ಶನಿವಾರ, ಮೇ 15, 2021
22 °C

ಬಾಹ್ಯಾಕಾಶ ಕೈ ತೋಟ?

ಸೂರ್ಯ Updated:

ಅಕ್ಷರ ಗಾತ್ರ : | |

ಬಾಹ್ಯಾಕಾಶ ಕೈ ತೋಟ?

ಅಂತರಿಕ್ಷದಲ್ಲಿ ಹೋಟೆಲ್ ನಿರ್ಮಿಸುವ ಖಗೋಳ ವಿಜ್ಞಾನಿಗಳ ಯೋಚನೆಯ ಬಗ್ಗೆ ಮೊನ್ನೆ ಮೊನ್ನೆ ಓದಿದ್ದೀರಿ. ಅಂತರಿಕ್ಷದ ಹೋಟೆಲ್‌ನಲ್ಲಿ ಸಿಗಬಹುದಾದ ಆಹಾರಗಳ ತಯಾರಿಕೆಗೆ ಅಂತರಿಕ್ಷದಲ್ಲೇ ತರಕಾರಿ ಬೆಳೆದರೆ ಹೇಗಿರುತ್ತದೆ?ವಿಲಕ್ಷಣ ಯೋಚನೆ ಅಂದುಕೊಂಡಿರಾ? ಖಗೋಳ ವಿಜ್ಞಾನಿಗಳಿಗಂತೂ ಅಂತಹ ಯೋಚನೆ ಹೊಳೆದಿದೆ. ಆದರೆ, ಸ್ವಲ್ಪ ವ್ಯತ್ಯಾಸವಿದೆ. ಅವರು ಚಿಂತಿಸುತ್ತಿರುವುದು ಅಂತರಿಕ್ಷಕ್ಕೆ ತೆರಳುವ ಬಾಹ್ಯಾಕಾಶ ನೌಕೆಯಲ್ಲಿ ತರಕಾರಿ ತೋಟ ನಿರ್ಮಿಸುವ ಬಗ್ಗೆ.ನೌಕೆಯಲ್ಲಿ ಕಾಯಿ ಪಲ್ಲೆಗಳನ್ನು ಬೆಳೆದರೆ ಅದರಲ್ಲಿ ಪ್ರಯಾಣಿಸುವ ಗಗನಯಾನಿಗಳು ಸ್ವತಃ ಆಹಾರವನ್ನು ಸಿದ್ಧಪಡಿಸಿಕೊಂಡು ಅಂತರಿಕ್ಷಯಾನದ ಸಂದರ್ಭದಲ್ಲಿ ನೆಮ್ಮದಿಯಾಗಿ ಕೈಯೂಟ ಸವಿಯಬಹುದು ಎಂಬ ಯೋಚನೆ ಅವರದು.ಹೌದು. ಅಮೆರಿಕ ಬಾಹ್ಯಾಕಾಶ ಸಂಸ್ಥೆಯು (ನಾಸಾ) ಬಾಹ್ಯಾಕಾಶ ನೌಕೆಯಲ್ಲಿ ತರಕಾರಿ ಬೆಳೆಯುವ ಸಾಧ್ಯತೆಯ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. `ನಾಸಾ~ದ ಈ ಚಿಂತನೆಗೆ ಕಾರಣಗಳೂ ಇಲ್ಲದಿಲ್ಲ.ಖಗೋಳ ವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಉಂಟು ಮಾಡಿರುವ ಮಂಗಳಗ್ರಹಕ್ಕೆ ಮಾನವನನ್ನು ಕಳುಹಿಸಿ ಅದರ ಬಗ್ಗೆ ಅಧ್ಯಯನ ಮಾಡುವುದು `ನಾಸಾ~ದ ಮಹಾತ್ವಾಕಾಂಕ್ಷೆ ಯೋಜನೆ. ಅದಕ್ಕಾಗಿ  ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಕೆಂಪುಗ್ರಹಕ್ಕೆ ಚಿಮ್ಮಿಸಲು ಯೋಜನೆ  ರೂಪಿಸಿದೆ. 2030ರ ವೇಳೆಗೆ ಮಂಗಳನ ಅಂಗಳದಲ್ಲಿ ಮಾನವನನ್ನು ಇಳಿಸುವುದು ಅದರ ಗುರಿ.ಭೂಮಿಯಿಂದ ಸುಮಾರು 22.5 ಕೋಟಿ ಕಿಲೋಮೀಟರ್‌ನಷ್ಟು ದೂರವಿರುವ ಮಂಗಳಗ್ರಹಕ್ಕೆ ಗಗನ ಯಾನಿಗಳನ್ನು ಕಳುಹಿಸುವ `ನಾಸಾ~ದ ಯೋಜನೆ ಒಟ್ಟು ಐದು ವರ್ಷಗಳದ್ದು. ಇಷ್ಟು ದೀರ್ಘ ಅವಧಿ ಗಗನಯಾನಿಗಳು ಬಾಹ್ಯಾಕಾಶ ನೌಕೆಯಲ್ಲಿ/ ಶೂನ್ಯ ಗುರುತ್ವದಲ್ಲಿ ಇರಬೇಕಾಗುತ್ತದೆ.ಐದು ವರ್ಷಗಳ ಕಾಲ ಅಂತರಿಕ್ಷಯಾನಿಗಳಿಗೆ  ಆಹಾರ ಒದಗಿಸುವುದು `ನಾಸಾ~ದ ಮುಂದಿರುವ ದೊಡ್ಡ ಸವಾಲು. ಈ ಸವಾಲನ್ನು ಎದುರಿಸಲು ಅದು ಹಲವು ದಾರಿಗಳ ಕುರಿತು ಚಿಂತನೆ ನಡೆಸುತ್ತಿದೆ. ನೌಕೆಯಲ್ಲಿ ಕೈತೋಟ ನಿರ್ಮಿಸುವ ಯೋಜನೆಯೂ ಹಲವು ದಾರಿಗಳಲ್ಲಿ ಒಂದು.ಹ್ಯೂಸ್ಟನ್‌ನಲ್ಲಿರುವ `ನಾಸಾ~ದ ಅಂತರಿಕ್ಷ ಆಹಾರ ವ್ಯವಸ್ಥೆಯ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಮಯಾ ಕೂಪರ್ ಸ್ವತಃ ತಮ್ಮ ಎದುರಿಗಿರುವ ಬೃಹತ್ ಸವಾಲಿನ ಬಗ್ಗೆ ತಿಳಿಸಿದ್ದಾರೆ.`ಐದು ವರ್ಷಗಳ ಈ  ಯೋಜನೆಯಲ್ಲಿ ಭಾಗವಹಿಸುವ ಪ್ರತಿ ಗಗನಯಾನಿಗಳಿಗೆ ಈ ಅವಧಿಯಲ್ಲಿ ಸುಮಾರು 3,175 ಕೆ.ಜಿ ಆಹಾರದ ಅವಶ್ಯಕತೆ ಇದೆ.  ಇದೊಂದು ಬೃಹತ್ ಸವಾಲಾಗಿದ್ದು, ಯೋಜನೆಗಿರುವ ಪ್ರಮುಖ ಅಡಚಣೆಯೂ ಆಗಿದೆ. ಆಹಾರ  ಪೂರೈಸುವ ವಿವಿಧ ಮಾರ್ಗಗಳ ಬಗ್ಗೆ ಯೋಚನೆ ಸಾಗಿದೆ.ಬಾಹ್ಯಾಕಾಶ ನೌಕೆಯಲ್ಲಿ ಜೀವ ಪುನರುಜ್ಜೀವನ ವ್ಯವಸ್ಥೆಯನ್ನು ಸ್ಥಾಪಿಸುವ ಸಾಧ್ಯತೆಗಳ ಬಗ್ಗೆ ಚಿಂತಿಸಲಾಗುತ್ತಿದೆ~ ಎಂದು ಮಯಾ ಕೂಪರ್ ಇತ್ತೀಚೆಗೆ ಡೆನ್ವರ್‌ನಲ್ಲಿ ನಡೆದ ಅಮೆರಿಕನ್ ಕೆಮಿಕಲ್ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.ಈ ಹೊಸ ವ್ಯವಸ್ಥೆಯು ಪ್ರಸ್ತುತ ಬಾಹ್ಯಾಕಾಶ ನೌಕೆಗೆ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಾಗಿ ಅಭಿವೃದ್ಧಿ ಪಡಿಸಿರುವ ಆಹಾರ ವ್ಯವಸ್ಥೆಯಿಂದ ಸಂಪೂರ್ಣ ಭಿನ್ನವಾಗಿರಲಿದೆ ಎಂದು ಮಯಾ ವಿವರಿಸಿದ್ದಾರೆ.ಉಪಯೋಗ: ಬಾಹ್ಯಾಕಾಶ ನೌಕೆಯಲ್ಲಿ ಕೈ ತೋಟ ನಿರ್ಮಿಸುವುದರಿಂದ ಗಗನಯಾನಿಗಳಿಗೆ ಆರೋಗ್ಯಕರ ಆಹಾರ ದೊರಕುವುದಲ್ಲದೇ  ಗಿಡಗಳಿಂದಾಗಿ ಹೆಚ್ಚಿನ ಆಮ್ಲಜನಕ ಸೃಷ್ಟಿಯಾಗಿ ಇಂಗಾಲದ ಡೈ ಆಕ್ಸೈಡ್ ಕಡಿವೆುಯಾಗಿ ನೌಕೆಯಲ್ಲಿನ ವಾತಾವರಣವೂ ಶುದ್ಧವಾಗುತ್ತದೆ ಎಂದು ನಾಸಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಏನೆಲ್ಲಾ ಬೆಳೆಯಬಹುದು:ತೋಟ ನಿರ್ಮಾಣ ಅಂದಾಕ್ಷಣ ಏನೆಲ್ಲಾ ಬೆಳೆಯಬಹುದು ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಹೆಚ್ಚು ಎತ್ತರ ಬೆಳೆಯದ, ಕಡಿಮೆ ಸ್ಥಳಾವಕಾಶದಲ್ಲಿ ಬೆಳೆಯುವ ತರಕಾರಿ ಗಿಡಗಳೇ ಆಗಬೇಕು. ನೌಕೆಯಲ್ಲಿರುವ ಮಿತಿಯಲ್ಲಿ ಬೆಳೆಸಬಹುದಾದ ಹತ್ತು ಕಾಯಿ ಪಲ್ಲೆಗಳ ಪಟ್ಟಿಯನ್ನೂ ವಿಜ್ಞಾನಿಗಳು ತಯಾರಿಸಿದ್ದಾರೆ.ಕೊತ್ತಂಬರಿ ಸೊಪ್ಪು, ಪಾಲಕ್ ಸೊಪ್ಪು, ಟೊಮೆಟೊ, ಗಜ್ಜರಿ, ಈರುಳ್ಳಿ, ಮೂಲಂಗಿ, ಮೆಣಸು, ಹೂಕೋಸು ಪ್ರಮುಖವಾಗಿ ಈ ಪಟ್ಟಿಯಲ್ಲಿ ಇವೆ. ಇದಲ್ಲದೇ ಕೆಲ ಮೂಲಿಕೆಗಳ ಹೆಸರೂ ಅದರಲ್ಲಿದೆ.ಕೈತೋಟ ಹೊರತಾಗಿ ಉಪಯುಕ್ತ ಆಹಾರಗಳ ಪೊಟ್ಟಣಗಳನ್ನು ತುಂಬಿರುವ ನೌಕೆಯೊಂದನ್ನು ಗಗನಯಾನಿಗಳ ಜೊತೆ ಮಂಗಳನ ಅಂಗಳಕ್ಕೆ ಕಳುಹಿಸುವ ಯೋಜನೆಯೂ `ನಾಸಾ~ದ ಮುಂದೆ ಇದೆ.ನೌಕೆಯಲ್ಲಿ ಕೈತೋಟ ನಿರ್ಮಾಣ ಸಾಧ್ಯವಾದರೆ ಗಗನಯಾನಿಗಳು ಮಂಗಳನ ಅಧ್ಯಯನ ಮಾಡುವುದರ ಜೊತೆಗೆ ಅಡುಗೆ ಭಟ್ಟರು ಆಗಬೇಕಾಗಿರುವುದಂತೂ ಸ್ಪಷ್ಟ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.