ಗುರುವಾರ , ಜೂನ್ 24, 2021
30 °C

ಬಾಲ್ಯವಿವಾಹ ರಾಜಿ ಆಗದವಳು...

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

ಬಾಲ್ಯವಿವಾಹ ರಾಜಿ ಆಗದವಳು...

ಹೌದು. ನಿಜಕ್ಕೂ ಅವಳು ರಾಜಿಯಾಗದವಳು. ಒಂದಲ್ಲ, ಎರಡಲ್ಲ. ಹತ್ತಾರು ಸಂಘರ್ಷ ಮನೆ ಮುಂದಿದ್ದರೂ ಆಕೆ `ರಾಜಿ~ ಆಗದವಳು. ಮೊದಲನೆಯದು ಬಾಲ್ಯ ವಿವಾಹಕ್ಕೆ, ಎರಡನೆಯದು ಊರಿನ ನಿಂದನೆಗೆ. ಮೂರನೆಯದು ಮೂಢನಂಬಿಕೆಗೆ....ಹೆಣ್ಣು ನಿಂದನೆಗೆ ಹೆದರುವ ಕಾಲವೊಂದಿತ್ತು. ಆದರೆ, ಈಗ ಕಾಲ ಬದಲಾಗಿದೆ ಎನ್ನುವುದಕ್ಕಿಂತ `ಆಕೆ~ ಬಲವಾಗಿದ್ದಾಳೆ ಎಂಬುದಕ್ಕೆ ಸಾಕ್ಷಿಯಾಗಿ ಈ `ರಾಜಿ~ ಎದುರಿಗೆ ನಿಲ್ಲುತ್ತಾಳೆ. ಬರೀ ಎದುರಿಗೆ ನಿಲ್ಲುವುದಿಲ್ಲ. ಗಂಡಸಿನ ಅಹಂಕಾರಕ್ಕೆ ಮಾರಕವಾಗಿದ್ದಾಳೆ. ಆಗುತ್ತಲೇ ಇದ್ದಾಳೆ.ಈ ರಾಜಿ ಒಬ್ಬ ಗಂಡಸಿನ ಅಹಂಕಾರಕ್ಕೆ, ನಿರ್ಧಾರಕ್ಕೆ ಸೊಪ್ಪು ಹಾಕಿಲ್ಲ. ಇಡೀ ಊರಿಗೆ ಊರೇ ತನ್ನ ವಿರುದ್ಧ ಇದ್ದರೂ `ರಾಜಿ~ ಆಗಲೇ ಇಲ್ಲ. ಅದಕ್ಕೆ ಧೈರ್ಯ ಅನ್ನಲೇಬೇಕು. ಯಾರು ರಾಜಿ? ಏನಿದು ಕಥೆ?ಬನ್ನಿ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಗಂಡತ್ತೂರೊಳಗೆ `ರಾಜಿ~ಆಗದವಳ ಹೆಜ್ಜೆಗುರುತು ಅರಿಯೋಣ.ಏನಿದು ನಂಬಿಕೆ?


ಗಂಡತ್ತೂರು 1200 ಜನರು ಇರುವ ಊರು. ಇಲ್ಲಿ ಮೂಢನಂಬಿಕೆಯ ವೈಭವ. ಅಲ್ಲಿ ರಾಜಿ ಉದಯ. ಮೈಸೂರಿನಿಂದ 76 ಕಿ.ಮೀ. ದೂರದ ಕುಗ್ರಾಮದಲ್ಲಿ ಬೇಡ ಜನಾಂಗದಲ್ಲಿ ವಿಚಿತ್ರವಾದ ಸಂಪ್ರದಾಯವೊಂದಿದೆ. ಅಲ್ಲಿ ಹೆಣ್ಣು ಮಕ್ಕಳಿಗೆ 15 ವರ್ಷ ವಯಸ್ಸಾದರೆ ಮದುವೆ ಮಾಡುತ್ತಿಲ್ಲ. ಹೆಣ್ಣು ಋತುಮತಿಯಾದ 2 ಇಲ್ಲವೇ 3 ವರ್ಷದೊಳಗೆ ಮದುವೆ ಮಾಡಿಕೊಳ್ಳಬೇಕು.15 ತುಂಬಿತೆಂದರೆ ಯಾವ ಗಂಡಸು ಸಹ ಮದುವೆ ಮಾಡಿಕೊಳ್ಳಲು ಮುಂದೆ ಬರುವುದಿಲ್ಲ. ವಯಸ್ಸು 15 ದಾಟಿದರೆ ಆ ಹುಡುಗಿ ಎರಡನೇ ಮದುವೆಗೋ, ಇಲ್ಲವೇ ಕೂಡಾವಳಿ ಮಾಡಿಕೊಳ್ಳಲೋ ಅರ್ಹಳು ಎಂಬ ಭಾವನೆ ಬೆಳೆದಿದೆ.ಈ ಪದ್ಧತಿ ಒಂದು ತಲೆಮಾರು ಅಥವಾ ದಶಕದ ಈಚೆಗೆ ನಡೆದುಕೊಂಡು ಬಂದ ಸಂಪ್ರದಾಯವಲ್ಲ. ಇದಕ್ಕೆ ಮೂರು ತಲೆಮಾರುಗಳ ಇತಿಹಾಸವಿದೆ. ಇಷ್ಟು ದೀರ್ಘ ಕಾಲ ಈ ಅನಿಷ್ಟ ರೂಢಿ ನಡೆದುಕೊಂಡು ಬರುತ್ತಿದ್ದರೂ ಹೊರ ಪ್ರಪಂಚದ ಗಮನಕ್ಕೆ ಬಂದಿರಲಿಲ್ಲ. ಬಂದರೂ ಸಹ ಗ್ರಾಮದ ನಿರ್ಧಾರ ಎಂಬ `ಹಣೆಪಟ್ಟಿ~ ಇದ್ದೇ ಇತ್ತು.ಈ ಪದ್ಧತಿ ಗೊತ್ತಾಗಿದ್ದು ಅದೇ ಗ್ರಾಮದ ರಾಜಿ ಎಂಬಾಕೆಯಿಂದ. ಈಕೆ ಕಲಿತಿದ್ದು, ಒಂದನೇ ತರಗತಿ ಅಷ್ಟೇ. ಬಡತನದ ಕಾರಣದಿಂದ ಇವರ ತಂದೆ ಶಾಲೆ ಬಿಡಿಸಿದರು. ಆದರೆ ಬುದ್ಧಿ ಚುರುಕು. ಅದಕ್ಕೆ ಸಾಂಪ್ರದಾಯಿಕ ಆಚರಣೆಗೆ ಸೆಟೆದು ನಿಂತಳು. ಅದಕ್ಕಾಗಿ ಇಡೀ ಗ್ರಾಮವೇ ಅವಳ ವಿರುದ್ಧ ತಿರುಗಿ ಬಿದ್ದಿದೆ. ಗ್ರಾಮದ ಯುವಕರು ನಿಂದಿಸಿದ್ದಾರೆ.ನೆರೆಯವರು ಕುಹಕದ ಮಾತುಗಳನ್ನು ಆಡಿದ್ದಾರೆ. ಅದಕ್ಕೆ ರಾಜಿ ಕಂಗೆಟ್ಟಿಲ್ಲ.

ತಂದೆಯ ಸಹಾಯಕ್ಕೆ ನೆರವಾಗುವ ಉದ್ದೇಶದಿಂದ ರಾಜಿ 8ನೇ ವಯಸ್ಸಿಗೆ ಮನೆ ಬಿಟ್ಟಳು. ಕೇರಳದ ಕೋಯಿಕ್ಕೋಡ್‌ನಲ್ಲಿ  ಮನೆಗೆಲಸಕ್ಕೆ ಸೇರಿದಳು. ಆನಂತರ ವಾಪಸ್ ಬಂದಿದ್ದು, 14ನೇ ವಯಸ್ಸಿಗೆ. ಮನೆಗೆ ವಾಪಸ್ ಆದಾಗ ಗ್ರಾಮದ ಸಂಪ್ರದಾಯದಂತೆ ಮನೆಯವರು ಮದುವೆ ಪ್ರಸ್ತಾಪ ಮಾಡಿದರು. ಅದನ್ನು ಖಡಾಖಂಡಿತ ತಿರಸ್ಕರಿಸಿದಳು.ರಾಜಿ ವಯಸ್ಸು 15 ದಾಟಿದಾಗ ಆ ಗ್ರಾಮದ ಯುವಕರು ಮದುವೆಯಾಗಲು ಮುಂದೆ ಬರಲಿಲ್ಲ. ಪ್ರಸ್ತುತ ಬೆಂಗಳೂರಿನ ಬ್ಯೂಟಿಪಾರ್ಲರ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ಈಕೆ ಇತ್ತೀಚೆಗೆ  ಗ್ರಾಮಕ್ಕೆ ಬಂದಿದ್ದಾಗ ಅನಿಷ್ಟ ಪದ್ಧತಿಯ ಕರಾಳತೆ ಕಣ್ಣಿಗೆ ರಾಚಿತು. ಮಹಿಳೆಯರನ್ನು ಕಾಡುವ ಅನಿಷ್ಟ ಪದ್ಧತಿಗಳು ಯಾವುವು ಎಂಬುದರ ಬಗ್ಗೆ ಬೆಂಗಳೂರು, ಮೈಸೂರು ಸುತ್ತಾಡಿದ್ದ ಆಕೆ ಅರಿತುಕೊಂಡಿದ್ದಳು. ಈ ಬಗ್ಗೆ ಗ್ರಾಮದ ಮುಖಂಡರಿಗೆ ತಿಳಿಹೇಳಿದರೂ ಯಾರೊಬ್ಬರೂ ಸೊಪ್ಪು ಹಾಕಲಿಲ್ಲ. ಕೊನೆಗೆ ರಾಜಿ ಮೊರೆಹೋಗಿದ್ದು ಮಾಧ್ಯಮಗಳ ಬಳಿಗೆ.ಈ ಧೈರ್ಯ ನೋಡಿ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎಲ್. ಮಂಜುನಾಥ್ ಗ್ರಾಮಕ್ಕೆ ಬಂದರು. ಅವರ ಜತೆ ಎಲ್ಲರೂ ಬಂದು ಗಂಡತ್ತೂರಿನ ಗಂಡಸರಿಗೆ ಬಿಸಿ ಮುಟ್ಟಿಸಿದರು. ಈಗ ಗ್ರಾಮದಲ್ಲಿ ಹೊಸ ಗಾಳಿ ಬೀಸುತ್ತಿದೆ. ತಮ್ಮದೇ ತಪ್ಪು ಎಂಬ ಮಾತು ಊರಿನವರಿಂದ ಮನದಟ್ಟಾಗಿದೆ. ಅಷ್ಟರ ಮಟ್ಟಿಗೆ ರಾಜಿ ಹೊಸ ತಂಗಾಳಿ ಬೀಸಲು ಕಾರಣವಾಗಿದ್ದಾಳೆ.ಅಂದ ಹಾಗೆ, ಈ ಗ್ರಾಮದಲ್ಲಿ 2010-11 ಹಾಗೂ 12ನೇ ಸಾಲಿನಲ್ಲಿ 15 ವರ್ಷ ದಾಟಿದ 122 ಹೆಣ್ಣು ಮಕ್ಕಳಿದ್ದಾರೆ. 1227 ಜನಸಂಖ್ಯೆ ಇರುವ ಗ್ರಾಮದಲ್ಲಿ 662 ಮಂದಿ ಮಹಿಳೆಯರು ಹಾಗೂ 565 ಮಂದಿ ಪುರುಷರು ಇದ್ದಾರೆ. ಪ್ರತಿ 100 ಪುರುಷರಿಗೆ 135 ಮಹಿಳೆಯರು ಇದ್ದಾರೆ.ಹಳ್ಳಿಯ ಮುಖ್ಯರಸ್ತೆಯಿಂದ ಬೀಸುವ ಗಾಳಿ ಈಗ ಊರೊಳಗೆ ಸಾಗಿದೆ. ರಾಜಿ ಮುಖ್ಯರಸ್ತೆಯಿಂದ ಊರೊಳಗೆ ಸಾಗಿದ್ದಾಳೆ. ಈಗ ಗಾಳಿ ಬಲವಾಗಿ ಬೀಸುತ್ತಿದೆ. ಇನ್ನೂ ಬಲವಾಗಲು ಸಮಯ ಬೇಕು. ರಾಜಿ ಹಿಂದೆ `ರಾಜಿ~ ಆಗದವರು ಬೇಕಾಗಿದ್ದಾರೆ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.