ಸೋಮವಾರ, ಜನವರಿ 20, 2020
21 °C
ಬೋರ್ಡ್‌ ರೂಮಿನ ಸುತ್ತಮುತ್ತ

ಬದಲಾವಣೆಯ ಕಥನ

ಸತ್ಯೇಶ್ ಎನ್‌. ಬೆಳ್ಳೂರ್ Updated:

ಅಕ್ಷರ ಗಾತ್ರ : | |

ಕತೆಯೊಂದ ಹೆಣೆಯುತಿರು ಎಲ್ಲರೆದೆ ಬೆಳಗುತ್ತ/

ಹಿತವಿರಲಿ ವಾಕ್ಯದಲಿ ಪದಗಳಾಟದಲಿ//

ಸತತ ಯತ್ನವನೆಂದು ತೊರೆಯದಿಹ ಪುಟಗಳಲಿ/

ಎತ್ತರದ ಗುರಿಯಿರಲಿ –ನವ್ಯಜೀವಿ//



ಕತೆ ಎಂದ ಕೂಡಲೇ ನನಗೆ ನೆನಪಾಗುವುದು ಚಂದ­ಮಾಮ. ನಮ್ಮ ತಲೆಮಾರಿನ ಯಾರೂ ಕೂಡ ತಮ್ಮ ಚಿಕ್ಕ ವಯಸ್ಸಿನಲ್ಲಿ ಚಂದಮಾಮ ಕತೆಗಳನ್ನು ಓದದೆಯೆ ಬೆಳೆದದ್ದೇ ಇಲ್ಲ. ಆ ಕತೆಗಳದೇ ಒಂದು ಸ್ವಾರಸ್ಯ. ಬೇತಾಳದ ಕತೆಗಳಲ್ಲಿ ಕಡೆಯಲ್ಲಿ ಬರುವ ಬೇತಾಳನ ಪ್ರಶ್ನೆಗಳಿಗೆ ರಾಜನ ಉತ್ತರಗಳನ್ನು ಓದಿಕೊಂಡು, ಒಂದೇ ಪುಟದಲ್ಲಿ ಇರುತ್ತಿದ್ದ ಪುಟ್ಟ ಪುಟ್ಟ ಕತೆಗಳನ್ನು ಮೆಲ್ಲುತ್ತ ಚಂದಮಾಮದ ಉಳಿದ ನೀಳ್ಗತೆಗಳ ಪುಟಗಳನ್ನು ತಿರುವಿ ಹಾಕುವ ಹೊತ್ತಿಗೆ ಬೆಳಿಗ್ಗೆ ಸರಿದು ಮಧ್ಯಾ­ಹ್ನದ ಊಟಕ್ಕೆಂದು ಅಮ್ಮ ನಮ್ಮನ್ನು ಎಬ್ಬಿಸುತ್ತಿದ್ದ ಆ ದಿನಗಳು ಅನನ್ಯ. ಚಂದಮಾಮ ಒಂದು ರೀತಿಯಲ್ಲಿ ನಮ್ಮೆಲ್ಲರ ಬಾಲ್ಯದ ಒಂದು ಅವಿಭಾಜ್ಯ ಅಂಗ.



ಕಾಲೇಜಿಗೆ ಬರುವ ಹೊತ್ತಿಗೆ ನಮ್ಮನ್ನು ಕಾಡಿದ ಕತೆಗಳೆಂದರೆ, ಮಾಸ್ತಿಯವ­ರದು. ಅದೆಷ್ಟು ಕತೆಗಳನ್ನು ಅವರು ಬರೆದಿ­ದ್ದಾರೆ. ಒಂದೊಂದೂ ಒಂದೊಂದು ವಿಧದಲ್ಲಿ ನಮ್ಮನ್ನು ಆಕರ್ಷಿಸಿ ಆವರಿಸಿಕೊಂಡಿವೆ ಎಂದರೆ ತಪ್ಪಾಗಲಾ­ರದು. ಕಾವ್ಯ ಹಾಗೂ ಕಾದಂಬರಿ­ಗಳನ್ನು ಓದುವುದಕ್ಕೆ ಶುರು ಮಾಡಿದಾಗಲೂ ಕತೆಗಳ ಪುಸ್ತಕವೊಂದು ಕೈಗೆಟುಕಿದರೆ ಆ ಕ್ಷಣಕ್ಕೆ ಅದಕ್ಕೇ ಪ್ರಾಶಸ್ತ್ಯ. ಸುಧಾ, ಮಯೂರ, ಮಲ್ಲಿಗೆ, ಕಸ್ತೂರಿ­ಗಳಲ್ಲಿ ಬರುತ್ತಿದ್ದ ಕತೆಗಳೂ ಕೂಡ ನಮ್ಮನ್ನು ದಾಟಿದ ನಂತರವೇ ಆ ಪತ್ರಿಕೆಗಳಲ್ಲಿನ ಧಾರಾವಾಹಿಗಳ ಹಾಗೂ ಪ್ರಬಂಧಗಳ ಸರದಿ. ಓದುಗರೆಲ್ಲರಿಗೂ ಸರ್ವೇಸಾಮಾ­ನ್ಯವಾಗಿ ಒಪ್ಪುವ ಕಥನ ಮಾಧ್ಯಮ ‘ಕತೆ’ ಎಂದರೆ ತಪ್ಪಿಲ್ಲ ಎಂದೇ ಭಾವಿಸುತ್ತೇನೆ.



ಹಾಗಾದರೆ, ಅಂತಹ ಕತೆಗಳಲ್ಲಿ ಇರುತ್ತಿದ್ದ ವಿಶೇಷವೇನು? ಮೊದಲನೆಯ­ದಾಗಿ, ಅದರ ಗಾತ್ರ ನಾಲ್ಕೈದು ಪುಟಗಳಷ್ಟೇ ಅದರ ವಿಸ್ತಾರ. ಅಷ್ಟರೊ­ಳಗೇ ಅದಕ್ಕೊಂದು ಕುತೂಹಲ­ಕಾರಿ­­ಯಾದ ಶುರುವಾತು ಹಾಗೂ ಮನಸ್ಸಿ­ಗೊಪ್ಪುವ ಒಂದು ಕೊನೆ. ಈ ಎರಡರ ನಡುವೆ ಕತೆಯ ಓಟ. ಒಂದು ಘಟನೆಯ ಸುತ್ತಲೋ ಅಥವಾ ಯಾವುದೋ ಒಂದು ವಿಚಾರದ ತೆಕ್ಕೆಯಲ್ಲೋ ಅದರ ತಿರುಳು. ಗೊಂದಲ ಉಂಟು ಮಾಡು­ವಷ್ಟು ಪಾತ್ರಗಳೇ ಇಲ್ಲ. ಅಬ್ಬಬ್ಬಾ ಎಂದರೆ ಮೂರ್‍ನಾಲ್ಕು ಪಾತ್ರಗಳಷ್ಟೆ. ಭಾಷೆಯೂ ಬಹಳ ಸರಳ. ಇದಿಷ್ಟು ಪರಿಧಿಯಲ್ಲೇ ಆ ಕತೆ ನಮ್ಮನ್ನಾಳುತ್ತಿತ್ತು.



ಚಿಕ್ಕ ವಯಸ್ಸಿನಲ್ಲಿ ಓದಿದ ಸಾವಿರಾರು ಕತೆಗಳಲ್ಲಿ ಕೆಲವಂತೂ ಈಗಲೂ ಕಾಡುತ್ತವೆ. ಕತೆಯ ವಿಷಯ ಬಂದಾ­ಗಲೆಲ್ಲ ಅವುಗಳ ನೆನಪು ಸಂಭ್ರಮಿಸುತ್ತ ಮರುಕಳಿಸುತ್ತದೆ. ಕತೆಗಳಲ್ಲೇ ವಿಶೇಷವೆ­ನ್ನಿಸಿದ ಈ ಕತೆಗಳಲ್ಲಿ ಯಾವುದೋ ಹಂತದಲ್ಲಿ ನಮ್ಮನ್ನೇ ನಾವು ಗುರುತಿ­ಸಿಕೊಂಡಿದ್ದೇವೆ. ಬುದ್ಧಿಗಿಂತ ಹೃದಯಕ್ಕೆ ನೇರವಾಗಿ ಇವುಗಳು ಲಗ್ಗೆ ಹಾಕಿವೆ­ಯಾದ್ದರಿಂದ ಇವುಗಳೊಡನೆ ನಮಗೆ ಒಂದು ರೀತಿಯ ಭಾವನಾತ್ಮ­ಕವಾದ ಸಂಬಂಧ ಏರ್ಪಟ್ಟಿದೆ. ಕತೆಯ­ಲ್ಲಿನ ಸನ್ನಿವೇಶವೊಂದು ನಮ್ಮದೇ ಜೀವನದಲ್ಲಿ ಸಾಗಿಹೋದ ಯಾವುದೋ ಮರೆಯಲಾ­ಗದ ಘಟನಾವಳಿಗೆ ಬಹಳ ಹತ್ತಿರವಾ­ಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಕತೆಗಳು ನಮ್ಮ ತುಂಬು ಪ್ರೀತಿಯ ಭಾವನೆಗಳ ಹಾಗೂ ಸಕಾರಾತ್ಮಕವಾದ ನಿಲುವುಗಳ ಕದವನ್ನು ತೆರೆದಿವೆ. ಬದುಕಿಗೊಂದು ಹೊಸ ಅರ್ಥವನ್ನು ಹಾಗೂ ನೀಗಿಸಿ­ಕೊಳ್ಳಬೇಕಾದ ಗುರಿಯೊಂದನ್ನು  ಸೃಷ್ಟಿಸಿವೆ.



ಅಂದ ಹಾಗೆ, ಕಂಪೆನಿಗಳಲ್ಲಿ ಆಗಿ ಬರುವ ಬದಲಾವಣೆಗಳ ಹಾಗೂ ಅವುಗಳ ನಿಯಂತ್ರಣದ ಬಗ್ಗೆ ಬರೆಯುತ್ತ ಬಂದಿರುವ ಈ ಲೇಖನ ಸರಣಿಯಲ್ಲಿ ದಿಢೀರನೆ, ‘ಇದೇನಿದು ಕತೆಗಳ ಬಗ್ಗೆ ಕೊರೆಯುತ್ತಿದ್ದಾನಲ್ಲ’ ಎಂದು ಹುಬ್ಬೇರಿ­ಸಬೇಡಿ. ‘ಕತೆ ಹೇಳುತ್ತಲೇ ಕತೆ ಬಿಡುತ್ತಿದ್ದಾನಲ್ಲ’ ಎಂದು ಹಾಸ್ಯ ಮಾಡದಿರಿ. ಏಕೆಂದರೆ, ಬದಲಾವಣೆಯ ನಿಯಂತ್ರಣೆಗೂ ಹಾಗೂ ಸುಂದರವಾದ ಕತೆಗೂ ಒಂದು ಬಿಡಿಸಲಾರದ ನಂಟಿದೆ. ಅದನ್ನು ತಿಳಿಸಬೇಕೆಂಬ ಬಯಕೆ ನನ್ನದು.



ಯಾವುದೇ ಬದಲಾವಣೆಯಾ ದರೂ, ಈಗಲೇ ಓದಿರುವಂತೆ ಕಂಪೆನಿ­ಯೊಂದರ ಎಲ್ಲರೂ ಆ ಬದಲಾವ­ಣೆಯನ್ನು ಜಾರಿಗೊಳಿಸುವತ್ತ ಒಂದುಗೂ­ಡಬೇಕು. ‘ಈ ಪರಿವರ್ತನೆಯ ಕಾರ್ಯ’ ನನ್ನದು ಎಂಬ ಸ್ವಂತಿಕೆಯ ಭಾವ ಅದೆಷ್ಟು ಜನರಲ್ಲಿ ಅದೆಷ್ಟು ಬೇಗ ಮೂಡಿಬ­ರುತ್ತದೋ ಅಂತಹ ಬದಲಾವಣೆ ಅಷ್ಟೂ ಬೇಗ ಅನುಷ್ಠಾನಗೊಳ್ಳುತ್ತದೆ. ಯಾವ ಬದಲಾವಣೆಗೆ ಬಹುತೇಕ ಜನರ ಸಮ್ಮತವಿಲ್ಲವೋ ಅಂತಹ ಬದಲಾವಣೆ ಜಾರಿಗೆ ಬರುವುದಿರಲಿ, ಬದಲಾಗಿ ಕಂಪೆನಿ­ಯನ್ನೇ ಒಡೆದು ಬಿಡುವ ಸಾಧ್ಯತೆಗಳೇ ಹೆಚ್ಚು. ಹಾಗಾದರೆ ಕಂಪೆನಿ­ಯೊಂದು ಬದಲಾವಣೆಯನ್ನು, ಅದರಲ್ಲೂ ಸ್ವಲ್ಪ ಗಂಭೀರವಾದ ಬೃಹತ್‌ ಬದಲಾವಣೆಯೊಂದನ್ನು ತರುತ್ತಿದೆ ಎಂದಾಗ, ಅದು ಮಾಡಬೇಕಾದ ಮೊದಲ ಕರ್ತವ್ಯವೇನು? ನಿಧಾನವಾಗಿ ಕತೆಯೊಂದರತ್ತ ಈಗ ಹೊರಳುತ್ತಿದ್ದೇನೆ!



ಬದಲಾವಣೆಯೊಂದರ ಹಾದಿಯ ಅಡಿಯಲ್ಲೇ ಕಂಪೆನಿಯ ಮುಖ್ಯಸ್ಥ ಒಂದು ಒಳ್ಳೆಯ ಕತೆಯನ್ನು ಸೃಷ್ಟಿ ಮಾಡಬೇಕು. ಆ ಕತೆ ಸರಳವಾಗಿದ್ದು ಬದಲಾವಣೆ­ಯನ್ನು ನೇರವಾಗಿ ತಿಳಿಸಿ­ರಬೇಕು. ಬದಲಾವಣೆಯಿಂದ ಉಂಟಾ­ಗುವ ಎಲ್ಲ ಸ್ತರಗಳನ್ನು ಹಾಗೂ ಆಗುಹೋಗು­ಗಳನ್ನೆಲ್ಲಾ ಆ ಕತೆ ಸೂಕ್ಷ್ಮವಾಗಿ ಬಿಂಬಿಸಬೇಕು. ಆ ಕತೆಯಲ್ಲಿ ಬದಲಾವಣೆಯಿಂದ ಏರ್ಪಡುವ ವೈಯ­ಕ್ತಿಕ ಏರುಪೇರು­ಗಳ ಪ್ರಾಮಾಣಿಕ ಕಥನವಿರಬೇಕು. ಕಂಪೆನಿ­ಯೊಂ­ದರ ಉಳಿವು ಹಾಗೂ ಬೆಳವಣಿಗೆಗೆ ಹೇಗೆ ಆ ಬದಲಾವಣೆ ಅನಿವಾರ್ಯವೆಂಬ ದನಿ ಆ ಕತೆಯನ್ನು ಕೇಳುವ­ವರಿಗೆ ಮನದಟ್ಟಾ­ಗಬೇಕು. ಆ  ಬದಲಾ­ವಣೆಯ ಯಶಸ್ಸಿನಿಂದ ಆಗಬಹುದಾದ ಒಳಿತುಗಳ ಚಿತ್ರಣದೊಂದಿಗೇ ಈ ಬದಲಾವಣೆಯ ವೈಫಲ್ಯದಿಂದ ಆಗಬಹುದಾದ ಅನಾಹುತಗಳ ಪರಿಚಯವೂ ಎಲ್ಲರ ಅರಿವಿಗೆ ಬರಬೇಕು. ಎಲ್ಲರೊಡನೆ ಹಂಚಿಕೊಳ್ಳಲೇ ಬೇಕಾದ ಪ್ರತಿಯೊಂದು ವಿಚಾರವೂ ಯಾವುದೇ ಅಡೆತಡೆ ಇಲ್ಲದೆ ಹಾಗೂ ಯಾವುದೇ ಅಪೇಕ್ಷಿತ ಮರೆಮಾ­ಚಿಲ್ಲದೆ ಎಲ್ಲರೆದುರು ಪ್ರತ್ಯಕ್ಷವಾಗಬೇಕು. ‘ಇದ್ದದನ್ನು ಇದ್ದ ಹಾಗೆಯೇ  ಹೇಳಿಬಿ­ಡುವ’ ಎದೆಗಾರಿಕೆ ಆ ಕತೆಯ ಪ್ರತಿಯೊಂದು ಪದಗಳ ಹಿಂದೆಯೂ ಅಡಕವಾಗಿದ್ದರೆ, ಅಂತಹ ಕತೆ ಪ್ರಾಯಶಃ ಬದಲಾವಣೆಯೊಂದರ ಉತ್ತಮವಾದ ಶುರುವಾತಿಗೆ ಕಾರಣವಾದೀತು’ ಎಂಬುದರಲ್ಲಿ ಸಂಶಯ ಬೇಡ.



ಇವೆಲ್ಲ ಆ ಕತೆಗಿರಬೇಕಾದ ರೂಪುರೇಷೆ­ಗಳಾದರೂ ಅವೆಲ್ಲವನ್ನು ಎಲ್ಲರಿಗೂ ತಿಳಿಸುವ ಕಥನ ಶೈಲಿ ಹಾಗೂ ಒಟ್ಟಾರೆ ನಿರೂಪಣೆ ಮಾತ್ರ ಆದಷ್ಟೂ ಸ್ಪಷ್ಟವಾಗಿರಬೇಕು. ಎಲ್ಲರಿಗೂ ತಟ್ಟನೆ ಅರ್ಥವಾಗುವಂತಿರಬೇಕು. ಏಕೆಂದರೆ, ಕೇಳುವುದಕ್ಕೆ ಹಿತಕರವಲ್ಲದ ಯಾವುದೇ ವಿಚಾರವನ್ನು ಕೇಳುಗ ತೆರೆದ ಮನಸ್ಸಿನಿಂದ ಕೇಳಬಯಸುವುದಿಲ್ಲ. ಹಾಗಾಗಿ ಕಠಿಣವಾದ ಅಥವಾ ಸಾಮಾನ್ಯ ಜ್ಞಾನಕ್ಕೆ ಸಲ್ಲದ ಕಥನ ಶೈಲಿಯನ್ನು ಆ ಹೊತ್ತಿನಲ್ಲಿ ಆತ  ತನ್ನರಿವಿಗಿಲ್ಲದೆಯೇ ತಿರಸ್ಕರಿಸಿ ಬಿಡುತ್ತಾನೆ.



ಇವೆಲ್ಲಕ್ಕಿಂತ ಮುಖ್ಯವಾದದ್ದೆಂದರೆ, ಬುದ್ಧಿಗೆ ಮಾತ್ರವೇ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಕಂಪೆನಿ ಬದಲಾವಣೆಯ ಈ ಒಂದು ಸ್ತರದಲ್ಲಾದರೂ ಹೃದಯಕ್ಕೆ ಪ್ರಾಧಾನ್ಯತೆ  ನೀಡಬೇಕು. ಈ ಕತೆಗೆ ಭಾವನಾತ್ಮಕವಾದ ಎಳೆಯೊಂದು ಅತ್ಯಾವಶ್ಯಕ. ಕತೆಯನ್ನು ಕೇಳುತ್ತಿರು­ವವನಿಗೆ ‘ಅರೆ, ಇದನ್ನು ನೆರವೇರಿಸಬೇ­ಕಾದ್ದು ನನ್ನ ಆದ್ಯ ಕರ್ತವ್ಯವಲ್ಲವೆ? ಇದನ್ನು ನನ್ನ ಹೊರತು ಮತ್ಯಾರು ಮಾಡಬೇಕು?’ ಎಂಬ ಜ್ಞಾನೋದಯ-­ವಾಗಬೇಕು. ಅಷ್ಟರ ಮಟ್ಟಿಗೆ ಆ ಕತೆ ಅವನ ಅಂತರಂಗವನ್ನು ಹೊಕ್ಕಿರಬೇಕು.



ಬದಲಾವಣೆಯನ್ನು ಸಮಗ್ರವಾಗಿ ಬಿಂಬಿಸುವ ಈ ಕತೆಯೊಂದರಿಂದಲೇ ಬದಲಾವಣೆ ಸಾಧ್ಯ ಎಂದು ಹೇಳಲಾ­ಗದಿದ್ದರೂ, ಇಂತಹ ಕತೆಯೊಂದು ಕಂಪೆನಿಯ ಎಲ್ಲರನ್ನೂ ಒಂದುಗೂಡಿಸಿ, ಒಂದೇ ಗುರಿಯ ಬೆನ್ನು ಹತ್ತುವಂತೆ ಪ್ರವೇಶಿಸುವುದಂತೂ ಖಂಡಿತ. ಆರಂಭ  ಒಳ್ಳೆಯದಾಗಿದ್ದರೆ ಅಂತ್ಯವೂ ಸುಖಕರವಾಗಿರುತ್ತದೆ ಎಂಬುದು ನನ್ನ ಅನುಭವ!



ಹಾಗಾದರೆ, ಕಂಪೆನಿಯ ಬದಲಾವಣೆಯ ಕತೆಗೊಂದು ಒಳ್ಳೆಯ ದೃಷ್ಟಾಂತ? ನೀವು ಈಗಾಗಲೇ ಕೇಳಿದ್ದರೂ, ಈ ಕತೆಯನ್ನು  ಮತ್ತೊಮ್ಮೆ ಕೇಳಿ.

ದ್ವೀಪವೊಂದನ್ನು ಗೆಲ್ಲಬೇಕೆಂದು ಅಲ್ಲಿಗೆ ತನ್ನ ನೌಕೆಯೊಡನೆ ಕ್ಯಾಪ್ಟನ್‌ ಬಂದಿಳಿಯುತ್ತಾನೆ. ಆತನ ನೌಕೆಯಲ್ಲಿರು­ವವರ ಸಂಖ್ಯೆ ಕೇವಲ ನೂರು. ಆದರೆ ಆ ದ್ವೀಪದಲ್ಲಿರುವವರ ವೈರಿ ಪಡೆಯಲ್ಲಿ ಐನೂರು ಮಂದಿ. ಕ್ಯಾಪ್ಟನ್‌ ದ್ವೀಪಕ್ಕಿಳಿದ ಮರುಕ್ಷಣವೇ ತನ್ನ ಮಂದಿಗೆ ತಮ್ಮನ್ನಲ್ಲಿ  ತಂದ ನೌಕೆಯನ್ನು ಸುಟ್ಟುಬಿಡುವಂತೆ ಆಜ್ಞಾಪಿಸುತ್ತಾನೆ. ಹೊತ್ತಿ ಉರಿಯು­ತ್ತಿರುವ ನೌಕೆಯ ಮುಂದೆ ನಿಂತು ತನ್ನ ಬಳಗದವರನ್ನು ಉದ್ದೇಶಿಸಿ – ‘ಯೋಧರೆ, ನಮ್ಮ ನೌಕೆ ಈಗ ಉರಿದು ಬೂದಿಯಾಗಿದೆ. ನಾವು ಕೇವಲ ನೂರು ಮಂದಿ. ಮುಂದೆ ಐನೂರು ಮಂದಿ ವೈರಿ ಪಡೆ. ಹಿಂದೆ ಈಜಲಿಕ್ಕಾಗದ ಸಮುದ್ರ. ನಾವಿಲ್ಲಿಂದ ಮತ್ತೆ ಹಿಂತಿರುಗಬೇಕೆಂದರೆ, ಮುಂದಿರುವ ವೈರಿ ಪಡೆಯನ್ನು ಸಂಪೂರ್ಣವಾಗಿ ನಾಶ ಮಾಡದೆ ಬೇರೆ ದಾರಿಯೇ ಇಲ್ಲ. ಅವರನ್ನು ಸೋಲಿಸಿ ಈ ದ್ವೀಪವನ್ನು ನಮ್ಮದಾಗಿಸಿಕೊಂಡು ಗೆಲುವಿನ ಹೂಮಾಲೆ ಧರಿಸಿ ಮನೆಗೆ ಹಿಂತಿರುಗೋಣ. ಅಲ್ಲಿ ನಮ್ಮ ಪ್ರೀತಿ­ಪಾತ್ರರೆಲ್ಲ ನಮಗಾಗಿ ಕಾದು ಕು­ಳಿತಿ­ದ್ದಾರೆ. ಇಲ್ಲವೇ, ಇವರಿಂದ ನಾವೆಲ್ಲ ಸಾವನ್ನಪ್ಪಿ ಯಾರಿಗೂ  ತಿಳಿಯದ ಹಾಗೆ ಇಲ್ಲಿಯೇ ಮಣ್ಣಾಗಿ ಬಿಡೋಣ. ನನಗೆ ನಿಮ್ಮಲ್ಲಿ ನಂಬಿಕೆ ಇದೆ. ಅಚಲವಾದ ಭರವಸೆ ಇದೆ. ನೀವು ಖಂಡಿತವಾಗಿಯೂ ಧೈರ್ಯದಿಂದ ಹೋರಾಡಿ ವಿಜಯಿಗಳಾ­ಗುವುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ’.



ಹೌದು, ಆ ನೂರು ಯೋಧರು ತಮಗೆ ಮತ್ತೊಂದು ಬದುಕಿಲ್ಲ ಎಂಬಂತೆ ಹೋರಾಡುತ್ತಾರೆ. ವೈರಿಯನ್ನು ಸೋಲಿಸಿ, ಅಲ್ಲಿ ತಮ್ಮ ಆಧಿಪತ್ಯವನ್ನು ನೆಲೆಗೊಳಿಸಿ, ನೂತನವಾದ ಭವ್ಯ ಹಡಗೊಂದನ್ನು ಕಟ್ಟಿ ಗೆದ್ದು ಸಕಲ ಸಂಪತ್ತಿನೊಡನೆ ತಮ್ಮ ಊರಿಗೆ ಸಂಭ್ರಮದಿಂದ ಮರಳುತ್ತಾರೆ.

ಅಲ್ಲಿಂದ ಮುಂದಕ್ಕೆ ಎಲ್ಲ ಒಳ್ಳೆಯ ಕತೆಗಳಂತೆಯೇ ಅವರೆಲ್ಲ ಸುಖವಾ­ಗಿರುತ್ತಾರೆ.



ಲೇಖಕರನ್ನು satyesh.bellur@gmail.com ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)