ಮಂಗಳವಾರ, ಜೂಲೈ 7, 2020
28 °C

ಬಸವ ಉತ್ಸವಕ್ಕೆ ಅದ್ದೂರಿ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವ ಉತ್ಸವಕ್ಕೆ ಅದ್ದೂರಿ ತೆರೆ

ಬಸವಕಲ್ಯಾಣ: ಕಳೆದ ಮೂರು ದಿನಗಳಿಂದ ಇಲ್ಲಿ ನಡೆದ 2 ನೇ ಬಸವ ಉತ್ಸವ ಭಾನುವಾರ ಸಂಭ್ರಮದಿಂದ ತೆರೆ ಕಂಡಿತು. ಸಂಜೆ ರಥ ಮೈದಾನದಲ್ಲಿ ನೆರೆದ ಅಪಾರ ಜನಸ್ತೋಮದ ಮಧ್ಯೆ ಸಮಾರೋಪ ಸಮಾರಂಭ ನಡೆಯಿತು.ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಬಸವರಾಜ ಪಾಟೀಲ ಅಟ್ಟೂರ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಉತ್ಸವಯಶಸ್ವಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ವರ್ಷ ಉತ್ಸವಕ್ಕೆ 50 ಲಕ್ಷ ರೂಪಾಯಿ ಮಂಜೂರು ಮಾಡಿಸಿದ್ದಾರೆ. ಹೀಗಾಗಿ ಈಗಾಗಲೇ ಎರಡು ಉತ್ಸವಗಳು ಸಂಭ್ರಮದಿಂದ ನಡೆದಿವೆ. ಹಂಪಿ ಉತ್ಸವದಂತೆ ಈ ಉತ್ಸವ ಬೃಹತ್ ಪ್ರಮಾಣದಲ್ಲಿ ನಡೆಯಬೇಕಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.ನಿಡಸೋಸಿ ಪಂಚಮಲಿಂಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು. 

 

ಜಿಲ್ಲಾಧಿಕಾರಿ ಸಮೀರ ಶುಕ್ಲಾ ಮಾತನಾಡಿ ಎಲ್ಲರ ಸಹಕಾರದಿಂದಾಗಿ ಉತ್ಸವ ಯಶಸ್ವಿಯಾಗಿದೆ ಎಂದರು.ಮಧ್ಯಾಹ್ನ ಬಸವಾದಿ ಶರಣರಿತ್ತ ಮೌಲ್ಯಗಳ ಅಗತ್ಯತೆ ಎಂಬ ಗೋಷ್ಠಿ ನಡೆಯಿತು. ಪ್ರಸಿದ್ಧ ಸಾಹಿತಿ ದೇ.ಜವರೇಗೌಡ ಉದ್ಘಾಟಿಸಿದರು. ಬೆಲ್ದಾಳ ಸಿದ್ಧರಾಮ ಶರಣರು, ಬೀದರ್‌ನ ಅಕ್ಕ ಅನ್ನಪೂರ್ಣ, ಮೈಸೂರು ಜ್ಞಾನಪ್ರಕಾಶ ಸ್ವಾಮೀಜಿ, ನಿಡಸೋಸಿಷಿ ಪಂಚಮಲಿಂಗೇಶ್ವರ ಸ್ವಾಮೀಜಿ, ಶರಣೆ ತೇಜಸ್ವೀನಿ, ಶಿವಯೋಗ ಸಖಿ ಗಾಯತ್ರಿತಾಯಿ ಮಾತನಾಡಿದರು. ಈಶ್ವರ ಮಂಟೂರ್, ಅಕ್ಕ ಗಂಗಾಂಬಿಕಾ ಬೀದರ ಅವರು ಉಪನ್ಯಾಸ ಕೊಟ್ಟರು.

 

ಶಿವಾಜಿ ಸಗರ ಮತ್ತು ರಮೇಶ ಅವರು ವಚನ ಸಂಗೀತ ಹಾಡಿದರು.

 

ವೈವಿಧ್ಯಮಯ ಕಾರ್ಯಕ್ರಮ: 2 ನೇ ಬಸವ ಉತ್ಸವದ ಅಂಗವಾಗಿ ಮೂರು ದಿನ ಇಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಮೊದಲ ದಿನ  ಅದ್ದೂರಿ ಮೆರವಣಿಗೆ ನಡೆಸುವುದರೊಂದಿಗೆ ಉತ್ಸವಕ್ಕೆ ಚಾಲನೆ ಕೊಡಲಾಯಿತು. ನಂತರ ಪ್ರತಿದಿನ ಸಂಜೆ ಇಲ್ಲಿನ ರಥ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಸಿದ್ಧ ಸಂಗೀತಗಾರರಾದ ರವಿಕಿರಣ ಬೆಂಗಳೂರು, ಮುಂಬೈನ ಅನುರಾಧಾ ಪೌಡ್ವಾಲ ಅವರು ಹಾಜರಿ ಹಾಕಿ ಸಂಗೀತದ ರಸದೌತಣ ಉಣಬಡಿಸಿದರು. ಸ್ಥಳೀಯ ಹಾಗೂ ರಾಜ್ಯಮಟ್ಟದ ಅನೇಕ ಸಂಗೀತಗಾರರು ಹಾಗೂ ಕಲಾವಿದರು ಭಾಗವಹಿಸಿ ಉತ್ಸವಕ್ಕೆ ಕಳೆ ತಂದರು. ಈ ಸಂದರ್ಭದಲ್ಲಿ ಆಕರ್ಷಕ ನೃತ್ಯ ಸಹ ಪ್ರದರ್ಶಿಸಲಾಯಿತು.

 

ಮೊದಲ ದಿನ ಸಂಜೆ ಸ್ವಲ್ಪ ಮಳೆ ಬಂದಿದ್ದರಿಂದ ಕಾರ್ಯಕ್ರಮಗಳಿಗೆ ಎಲ್ಲಿ ಅಡ್ಡಿ ಆಗುತ್ತದೋ ಎಂಬ  ಆತಂಕ ಕಾಡಿತ್ತು. ಆದರೆ ನಂತರ ಎಲ್ಲ ಕಾರ್ಯಕ್ರಮಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆದವು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಗೂ ಸಚಿವರಾದ ಜನಾರ್ದನರೆಡ್ಡಿ ಮತ್ತು ಗೋವಿಂದ ಕಾರಜೋಳ ಅವರು ಉದ್ಘಾಟನಾ ಸಮಾರಂಬಕ್ಕೆ ಬರಲಿಲ್ಲ ಎಂಬುದನ್ನು ಬಿಟ್ಟರೆ ಬಹುತೇಕ ಎಲ್ಲ ಕಲಾವಿದರು ಹಾಜರಿ ಹಾಕಿದರು.

 

ಇದಲ್ಲದೆ ಎರಡು ದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ವಚನ ಸಾಹಿತ್ಯ ಕುರಿತು ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಧಾರ್ಮಿಕ ಮುಖಂಡರು, ಸಾಹಿತಿ, ಚಿಂತಕರು ಪಾಲ್ಗೊಂಡಿದ್ದರು. ಗೋಷ್ಠಿಗಳಿಗೆ ಪ್ರೇಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಬರಲಿಲ್ಲವಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಪಾರ ಪ್ರಮಾಣದ ಜನರು ನೆರೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.