ಶನಿವಾರ, ಏಪ್ರಿಲ್ 17, 2021
23 °C

ಬರ: 600 ಕೋಟಿ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇರುವ ಕಾರಣದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಒದಗಿಸುವ ಉದ್ಯೋಗದ ದಿನಗಳ ಸಂಖ್ಯೆಯನ್ನು 150ಕ್ಕೆ ಹೆಚ್ಚಿಸುವ ಹಾಗೂ ಯೋಜನೆಯಡಿ ರೂ 500ರಿಂದ 600 ಕೋಟಿ ಹೆಚ್ಚುವರಿ ಅನುದಾನ ಒದಗಿಸುವ ಭರವಸೆ ಕೇಂದ್ರ ಸರ್ಕಾರದಿಂದ ದೊರೆತಿದೆ. ಕುಡಿಯುವ ನೀರಿನ ಬವಣೆ ನೀಗಿಸಲು ರೂ  286 ಕೋಟಿ ನೆರವು ನೀಡುವ ತೀರ್ಮಾನವನ್ನೂ ಪ್ರಕಟಿಸಿದೆ.ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನ ನಡೆಸಲು ನಗರಕ್ಕೆ ಬಂದಿದ್ದ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ವಿಧಾನಸೌಧದಲ್ಲಿ ಗುರುವಾರ ಸಭೆ ನಡೆಸಿದರು. ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.`ನರೇಗಾ ಯೋಜನೆಯಡಿ ಕುಟುಂಬದ ಒಬ್ಬ ಸದಸ್ಯನಿಗೆ ವಾರ್ಷಿಕ 100 ದಿನಗಳ ಉದ್ಯೋಗ ಒದಗಿಸಲಾಗುತ್ತಿದೆ. ಈ ಮಿತಿಯನ್ನು 200 ದಿನಗಳಿಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಆದರೆ, 150 ದಿನಗಳಿಗೆ ಹೆಚ್ಚಿಸಲು ಒಪ್ಪಿದ್ದೇವೆ. ಬರಪೀಡಿತ ಜಿಲ್ಲೆಗಳಿಗೆ ಮಾತ್ರ ಈ ಬದಲಾವಣೆ ಅನ್ವಯವಾಗುತ್ತದೆ~ ಎಂದು ಜೈರಾಮ್ ರಮೇಶ್ ತಿಳಿಸಿದರು.`ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿ ಕರ್ನಾಟಕಕ್ಕೆ ರೂ   2,400 ಕೋಟಿ  ಅನುದಾನ ಮಂಜೂರು ಮಾಡಲಾಗಿದೆ. ಬರ ಪರಿಸ್ಥಿತಿಯ ಕಾರಣಕ್ಕಾಗಿ ಹೆಚ್ಚುವರಿಯಾಗಿ ಇನ್ನೂ ರೂ 500ರಿಂದ 600 ಕೋಟಿ  ಬಿಡುಗಡೆ ಮಾಡಲಾಗುವುದು~ ಎಂದು ಅವರು ವಿವರಿಸಿದರು.`ದೇಶದಲ್ಲಿನ ಬರ ಪರಿಸ್ಥಿತಿ ಅಧ್ಯಯನ ಸಲುವಾಗಿಯೇ ಸಚಿವರ ಸಮಿತಿ ರಚಿಸಲಾಗಿದೆ. ಅದು ಮತ್ತೆ ಈ ತಿಂಗಳ 7 ಅಥವಾ 8ರಂದು ಸಭೆ ಸೇರಲಿದೆ. ಆ ಸಭೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದಕ್ಕೆ ರೂ  286 ಕೋಟಿ  ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ಇತರ ಹಣಕಾಸಿನ ನೆರವಿನ ಬಗ್ಗೆ ಚರ್ಚಿಸಲಾಗುವುದು. ಕುಡಿಯುವ ನೀರು ಪೂರೈಕೆಗಾಗಿ ಈಗಾಗಲೇ ರೂ 71 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ~ ಎಂದು ಪವಾರ್ ವಿವರಿಸಿದರು.ನಿಯಮ ಸಡಿಲ: `ಕೇಂದ್ರ ಪ್ರಾಯೋಜಕತ್ವದ ಯೋಜನೆಗಳ ಜಾರಿಗೆ ಕೆಲವು ಕಠಿಣ ನಿಯಮಗಳು ಅಡ್ಡಿಯಾಗಿವೆ ಎನ್ನುವ ದೂರುಗಳು ಬಂದಿವೆ. ಅಂತಹ ಯಾವ ನಿಯಮಗಳನ್ನು ಬದಲಿಸಬೇಕಾಗಿದೆ ಎಂಬುದನ್ನು ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸಿದರೆ ಅವುಗಳನ್ನು ಸಡಿಲಗೊಳಿಸುವ ಕಡೆಗೆ ಗಮನಹರಿಸಲಾಗುವುದು. ಬರದ ಹಿನ್ನೆಲೆಯಲ್ಲಿ ಕೆಲವು ನಿಯಮಗಳನ್ನು ಬದಲಿಸುವ ಅಗತ್ಯ ಇದೆ~ ಎಂದೂ ಅಭಿಪ್ರಾಯಪಟ್ಟರು.ಮೇವು ಬೆಳೆಸಿ: `ಮೇವಿನ ಕೊರತೆ ನೀಗಿಸಲು ಪಂಜಾಬ್‌ನಿಂದ ಮೇವು ತರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಅಷ್ಟು ದೂರದಿಂದ ಮೇವು ತರುವುದಕ್ಕೆ ಸಾಗಣೆ ವೆಚ್ಚವೇ ಹೆಚ್ಚಾಗುತ್ತದೆ. ಅದರ ಬದಲು, ಸ್ಥಳೀಯವಾಗಿ ನೀರು ಇರುವ ರೈತರ ಜಮೀನುಗಳಲ್ಲಿ ಮೇವು ಬೆಳೆಸುವುದಕ್ಕೆ ಉತ್ತೇಜನ ನೀಡಬೇಕು. ರೈತರಿಂದ ಮೇವು ಖರೀದಿಸುವ ಭರವಸೆಯನ್ನು ನೀಡಿ ಸರ್ಕಾರ ಅವರನ್ನು ಮನವೊಲಿಸಬೇಕು. ಆಗ ರೈತರು ಕೂಡ ಮೇವು ಬೆಳೆಯಲು ಮುಂದಾಗುತ್ತಾರೆ~ ಎಂದು ಹೇಳಿದರು.`ಜಾನುವಾರುಗಳಿಗೆ ನೀಡುವ ಹಿಂಡಿ ಮೇಲಿನ ಆಮದು ಸುಂಕವನ್ನು ರದ್ದು ಮಾಡಿರುವುದರಿಂದ ಅದರ ಬೆಲೆ ಕಡಿಮೆಯಾಗಲಿದೆ. ರೈತರು ತಮ್ಮ ಜಾನುವಾರುಗಳಿಗೆ ಹಿಂಡಿಯನ್ನೂ ನೀಡಬಹುದು~ ಎಂದು ಸಲಹೆ ಮಾಡಿದರು.`ಗ್ರಾಮೀಣ ಭಾಗದಲ್ಲಿ ರೈತರು ಬಳಸುವ ಡೀಸೆಲ್‌ಗೆ ಶೇಕಡ 50ರಷ್ಟು ಸಬ್ಸಿಡಿ ನೀಡುವ ಉದ್ದೇಶ ಇದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ 25ರಷ್ಟು ಸಬ್ಸಿಡಿ ಹೊರೆಯನ್ನು ಹೊರಬೇಕಾಗುತ್ತದೆ. ಬಿತ್ತನೆ ಬೀಜದ ಮೇಲಿನ ಸಬ್ಸಿಡಿಯನ್ನು ಈ ವರ್ಷ ಕೂಡ ಮುಂದುವರಿಸಲಾಗುವುದು~ ಎಂದು ವಿವರಿಸಿದರು.`ರಾಜ್ಯದಲ್ಲಿ ಅಕ್ಕಿ ಮತ್ತು ಗೋಧಿ ದಾಸ್ತಾನು ಸಾಕಷ್ಟು ಇದೆ. ದಾಸ್ತಾನಿಗೆ ಉಗ್ರಾಣಗಳು ಖಾಲಿ ಇದ್ದರೆ ತಕ್ಷಣ ಇನ್ನೂ ಹೆಚ್ಚು ಪ್ರಮಾಣದ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗುವುದು. ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಭೀಕರವಾಗಿದೆ. ಈ ಕಾರಣಕ್ಕೆ ರಾಜ್ಯದ ಜನರು ಆತಂಕಪಡುವ ಅಗತ್ಯ ಇಲ್ಲ. ಕೇಂದ್ರ ಎಲ್ಲ ಕಾಲದಲ್ಲೂ ರಾಜ್ಯದ ಜತೆ ಇರುತ್ತದೆ~ ಎಂದು ಪವಾರ್ ಭರವಸೆ ನೀಡಿದರು.`ದೀರ್ಘಕಾಲೀನ ಪರಿಹಾರ ಕ್ರಮಗಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ಬರದ ಅಧ್ಯಯನ ನಡೆಯುತ್ತಿದ್ದು, ಇತರ ರಾಜ್ಯಗಳಿಗೂ ಭೇಟಿ ನೀಡಲಾಗುವುದು~ ಎಂದರು.ಇದಕ್ಕೂ ಮುನ್ನ ಮುಖ್ಯಮಂತ್ರಿ ಶೆಟ್ಟರ್ ಮಾತನಾಡಿ, `ರಾಜ್ಯ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ಎದುರಿಸುತ್ತಿದೆ. ಪರಿಹಾರ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಇದುವರೆಗೆ ರೂ 2,150 ಕೋಟಿ   ಖರ್ಚು ಮಾಡಿದೆ. ಜತೆಗೆ ರೈತರ ಸಾಲ ಮನ್ನಾ ಮಾಡಲಾಗಿದೆ.ಕೇಂದ್ರ ಸರ್ಕಾರ ಕೂಡ ಈ ವಿಷಯದಲ್ಲಿ ರಾಜ್ಯದ ನೆರವಿಗೆ ಧಾವಿಸಬೇಕು~ ಎಂದು ಮನವಿ ಮಾಡಿದರು.

`ತಕ್ಷಣಕ್ಕೆ ಏನಾಗಬೇಕು~

ಬೆಂಗಳೂರು: `ರಾಜ್ಯದಲ್ಲಿ ಬರ ಇದೆ ಎಂದು ಸಾವಿರಾರು ಕೋಟಿ ನೆರವು ಕೇಳುವುದರಿಂದ ಬರದ ಸಮಸ್ಯೆ ನೀಗಿಸಲು ಸಾಧ್ಯ ಇಲ್ಲ. ಅದರ ಬದಲಿಗೆ, ತಕ್ಷಣಕ್ಕೆ ಯಾವ ರೀತಿಯ ಪರಿಹಾರ ಬೇಕಾಗಿದೆ ಎಂಬುದನ್ನು ಪತ್ರದ ಮೂಲಕ ನಿಖರವಾಗಿ ತಿಳಿಸಬೇಕು~ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಗುರುವಾರ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.`ಕೇಂದ್ರ ಸರ್ಕಾರದ ನೆರವು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿ ಪತ್ರದಲ್ಲಿ ಸಮಗ್ರವಾಗಿ ಎಲ್ಲ ವಿಚಾರಗಳನ್ನೂ ಪ್ರಸ್ತಾಪಿಸಲಾಗಿದೆ. ಬರದ ಹಿನ್ನೆಲೆಯಲ್ಲಿ ಕೇಳುವ ಎಲ್ಲದಕ್ಕೂ ಪರಿಹಾರ ಕಲ್ಪಿಸುವುದು ಕಷ್ಟ. ತಕ್ಷಣಕ್ಕೆ ಏನು ಮಾಡಬೇಕು? ಅದಕ್ಕೆ ಎಷ್ಟು ಹಣ ವೆಚ್ಚವಾಗುತ್ತದೆ ಎಂಬುದನ್ನು ಮುಖ್ಯವಾಗಿ ತಿಳಿಸಿ~ ಎಂದು ಸೂಚಿಸಿದರು.`ಈ ಕಾರಣದಿಂದ ರಾಜ್ಯವು ತಕ್ಷಣಕ್ಕೆ ಎರಡು ರೀತಿಯ ಮನವಿ ಪತ್ರಗಳನ್ನು ಸಿದ್ಧಪಡಿಸಬೇಕು. ಒಂದರಲ್ಲಿ ಬರದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಏನಾಗಬೇಕು ಎಂಬುದರ ಬಗ್ಗೆ, ಮತ್ತೊಂದು ಪತ್ರದಲ್ಲಿ ಬರದಂತಹ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಲು ದೂರಗಾಮಿ ಕಾರ್ಯಕ್ರಮ ಸೇರಿದಂತೆ ಇತರ ವಿಚಾರಗಳ ಬಗ್ಗೆ ಉಲ್ಲೇಖಿಸಲಿ. ಈ ರೀತಿಯ ಎರಡು ಪತ್ರಗಳನ್ನು ಎಷ್ಟು ಬೇಗ ಕೇಂದ್ರಕ್ಕೆ ಕಳುಹಿಸುತ್ತೀರೊ ಅಷ್ಟು ಬೇಗ ಪರಿಹಾರವೂ ಸಿಗುತ್ತದೆ~ ಎಂದು ರಮೇಶ್ ಹೇಳಿದರು.ಬರ ಕುರಿತ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಕುಡಿಯುವ ನೀರಿನ ಸಮಸ್ಯೆ ನೀಗಿಸುವುದಕ್ಕೆ ರಾಜ್ಯ ಸರ್ಕಾರ ಕೇಳಿದ್ದಕ್ಕಿಂತ ಹೆಚ್ಚಿನ ಹಣ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ರೂ 250 ಕೋಟಿ ಕೇಳಿದರೆ, ಕೇಂದ್ರ ಸರ್ಕಾರ ಕೊಡಲು ಒಪ್ಪಿದ್ದು ರೂ 286 ಕೋಟಿ!~ ಎಂದು ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ ಎಂದು ಟೀಕೆ ಮಾಡುವವರಿಗೆ ಅವರು ತಿರುಗೇಟು ನೀಡಿದರು.`ಜಲಾನಯನ ಅಭಿವೃದ್ಧಿ ಯೋಜನೆಯಡಿ ರಾಜ್ಯಕ್ಕೆ ರೂ 334 ಕೋಟಿ ನೀಡಿದ್ದು, ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ನೆರವು ನೀಡಲಾಗುವುದು~ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.