ಭಾನುವಾರ, ಜನವರಿ 19, 2020
26 °C

ಬಳ್ಳಾರಿ: ಕಳ್ಳತನದ ಕಥೆ ಕಟ್ಟಿದ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಮಾಲೀಕರ ಸಲಹೆಯ ಮೇರೆಗೆ ವ್ಯವಹಾರದ ಹಣ ಇಸಿದುಕೊಂಡು ಬರಲು ತೆರಳಿದ ನೌಕರನೊಬ್ಬ, ಹಣವನ್ನು ನೀಡದೆ, ಮಾರ್ಗ ಮಧ್ಯೆ ಹಣ ಕಳವಾಗಿದೆ ಎಂದು ಸುಳ್ಳು ಹೇಳಿ, ಕಥೆ ಕಟ್ಟಿದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ರಿಯಲ್ ಎಸ್ಟೇಟ್ ಸಂಸ್ಥೆಯಾಗಿರುವ ರಾಘವೇಂದ್ರ ಡೆವೆಲಪರ್ಸ್‌ನಲ್ಲಿ ಕೆಲಸ ಮಾಡುತ್ತಾ, ಮಾಲೀಕರಿಗೆ ಮೋಸ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಂತೋಷ ರೆಡ್ಡಿ (24) ಹಾಗೂ ಆತನ ಸ್ನೇಹಿತ ಅರುಣ್‌ಕುಮಾರ್ (23) ಎಂಬುವವರನ್ನು ಬಂಧಿಸಿ, ಅವರಿಂದ ರೂ 6 ಲಕ್ಷ ವಶಪಡಿಸಿಕೊಳ್ಳಲಾಗಿದೆ.ಸಂಸ್ಥೆಯಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಂತೋಷ ರೆಡ್ಡಿ ಎಂಬ ವ್ಯಕ್ತಿ ಮರಿಯಮ್ಮನಹಳ್ಳಿಯ ಬಿ. ಪ್ರಕಾಶ ಎಂಬುವವರಿಂದ ಹಣ ಇಸಿದುಕೊಂಡು ಬರುವಂತೆ ಕಳುಹಿಸಿದಾಗ, ಆ ಹಣ ಪಡೆದು, ಮಾರ್ಗ ಮಧ್ಯೆ ಹಣವನ್ನು  ಕಳವು ಮಾಡಲಾಗಿದೆ ಎಂದು ಮಾಲೀಕರಿಗೆ ತಿಳಿಸಿದ್ದ.ಈ ಕುರಿತು ಶಂಕೆ ವ್ಯಕ್ತಪಡಿಸಿದ್ದ ಸಂಸ್ಥೆಯ ಮಾಲೀಕ ಜಿ. ವೆಂಕಟರೆಡ್ಡಿ, ತೋರಣಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು, ದುರಾಸೆಯಿಂದ ಹಣವನ್ನು ಸ್ನೇಹಿತ  ಅರುಣ್‌ಕುಮಾರ್‌ಗೆ ನೀಡಿರುವುದು ದೃಡಪಟ್ಟಿದೆ.ಇಬ್ಬರನ್ನೂ ಬಂಧಿಸಿ, ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿರುಗುಪ್ಪದಲ್ಲಿ ಕಳ್ಳನ ಬಂಧನ

ಸಿರುಗುಪ್ಪ: 41 ಸಾವಿರ ರೂಪಾಯಿಗಳ ನಗದು ಹಣವನ್ನು ವ್ಯಕ್ತಿಯೊಬ್ಬನಿಂದ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಪಟ್ಟಣದ ಪೊಲೀಸರು ಸೆರೆ ಹಿಡಿದು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಜನವರಿ 15ರಂದು ರಾತ್ರಿ ಪಟ್ಟಣದ ರಾಮಕೃಷ್ಣ ಚಿತ್ರಮಂದಿರದ ಬಳಿ ವಿನೋದ ಬಾರ್‌ನ ಕಲೆಕ್ಷನ್ ನಗದು 41 ಸಾವಿರ ರೂಪಾಯಿಗಳನ್ನು ಗೋವಿಂದ ಎಂಬಾತನು ಮನೆಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಪಟ್ಟಣದ ನಿವಾಸಿ ಆರೋಪಿ ಲೋಕೇಶ ತಂದೆ ವೆಂಕೋಬ ಎಂಬಾತನು ಹಣವನ್ನು ದೋಚಿ ಪರಾರಿಯಾಗಿದ್ದನು ಎನ್ನಲಾಗಿದೆ.ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಈತನ ಪತ್ತೆಗಾಗಿ ಇಲ್ಲಿಯ ಸಿಪಿಐ ಲೋಕೇಶ, ಎಸ್‌ಐಗಳಾದ ಲಿಂಗರಾಜ್ ಮತ್ತು ವಿಜಯಕುಮಾರ್, ಪೇದೆಗಳಾದ ಇನಾಯಿತ್, ಕಾಶೀನಾಥ, ಸೂರ್ಯನಾರಾಯಣ ತಂಡ ಸೋಮವಾರ ಆದವಾನಿ ರಸ್ತೆಯ ತಾಯಮ್ಮನ ಗುಡಿ ಬಳಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ವಿನೋದ್ ಬಾರ್ ಬಳಿ ಮೊಬೈಲ್ ಡೌನ್‌ಲೋಡಿಂಗ್ ಮಾಡುವ ಪಟ್ಟಣದ ಲೋಕೇಶನು ಹಣದ ವ್ಯವಹಾರದ ಚಲನವಲನಗಳನ್ನು ಅರಿತು ಹಣ ದೋಚುವ ಸಂಚು ಹೂಡಿ ಸುಳಿವು ದೊರಕದಂತೆ ಈ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)