ಸೋಮವಾರ, ಮೇ 23, 2022
22 °C

ಬಜರಂಗ ದಳದ ಮೂವರಿಗೆ ಪೆಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಗರದ ಅಂಡೆಛತ್ರ ಸಮೀಪದ ಮಹಮದ್‌ಖಾನ್ ಗಲ್ಲಿ ಯಲ್ಲಿ ಗೋ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಬಜರಂಗ ದಳ ಕಾರ್ಯ ಕರ್ತರು ಎರಡು ಮಳಿಗೆಗಳ ಮೇಲೆ ಸೋಮವಾರ ಸಂಜೆ 4.30ಕ್ಕೆ ದಾಳಿ ನಡೆಸಲು ಯತ್ನಿಸಿದರು.ಈ ಸಂದರ್ಭದಲ್ಲಿ ಸ್ಥಳೀಯರು ಹಲ್ಲೆ ನಡೆಸಿದ್ದರಿಂದ ಬಜರಂಗ ದಳದ ಕಾರ್ಯಕರ್ತರಾದ ರಘು, ಶಾಂತಿ ಮತ್ತು ಪುರುಷೋತ್ತಮ್ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.ಪ್ರಕರಣದಲ್ಲಿ ಬಜರಂಗದಳ ಕಾರ್ಯ ಕರ್ತ ಶಾಂತಿ ಎಂಬಾತನ ತಲೆ ಮತ್ತು ಮೈಕೈಗೆ ಪೆಟ್ಟಾಗಿದೆ. ಉಳಿದಿಬ್ಬರಿಗೆ ಸಣ್ಣ ಗಾಯವಾಗಿದೆ.ಬೆಂಕಿ-ಅಂಗಡಿಗೆ ಹಾನಿ: ಇದೇ ವೇಳೆ, ಫೈರೋಜ್ ಮತ್ತು ಅಮ್ಜದ್ ಮಾಲೀಕತ್ವದ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಭಾಗಶಃ ಸುಟ್ಟುಹೋಗಿವೆ. ಒಂದು ಬೈಸಿಕಲ್ ಸಹ ಹಾನಿಗೊಂಡಿದೆ. ತಕ್ಷಣ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.ಆರೋಪ:

ಬಜರಂಗ ದಳ ಕಾರ್ಯಕರ್ತರೇ ಅಂಗಡಿಗಳಿಗೆ ಬೆಂಕಿ ಹಚ್ಚಿದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಅಂಗಡಿಯವರೇ ಬೆಂಕಿ ಹಾಕಿಕೊಂಡು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಬಜರಂಗ ದಳ ಕಾರ್ಯಕರ್ತರು ಪ್ರತಿ ಆರೋಪ ಮಾಡಿದ್ದಾರೆ.ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾ ಸಶಸ್ತ್ರ ಮೀಸಲುಪಡೆ ಹಾಗೂ ನಗರ ಠಾಣೆ ಪೊಲೀಸರು ಗುಂಪು ಚೆದುರಿಸಿದರು. ಸದ್ಯ ಮೀಸಲು ಪಡೆ ಪೊಲೀಸ್ ವಾಹನಗಳು ಸ್ಥಳದಲ್ಲಿಯೇ ಇವೆ.ಎರಡೂ ಬಣದ ಹೇಳಿಕೆ ದಾಖಲಿ ಸಿಕೊಂಡಿರುವ ಪೊಲೀಸರು, ಈವರೆಗೂ ಯಾರನ್ನೂ ಬಂಧಿಸಿಲ್ಲ. ಪ್ರಕರಣವನ್ನೂ ದಾಖಲಿಸಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸಿ ಅಪರಾಧ ಎಸಗಿದವರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದರು. ಅಂಡೆ ಛತ್ರದ ಬಳಿ ಮೀ ಸಲು ಪೊಲೀಸ್ ವಾಹನ ನಿಲ್ಲಿಸ ಬೇಕು, ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು.ಇದೇ ವೇಳೆ, ಬಜರಂಗದಳ ಕಾರ್ಯ ಕರ್ತರು ಏನೇ ಇದ್ದರೂ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು ಎಂದು ಕಾಂಗ್ರೆಸ್ ಮುಖಂಡ ಮೂರ್ತಿ ಮತ್ತು ಮುನೀರ್ ಅಹಮದ್ ಆಕ್ಷೇಪಿಸಿದ್ದಾರೆ.ಕಾರ್ಯಕರ್ತರ ಪ್ರತಿಭಟನೆ

ಚಿಕ್ಕಮಗಳೂರು:
ಗೋಹತ್ಯಾ ಕೇಂದ್ರವನ್ನು ಮುಚ್ಚಿಸಲು ಯತ್ನಿಸಿದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ಬಜರಂಗದಳ ಕಾರ್ಯಕರ್ತರು ಸೋಮವಾರ ರಾತ್ರಿ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.ಸ್ಥಳದಲ್ಲಿಯೇ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್‌ಕುಮಾರ್ ಅವರ ಜತೆ ಮಾತನಾಡಿದ ನಾಯಕರು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸದಿದ್ದರೆ ಕಾನೂನು ಕೈಗೆತ್ತಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಕಾರ್ಯಕರ್ತರ ಮನವೊಲಿಸಿದರು.

ಬಂದೋಬಸ್ತ್: ಜಿಲ್ಲೆಯ ವಿವಿಧೆಡೆ ಗಳಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಗರಕ್ಕೆ ಕರೆಸಿ ಕೊಳ್ಳಲಾಗಿದೆ.  ರಾತ್ರಿ ಗಸ್ತು ಹೆಚ್ಚಿಸಲು ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಎಂ.ಜಿ.ರಸ್ತೆ ಯುದ್ದಕ್ಕೂ ಸಮವಸ್ತ್ರ ಧಾರಿ ಪೊಲೀ ಸರೇ ಕಂಡುಬರುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.