ಮಂಗಳವಾರ, ಮೇ 18, 2021
28 °C

ಬರಪೀಡಿತ ಗೋಠೆ, ಚಿಚಖಂಡಿ, ಚಿಕ್ಕಪಡಸಲಗಿ, ಗದ್ಯಾಳಕ್ಕೆ ಭೇಟಿ:ಕಾಟಾಚಾರದ ಸಮೀಕ್ಷೆ; ಎಲ್ಲೆಡೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಠೆ (ಬಾಗಲಕೋಟೆ): ಆರು ತಾಲ್ಲೂಕುಗಳನ್ನು ಒಳಗೊಂಡ ಇಡೀ ಬಾಗಲಕೋಟೆ ಜಿಲ್ಲೆಯನ್ನು ರಾಜ್ಯ ಸರ್ಕಾರವೇ ಬರ ಪೀಡಿತ ಎಂದು ಘೋಷಣೆ ಮಾಡಿದೆ, ಆದರೆ ಮಂಗಳವಾರ ಜಿಲ್ಲೆಗೆ ಆಗಮಿಸಿದ್ದ ಬರ ಅಧ್ಯಯನ ತಂಡ ಕೇವಲ ನಾಲ್ಕು ಗ್ರಾಮಗಳಿಗೆ ಸಾಂಕೇತಿಕವಾಗಿ ಭೇಟಿ ನೀಡಿತು. ಬರದಿಂದ ತತ್ತರಿಸಿರುವ ಜಿಲ್ಲೆಯ ಹುನಗುಂದ ಮತ್ತು ಬಾದಾಮಿ ತಾಲ್ಲೂಕಿನ ಹಳ್ಳಿಗಳತ್ತ ಸುಳಿಯದ ಸಚಿವರ ತಂಡ  ಕಾಟಾಚಾರಕ್ಕೆ ಎಂಬಂತೆ ಹೊತ್ತು ಮುಳುಗುವ ಹೊತ್ತಿನಲ್ಲಿ ನಾಲ್ಕು ಗ್ರಾಮಕ್ಕೆ ಭೇಟಿ  ನೀಡಿ ಬಳಿಕ ತಡ ರಾತ್ರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದು ಜಿಲ್ಲೆಯ ಜನತೆಯ ಅಸಮಾ ಧಾನಕ್ಕೆ ಕಾರಣವಾಯಿತು. ದಿನಪೂರ್ತಿ ವಿಜಾಪುರ ಜಿಲ್ಲೆಯಲ್ಲಿ ಬರ ಸಮೀಕ್ಷೆ ಮಾಡಿದ ತಂಡ ನೆಪ ಮಾತ್ರಕ್ಕೆ ಜಮಖಂಡಿ ತಾಲ್ಲೂಕಿನ ಗೋಠೆ ಗ್ರಾಮಕ್ಕೇ ಭೇಟಿ ನೀಡಿತು. ಬಳಿಕ ಮಬ್ಬು ಗತ್ತಲಲ್ಲಿ ಚಿಚಖಂಡಿ, ಚಿಕ್ಕಪಡಸಲಗಿ ಮತ್ತು ಗದ್ಯಾಳ ಗ್ರಾಮಕ್ಕೆ ಭೇಟಿ ನೀಡಿತು.ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಸಚಿವರಾದ ಸಿ.ಎಂ. ಉದಾಸಿ, ಗೋವಿಂದ ಎಂ.ಕಾರಜೋಳ, ವಿಶ್ವೇ ಶ ಹೆಗಡೆ ಕಾಗೇರಿ ನೇತೃತ್ವದ ತಂಡ ಸಂಜೆ 5. 30ಕ್ಕೆ ಗೋಠೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಹಾಗೂ ಮುಖಂಡರೊಂದಿಗೆ ಕ್ಷಣ ಹೊತ್ತು ಚರ್ಚಿಸಿತು. ಗೋಠೆ ಗ್ರಾಮಕ್ಕೆ ನೀರೊದಗಿಸುವ ಬತ್ತಿ ಹೋಗಿರುವ ಕೆರೆಯನ್ನು ಸಚಿವರು ವೀಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವಿಠಲ ಚೌರಿ ಅವರು ಬರಪೀಡಿತ ಬಾಗಲಕೋಟೆ ಜಿಲ್ಲೆಗೆ   ಅನುಕೂಲವಾಗುವಂತೆ ಮಹಾರಾಷ್ಟ್ರದ ಕೊಯ್ನಾ ಆಣೆಕಟ್ಟೆಯಿಂದ 4 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸಲು ಸೂಕ್ತ ಕ್ರಮಕೈಗೊಳ್ಳಬೇಕು, ಜಾನುವಾರುಗಳಿಗೆ ಅನುಕೂಲವಾಗುವಂತೆ ಗೋಶಾಲೆ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕು, ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ಪೂರೈಕೆ ಮಾಡಬೇಕು, ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.ಬಳಿಕ ಗ್ರಾಮದ ಮಹಿಳೆಯರು ಕುಡಿಯಲು ಸಮರ್ಪಕ ನೀರನ್ನು ಪೂರಕೈ ಮಾಡುವಂತೆ ಸಚಿವ ಕಾರಜೋಳ, ಜಗದೀಶ ಶೆಟ್ಟರ, ಕಾಗೇರಿ, ಉದಾಸಿ ಅವರಿಗೆ ಕೈಮುಗಿದು ಬೇಡಿಕೊಂಡರು.ಹೇಳಿಕೊಳ್ಳುವಂತೆ ಬರ ಇಲ್ಲ: ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳನೊಂದಿಗೆ ಮಾತನಾಡಿದ ಸಚಿವರ ಜಗದೀಶ ಶೆಟ್ಟರ್ ಮತ್ತು ಗೋವಿಂದ ಕಾರಜೋಳ, ಬಾಗಲಕೋಟೆ ಜಿಲ್ಲೆಯಲ್ಲಿ ಹೇಳಿಕೊಳ್ಳು ವಂತೆ ಬರ ಪರಿಸ್ಥಿತಿ ನಿರ್ಮಾಣವಾಗಿಲ್ಲ, ಕುಡಿಯುವ ನೀರು ಪೂರೈಕೆಗೆ, ಜಾನುವಾರುಗಳಿಗೆ ಮೇವು ಪೂರೈಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.ಬರ ಪೀಡತ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ನವಿಲುತೀರ್ಥ ಆಣೆಕಟ್ಟೆಯಿಂದ 0.25 ಟಿಎಂಟಿ ಮತ್ತು ಹಿಡಕಲ್ ಜಲಾಶಯದಿಂದ 1.25 ಟಿಎಂಸಿ ನೀರನ್ನು ಜಿಲ್ಲೆಗೆ ಈಗಾಗಲೇ ಹರಿಸಲಾಗಿದೆ ಎಂದರು.ಕಾಟಾಚಾರದ ಭೇಟಿ: ಈ ಸಂದರ್ಭದಲ್ಲಿ  `ಪ್ರಜಾ ವಾಣಿ~ಯೊಂದಿಗೆ ಮಾತನಾಡಿದ ಗ್ರಾಮಸ್ಥರಾದ ಭೀಮಪ್ಪ ಅನಂತಪುರ, ಅಬ್ಬಾಸ್ ಆಲಿ ಡೋಂಗ್ರಿ ಸಾಬಾ ಅತ್ತಾರ, ಸಿದ್ದಪ್ಪ ಭೀಮಪ್ಪ ನಿಂಗಸೂರು ಅವರುಗಳು, ಸುಮಾರು ಒಂದು ಸಾವಿರ ಮನೆಗಳನ್ನು ಒಳಗೊಂಡಿರುವ ಜಿಲ್ಲೆಯ ಕೊನೆಯ ಹಳ್ಳಿ ಗೋಠೆ ಎಂಬ ಪುಟ್ಟ ಹಳ್ಳಿ. ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಊರ ಮುಂದಿನ ಕೆರೆ ಬತ್ತಿಹೋಗಿ ಹಲವು ತಿಂಗಳೇ ಕಳೆದಿದೆ. ಬರದ ಹಿನ್ನೆಲೆಯಲ್ಲಿ ಗ್ರಾಮದ ಸುಮಾರು 400 ಮಂದಿ  ಕೂಲಿ ಅರಸಿ ದೂರದ ಗೋವಾ, ಪೂನಾ. ಮುಂಬೈ, ಮಂಗಳೂರಿ ನತ್ತ ಗುಳೇ ಹೋಗಿದ್ದಾರೆ ಎಂದು ತಿಳಿಸಿದರು.ಉದ್ಯೋಗ ಖಾತರಿ ಯೋಜನೆ ಅಡಿ ಇಲ್ಲಿಯ ಹಸಿದ ಜನತೆಯ ಕೈಗೆ ಕೆಲಸ ಸಿಗುತ್ತಿಲ್ಲ, ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆಯಾಗುತ್ತಿರುವ ಪಡಿತರ ಪದಾರ್ಥ ಅರ್ಹರಿಗೆ ಸಿಗುತ್ತಿಲ್ಲ ಎಂದು ದೂರಿದರು.ಈ ಮಧ್ಯೆ ಗ್ರಾಮಕ್ಕೆ ಭೇಟಿ ನೀಡಿದರುವ ಸಚಿವರು ಗ್ರಾಮದಿಂದ ಯಾರೊಬ್ಬರೂ ಗುಳೇ ಹೋಗಿಲ್ಲ, ಕುಡಿಯುವ ನೀರಿನ ಸಮಸ್ಯೆ ಇಲ್ಲ, ಬರದಿಂದ ಗ್ರಾಮಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಎದುರು ಬೊಗಳೆ ಬಿಟ್ಟಿತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬರಗಾಲ ತಲೆದೂರಿ ಎರಡು ತಿಂಗಳಿಂದ ಜನತೆ ನೀರಿಗಾಗಿ, ಜಾನುವಾರುಗಳು ಮೇವಿಗಾಗಿ ಪರಿತಪಿ ಸುತ್ತಿವೆ  ಸಚಿವರ ಗಮನಕ್ಕೆ ಈ ಎಲ್ಲ ಸಮಸ್ಯೆ ಗಮನಕ್ಕೆ ತಂದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು. ಮಧ್ಯಾಹ್ನ 2.30ಕ್ಕೆ ಆಗಮಿಸಬೇಕಾಗಿದ್ದ ಬರ ಅಧ್ಯಯನ ತಂಡ ಸಂಜೆ 5.30ಕ್ಕೆ ಆಗಮಿಸಿತು. ಗ್ರಾಮಸ್ಥರ ಅಹವಾಲು ಸರಿಯಾಗಿ ಆಲಿಸದೇ ಅವಸರ ಅವಸರದಿಂದ ಮುಂದಿನ ಗ್ರಾಮಗಳತ್ತ ತೆರಳಿತು.  ಬಳಿಕ ಗೋಠೆಯಿಂದಬಾಗಲಕೋಟೆಗೆ ತೆರಳುವ ಮಾರ್ಗ ಮಧ್ಯೆ ಸಿಗುವ ಗದ್ಯಾಳ, ಚಿಚಖಂಡಿ, ಚಿಕ್ಕಪಡಸಲಗಿ ಗ್ರಾಮಗಳಿಗೆ  ಮಬ್ಬಗತ್ತಲಿನಲ್ಲಿ ಭೇಟಿ ನೀಡಿದರು.ಕಾಲು ಜಾರಿದ ಉದಾಸಿ: ಗೋಠೆ ಗ್ರಾಮದಲ್ಲಿರುವ ಬತ್ತಿಹೋದ ಕೆರೆಯನ್ನು ವೀಕ್ಷಣೆ ಮಾಡಿ ಮರಳುವ ಸಂದರ್ಭದಲ್ಲಿ ಸಚಿವ ಸಿ.ಎಂ.ಉದಾಸಿ ಕಾಲು ಜಾರಿದರು. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಇತರೆ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಅವರ ಸಹಾಯಕ್ಕೆ ಬಂದು ಕೈಹಿಡಿದುಕೊಂಡ ಪರಿಣಾಮ ಸಚಿವರು ಬೀಳದಂತೆ ತಡೆದರು.ತಡ ರಾತ್ರಿ ಸಭೆ: ಬಳಿಕ ರಾತ್ರಿ 8.30ಕ್ಕೆ ಸಚಿವರು ಬಾಗಲಕೋಟೆ ನಗರಕ್ಕೆಆಗಮಿಸಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಬರದ ಸಂಬಂಧ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ದಡ್ಡೇನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಸಿಇಒ ಎಸ್.ಜಿ.ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹರೀಶ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.