ಬುಧವಾರ, ಜೂನ್ 23, 2021
28 °C

ಬಿಜೆಪಿಗೆ ಬಲ ತಂದೀತೆ ಕೆಜೆಪಿ ವಿಲೀನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಬಲ ಸಾಧಿಸಿದರೆ, ಕೆಜೆಪಿ ತನ್ನ ಖಾತೆ ತೆರೆಯಿತು. ಮಹಾರಾಷ್ಟ್ರ ಏಕೀಕರಣ ಸಮಿತಿ ಸಹ ಪುನಃ ವಿಧಾನಸಭೆ ಪ್ರವೇಶಿಸಿತು.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರ ಯಾವ ಕಡೆಗೆ ಮುಖ ಮಾಡಿದ್ದಾನೆ ಎಂದು ಈಗಲೇ ಹೇಳುವುದು ಕಷ್ಟ. ಆದರೆ, ಒಡೆದು ಹೋಳಾಗಿದ್ದ ಕರ್ನಾಟಕ ಜನತಾ ಪಕ್ಷ ಮತ್ತು ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ವಿಲೀನ ಬಿಜೆಪಿಗೆ ಲಾಭ ತರಬಹುದೇ? ಎಂಬ ಲೆಕ್ಕಾಚಾರ ನಡೆದಿದೆ.ಬೆಳಗಾವಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಅರಭಾವಿ, ಬೆಳಗಾವಿ ಗ್ರಾಮೀಣ, ಸವದತ್ತಿ ಯಲ್ಲಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಗೋಕಾಕ, ಬೆಳಗಾವಿ ಉತ್ತರ, ರಾಮದುರ್ಗ­ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು, ಬೆಳಗಾವಿ ದಕ್ಷಿಣದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಹಾಗೂ ಬೈಲಹೊಂಗಲದಲ್ಲಿ ಕೆಜೆಪಿ ಅಭ್ಯರ್ಥಿ ಗೆಲವು ಸಾಧಿಸಿದ್ದರು.ವಿಧಾನಸಭೆ ಚುನಾವಣೆಯಲ್ಲಿ ಈ ಎಂಟೂ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿ ಶೇ. 30.47 ರಷ್ಟು ಮತಗಳನ್ನು ಪಡೆ­ದಿತ್ತು. ಕಾಂಗ್ರೆಸ್‌ ಶೇ. 29.10 ರಷ್ಟು ಮತದಾ­ರರನ್ನು ಸೆಳೆಯುವಲ್ಲಿ ಯಶಸ್ವಿಯಾ­ಗಿತ್ತು. ಕೆಜೆಪಿ ಶೇ. 10.59 ರಷ್ಟು ಮತ್ತು ಎಂಇಎಸ್‌ ಸೇರಿದಂತೆ ಇತರರು ಶೇ. 20.55 ರಷ್ಟು ಮತಗಳನ್ನು ಪಡೆಯುವಲ್ಲಿ ಸಫಲರಾಗಿದ್ದರು.ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯಿಂದ ದೂರವಾಗಿ ಸ್ವತಂತ್ರ ಅಸ್ತಿತ್ವ ರೂಪಿಸಿಕೊಂಡಿದ್ದ ಕೆಜೆಪಿ ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಒಟ್ಟು ಚಲಾವಣೆಯಾದ ಮತಗಳ ಪೈಕಿ ಕೆಜೆಪಿ ಶೇ. 10.59 ರಷ್ಟು ಮತಗಳನ್ನು ಪಡೆಯುವ ಮೂಲಕ ಬೈಲಹೊಂಗಲ ಕ್ಷೇತ್ರದಲ್ಲಿ ಖಾತೆ ಸಹ ತೆರೆಯಿತು. ಬೆಳಗಾವಿ ಉತ್ತರ ಹಾಗೂ ರಾಮದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು.ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಸ್‌.ಸಿ.ಮಾಳಗಿ ಅವರು 15,271 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಕಿರಣ ಜಾಧವ ಅವರ ಸೋಲಿಗೆ ಕಾರಣರಾದರು. ರಾಮದುರ್ಗದಲ್ಲೂ ಕೆಜೆಪಿ ಅಭ್ಯರ್ಥಿ 16,043 ಮತಗಳನ್ನು ಪಡೆಯುವುದ ಮೂಲಕ ಬಿಜೆಪಿ ಅಭ್ಯರ್ಥಿಯ ಹಿನ್ನೆಡೆಗೆ ಕಾರಣರಾದರು.ಬಿಜೆಪಿಯ ಅಸ್ತಿತ್ವಕ್ಕೆ ಕೆಜೆಪಿ ಪೆಟ್ಟು ನೀಡಿದ್ದ ಕ್ಷೇತ್ರಗಳ ಪೈಕಿ ಎರಡರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸಿದರೆ, ಒಂದು ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ಗೆದ್ದಿದ್ದಾರೆ.ಇದೀಗ ಕೆಜೆಪಿ ಬಿಜೆಪಿಯೊಂದಿಗೆ ವಿಲೀನವಾಗಿದೆ. ಈ ಎರಡೂ ಪಕ್ಷಗಳು ಪಡೆದ ಮತಗಳನ್ನು ಒಟ್ಟಾಗಿ ಪರಿಗಣಿಸಿದರೆ ಕಾಂಗ್ರೆಸ್‌ನ ಒಟ್ಟು ಮತಗಳಿಗಿಂತ ಹೆಚ್ಚಾಗುತ್ತದೆ. ಬಿಎಸ್‌ಆರ್‌ಸಿ ಸಹ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಅದರ ನಾಯಕರ ಮೂಲಕವೇ ಲಾಭವನ್ನು ಪಡೆಯಲು ಬಿಜೆಪಿ ಮುಂದಾಗಿದೆ.ಆದರೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಮೂರು ವಿಧಾನಸಭೆ ಕ್ಷೇತ್ರದಲ್ಲಿ ಎಂಇಎಸ್‌ ಮತಗಳು ಹೆಚ್ಚಿವೆ. ಇದರ ಲಾಭ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್‌ ಈಗಾಗಲೇ ತಂತ್ರ ಹೆಣೆದಿವೆ. ಆದರೆ, ಎಂಇಎಸ್‌ ಶಾಸಕ ಸಂಭಾಜಿ ಪಾಟೀಲ ಅವರು ಕಾಂಗ್ರೆಸ್‌ನತ್ತ ಒಲವು ತೋರಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕ ಜನ ಬೆಂಬಲವನ್ನೇ ಬಂಡವಾಳವಾಗಿಸಿಕೊಂಡು ಗೆಲುವು ಸಾಧಿಸಲು ಕಾಂಗ್ರೆಸ್‌ ಸಿದ್ಧವಾಗುತ್ತಿದೆ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.