ಶನಿವಾರ, ಏಪ್ರಿಲ್ 17, 2021
32 °C

ಬಡ ಸಹೋದರರ ಸಿರಿವಂತ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕೆಲವು ಕ್ಷೇತ್ರಗಳಲ್ಲಿ ಲಾಬಿ ಇದ್ದವರಿಗೆ ಪ್ರಶಸ್ತಿ, ಪ್ರಚಾರ ಕೊಟ್ಟರೆ ಪುನಸ್ಕಾರ~ ಎನ್ನುವ ಮಾತು ಪ್ರಚಲಿತ. ಅರ್ಹರಿಗೆ ಪ್ರಶಸ್ತಿ ಸಿಗುವುದು ಅತಿ ವಿರಳ. ಹಾಗೆಯೇ ಪುಕ್ಕಟೆ ಪ್ರಶಸ್ತಿ ನೀಡುವ ಜಾಯಮಾನವೂ ಅನೇಕರಲ್ಲಿ ಇಲ್ಲ ಎಂಬುದು ಇಂದಿನ ಸತ್ಯ.

ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಿಂಜಲಬಾವಿ ಗ್ರಾಮದ ನಾಲ್ವರು ಬಡ ಮುಸ್ಲಿಂ ಸಹೋದರರು ಇದಕ್ಕೆ ಅಪವಾದ.



ಲಾಬಿ ಮಾಡಲಾಗದೆ ಪ್ರಶಸ್ತಿ ವಂಚಿತರಾಗುವ ನಿವೃತ್ತ ಅರ್ಹ ಶಿಕ್ಷಕರಿಗೆ ಇವರಿಂದ ಸನ್ಮಾನ. 23 ವರ್ಷಗಳಿಂದ ಮುನ್ನೂರಕ್ಕೂ ಅಧಿಕ ನಿವೃತ್ತ ಶಿಕ್ಷಕರನ್ನು ಸ್ವಂತ ಹಣದಲ್ಲಿಯೇ ಸನ್ಮಾನ ಮಾಡುತ್ತಿರುವ ಇವರು ಪ್ರಚಾರದಿಂದ ಬಲು ದೂರ. ದಿವಂಗತರಾಗಿರುವ ತಂದೆಯ ಆದರ್ಶ, ಪತಿಯ ಆದರ್ಶಗಳನ್ನು ಮಕ್ಕಳಲ್ಲಿಯೂ ತುಂಬಿಸಿರುವ ತಾಯಿಯ ಆಶೀರ್ವಾದ, ಇವಷ್ಟೇ ಈ ಸಹೋದರರ ಆಸ್ತಿ.



ಬಡತನದಲ್ಲಿಯೇ ಹುಟ್ಟಿ, ಬಡತನದಲ್ಲೇ ಬೆಳೆದು ಗಾಂಧೀಜಿಯ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಬದುಕು ಸವೆಸಿದ್ದ ಶಿಕ್ಷಕ ನಬೀಸಾಬ್ ಅವರ ಪುತ್ರರಾದ ಅಬ್ದುಲ್ ರೆಹಮಾನ್, ಇಬ್ರಾಹಿಂ, ಮೊಹಮ್ಮದ್ ರಫೀಕ್ ಹಾಗೂ ಬಷೀರ್ ಅಹಮ್ಮದ್ ಇವರೇ ಈ ಕೈಂಕರ್ಯದಲ್ಲಿ ತೊಡಗಿರುವವರು.



ತಂದೆಯ ಹೆಸರಿನಲ್ಲಿ ಈ ಸೇವೆ ನಿತ್ಯ ನಿರಂತರ. ಯಾರಿಂದಲೂ ಒಂದು ರೂಪಾಯಿ ಇದುವರೆಗೆ ಪಡೆದಿಲ್ಲ. ಹಾಗೆಂದು ಸಹೋದರರ‌್ಯಾರೂ ಶ್ರೀಮಂತರಲ್ಲ. ದೊಡ್ಡ ನೌಕರಿಯಲ್ಲಿಯೂ ಇಲ್ಲ. ಅಪ್ಪನಿಗೆ ಬರುವ ಅಲ್ಪಸ್ವಲ್ಪ ಪಿಂಚಣಿ ಹಣಕ್ಕೆ ತಾವು ದುಡಿದದ್ದನ್ನು ಸೇರಿಸಿ ಅದರಲ್ಲಿಯೇ ಸನ್ಮಾನ ನಡೆಸುತ್ತಿದ್ದಾರೆ.



ಆದರ್ಶ ತಂದೆ

ನಬೀಸಾಬ ನಾಯ್ಕೋಡಿ ಮೂಲತಃ ಸಿಂದಗಿ ತಾಲ್ಲೂಕಿನ ಬಿದರಕುಂದಿಯವರು. ಕೂಲಿನಾಲಿ ಮಾಡಿ ಮುಲ್ಕಿ ಪರೀಕ್ಷೆ  ಪಾಸಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಬಿಂಜಲಬಾವಿ ಗ್ರಾಮದಲ್ಲಿ ಗೌಂಟಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತ ಗ್ರಾಮಸ್ಥರು ನೀಡಿದ ಊಟವನ್ನೇ ಉಣ್ಣುತ್ತ ಅವರ ಮಕ್ಕಳಿಗೆ  ಕಲಿಸುತ್ತ ಸೇವೆ ಆರಂಭಿಸಿದ ಅವರು, ನಂತರ ಸರ್ಕಾರದಿಂದ ನೇಮಕವಾಗಿ ಗಡಿ ಸೋಮನಾಳ, ರೂಢಗಿ, ಮನಗೂಳಿ, ಬ್ಯಾಕೋಡ, ಹುಲಿಬೆಂಚಿ, ಹೂವಿನ ಹಿಪ್ಪರಗಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.



ತಮ್ಮ ಸೇವಾವಧಿಯಲ್ಲಿ ನೂರಾರು ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡುವುದರ ಜೊತೆಗೆ ಕೆಲವರನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಸಾಕಿದ ಮಹಾನುಭಾವ.



ಗಾಂಧಿ ತತ್ವದಲ್ಲಿ ಅಪಾರ ನಂಬಿಕೆ ಇಟ್ಟಿದ್ದ ನಬೀಸಾಬರು ತುಂಬಿದ ಸಂಸಾರ ನಡೆಸುತ್ತಲೇ, ಮನೆಯಲ್ಲಿ ಖಾದಿ ನೇಯುತ್ತ, ಅದನ್ನೇ ತೊಟ್ಟುಕೊಂಡು ಸರಳ ಸಾತ್ವಿಕ ಬದುಕು ಸಾಗಿಸಿದವರು. ತಮ್ಮ ಜೊತೆ ಹೆಜ್ಜೆ ಹಾಕಿದ ಪತ್ನಿ ಸಾಹೇಬ್ಬಿ ಹಾಗೂ ಮಕ್ಕಳಿಗೆ ತಮ್ಮ ಆದರ್ಶವನ್ನೇ ಕಟ್ಟು ನಿಟ್ಟಿನಿಂದ ಪಾಲಿಸಲು ಹೇಳಿದವರು ಅವರು. 



 ದಿವಂಗತ. ಎಲ್.ಎನ್.ನಾಯ್ಕೋಡಿ ನಿವೃತ್ತ ಆದರ್ಶ ಶಿಕ್ಷಕರ ಪ್ರತಿಷ್ಠಾನ~ ಕಟ್ಟಿಕೊಂಡು ಒಂದಿಷ್ಟು ಆತ್ಮೀಯ ಸಮಾನ ಮನಸ್ಕ ಗೆಳೆಯರ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸುವ, ಅವರನ್ನು ಸನ್ಮಾನಿಸುವ ಕಾರ್ಯ ನಡೆಯುತ್ತಿದೆ.



ಇಂಥ ಅಪರೂಪದ ಕಾರ್ಯಕ್ರಮದಲ್ಲಿ ಪ್ರೊ.ದೊಡ್ಡರಂಗೇಗೌಡ, ಡಾ.ಸಿಂಪಿ ಲಿಂಗಣ್ಣ, ಪ್ರವಚನಕಾರ ದಾನಪ್ಪ ಜತ್ತಿ, ಖ್ಯಾತ ನಾಟಕಕಾರ ಎನ್. ಬಸವರಾಜ, ಪರಿಸರಪ್ರಿಯ ಸ್ವಾಮೀಜಿ ಎಂದೇ ಗುರುತಿಸಿಕೊಂಡ ನಂದಿವೇರಿಮಠದ ಶಿವಕುಮಾರ ಶ್ರೀಗಳು, ನಿರ್ಭಯಾನಂದ ಸ್ವಾಮೀಜಿಗಳು, ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು, ಡಾ.ಶಂಭು ಬಳಿಗಾರ ಮೊದಲಾದವರು ಬಂದು ನಾಲ್ಕು ಒಳ್ಳೆಯ ಮಾತು ಆಡಿದ್ದಾರೆ, ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ನಾಯ್ಕೋಡಿ ಸಹೋದರರ ಬೆನ್ನು ತಟ್ಟಿ ಹೋಗಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.