಕ್ಕಿಗಳ ಮನದಾಳ

ಮೈಸೂರು: ನಗರದ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಸಡಗರ ಮನೆ ಮಾಡಿತ್ತು, ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಭಾಗ್ಯ ಲಭಿಸಿದ ಕೈದಿಗಳ ಮೊಗದಲ್ಲಿ ಮನೆಗೆ ತೆರಳುವ, ಹೊಸ ಬದುಕು ಕಟ್ಟಿಕೊಳ್ಳುವ ಸಂತಸ ಕಳೆಗಟ್ಟಿತ್ತು. ತಪ್ಪಿನ ಅರಿವು, ಜೈಲಿನಲ್ಲಿ ಸವೆಸಿದ ದಿನಗಳು, ಭವಿಷ್ಯದ ಕನವರಿಕೆಗಳನ್ನು ಅವರು ಬಿಚ್ಚಿಟ್ಟರು...ಪತಿ ಬಿಡುಗಡೆ ನಿರೀಕ್ಷೆ; ಪುತ್ರಿ ಸುರಕ್ಷತೆ ಹೊಣೆ

‘14 ವರ್ಷ ಜೈಲುವಾಸ ಅನುಭವಿಸಿ ಸನ್ನಡತೆ ಆಧರಿಸಿ ಬಿಡುಗಡೆಗೊಂಡು ಮನೆಗೆ ಹೋಗುತ್ತಿರುವುದು ಖುಷಿಯಾಗಿದೆ. ಆದರೆ, 23 ವರ್ಷಗಳಿಂದ ಕಾರಾಗೃಹ ವಾಸ ಅನುಭವಿಸುತ್ತಿರುವ ಪತಿ ಅನ್ಬುರಾಜ್‌ ಅವರಿಗೂ ಈ ಭಾಗ್ಯ ಸಿಗದಿರುವುದು ಬೇಸರ ಮೂಡಿಸಿದೆ’ ಎಂದು ತಮಿಳುನಾಡಿನ ಚೆನ್ನೈನ ರೇವತಿ ಪ್ರತಿಕ್ರಿಯಿಸಿದರು.‘ಬೆಂಗಳೂರಿನಲ್ಲಿ ನಾನು ಮನೆಗೆಲಸ ಮಾಡುತ್ತಿದ್ದ ಮನೆಯ ಒಡತಿ ನನ್ನನ್ನು ವೇಶ್ಯವಾಟಿಕೆಗೆ ನೂಕಲು ಯತ್ನಿಸಿದ್ದಳು. ಜಗಳದಲ್ಲಿ ಆಕೆಯನ್ನು ಕೊಲೆ ಮಾಡಿದ ಪ್ರಕರಣದಡಿ ಬಾಲಮಂದಿರ ಸೇರಿ ನಂತರ ಜೈಲು ಪಾಲಾದೆ. ಜೈಲು ಸೇರಿದಾಗ ಕನ್ನಡ ಬರುತ್ತಿರಲಿಲ್ಲ. ಇಲ್ಲಿ ಕನ್ನಡವನ್ನು ಕಲಿತೆ. ನಂತರ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ‘ಸ್ತ್ರೀ ಶಕ್ತಿ ಸಬಲೀಕರಣ’ ಡಿಪ್ಲೊಮಾ ಅಧ್ಯಯನ ಮಾಡಿದೆ. ನಾಟಕಗಳಲ್ಲಿ ಅಭಿನಯಿಸಿದೆ. ಜೈಲಿನಲ್ಲಿ ಜೀವನದ ಬಹಳಷ್ಟು ಪಾಠಗಳನ್ನು ಕಲಿತೆ’ ಎಂದು ಜೈಲಿನ ಅನುಭವ ಬಿಚ್ಚಿಟ್ಟರು.‘ನಾಟಕ ಕಲಿಯುತ್ತಿದ್ದಾಗ ಅನ್ಬುರಾಜ್‌ ಅವರೊಂದಿಗೆ ಪ್ರೇಮ ಹುಟ್ಟಿತು. 2011ರಲ್ಲಿ ಪೆರೊಲ್‌ ಮೇಲೆ ತೆರಳಿದ್ದಾಗ ನಾವಿಬ್ಬರು ಮದುವೆಯಾದೆವು. ನನ್ನ ಪತಿ ದೂರದ ಸಂಬಂಧಿ ಮತ್ತು ತಮಿಳುನಾಡಿನ ಈರೋಡ್‌ ಊರಿನವರು. ನಮಗೆ ಈಗ 9 ತಿಂಗಳ ಹೆಣ್ಣು ಮಗು ಇದೆ. ಈ ಮಗುವಿಗೆ ಉಜ್ವಲ ಭವಿಷ್ಯವನ್ನು ರೂಪಿಸುವುದೇ ಜೀವನದ  ಗುರಿ’ ಎಂದರು.‘ಈಗ ತಮಿಳುನಾಡಿಗೆ ತೆರಳಿ, ತೋಟಗಾರಿಕೆ ವೃತ್ತಿಯಲ್ಲಿ ಬದುಕು ಕಂಡುಕೊಳ್ಳುತ್ತೇನೆ. ವೀರಪ್ಪನ್‌ಗೆ ಆಹಾರ  ಪೂರೈಕೆ ಮಾಡಿದ ಅಪರಾಧ ಪ್ರಕರಣದಲ್ಲಿ ಪತಿ ಅನ್ಬುರಾಜ್‌ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣದಡಿ ನನ್ನ ಭಾವಂದಿರು ಜೈಲು ವಾಸ ಅನುಭವಿಸುತ್ತಿದ್ದಾರೆ. ಪತಿ ಮತ್ತು ಭಾವಂದಿರಿಗೆ ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಭಾಗ್ಯ ಸಿಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಹೇಳಿದರು.ಪತ್ನಿಯ ಬಿಡುಗಡೆಗೆ ನಿರೀಕ್ಷೆ

‘ಜಮೀನು ವಿವಾದವೊಂದರಲ್ಲಿ ಒಬ್ಬರನ್ನು ಕೊಲೆ ಮಾಡಿದ ಪ್ರಕರಣದಡಿ ಜೈಲು ಸೇರಿದೆ. 14 ವರ್ಷ ಕಾರಾಗೃಹ ವಾಸ ಅನುಭವಿಸಿದ್ದೇನೆ. ಪತ್ನಿಯೂ ಜೈಲಿನಲಿದ್ದಾಳೆ. ಪತ್ನಿಗೂ ಸನ್ನಡತೆಯ ಆಧಾರದಲ್ಲಿ ಬಿಡುಗಡೆಯ ಭಾಗ್ಯ ಸಿಗುವುದೆಂಬ ನಿರೀಕ್ಷೆಯಲ್ಲಿದ್ದೇನೆ’ ಎಂದು ಚಂಗಮಾಂಡ ಅಯ್ಯಪ್ಪ  ಹೇಳಿದರು.‘ನಾನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹಳ್ಳಿಯವ. ಊರಿನಲ್ಲಿ ತಾಯಿ ಮತ್ತು 15 ವರ್ಷದ ಪುತ್ರಿ ಇದ್ದಾರೆ. ಕೃಷಿ ನಮ್ಮ ಕುಲ ಕಸುಬು. ತಾಯಿ ಮತ್ತು ಮಗಳ ಯೋಗಕ್ಷೇಮ ನೋಡಿಕೊಂಡು ವ್ಯವಸಾಯದಲ್ಲಿ ತೊಡಗಿಕೊಳ್ಳುತ್ತೇನೆ. ಒಳ್ಳೆಯ ಬದುಕು ರೂಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದರು.ಅಮ್ಮನ ಬಿಡುಗಡೆ ನಿರೀಕ್ಷೆ

‘ಜಮೀನು ವಿವಾದದಲ್ಲಿ ಸೋದರತ್ತೆ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದೆ. ನಂತರ ಹನ್ನೆರಡೂವರೆ ವರ್ಷ ಜೈಲು ಅನುಭವಿಸಿದ್ದೇನೆ. ನನ್ನ ಜೊತೆಗೆ ಜೈಲಿನಲ್ಲಿರುವ ತಾಯಿ ರಾಜಮ್ಮ ಅವರಿಗೂ ಬಿಡುಗಡೆ ಭಾಗ್ಯ ಸಿಕ್ಕಿದ್ದರೆ ಇನ್ನೂ ಖುಷಿಯಾಗುತ್ತಿತ್ತು’ ಎಂದು ಮಹೇಶ್‌ ಹೇಳಿದರು.‘ಚಾಮರಾಜನಗರ ಜಿಲ್ಲೆಯ ಬಾಗಳೆ ನಮ್ಮೂರು. ಈಗ ಬಿಡುಗಡೆಯಾಗಿದೆ. ಮುಂದೆ ಏನು ವೃತ್ತಿ ಮಾಡುವುದು ಎಂಬ ಬಗ್ಗೆ ಯೋಚಿಸುತ್ತಿದ್ದೇನೆ. ಅಧಿಕಾರಿಗಳು, ನಮ್ಮ ಹಿತಚಿಂತಕರಿಂದ ಮಾರ್ಗದರ್ಶನ ಪಡೆದು ಮುನ್ನಡೆಯುತ್ತೇನೆ. ಜೈಲಿನ್ಲಲಿದ್ದ  ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಮನಪರಿವರ್ತನೆಗೆ ಇಲ್ಲಿನ ಚಟುವಟಿಕೆಗಳು ಸಹಕಾರಿಯಾಗಿವೆ. ನಮ್ಮ ತಾಯಿಯವರಿಗೂ ಸನ್ನಡತೆ ಆಧಾರದಲ್ಲಿ ಬಿಡುಗಡೆ ಸಿಗುತ್ತದೆಂಬ ಭರವಸೆ ಇದೆ’ ಎಂದು ಹೇಳಿದರು.‘ಹುಣಸೂರು ತಾಲ್ಲೂಕಿನ ಗೊಣನಹೊಸಳ್ಳಿ ಊರು. ಚಿಕ್ಕಪ್ಪನ ಮಗಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದವನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದೆ. ನನ್ನ ಮನಪರಿವರ್ತನೆ ಆಗಿದೆ.  ನಾನು ವಿದ್ಯಾಭ್ಯಾಸ ಮಾಡಿಲ್ಲ ಮುಂದೆ ವ್ಯವಸಾಯ ಮಾಡುತ್ತೇನೆ’ ಎಂದು ಗಣೇಶ್‌ ಹೇಳಿದರು.

42 ಕೈದಿಗಳು ಬಿಡುಗಡೆಗೊಂಡರು. ನಾಟಕ ಕಲಿಸಿದ ರಂಗಕರ್ಮಿ ಹುಲಗಪ್ಪ ಕಟ್ಟಿಮನಿ ಅವರಿಗೆ ಕೈದಿಗಳು ಕೃತಜ್ಞತೆ ಹೇಳಿದರು.ಮರುಹುಟ್ಟು ಸಿಕ್ಕಂತಾಗಿದೆ...

ಬಿಡುಗಡೆಗೊಂಡವರಿಗೆ ಮರುಹುಟ್ಟು ಸಿಕ್ಕಂತಾಗಿದೆ. ಸಮಾಜದಲ್ಲಿ ಉತ್ತಮವಾಗಿ ನಡೆದುಕೊಳ್ಳುವ ಮೂಲಕ ಅಲ್ಲಿಯೂ ಸನ್ನಡತೆ ‘ಸರ್ಟಿಫಿಕೇಟ್‌’ ಪಡೆದುಕೊಳ್ಳಬೇಕು. ಸನ್ನಡತೆ ಹೊಂದಿರುವ ಇತರ ಕೈದಿಗಳಿಗೂ ಬೇಗ ಬಿಡುಗಡೆ ಭಾಗ್ಯ ಲಭಿಸಲಿ ಎಂಬುದು ನಮ್ಮ ಹಾರೈಕೆ.

- ಯೋಗೇಶ್‌, ಬಂಧಮುಕ್ತ ‘ಹಕ್ಕಿ’, ಕಲ್ಲುಗಣಿ, ಹಾಸನ ಜಿಲ್ಲೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.