ಸೋಮವಾರ, ಜೂನ್ 14, 2021
27 °C

ಬದಲಾಗುತ್ತಿರುವ ಭ್ರಷ್ಟಾಚಾರದ ವ್ಯಾಖ್ಯೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ಹೊಸದೇನೂ ಅಲ್ಲ.  ಪ್ರಜಾಪ್ರಭುತ್ವ, ಸರ್ವಾಧಿಕಾರಿ ಆಡಳಿತ, ಕಮ್ಯುನಿಸ್ಟ್ ವ್ಯವಸ್ಥೆ- ಹೀಗೆ ಎಲ್ಲಾ ಆಡಳಿತದ ಮಾದರಿಗಳಲ್ಲಿಯೂ ಇದು ವ್ಯಾಪಿಸಿದೆ. ಸ್ವಜನ ಪಕ್ಷಪಾತ ಭ್ರಷ್ಟಾಚಾರದ ಮತ್ತೊಂದು ಮುಖವಷ್ಟೇ. ರೋಮ್ ಸಾಮ್ರಾಜ್ಯದ ಪತನ, ಫ್ರಾನ್ಸ್, ರಷ್ಯಾದ ಕ್ರಾಂತಿ, ಚೀನಾದ ಚಿಯಾಂಗ್ ಕೈಶಿಕ್‌ನ ಪತನ- ಇವುಗಳಿಗೆಲ್ಲ ಭ್ರಷ್ಟಾಚಾರ ಪ್ರಮುಖ ಕಾರಣವಾಗಿತ್ತು. ಕಾಲಕಾಲಕ್ಕೆ ನಮ್ಮ ನಾಯಕರು ಭ್ರಷ್ಟಾಚಾರಕ್ಕೆ ನೀಡುತ್ತಿರುವ ವ್ಯಾಖ್ಯೆ ಕುತೂಹಲಕರ.

`ಇಂದು ನಾವು ನೋಡುತ್ತಿರುವ ಭ್ರಷ್ಟಾಚಾರ ಮತ್ತು ನಯ ವಂಚಕತನ ಪ್ರಜಾಪ್ರಭುತ್ವದ ಅನಿವಾರ್ಯತೆಗಳೇನೂ ಅಲ್ಲ~ ಎಂದು ಗಾಂಧೀಜಿ ಮೂವತ್ತರ ದಶಕದಲ್ಲೇ ಹೇಳಿದ್ದರು. 1937ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಿಡಿತದಲ್ಲಿದ್ದ ಅಂದಿನ ಅಸೆಂಬ್ಲಿಗಳಲ್ಲಿ ಭ್ರಷ್ಟಾಚಾರದ ಅರೋಪಗಳು ಕೇಳಿ ಬಂದಾಗ ಗಾಂಧೀಜಿ `ನಾನು ಕಾಂಗ್ರೆಸ್ ಪಕ್ಷವನ್ನು ಗೌರವಯುತವಾಗಿ ವಿಸರ್ಜಿಸುವ ಮಟ್ಟಕ್ಕೂ ಹೋಗುತ್ತೇನೆ, ಆದರೆ ಅಡೆತಡೆಯಿಲ್ಲದೆ ಹಬ್ಬುತ್ತಿರುವ ಭ್ರಷ್ಟಾಚಾರವನ್ನು ಸಹಿಸಲಾರೆ~ ಎಂದು  ಘೋಷಿಸಿದ್ದರು. ಗಾಂಧೀಜಿಯ ತಕ್ಷಣದ ಆದ್ಯತೆಗಳು ಆಗ ಬೇರೆಯೇ ಆಗಿದ್ದರಿಂದ ಅವರ ಮಾತು ಹೇಳಿಕೆಯ ಮಟ್ಟದಲ್ಲೇ ಉಳಿಯಿತು.

ಸ್ವಾತಂತ್ರ್ಯಾನಂತರ, ನೆಹರೂ ವೈಯಕ್ತಿಕವಾಗಿ ಭ್ರಷ್ಟರಾಗಿದ್ದರು ಎನ್ನುವುದಕ್ಕೆ ಪುರಾವೆಗಳೇನೂ ಸಿಕ್ಕದಿದ್ದರೂ ಅಧಿಕಾರಕ್ಕಾಗಿ ಭ್ರಷ್ಟಾಚಾರವನ್ನು ಸಹಿಸಿಕೊಂಡರು ಎಂದು ಜನ ಒಪ್ಪುತ್ತಾರೆ. ಈ ಮೌನ ಸಮ್ಮತಿ ಭ್ರಷ್ಟಾಚಾರದ ಬೇರುಗಳಿಗೆ ನೀರುಣಿಸಿತು. ಇಂದಿರಾ ಗಾಂಧಿಯ ನೇತೃತ್ವದಲ್ಲಿ ಇದು ಸರ್ವವ್ಯಾಪಿಯಾಗಿ ಅವರ ಮೇಲೂ ಆಪಾದನೆಗಳು ಕೇಳಿಬಂದಾಗ `ಭ್ರಷ್ಟಾಚಾರ ವಿಶ್ವವ್ಯಾಪಿಯಾದದ್ದು~ ಎಂದು ಹೇಳುವುದರ ಮೂಲಕ ಅದಕ್ಕೆ ಮಾನ್ಯತೆಯನ್ನು ಒದಗಿಸಿದರು. ನಂತರ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ಪ್ರಶ್ನಾತೀತ ಮೌಲ್ಯವಾಗಿ ಉಳಿಯಲಿಲ್ಲ.

ಇಂದಿನ ಬಿಜೆಪಿ ಮೊದಲಿನಿಂದಲೂ ನೀತಿವಂತರ ಪಕ್ಷವೆಂದು ಹೆಸರು ಮಾಡಿತ್ತು. ಇದು ಹೆಚ್ಚಿನ ಪಾಲು ನಿಜವಾಗಿದ್ದುದಕ್ಕೆ ಪ್ರಮುಖ ಕಾರಣ ಕೇಂದ್ರ ಹಾಗೂ ರಾಜ್ಯಗಳಲ್ಲಿ  ವಿರೋಧ ಪಕ್ಷವಾಗಿ ಇದ್ದಿದ್ದರಿಂದ ಬಿಜೆಪಿ ನಾಯಕರಿಗೆ ಭ್ರಷ್ಟರಾಗುವ ಅವಕಾಶಗಳು ಕಡಿಮೆ ಇತ್ತು. 1977ರ ಕೇಂದ್ರ ಸರ್ಕಾರದಲ್ಲಿ ಜನತಾ ಪಕ್ಷದ ಒಂದು ಭಾಗವಾಗಿದ್ದಾಗಲೂ ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರದ ಕರಿನೆರಳು ಇರಲಿಲ್ಲ. ಆದರೆ ಒಮ್ಮೆ ಅಧಿಕಾರದ ರುಚಿ ಕಂಡೊಡನೆ ಇವರ ಅಸಲೀ ರೂಪ ಗೋಚರವಾಗತೊಡಗಿತು. ಅಧಿಕಾರಕ್ಕಾಗಿ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದು ಮತ್ತು ಭ್ರಷ್ಟರೊಡನೆ ಕೈಜೋಡಿಸುವುದು ತಪ್ಪಲ್ಲ ಎನ್ನುವ ತೀರ್ಮಾನಕ್ಕೆ ಪಕ್ಷ ಬಂದಂತಿತ್ತು. ತೆಹಲ್ಕಾ ಪ್ರಕರಣದ ಬಗ್ಗೆ ಅಡ್ವಾನಿಯವರು ಪಕ್ಷದ ಹಿರಿಯ ಮುಖಂಡರೊಬ್ಬರಿಗೆ ಹೀಗೆ ಉತ್ತರಿಸಿದ್ದರಂತೆ `ಭಾರತದ ಮಧ್ಯಮ ವರ್ಗ ನಾವು ಆದರ್ಶಗಳ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು ಬಯಸುತ್ತದೆ. ಜೊತೆಗೆ ನಾವು ಅಧಿಕಾರದಲ್ಲಿರಬೇಕೆಂದೂ ಆಶಿಸುತ್ತದೆ. ಇದು ಪಕ್ಷ ಎದುರಿಸುತ್ತಿರುವ ಸಂದಿಗ್ಧತೆ~.  ಅಂದರೆ ಅಧಿಕಾರಕ್ಕಾಗಿ ನೈತಿಕತೆಯ ವಿಚಾರದಲ್ಲಿ ಹೊಂದಾಣಿಕೆ ಅನಿವಾರ್ಯ....

ತೊಂಬತ್ತರ ದಶಕದ ನಂತರ ಅಧಿಕಾರದ ರುಚಿ ಕಂಡ ಬಿಜೆಪಿ ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್‌ಗೆ ಹೆಗಲು ಕೊಟ್ಟು ಸ್ಪರ್ಧಿಸತೊಡಗಿತು. ಇದರ ಪರಾಕಾಷ್ಠೆ ಇತ್ತೀಚೆಗೆ ಯಡಿಯೂರಪ್ಪನವರ ಬಗೆಗೆ ಭ್ರಷ್ಟಾಚಾರದ ಆರೋಪಗಳು ದಾಖಲೆ ಸಮೇತ ಹೊರಬಂದಾಗ ಬಿಜೆಪಿ ಅಧ್ಯಕ್ಷರು ಹೇಳಿದ್ದು `ಯಡಿಯೂರಪ್ಪನವರ ಕೃತ್ಯಗಳು ಅನೈತಿಕವಿರಬಹುದು, ಆದರೆ ಕಾನೂನುಬಾಹಿರವಲ್ಲ~. ಅಂದರೆ, ಕಾನೂನು ನಮ್ಮ ದೇಶದಲ್ಲಿ ಭ್ರಷ್ಟತೆಯನ್ನು ನಿರ್ದೇಶಿಸುತ್ತದೆ; ಹಾಗಾಗಿ ಕಾನೂನುಬಾಹಿರವಾದದ್ದು ಅಥವಾ ಕಾನೂನಿನಡಿ ಸಿಕ್ಕಿಹಾಕಿಕೊಂಡಿದ್ದು ಮಾತ್ರ ಭ್ರಷ್ಟಾಚಾರ. ಕಾನೂನಿನಲ್ಲಿ ಬರೆಯದೇ ಇರುವುದು ಮತ್ತು ಕಾನೂನಿನ ಬಲೆಯಲ್ಲಿ ಬೀಳದೆ ಮಾಡಬಹುದಾದದ್ದೆಲ್ಲ ನೀತಿಯುತವಾದದ್ದು! ಇಡೀ ದೇಶದ ನೈತಿಕ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಾಗಿದ್ದ ಈ ಹೇಳಿಕೆ ಯಾರನ್ನೂ ಕಾಡಿದಂತೆ ಕಾಣಲಿಲ್ಲ. ಗಡ್ಕರಿ ಮತ್ತು ಯಡಿಯೂರಪ್ಪನವರ ವ್ಯಕ್ತಿತ್ವಗಳು ಇದಕ್ಕೆ ಕಾರಣವೇ ಅಥವಾ ಲಕ್ಷಾಂತರ ಕೋಟಿಯ ಹಗರಣಗಳ ಮಧ್ಯೆ ಇದು ಮುಚ್ಚಿಹೋಯಿತೇ ಅಥವಾ ನಾವೆಲ್ಲ ದಿನನಿತ್ಯ ಹೊಸಹೊಸ ಹಗರಣಗಳನ್ನು ನೋಡಿ ನೋಡಿ ಸಿನಿಕರಾಗಿಬಿಟ್ಟಿದ್ದೆೀವೆಯೇ?

ಇನ್ನು ಲಕ್ಷಾಂತರ ಕೋಟಿ ರೂಗಳ 2ಜಿ ಹಗರಣವನ್ನು ಪ್ರಾರಂಭದಲ್ಲಿ ಸಮರ್ಥಿಸಿಕೊಂಡ  ಕಾಂಗ್ರೆಸ್, ಭ್ರಷ್ಟಾಚಾರ ಇವತ್ತು ಅನಿವಾರ್ಯವೆಂದು ಧ್ವನಿಸುತ್ತಾ ಇದನ್ನು ಸಹಿಸಲೇಬೇಕಾದ್ದಕ್ಕೆ ಕಾರಣ `ಒಕ್ಕೂಟ ಸರ್ಕಾರದ ಅನಿವಾರ್ಯತೆಗಳು~ ಎಂದು ಹೇಳುತ್ತಿದೆ. ಅಂದರೆ ಸಾವಿರ ಕೋಟಿಯನ್ನು ವ್ಯರ್ಥವಾಗಿ ವ್ಯಯಿಸಿ  ಭಾರತದ ಜನತೆಯ ಮೇಲೆ ಮತ್ತೊಂದು ಚುನಾವಣೆಯನ್ನು `ಹೇರುವುದಕ್ಕಿಂತ~ ಲಕ್ಷಾಂತರ ಕೋಟಿಗಳ ಹಗರಣ ಮಾಡುವವರೊಡನೆ ಹೊಂದಾಣಿಕೆಯ ಸರ್ಕಾರ ಮಾಡುವುದು ನಿಮ್ಮ ಹಿತಕ್ಕಾಗಿ ಎಂದು ನಮ್ಮ ಮುಗ್ಧ ಜನತೆಯನ್ನು ನಂಬಿಸುವ ರೀತಿಯಿದು!

`ನಮ್ಮ ಭೌತಿಕ ಸಂಪನ್ಮೂಲಗಳು, ಪ್ರಕೃತಿ, ಪರಿಸರ ಎಲ್ಲಾ ನಾಶವಾದರೆ ಮತ್ತೆ ನಿರ್ಮಿಸಲು ಸಾಧ್ಯವಾಗಬಹುದು. ಆದರೆ ಇಡೀ ಜನಸಮುದಾಯದ ನೈತಿಕ ನೆಲೆಗಟ್ಟೇ ನಾಶವಾಗುತ್ತ ಇದೆಯಲ್ಲ, ಅದಕ್ಕೇನು ಮಾಡುವುದು?~ ಲೇಖಕ ಪೂರ್ಣಚಂದ್ರ ತೇಜಸ್ವಿ ಸಂದರ್ಶನವೊಂದರಲ್ಲಿ ಈ ಅರ್ಥ ಬರುವ ಮಾತುಗಳನ್ನು ಹೇಳಿದ್ದರು. ಮಹಾ ಸಾಮ್ರಾಜ್ಯಗಳೂ, ಅನನ್ಯ ನಾಗರಿಕತೆಗಳೂ ನಾಶವಾಗಿದ್ದು ಜನಸಮುದಾಯಗಳು ಸಂಪೂರ್ಣ ಸ್ವಾರ್ಥಿಗಳಾಗಿ ಸಮಷ್ಟಿಯ ಬಗೆಗೆ ಯೋಚಿಸುವುದನ್ನೇ ನಿಲ್ಲಿಸಿದಾಗ ಎಂಬುದಕ್ಕೆ ಐತಿಹಾಸಿಕ ನಿದರ್ಶನಗಳಿವೆ.

ಇವತ್ತು ಜನಸಾಮಾನ್ಯರಲ್ಲಿ ಯಾರನ್ನೇ ಕೇಳಿದರೂ `ರಾಜಕೀಯದವರು ದುಡ್ಡು ಮಾಡುವುದು ಅನಿವಾರ್ಯ~ ಎನ್ನುವಂತೆಯೇ ಮಾತನಾಡುತ್ತಾರೆ. `ಈಗ ರಾಜಕೀಯದಲ್ಲಿ ದುಡ್ಡು ಮಾಡ್ದೇ ಇರೋವ್ನ ಉಳಿಯಕ್ಕಾಗಲ್ಲ~ ಅನ್ನುತ್ತಾರೆ. ಅಂದರೆ ಭ್ರಷ್ಟಾಚಾರ ಸಹನೀಯವಷ್ಟೇ ಅಲ್ಲ, ಅಪೇಕ್ಷಣೀಯ ಕೂಡ ಎನ್ನುವಂತಿರುತ್ತದೆ ಈ ಮಾತುಗಳು. ಆದರೂ ಇವತ್ತಿನ ಹಗರಣಗಳನ್ನು ನೋಡಿ ಕೊನೆಗೆ ಹೇಳುತ್ತಾರೆ, `ದುಡ್ಡು ಮಾಡೋದೇನೋ ಸರಿ. ಆದರೆ ಅದಕ್ಕೆ ಒಂದು ಮಿತಿ ಇರಬೇಕು~.

ಈ ಮಿತಿಯನ್ನು  ನಿರ್ಧರಿಸುವವರು ಯಾರು? ಸರ್ಕಾರಿ ಗುಮಾಸ್ತನಿಗೆ ಲಕ್ಷಗಳು, ಜಿಲ್ಲಾಧಿಕಾರಿಗೆ ಕೋಟಿಗಳು, ಮುಖ್ಯಮಂತ್ರಿಗಳಿಗೆ ಸಾವಿರಾರು ಕೋಟಿಗಳು ರಾಜ-ರಾಣಿಯರಿಗೆ ಲಕ್ಷಾಂತರ ಕೋಟಿಗಳು ಮಿತಿಯಾದರೆ ಅದು ತಪ್ಪೇ? ಅವರವರ ಮಿತಿಯನ್ನು ಅವರೇ ಹಾಕಿಕೊಂಡಿದ್ದಾರೆಂದ ಮೇಲೆ ಜನರೇಕೆ ತಲೆಕೆಡಿಸಿಕೊಳ್ಳಬೇಕು?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.