ಶುಕ್ರವಾರ, ಜೂಲೈ 3, 2020
24 °C

ಬತ್ತುತ್ತಿರುವ ಅಂತರ್ಜಲ, ನೀರು ಚರಂಡಿ ಪಾಲು?ಪುರಸಭೆ ಅರಿಯದ ಜಲರಕ್ಷಣೆ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬತ್ತುತ್ತಿರುವ ಅಂತರ್ಜಲ, ನೀರು ಚರಂಡಿ ಪಾಲು?ಪುರಸಭೆ ಅರಿಯದ ಜಲರಕ್ಷಣೆ ಪಾಠ

ಕುಷ್ಟಗಿ: ‘ಮಕ್ಳುಮರಿಗೆ ಕುಡೇಕ ನೀರಿಲ್ರಿ ಸಾಬ್ರ. ಹೆದ್ದಾರಿ ದಾಟಿ ತ್ವಾಟಕ್ಕ ಹೋಗ್ಬಕು, ಎಲ್ಡಮೂರ್ ರೂಪಾಯಿ ಕೊಟ್ಟು ಒಂದು ಕೊಡ ನೀರ್ ತರಬೇಕ್ರಿ. ಕೊಡ ತೊಗೊಂಡು ಹೆದ್ದಾರಿ ದಾಟ ಬರಮುಂದ ಪ್ರಾಣಾ ಒತ್ತಿ ಇಡಬೇಕ್ರಿ. ಹನಿ ನೀರಿಲ್ದ ಒದ್ದಾಡಕ್ಹತ್ತೀವಿ. ಇನ್ನೂ ಎಷ್ಟು ದಿನಾ ಹೀಂಗ, ಏನಾದ್ರೂ ಮಾಡಿ ಪುಣ್ಯಾ ಕಟಿಗೊಳ್ರಿ ಯಪ್ಪಾ’ಅನೇಕ ವರ್ಷಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಕೆರೆ ಅಂಗಳದ ಪಕ್ಕದಲ್ಲಿ, ಇಲ್ಲಿನ ಪುರಸಭೆ ವ್ಯಾಪ್ತಿಯ 23ನೇ ವಾರ್ಡ್‌ನಲ್ಲಿ ವಾಸಿಸುತ್ತಿರುವವರು ಕೆಲ ದಿನಗಳ ಹಿಂದೆ ಪುರಸಭೆಗೆ ಬಂದು ಮುಖ್ಯಾಧಿಕಾರಿ, ಸದಸ್ಯರನ್ನು ಅಂಗಲಾಚಿದ ಪರಿ ಇದು.

 

ಈ ವಾರ್ಡ್‌ಗೆ ಹೊಂದಿಕೊಂಡಿರುವ ತೆಗ್ಗಿನ ಓಣಿಯಲ್ಲಿ ರಸ್ತೆ ಪಕ್ಕ ಒಂದು ಸಿಮೆಂಟ್ ಕೊಳಾಯಿ (ಸಿಸ್ಟರ್ನ್) ಇದೆ. ಸುಮಾರು ನಾಲ್ಕೈದು ತಾಸು ಕುಡಿಯುವ ನೀರು ಹೆಚ್ಚಾಗಿ ಒಂದೇ ಸಮನೆ ಹರಿದು ಚರಂಡಿ ಸೇರುತ್ತಿದೆ. ನೀರು ಪೋಲಾಗುತ್ತಿರುವುದನ್ನು ಅಲ್ಲಿನ ಸುತ್ತಲಿನ ಜನ ನೋಡುತ್ತಾರೆ. ಪುರಸಭೆ ನೀರುಗಂಟಿಗಳು ಅಲ್ಲೇ ಓಡಾಡುತ್ತಿರುತ್ತಾರೆ. ಅದೇ ಮಾರ್ಗವಾಗಿ ಜನಪ್ರತಿನಿಧಿಗಳೂ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಓಡಾಡಿದರೂ ಒಬ್ಬರಲ್ಲೂ ಜಲ ಸಂರಕ್ಷಣೆ ಪ್ರಜ್ಞೆ ಕಂಡುಬರುತ್ತಿಲ್ಲ.

 

ತಹಸೀಲ್ದಾರರ ಕಚೇರಿ ಮುಂದಿನ ಗಾರ್ಡನ್‌ನಲ್ಲೂ ಅದೇ ಸ್ಥಿತಿ. ಗಿಡಗಂಟಿಗಳಿಗೆ ಹರಿಬಿಟ್ಟ ನಲ್ಲಿ ನೀರು ಮಡುಗಟ್ಟಿದೆ. ಬಂದ್ ಮಾಡಿ ಎಂದು ಜನ ಹೇಳಿದರೆ ‘ಯೇ ಬ್ಯಾಸಿಗಿ ಐತೇಳ್ರಿ ಗಿಡಾ ಸಾಕಷ್ಟು ನೀರು ಕುಡೀಲಿ’ ಎಂಬ ಉಡಾಫೆ ಮಾತು ಅಲ್ಲಿನ ಸಿಪಾಯಿಗಳದ್ದು.ಕೆಲವೆಡೆ ನೀರಿಗೆ ಹಾಹಾಕಾರ, ಇನ್ನೂ ಕೆಲಕಡೆ ಅಪಾರ ಪ್ರಮಾಣದಲ್ಲಿ ಕುಡಿಯುವ ನೀರು ಚರಂಡಿಗೆ ಹೋಗುತ್ತಿರುವ ದೃಶ್ಯಗಳು ಪಟ್ಟಣದ ಕೇವಲ ಒಂದು ವಾರ್ಡ್‌ಗೆ ಸೀಮಿತವಾಗಿಲ್ಲ. ಕೊಳವೆಗಳಿಗೆ ನೀರು ಬಿಟ್ಟಾಗ ಯಾವುದೇ ಓಣಿಗೆ ಹೋದರೂ ಇಂಥ ಸಾಕಷ್ಟು ಸಪ್ರಕರಣಗಳು ಕಣ್ಣಿಗೆ ರಾಚುತ್ತವೆ.

 

ಹಿಂದೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗದ ದಿನಗಳೇ ಇರಲಿಲ್ಲ. ಆದರೆ ಎರಡು ವರ್ಷಗಳಿಂದೀಚೆಗೆ ಪಟ್ಟಣದ ಬಹುತೇಕ ಕಡೆಗಳಲ್ಲಿ ನೀರು ಯಥೇಚ್ಛವಾಗಿ ದೊರೆ(ಹರಿ)ಯುತ್ತಿದೆ. ಜನ ಪೈಪ್‌ಗಳನ್ನು ಹಿಡಿದು ಅಂಗಳಕ್ಕೆ ನೀರು ಹೊಡೆಯುವುದು, ವಾಹನಗಳನ್ನು ತೊಳೆಯುವುದು, ಹೆಚ್ಚಾದ ನೀರು ಬಚ್ಚಲು ಮನೆ ಪೈಪ್ ಮೂಲಕ ಚರಂಡಿಗೆ ಬೀಳುತ್ತಿರುವ ದೃಶ್ಯ ಕಂಡರೆ ನೀರು ಎಷ್ಟು ಹೆಚ್ಚಾಗಿರಬಹುದು ಎಂಬುದು ಯಾರಿಗಾದರೂ ತಿಳಿಯುತ್ತದೆ.

 

ಕೃಷ್ಣಾ ನದಿ ಮೂಲ ಮತ್ತು ನಿಡಶೇಸಿ, ಕುರುಬನಾಳ, ಮದಲಗಟ್ಟಿ ಬಳಿ ಇರುವ ಹತ್ತಿಪ್ಪತ್ತು ಕೊಳವೆಬಾವಿಗಳಿಂದ ನೀರು ಸರಬರಾಜು ಆಗುತ್ತಿದ್ದರೆ. ಪಟ್ಟಣದಲ್ಲಿರುವ ಹತ್ತಾರು ಕೊಳವೆಬಾವಿಗಳೂ ನೀರಿನ ಅಗತ್ಯ ಪೂರೈಸುತ್ತಿವೆ. ಆದರೆ ಅವುಗಳಿಂದ ದೊರೆಯುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ನಾಗರಿಕರದ್ದಾಗಿದೆ.

 

ನೀರಿನ ಸಮಸ್ಯೆ ಉದ್ಭವಿಸಿದಾಗ ಮೈಮೇಲೆ ದೆವ್ವ ಬಂದವರಂತೆ ಸಿಬ್ಬಂದಿ ಮೇಲೆ ಹರಿಹಾಯುವ ಪುರ ಪಿತೃಗಳಿಗೆ ನೀರು ಪೋಲಾಗುತ್ತಿರುವುದು ಕಣ್ಣಿಗೆ ಕಾಣುವುದಿಲ್ಲ. ನೀರಿನ ಮಹತ್ವ ಸಿಬ್ಬಂದಿಗೆ ತಿಳಿದಿಲ್ಲ. ಜನರೂ ಅಷ್ಟೇ; ನೀರು ಹಾಳಾಗುತ್ತಿದ್ದರೂ ಅದನ್ನು ತಡೆಯಲು ಪ್ರಯತ್ನಿಸುವುದಿಲ್ಲ ಎಂಬುದು ಪ್ರಜ್ಞಾವಂತರ ಅಳಲು.ಬೇಸಿಗೆ ಪ್ರಖರತೆ ಹೆಚ್ಚುತ್ತಿದ್ದು ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಬರುವ ದಿನಗಳಲ್ಲಿ ಸಮಸ್ಯೆ ಗಂಭೀರವಾಗುವ ಸೂಚನೆ ಇದ್ದರೂ ಲಭ್ಯವಾದ ನೀರನ್ನು ಅಗತ್ಯಕ್ಕೆ ತಕ್ಕಂತೆ ಸದ್ಬಳಕೆ ಮಾಡಿಕೊಳ್ಳುವಲ್ಲಿ ಚಿಂತನೆ ನಡೆಯದಿರುವುದು ವಿಪರ್ಯಾಸ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.