ಶುಕ್ರವಾರ, ಮೇ 14, 2021
21 °C

ಬಾಲಿವುಡ್ ಬಲೆಯಲ್ಲಿ ಕ್ರಿಕೆಟ್ `ಫಿಕ್ಸ್'

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಹಾಗೂ ಸೆಕ್ಸ್ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳು ಎಂದು ಖ್ಯಾತ ನಿರ್ದೇಶಕ ಮಹೇಶ್ ಭಟ್ ಒಮ್ಮೆ ನುಡಿದಿದ್ದರು. ಈಗ ಅದನ್ನೇ ಕೊಂಚ ಬದಲಾಯಿಸಿ ಬಾಲಿವುಡ್, ಸೆಕ್ಸ್ ಹಾಗೂ ಕ್ರಿಕೆಟ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳು ಎನ್ನಬಹುದು.ಬಾಲಿವುಡ್ ಹಾಗೂ ಕ್ರಿಕೆಟ್ ಭಾರತದಲ್ಲಿ ಬಹು ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜೊತೆಗೆ ಸಾಕಷ್ಟು ಆಸಕ್ತಿ ಕೆರಳಿಸಬಲ್ಲ ವಿಷಯಗಳು. ಕ್ರಿಕೆಟ್ ಎಂಬುದು ಇಲ್ಲಿನ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. ಹಾಗೇ, ಬಹುದೊಡ್ಡ ಮಾರುಕಟ್ಟೆ ಹೊಂದಿರುವ ಬಾಲಿವುಡ್ ಕೂಡ ಜನರ ಪಾಲಿನ ಸ್ವರ್ಗ. ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ನಟರು ಒಗ್ಗೂಡಿದರೆ? ನಟರು ಹಾಗೂ ಉದ್ಯಮಪತಿಗಳು ಕ್ರಿಕೆಟ್‌ನಲ್ಲಿ ಬಂಡವಾಳ ಹೂಡಿದರೆ...? ಪ್ರೇಕ್ಷಕರಿಗೆ ಇನ್ನಷ್ಟು ಮಜಾ. ಕ್ರಿಕೆಟ್ ಹಾಗೂ ಬಾಲಿವುಡ್‌ಗೆ ಮತ್ತಷ್ಟು ಲಾಭ ಖಂಡಿತ. ಬಾಲಿವುಡ್ ಹಾಗೂ ಕ್ರಿಕೆಟ್ ಜೊತೆಗೂಡಿದ ಉದ್ದೇಶವೇ ಮತ್ತಷ್ಟು ಹಣ ಮಾಡುವುದು.ಬಾಲಿವುಡ್ ನಂಟಿನ ಜೊತೆ ಇಡೀ ಕ್ರೀಡಾಂಗಣಗಳು ಒಂಥರಾ `ಲೈವ್ ಬ್ಯಾಂಡ್' ರೀತಿ ಆಗಿರುವುದು ಸುಳ್ಳಲ್ಲ. ಏಕೆಂದರೆ ಕ್ರೀಡಾಂಗಣದಲ್ಲಿ ಮದಿರೆಯೂ (ಮದ್ಯ) ಇದೆ. ಮಾನಿನಿಯರೂ (ಚಿಯರ್    ಗರ್ಲ್ಸ್) ಇದ್ದಾರೆ.ಲಾಭ ಹಾಗೂ ಪ್ರಚಾರ ಗಿಟ್ಟಿಸುವ ಉದ್ದೇಶದಿಂದಲೇ  ಹೆಸರಾಂತ ನಟರಾದ ಶಾರುಖ್ ಖಾನ್, ಜೂಹ್ಲಿ ಚಾವ್ಲಾ, ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ, ದಿಗ್ಗಜ ಉದ್ಯಮಿಗಳಾದ ಮುಖೇಶ್ ಅಂಬಾನಿ, ವಿಜಯ್ ಮಲ್ಯ, ಸುಬ್ರತಾ ರಾಯ್, ಎನ್.ಶ್ರೀನಿವಾಸನ್ ಅವರೆಲ್ಲಾ ಕ್ರಿಕೆಟ್ ಮೇಲೆ ಹಣ ಹೂಡಿದ್ದಾರೆ. ಐಪಿಎಲ್ ಇವರೆಲ್ಲರ ಪಾಲಿನ ಸ್ವರ್ಗವೆನಿಸಿದೆ. ಆದರೆ ಅವರಂದುಕೊಂಡಂತೆ ಲಾಭ ಸಿಗುತ್ತಿಲ್ಲ.ರಾಜಸ್ತಾನ ರಾಯಲ್ಸ್ ಮಾಲೀಕರಾದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾಇಂಥ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ನಡೆದಿರುವ ಆರೋಪ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಸಿಇಒ ಗುರುನಾಥ್ ಮೇಯಪ್ಪನ್ ಹಾಗೂ ರಾಜಸ್ತಾನ ರಾಯಲ್ಸ್‌ನ ಒಡೆಯ ರಾಜ್ ಕುಂದ್ರಾ, ಅವರ ಪತ್ನಿ ಶಿಲ್ಪಾ ಶೆಟ್ಟಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಹೇಳಿರುವುದು ಆಘಾತಕ್ಕೆ ಕಾರಣವಾಗಿರುವುದು ನಿಜ. ಇವರ ಜೊತೆಗೆ ಬಾಲಿವುಡ್ ನಟ ವಿಂದು ದಾರಾಸಿಂಗ್ ಕೂಡ ಸಿಕ್ಕಿಬಿದ್ದಿದ್ದಾರೆ.ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಒಳಗಾಗಿರುವ ಕೇರಳದ ವೇಗಿ   ಎಸ್.ಶ್ರೀಶಾಂತ್ ಕೂಡ ಬಾಲಿವುಡ್ ಜೊತೆಗೆ ನಂಟು ಹೊಂದಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ತೆಲುಗು, ಕನ್ನಡ ಸಿನಿಮಾ ತಾರೆಯರೂ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತನಿಖೆ ಮುಂದುವರಿದಂತೆ ಮತ್ತಷ್ಟು ಹೆಸರುಗಳು ಹೊರಬರುತ್ತಿವೆ.ಫ್ರಾಂಚೈಸ್‌ಗಳ ಮಾಲೀಕತ್ವ ಹೊಂದಿರುವ ಕೆಲ ಬಾಲಿವುಡ್ ನಟರು ಹಾಗೂ ಉದ್ಯಮಿಗಳು ಬೆಟ್ಟಿಂಗ್‌ನಲ್ಲಿ ತೊಡಗಿರುವ ವಿಷಯ ಕೆಲವರಲ್ಲಿ ಅಚ್ಚರಿ ಹಾಗೂ ಆಘಾತಕ್ಕೆ ಕಾರಣವಾಗಿರಬಹುದು. ಆದರೆ ತಂಡದ ಪ್ರತಿಯೊಂದು ಮಾಹಿತಿ ಮಾಲೀಕರಿಗೂ ಗೊತ್ತಿರುತ್ತದೆ.

ಕ್ರೀಡಾಂಗಣದಲ್ಲಿ ತಂಡದ ಡ್ರೆಸ್ಸಿಂಗ್ ಕೊಠಡಿ ಹೊರತುಪಡಿಸಿ ಉಳಿದೆಲ್ಲಾ ಸ್ಥಳಗಳಿಗೆ ಮಾಲೀಕರಿಗೆ ಪ್ರವೇಶ ಇರುತ್ತದೆ.

ತಂಡದ ಸಭೆಗಳಲ್ಲಿ ಕೂಡ ಪಾಲ್ಗೊಳ್ಳುತ್ತಾರೆ. ಟಾಸ್ ಗೆದ್ದರೆ ಏನು ಮಾಡಬೇಕು, ಯಾರನ್ನು ತಂಡದಲ್ಲಿ ಆಡಿಸಬೇಕು, ಯಾರನ್ನು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಬೇಕು ಎಂಬೆಲ್ಲಾ ಪಂದ್ಯಗಳ `ತಂತ್ರಗಾರಿಕೆ' ಮಾಲೀಕರಿಗೂ ಗೊತ್ತಿರುತ್ತದೆ. ಅದನ್ನು ತಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಈ ರೀತಿ ಮಾಡುವ ಸಂಭವವಿರುತ್ತದೆ. ಹಾಗಾಗಿಯೇ ಈಗ ಕಳ್ಳಾಟ ಹಾಗೂ ಬೆಟ್ಟಿಂಗ್‌ನಂಥ ಎಡವಟ್ಟುಗಳು ಸಂಭವಿಸುತ್ತಿವೆ.ಐಪಿಎಲ್ ಪಂದ್ಯಗಳ ವೇಳೆ ತಂಡಗಳ ಮಾಲೀಕರು ವರ್ತಿಸುವ ರೀತಿಯನ್ನು ನೀವು ಗಮನಿಸಿರಬಹುದು. ಸದ್ಯಕ್ಕೆ ಬೆಟ್ಟಿಂಗ್ ಆರೋಪಕ್ಕೆ ಒಳಗಾಗಿರುವ ರಾಜಸ್ತಾನ ರಾಯಲ್ಸ್ ತಂಡದ ಮಾಲೀಕರನ್ನೇ ತೆಗೆದುಕೊಳ್ಳಿ. ಈ ತಂಡ ಹಿಂದಿನಿಂದಲೂ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಬಂದಿದೆ. ಈ ತಂಡದಲ್ಲಿ ಹಲವರು ಷೇರು ಹೂಡಿದ್ದಾರೆ. ಅದರಲ್ಲಿ ಪ್ರಮುಖರು ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ. ಉದ್ಯಮಿ ಕುಂದ್ರಾ ಅನಿವಾಸಿ ಭಾರತೀಯ.

ಸದ್ಯ ಅವರು ಬ್ರಿಟನ್ ಪಾಸ್‌ಪೋರ್ಟ್ ಹೊಂದಿದ್ದಾರೆ. ಗೆಳೆಯ ಉಮೇಶ್ ಗೋಯೆಂಕಾ ಅವರ ಮೂಲಕ ಬೆಟ್ಟಿಂಗ್‌ನಲ್ಲಿ ತೊಡಗಿರುವುದನ್ನು ಕುಂದ್ರಾ ಒಪ್ಪಿಕೊಂಡಿದ್ದಾರೆ ಎಂಬುದನ್ನು ದೆಹಲಿ ಪೊಲೀಸರು ತಿಳಿಸಿದ್ದಾರೆ. ಗೋಯೆಂಕಾ ತಂಡದ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದರು ಎಂಬ ವಿಷಯದ ಬಗ್ಗೆ ರಾಜಸ್ತಾನ ರಾಯಲ್ಸ್‌ನ ವೇಗಿ ಸಿದ್ಧಾರ್ಥ್ ತ್ರಿವೇದಿ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಹಾಗೇ, ಶ್ರೀಶಾಂತ್ ಬಾಲಿವುಡ್‌ನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಹಿಂದಿ, ಮಲಯಾಳಂ, ಕನ್ನಡ. ತೆಲುಗು ಸಿನಿಮಾ ನಟ-ನಟಿಯರೊಂದಿಗೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾದಲ್ಲಿ ನಟಿಸುವ ಹುಚ್ಚಿಗೆ ಬಿದ್ದಿದ್ದರು. ಪಾರ್ಟಿ, ರ‌್ಯಾಂಪ್ ವಾಕ್ ಹಾಗೂ ಇನ್ನಿತರ ಸಮಾರಂಭಗಳಲ್ಲಿಯೇ ಹೆಚ್ಚು ಮುಳುಗಿ ಹೋಗಿದ್ದರು.

ಅದಕ್ಕಿಂತ ಮಿಗಿಲಾದ `ಸಂಬಂಧ' ಹೊಂದ್ದ್ದಿದರು ಎಂಬ ಮಾಹಿತಿಗಳನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ. ದಾಳಿ ವೇಳೆ ವಶಪಡಿಸಿಕೊಂಡಿರುವ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ರೂಪದರ್ಶಿಯರು ಹಾಗೂ ಚಿಯರ್ ಬೆಡಗಿಯರ ಫೋಟೊ ಇರುವುದು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿರುವುದು ಗೊತ್ತಾಗಿದೆ.ಕನ್ನಡದ ಕೆಲ ನಟಿಯರೊಂದಿಗೆ ಶ್ರೀಶಾಂತ್ ಸಂಪರ್ಕ ಹೊಂದಿರುವುದೂ ನಿಜ. ಆ ನಟಿಯರೂ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಕ್ರಿಕೆಟಿಗರ ಪರಿಚಯವಿದೆ ಎಂಬ ಮಾತ್ರಕ್ಕೆ ಅವರ ಮೇಲೆ ಅನುಮಾನಪಡುವುದು ಸರಿಯಲ್ಲ. ಏಕೆಂದರೆ ಜಾಹೀರಾತು ಶೂಟಿಂಗ್‌ನಲ್ಲಿ, ಪಾರ್ಟಿಗಳಲ್ಲಿ ಭೇಟಿಯಾದಾಗ ಪರಿಚಯವಾಗಿರುತ್ತದೆ. ಆ ಸ್ನೇಹವನ್ನೇ ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಂಡು ಅವ್ಯವಹಾರ ಆರೋಪ ಹೊರಿಸುವುದು ತರವಲ್ಲ. ಹಾಗೇ, ಕಾರ್ಪೊರೇಟ್ ಸಂಸ್ಕೃತಿ ಕ್ರಿಕೆಟ್ ಆಟವನ್ನು ಆವರಿಸುತ್ತಿದೆ. `ಐಪಿಎಲ್ ಎಂಬುದು ಕಾರ್ಪೊರೇಟ್‌ನ ಭಾಗ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಸಾಂಪ್ರದಾಯಿಕವಾಗಿ ಅದು ಕ್ರಿಕೆಟ್ ಅಲ್ಲ' ಎಂದು ಫ್ರಾಂಚೈಸ್‌ನ ಮಾಲೀಕರೊಬ್ಬರು ಒಮ್ಮೆ ನುಡಿದಿದ್ದರು.

 

ಐಪಿಎಲ್‌ನಿಂದಾಗಿ ಕ್ರಿಕೆಟ್ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಮಾತೊಂದು ಸಾಕು. ಕ್ರಿಕೆಟ್ ಮೇಲೆ ಕಾರ್ಪೊರೇಟ್ ಕರಿನೆರಳು ಬಿದ್ದಿರುವುದು ನಿಜ. ಹಾಕಿದ ದುಡ್ಡನ್ನು ವಾಪಸ್ ಪಡೆಯುವುದು ಕಾರ್ಪೊರೇಟ್ ಸಂಸ್ಕೃತಿ. ಆಟಗಾರರು ಕೆಲಸಗಾರರಂತೆ ಭೀತಿಯಿಂದಲೇ ಆಡಬೇಕು. ತಂಡದಲ್ಲಿ ಯಾರು ಆಡಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ನಿರ್ಧರಿಸುವವರು ನಾಯಕ, ಕೋಚ್ ಅಲ್ಲ. ಬದಲಾಗಿ ಫ್ರಾಂಚೈಸ್ ಅಧಿಕಾರಿಗಳು.`ಆಟಗಾರರನ್ನು ಆಯ್ಕೆ ಮಾಡುವುದು ಇನ್ನು ಆಯ್ಕೆದಾರರಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಅವರ ಮೌಲ್ಯ ನಿರ್ಧಾರವಾಗಲಿದೆ' ಎಂದು ಹಿರಿಯ ಕ್ರೀಡಾಡಳಿತದಾರ ಐ.ಎಸ್.ಬಿಂದ್ರಾ ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯ. ಕ್ರಿಕೆಟ್ ಮಾರುಕಟ್ಟೆ ಪಾಲಾಗಿದೆ. ಆಟಗಾರರು ಮಾರಾಟವಾಗುತ್ತಿದ್ದಾರೆ. ಕ್ರಿಕೆಟ್ ಹಾಗೂ ಆಟವನ್ನು ಬಂಡವಾಳವನ್ನಾಗಿಸಿಕೊಂಡು ಉದ್ದಿಮೆದಾರರು ಹಾಗೂ ನಟರು ಮತ್ತಷ್ಟು ಹಣ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಫಿಕ್ಸಿಂಗೂ ನಡೆಸಬಹುದು, ಬೆಟ್ಟಿಂಗ್‌ನಲ್ಲೂ ಪಾಲ್ಗೊಂಡರೂ ಅಚ್ಚರಿ ಇಲ್ಲ.ಈ `ವ್ಯವಹಾರ'ದಿಂದ ಕಂಗಾಲಾಗಿರುವುದು ಕ್ರೀಡಾ ಪ್ರೇಮಿಗಳು. ಈಗ ಹೊರಬರುತ್ತಿರುವ ಕಳ್ಳಾಟ ಹಾಗೂ ಅವ್ಯವಹಾರ ಆರೋಪಗಳಿಂದ ಗೊಂದಲಕ್ಕೆ ಒಳಗಾಗಿದ್ದಾರೆ. 

-ಕೆ.ಓಂಕಾರ ಮೂರ್ತಿ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.