ಬುಧವಾರ, ಮೇ 12, 2021
18 °C

ಬಾಂಧವ್ಯ ಸುಧಾರಣೆಯತ್ತ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಒಂದು ದಿನದ ಭಾರತ ಭೇಟಿ ಉಭಯ ದೇಶಗಳ ನಡುವಣ ಬಾಂಧವ್ಯ ವೃದ್ಧಿಗೆ ಸ್ವಲ್ಪವಾದರೂ ಸಹಾಯ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮುಂಬೈ ದಾಳಿಯ ನಂತರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಬಾಂಧವ್ಯ ವೃದ್ಧಿ ಮಾತುಕತೆಗಳು ಪುನರಾರಂಭವಾಗಲು ಈ ಭೇಟಿ ದಾರಿ ಮಾಡಿಕೊಟ್ಟಿದೆ.ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವುದರ ಮೇಲೆ ಮುಂದಿನ ರಾಜಕೀಯ ಮಾತುಕತೆಗಳು ಅವಲಂಬಿತವಾಗಿದ್ದರೂ ವಾಣಿಜ್ಯ ಕ್ಷೇತ್ರದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಆಗುವ ಸಾಧ್ಯತೆ ಕಾಣುತ್ತಿದೆ.ಪ್ರಧಾನಿ ಮನಮೋಹನ ಸಿಂಗ್ ಅವರು ಭಯೋತ್ಪಾದನೆ ವಿಷಯವನ್ನು ಪ್ರಸ್ತಾಪಿಸಿದಂತೆ ಜರ್ದಾರಿ ಅವರು ಕಾಶ್ಮೀರ, ಸರ್ ಕ್ರಿಕ್ ಮತ್ತು ಸಿಯಾಚಿನ್ ವಿವಾದವನ್ನು ಮುಂದೊಡ್ಡಿದ್ದಾರೆ. ಸಾಮಾನ್ಯವಾಗಿ ಭಾರತ -ಪಾಕಿಸ್ತಾನದ ನಾಯಕರ ನಡುವಣ ಮಾತುಕತೆಗಳಲ್ಲಿ ಕಾಶ್ಮೀರ ದೊಡ್ಡ ಸಮಸ್ಯೆಯಾಗಿಯೇ ಕಾಡುತ್ತ ಬಂದಿದೆ.

 

ಇದೇ ಮೊದಲ ಬಾರಿಗೆ ಕಾಶ್ಮೀರ ವಿವಾದವನ್ನು ಮಾತುಕತೆಯ ಮುಂಚೂಣಿಗೆ ಎಳೆಯದೆ ಪಾಕಿಸ್ತಾನ ವಾಣಿಜ್ಯ ವಿಚಾರಗಳನ್ನು ಚರ್ಚಿಸಿರುವುದು ಕುತೂಹಲಕಾರಿ. ಆ ವಿವಾದಕ್ಕೆ ಎಲ್ಲ ಸಂದರ್ಭಗಳಲ್ಲಿ ಮಹತ್ವ ನೀಡುವುದರ ನಿರರ್ಥಕತೆಯನ್ನು ಪಾಕಿಸ್ತಾನ ಬಹುಶಃ ಮನವರಿಕೆ ಮಾಡಿಕೊಂಡಂತೆ ಕಾಣುತ್ತದೆ.ಇದು ಜರ್ದಾರಿ ಅವರ ಖಾಸಗಿ ಭೇಟಿಯೇ ಆದರೂ ನಿರೀಕ್ಷೆಯಂತೆ ಅದು ಖಾಸಗಿಯಾಗಿಯೇ ಉಳಿಯದೆ ಎರಡೂ ದೇಶಗಳ ನಡುವಣ ಆತಂಕದ ವಾತಾವರಣವನ್ನು ತಗ್ಗಿಸುವಲ್ಲಿ ಮತ್ತು ವಾಣಿಜ್ಯ ಬಾಂಧವ್ಯದ ವಿಚಾರದಲ್ಲಿ ಮುಂದೆ ಹೆಜ್ಜೆ ಇಡಲು ಕಾರಣವಾಗಿದೆ.

 

ಎರಡೂ ಕಡೆಯ ಉದ್ಯಮಿಗಳಿಗೆ ನಿರ್ದಿಷ್ಟ ಅವಧಿಗೆಂದು ಮುಕ್ತ ವೀಸಾ ನೀಡುವುದು, ಅಂತರರಾಷ್ಟ್ರೀಯ ಗಡಿಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಲು ಅನುಕೂಲವಾಗುವಂಥ ಕ್ರಮ ತೆಗೆದುಕೊಳ್ಳುವುದು ತುರ್ತಾಗಿ ಆಗಬೇಕಾದ ಕೆಲಸಗಳು ಎಂಬುದನ್ನು ಎರಡೂ ದೇಶಗಳು ಒಪ್ಪಿವೆ. ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಜರ್ದಾರಿ ಅವರು ಪಾಕಿಸ್ತಾನ ಭೇಟಿಗೆ ಆಹ್ವಾನ ನೀಡಿದ್ದಾರೆ.ಸೂಕ್ತ ಸಂದರ್ಭದಲ್ಲಿ ಬರುವುದಾಗಿಯೂ ಮನಮೋಹನ ಸಿಂಗ್ ಹೇಳಿದ್ದಾರೆ. ಇದು ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಎಂಥ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಅವಲಂಬಿಸಿದೆಯಾದರೂ ಇಂಥ ಸೌಹಾರ್ದಯುತ ಮಾತುಕತೆ ಎರಡೂ ದೇಶಗಳ ನಡುವೆ ವಿಶ್ವಾಸ ಹೆಚ್ಚಲು ಕಾರಣವಾಗಿದೆ.

 

ಈ ಬೆಳವಣಿಗಗಳ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್ ಕೊಲೆಯೊಂದಕ್ಕೆ ಸಂಬಂಧಿಸಿದಂತೆ 20 ವರ್ಷಗಳಿಂದ ಜೈಲಿನಲ್ಲಿರುವ ವಿಜ್ಞಾನಿಯೊಬ್ಬರಿಗೆ ಜಾಮೀನು ನೀಡಿ ಪಾಕಿಸ್ತಾನಕ್ಕೆ ಹೋಗಲು ಅವಕಾಶ ಕಲ್ಪಿಸಿರುವುದು ವಾತಾವರಣ ಮತ್ತಷ್ಟು ತಿಳಿಗೊಳ್ಳಲು ಕಾರಣವಾಗಿದೆ.

 

ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆಯದ್ದೇ ಸಮಸ್ಯೆ. ಅದು ಸ್ಥಾಪಿತವಾಗುವವರೆಗೆ ಭಾರತಕ್ಕೆ ಸಮಸ್ಯೆಯೇ. ಅಲ್ಲಿನ ಚುನಾಯಿತ ನಾಗರಿಕ ರಾಜಕೀಯ ವ್ಯವಸ್ಥೆ ತನ್ನ ಅಧಿಕಾರವನ್ನು ಸಮರ್ಥಿಸಿಕೊಳ್ಳುತ್ತ ಸೇನೆಯನ್ನು ತಹಬಂದಿಗೆ ತರಲು ನಡೆಸುತ್ತಿರುವ ಪ್ರಯತ್ನ ಆಶಾದಾಯಕವಾದುದು.

 

ಪಾಕಿಸ್ತಾನದಲ್ಲಿ ಪ್ರಜಾತಂತ್ರ ರಾಜಕೀಯ ವ್ಯವಸ್ಥೆ ಬಲಗೊಂಡರೆ ಭಯೋತ್ಪಾದನೆ ಸಮಸ್ಯೆಗೆ, ಅಷ್ಟೇ ಏಕೆ, ಇತರ ವಿವಾದಗಳಿಗೂ ಪರಿಹಾರ ಕಂಡುಕೊಳ್ಳುವುದು ಕಷ್ಟವೇನಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.