ಗುರುವಾರ , ಏಪ್ರಿಲ್ 15, 2021
22 °C

ಬಿಎಸ್‌ವೈ ಯೋಜನೆಗಳಿಗೆ ನಿರ್ಲಕ್ಷ್ಯ: ಪುಟ್ಟಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೆ ತಂದ ಜನಪರ ಯೋಜನೆಗಳನ್ನು ಸದ್ಯ ಆಡಳಿತದ ಹೊಣೆ ಹೊತ್ತವರು ನಿರ್ಲಕ್ಷಿಸುತ್ತಿದ್ದಾರೆ ಎಂದು ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದರು.ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮತ್ತಿತರ ಯೋಜನೆಗಳಿಗೆ ನಿಧಾನಗತಿ ನೀಡಲಾಗಿದೆ.ಜನಸಾಮಾನ್ಯರು, ರೈತರು ಹಾಗೂ ವಿವಿಧ ವರ್ಗಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಿದ್ದ ಯೋಜನೆಗಳು ಇದೀಗ ಮೂಲೆಗುಂಪಾಗುವಂತಾಗಿದೆ ಎಂದು ಭಾನುವಾರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅಸಮಾಧಾನ ವ್ಯಕ್ತಪಡಿಸಿದರು. `ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಯತ್ನದಲ್ಲಿ ಬಿಜೆಪಿಗೆ ಹಾನಿಯಾಗಿದೆಯೇ ಹೊರತು ಯಡಿಯೂರಪ್ಪ ಅವರಿಗೆ ಅಲ್ಲ~.ಯಡಿಯೂರಪ್ಪ ಅವರಿಗೆ ಸಾಕಷ್ಟು ತೊಂದರೆ ನೀಡಲಾಗಿದೆ. ಇದರಿಂದ ಬೇಸತ್ತು ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಹೇಳಿದರು.ಲೋಕಾಯುಕ್ತ ಸಂತೋಷ್ ಹೆಗ್ಡೆ ಏಕಪಕ್ಷೀಯ ವರದಿ ನೀಡಿದ್ದರು. ಅದರ ಪರಿಣಾಮವಾಗಿ ಯಡಿಯೂರಪ್ಪನವರ ವಿರುದ್ಧ ಪ್ರಕರಣ ದಾಖಲಾಯಿತು. ಆದರೆ, ಆಗಿನ ಸಂದರ್ಭದಲ್ಲಿ ಹೈಕಮಾಂಡ್ ಇದನ್ನು ಪರಿಶೀಲಿಸಲು ಸಮಯಾವಕಾಶ ನೀಡಲಿಲ್ಲ.ಇದರಿಂದಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಯಿತು ಎಂದು ತಿಳಿಸಿದರು.

ಒಬ್ಬ ಶಾಸಕರ ಬೆಂಬಲವೂ ಇಲ್ಲದ ಸದಾನಂದಗೌಡರನ್ನು ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ಮೇಲೆ ಕೂರಿಸಿದರು. ಆದರೆ, ಸದಾನಂದಗೌಡರು, ಯಡಿಯೂರಪ್ಪ ಅವರ ಪ್ರಕರಣದಲ್ಲಿ ಕೇಂದ್ರ ಸರ್ಕಾರ ವರದಿ ಕೇಳಿದ 24 ಗಂಟೆಗಳಲ್ಲಿಯೇ ನೀಡಿದರು ಎಂದು  ಹೇಳಿದರು.ಕಿಡ್ನಿ ಡಯಾಲಿಸಿಸ್‌ಗೆ ಅವಕಾಶ: ಯಶಸ್ವಿನಿ ಯೋಜನೆಯಡಿ ನೋಂದಣಿ ಮಾಡಿಸಿದ ಸದಸ್ಯರಿಗೆ ಪ್ರಸಕ್ತ ಸಾಲಿನಿಂದಲೇ ಕಿಡ್ನಿ ಡಯಾಲಿಸಿಸ್ ಸೌಲಭ್ಯ ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಯೋಜನೆಯ ಸೌಲಭ್ಯ ಅರಿತು ಏಪ್ರಿಲ್‌ನಿಂದ ಈವರೆಗೆ ಸುಮಾರು 30 ಲಕ್ಷ ಜನ ಹೆಸರು ನೋಂದಣಿ ಮಾಡಿಸಿದ್ದಾರೆ  ಎಂದರು.ಸ್ವಸಹಾಯ ಸಂಘಗಳ ಮಹಿಳೆಯರಿಗೆ ಹಾಲು ಮಂಡಳಿಯಿಂದ ಹಸು ಹಾಗೂ ಎಮ್ಮೆ ಖರೀದಿಸಲು 35 ಸಾವಿರ ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತಿದೆ. ಈ ಪೈಕಿ ವಿಧವೆಯರಿಗೆ ಶೇ 60 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 75 ರಷ್ಟು ರಿಯಾಯಿತಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿ, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಅಧ್ಯಕ್ಷ ಶಕುಂತಲಾ ಬೆಲ್ದಾಳೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ್ ಕಲ್ಲೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.