ಗುರುವಾರ , ಜೂನ್ 24, 2021
21 °C

ಬಟ್ಟೆ ಹರಿದಿದ್ದೇ ವಿರೋಧ ಪಕ್ಷಗಳಿಗೆ ಬಂಡವಾಳ

ಪಿ.ಮಂಜುನಾಥ್/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಈ ವಿಧಾನಸಭಾ ಕ್ಷೇತ್ರ ಒಳಗೊಂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಕಣಕ್ಕಿಳಿಯುತ್ತಿದ್ದಂತೆ ಅವರು ಹಿಂದೆ ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡಿದ್ದರು ಎಂಬ ವಿಷಯವೇ ಪರ ವಿರೋಧಿಗಳಿಗೆ ಬಂಡವಾಳವಾಗಿದೆ.‘ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡಿದ್ದವರಲ್ಲವೆ ಗೂಳಿಹಟ್ಟಿ ಶೇಖರ್’ ಎಂದು ಸಾಮಾನ್ಯ ಮತದಾರರು ಅವರನ್ನು ಗುರುತಿಸುತಿದ್ದು, ಅವರ ವಿರೋಧಿಗಳಿಗೂ ಬಟ್ಟೆ ಹರಿದುಕೊಂಡಿದ್ದೇ ಅವರ ವಿರುದ್ದ ವಾಗ್ದಾಳಿ ನಡೆಸಲು ಪ್ರಮುಖ ಬಂಡವಾಳವಾಗಿದೆ.

ಜೆಡಿಎಸ್ ಮುಖಂಡರು ಕೂಡ ಪದೇ ಪದೇ ಅದೇ ವಿಷಯವನ್ನು ಸಭೆ ಸಮಾರಂಭಗಳಲ್ಲಿ ಪ್ರಸ್ತಾಪಿಸುತ್ತಾ ಗೂಳಿಹಟ್ಟಿ ಶೇಖರ್‌ಗೆ ಇರಿಸು ಮುರಿಸು ಉಂಟು ಮಾಡುತ್ತಿದ್ದಾರೆ.‘ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡು ಬೆಂಚ್ ಹತ್ತಿ ನಿಂತು ಗೂಳಿ ತರ ಪ್ರತಿಭಟಿಸಿದ ನಮ್ಮ ಶೇಖರಣ್ಣ ಲೋಕಸಭೆಗೆ ಹೋಗಬೇಕು..ಅಲ್ಲಿಯೂ ಇಂಥದ್ದೇ ಪ್ರತಿಭಟನೆ ಮೂಲಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಡೆಯಬೇಕು...’ ಎಂದು ಜೆಡಿಎಸ್ ಮುಖಂಡರು ಪ್ರತಿಪಾದಿಸುತಿದ್ದಾರೆ.ಅವರು ಒಳ್ಳೆಯ ಅರ್ಥದಲ್ಲಿ ಆಡುವ ಇದೇ ಮಾತು ವಿರೋಧಿಗಳ ಪಾಳಯದಲ್ಲಿ ಛೇಡಿಸುವ ಮಾತಾಗಿ ಬಳಕೆಯಾಗುತ್ತಿದೆ. ‘ಪವಿತ್ರವಾದ ವಿಧಾನಸೌಧದಲ್ಲಿ ಬಟ್ಟೆ ಹರಿದುಕೊಂಡು ಸದನಕ್ಕೆ ಅವಮಾನ ಮಾಡಿದ ಗೂಳಿಹಟ್ಟಿ ಶೇಖರ್ ಮತ್ತೊಮ್ಮೆ ನಮ್ಮ ಪ್ರತಿನಿಧಿಯಾಗಿ ಲೋಕಸಭೆಗೆ ಹೋಗಬೇಕಾ..? ಅಲ್ಲಿಯೂ ಬಟ್ಟೆ ಹರಿದುಕೊಂಡು ಈ ಲೋಕಸಭಾ ಕ್ಷೇತ್ರದ ಜನತೆಯ ಮರ್ಯಾದೆ ಹರಾಜಿಗಿಡಬೇಕಾ...?’ ಎಂದು ನೇರ ವಾಗ್ದಾಳಿ ನಡೆಸುತ್ತಾರೆ.ಇಂಥ ವಾಗ್ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನೇ ನೀಡುತ್ತಿರುವ ಜೆಡಿಎಸ್ ಮುಖಂಡರು ‘ಹೌದೌದು, ನಮ್ಮ ಶೇಖರಣ್ಣ ತನಗೆ ಆದ ಅನ್ಯಾಯಕ್ಕೆ ಬಟ್ಟೆ ಹರಿದುಕೊಂಡರೇ ಹೊರತು; ಸದನದಲ್ಲೇ ಬ್ಲೂಫಿಲಂ ನೋಡಿ ವಿಧಾನಸಭೆಗೆ ಅಪಚಾರವೆಸಗಲಿಲ್ಲ’ ಎಂದು ತಿರುಗೇಟು ನೀಡುತಿದ್ದಾರೆ.ಈ ರೀತಿಯಾಗಿ ಬಟ್ಟೆ ಹರಿದುಕೊಂಡಿದ್ದರ ಪರ–ವಿರೋಧವಾಗಿ ಭಾರೀ ಚರ್ಚೆಯೇ ನಡೆಯುತಿದ್ದು, ಸ್ವತಃ ಗೂಳಿಹಟ್ಟಿ ಶೇಖರ್ ಈ ಬಗ್ಗೆ ಅಂದು ಏನಾಯಿತು ಎಂಬ ಬಗ್ಗೆ ವಿವರಣೆ ನೀಡಿ, ‘ಬಟ್ಟೆ ನಾನು ಹರಿದುಕೊಳ್ಳಲಿಲ್ಲ. ಮಾರ್ಷಲ್‌ಗಳು ಹರಿದರು’ ಎಂದರೂ ಯಾರೂ ಅದಕ್ಕೆ ಕಿವಿಗೊಡುತ್ತಿಲ್ಲ.ವಿಧಾನಸಭೆಯಲ್ಲಿ ಏನಾಯಿತು ಎಂಬ ವಾಸ್ತವ ಅರಿಯಲು ಯಾರೂ ಸಿದ್ಧರಿಲ್ಲ. ‘ಇಲ್ಲಿನ ಮತದಾರರಿಗೆ ಗೂಳಿಹಟ್ಟಿ ಶೇಖರ್ ಅಂಗಿ ಹರಿದುಕೊಂಡಿದ್ದು ಇಷ್ಟವಾಗಿದೆ’ ಎಂದು ಭಾವಿಸಿರುವ ಜೆಡಿಎಸ್ ನಾಯಕರು ತಮ್ಮ ಅಭ್ಯರ್ಥಿಯ ವರ್ಚಸ್ಸು ಹಾಳುಗೆಡವುತ್ತಿದ್ದಾರೆ. ವಿರೋಧಿಗಳಿಗೆ ರೆಡಿಮೇಡ್ ದಾಳ ಒದಗಿಸಿಕೊಟ್ಟಿದ್ದಾರೆ.ಸ್ಥಳೀಯ ಸಮಸ್ಯೆಗಳನ್ನು ಕಡೆಗಣಿಸಿರುವ ಮೂರೂ ಪಕ್ಷಗಳು ಸಲ್ಲದ ವಿಚಾರದ ಬಗ್ಗೆಯೇ ಚರ್ಚೆ ನಡೆಸುತ್ತಿರುವುದು ಮತದಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.