ಮಂಗಳವಾರ, ಮಾರ್ಚ್ 9, 2021
18 °C

ಬದುಕು ಕೊಟ್ಟ ಟ್ಯಾಕ್ಸಿ

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

ಬದುಕು ಕೊಟ್ಟ ಟ್ಯಾಕ್ಸಿ

ಪರ ಊರುಗಳಿಂದ ಕೆಲಸ ಹುಡುಕಿಕೊಂಡು ಬರುವ ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿರುವ ಬೆಂಗಳೂರು  ದುಡಿಯುವವರ ಪಾಲಿಗೆ ಅಕ್ಷಯಪಾತ್ರೆ. ಬೆಳೆಯುತ್ತಲೇ ಇರುವ ಈ ನಗರದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಲೇ ಇವೆ.ವಿವಿಧ ಸಂಸ್ಥೆಗಳಲ್ಲಿ ವರ್ಷಗಟ್ಟಲೆ ದುಡಿದರೂ ತೃಪ್ತಿ ಸಿಗದ ಅನೇಕರು ಸ್ವಂತ ಉದ್ಯೋಗದತ್ತ ಹೊರಳುವುದು ಸಾಮಾನ್ಯ. ಸ್ವಲ್ಪ ಹಣ ಹೊಂದಿಸಿಕೊಂಡು   ಹೂಡಿಕೆ ಮಾಡುವವರ ಮೊದಲ ಆಯ್ಕೆ  ಟ್ಯಾಕ್ಸಿ. ಓಲಾ, ಉಬರ್‌ನಂಥ ಕಂಪೆನಿಗಳು ಬಂದ ನಂತರ ಟ್ಯಾಕ್ಸಿ ಮಾಲೀಕರಿಗೆ ಕೈ ತುಂಬ ಕೆಲಸ ಸಿಗುತ್ತಿದೆ.  ಹಲವರು ಸ್ವಂತ ಕಾರು ಕೊಂಡು ಟ್ಯಾಕ್ಸಿ ಕಂಪೆನಿಗಳ ಜೊತೆ ಗುರುತಿಸಿಕೊಂಡು  ಸಂಪಾದನೆಗೆ ದಾರಿ ಮಾಡಿಕೊಂಡಿದ್ದಾರೆ. ಇದಕ್ಕೆ ಮಹಿಳೆಯರೂ ಹೊರತಾಗಿಲ್ಲ.ತಿರುಚನಾಪಳ್ಳಿಯ ಬಾಲಾಜಿ ಹದಿನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಬಾರ್ಬಿಕ್ಯೂ ನೇಷನ್‌’ನಲ್ಲಿ ತರಬೇತುದಾರರಾಗಿದ್ದ ಅವರು ಎಂಟು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅದಕ್ಕೂ ಮುನ್ನ ಸಿಂಗಪುರ, ಮಲೇಷ್ಯಾಗಳಲ್ಲಿ ಮಾರುಕಟ್ಟೆ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ.ಮದುವೆಯಾದ ನಂತರ ಕೆಲಸ ಬಿಟ್ಟು ಸ್ವಂತ ಕಾರು ಕೊಂಡು ಓಲಾ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡು ಕಾರು ಓಡಿಸುತ್ತಿದ್ದಾರೆ. ಇದಕ್ಕೆ ಅವರು ಹಲವು ಕಾರಣ ಕೊಡುತ್ತಾರೆ.ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾಗ ಖಾಸಗಿ ಬದುಕಿಗೆ ಸಮಯ ಹೊಂದಿಸಿಕೊಳ್ಳುವುದು  ಸಾಧ್ಯವಾಗುತ್ತಿರಲಿಲ್ಲ. ಸಿಗುತ್ತಿದ್ದ ಸಂಬಳ ಅಷ್ಟಕ್ಕಷ್ಟೇ. ಹೆಂಡತಿ ಮಕ್ಕಳ ಕಡೆಗೆ ಗಮನ ಹರಿಸುವುದು ಸಾಧ್ಯವಾಗುತ್ತಿರಲಿಲ್ಲ.  ಎಷ್ಟೇ ದುಡಿದರೂ ಮೇಲಿನವರ ಕಿರಿಕಿರಿ ತಪ್ಪುತ್ತಿರಲಿಲ್ಲ.‘ಹಣದ ಅಗತ್ಯಬಿದ್ದರೆ ತಿಂಗಳ ಎಲ್ಲ ದಿನವೂ ದುಡಿಯುತ್ತೇನೆ.  ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ಕೊಂಡರೆ, ಅದಕ್ಕೂ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಸಂಪಾದನೆಯೂ ಹೆಚ್ಚಿದೆ’ ಎಂದು ಬಾಲಾಜಿ ಹೇಳುತ್ತಾರೆ.‘ಬೆಳಿಗ್ಗೆ 4ಕ್ಕೆ ಎದ್ದು ಕಾರು ತೊಳೆದು  ಪೂಜೆ ಮಾಡುತ್ತೇನೆ. ಗ್ರಾಹಕರ ಕರೆ ಬಂದ ಕೂಡಲೇ ಹೊರಡುತ್ತೇನೆ. ಸಂಜೆ ಬೇಗ ಮನೆಗೆ ಬರುತ್ತೇನೆ. ಇದರಿಂದ ಪತ್ನಿಗೂ ಖುಷಿ ಇದೆ. ಈಗ ನನ್ನ ಬಳಿ ಮೂರು ಕಾರುಗಳಿವೆ. ಒಂದನ್ನು ನನ್ನ ತಮ್ಮ ಓಡಿಸುತ್ತಾನೆ’ ಎನ್ನುತ್ತಾರೆ ಅವರು.ಆಂಧ್ರಪ್ರದೇಶದ ಗಂಗಾ ಈ ವಿಚಾರದಲ್ಲಿ ಬಹಳ ದಿಟ್ಟೆ. ನರ್ಸರಿ ಟೀಚರ್‌  ಆಗಿದ್ದವರು ಆ ಕೆಲಸ ಬಿಟ್ಟು  ಕಾರು ಓಡಿಸುವುದನ್ನು ಕಲಿತು, ಸ್ವಂತ ಕಾರು ಕೊಂಡು ಓಡಿಸುತ್ತಿದ್ದಾರೆ.‘ನನ್ನ ಪತಿ ರೈಲ್ವೆಯಲ್ಲಿ ಮೆಕ್ಯಾನಿಕ್‌ ಆಗಿದ್ದಾರೆ. ಮೊದಲು ರೈಲ್ವೆ ಶಾಲೆಯಲ್ಲಿ ನರ್ಸರಿ ಟೀಚರ್‌ ಆಗಿದ್ದೆ. ನಂತರ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಕಿಯಾಗಿ ದುಡಿದಿದ್ದೇನೆ. ಆದರೆ, ಸಿಗುತ್ತಿದ್ದ ವೇತನ ಅಷ್ಟಕ್ಕಷ್ಟೇ.  2014ರಲ್ಲಿ ಓಲಾ ಕಂಪೆನಿ ಮಹಿಳೆಯರಿಗೆ ಚಾಲನಾ ತರಬೇತಿ ನೀಡುವ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿತ್ತು. ಪತಿಯ ಅನುಮತಿ ಪಡೆದು ತರಬೇತಿಗೆ ಸೇರಿದೆ.ತರಬೇತಿಯ ನಂತರ ಚಾಲನಾ ಪರವಾನಗಿ ಪಡೆದು ಓಲಾ ಕಂಪೆನಿಗೆ ದುಡಿಯುತ್ತಿದ್ದೇನೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ದುಡಿಮೆ. ಸಾಲ ಮಾಡಿ ಹೊಸ ಕಾರು ಕೊಂಡಿದ್ದೇನೆ. ಸಾಲದ ಕಂತು ತಿಂಗಳಿಗೆ ₹25 ಸಾವಿರ ಬ್ಯಾಂಕಿಗೆ ಕಟ್ಟುತ್ತೇನೆ. ಉಳಿದಂತೆ ಮಕ್ಕಳು, ಮನೆ ಖರ್ಚನ್ನು ಸುಲಭವಾಗಿ ನಿಭಾಯಿಸುತ್ತಿದ್ದೇನೆ’ ಎಂದು ಗಂಗಾ ಹೆಮ್ಮೆಯಿಂದ ಹೇಳುತ್ತಾರೆ.  

ಉತ್ತಮ ದುಡಿಮೆ

ನಗರದಲ್ಲಿ ಟ್ಯಾಕ್ಸಿ ಓಡಿಸುವುದರಿಂದ ತಿಂಗಳಿಗೆ 60ರಿಂದ 70 ಸಾವಿರ ರೂಪಾಯಿವರೆಗೂ ದುಡಿಯಲು ಸಾಧ್ಯ. ಹೈಸ್ಕೂಲು ಓದುವ ಇಬ್ಬರು ಮಕ್ಕಳಿದ್ದಾರೆ. ಅವರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.  ಹಾಗಾಗಿ ಒತ್ತಡ ಕಡಿಮೆ ಇದೆ. ವೃತ್ತಿ ಆರಂಭಿಸಿದ ನಂತರ ಅನೇಕ ಮಹಿಳೆಯರಿಗೆ ಪ್ರೇರಣೆ ನೀಡಿದ್ದೇನೆ. ನನ್ನ ಮೂವರು ಸ್ನೇಹಿತೆಯರು ಈಗ ಈ ವೃತ್ತಿಗೆ ಬಂದಿದ್ದಾರೆ. ಇದು ಮಹಿಳೆಯರಿಗೆ ಹೇಳಿ ಮಾಡಿಸಿದ ವೃತ್ತಿ. ಮಹಿಳೆಯರು ಟ್ಯಾಕ್ಸಿ ಚಾಲಕರಾಗಲು ಭಯಪಡುವ ಅಗತ್ಯವಿಲ್ಲ.

–ಗಂಗಾ, ಟ್ಯಾಕ್ಸಿ ಚಾಲಕಿ

*

ಟ್ಯಾಕ್ಸಿ ಡ್ರೈವರ್‌ ಆಗಿರುವುದರಿಂದ  ಅನೇಕ ವ್ಯಕ್ತಿಗಳ ಪರಿಚಯವೂ ಆಗುತ್ತಿದೆ. ಅನೇಕರಿಗೆ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಿದ ತೃಪ್ತಿಯೂ ಇದೆ. ಟ್ಯಾಕ್ಸಿ ಓಡಿಸುವುದರಿಂದ ನನ್ನ ಘನತೆಗೂ ಧಕ್ಕೆಯಾಗಿಲ್ಲ. ಕುಟುಂಬದಲ್ಲಿ ನೆಮ್ಮದಿಯೂ ಇದೆ.

–ಬಾಲಾಜಿ, ಟ್ಯಾಕ್ಸಿ ಚಾಲಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.