ಶುಕ್ರವಾರ, ಜನವರಿ 24, 2020
28 °C
ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಸುತ್ತ 146 ಅನಧಿಕೃತ ಬಡಾವಣೆ

ಬಿಡಿಎ ಕಾರ್ಯಪಡೆಗೆ ಹೈಕೋರ್ಟ್‌ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಿಪ್ಪಗೊಂಡನಹಳ್ಳಿ (ಟಿ.ಜಿ. ಹಳ್ಳಿ) ಜಲಾನಯನ ಪ್ರದೇಶದ ಸುತ್ತಲಿನ ಸಂರಕ್ಷಿತ ವಲಯದಲ್ಲಿ 146 ಅನಧಿಕೃತ ಬಡಾವಣೆಗಳು ತಲೆ ಎತ್ತಿವೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೀಡಿರುವ ಕರಡು ಪ್ರಾಥಮಿಕ ವರದಿ ಹೈಕೋರ್ಟ್‌ನ ಕಣ್ಣು ಕೆಂಪಗಾಗಿಸಿದೆ. ‘ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ನಿಮ್ಮಿಂದ ಆಗಿಲ್ಲವೇ? ನಿಮ್ಮ ಕಾರ್ಯಪಡೆ ಏನು ಮಾಡುತ್ತಿದೆ?’ ಎಂದು ಹೈಕೋರ್ಟ್‌ ಬಿಡಿಎ ಅಧಿಕಾರಿಗಳನ್ನು ಮೌಖಿಕವಾಗಿ ಪ್ರಶ್ನಿಸಿದೆ.‘ಇಷ್ಟೊಂದು ಸಂಖ್ಯೆಯಲ್ಲಿ ಬಡಾವಣೆಗಳು ನಿರ್ಮಾಣಗೊಂಡಿವೆ. ಈ ಕುರಿತು ನಿಮ್ಮ ಕಾರ್ಯಪಡೆ ನಿಗಾ ಇಡಬೇಕಿತ್ತು. ಇಂಥ ಕಾರ್ಯಪಡೆಯನ್ನು ಏಕೆ ಮುಂದುವರಿಸಬೇಕು? ಸಾರ್ವಜನಿಕರ ಹಣ ಪೋಲು ಮಾಡಲಿಕ್ಕೇ? ಇಂಥ ಬಡಾವಣೆಗಳು ತಲೆ ಎತ್ತುತ್ತಿದ್ದಾಗ ಕಾರ್ಯಪಡೆ ಏನು ಮಾಡುತ್ತಿತ್ತು ಎಂಬ ಬಗ್ಗೆ ಅದರ ಮುಖ್ಯಸ್ಥರಾದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರದಿ ನೀಡಬೇಕು’ ಎಂದು ನ್ಯಾಯಮೂರ್ತಿ ಎ.ಎನ್‌. ವೇಣುಗೋಪಾಲ ಗೌಡ ಅವರು ಬುಧವಾರ ಮೌಖಿಕವಾಗಿ ನಿರ್ದೇಶನ ನೀಡಿದರು.ಟಿ. ರಾಜಕುಮಾರ್‌ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಅವರು, ‘ಟಿ.ಜಿ. ಹಳ್ಳಿ ಜಲಾನಯನ ಪ್ರದೇಶವನ್ನು ಸಂರಕ್ಷಿತ ವಲಯ ಎಂದು ಘೋಷಿಸಿದ ನಂತರ ಮೂರು ಸಮಿತಿಗಳನ್ನು ರಚಿಸಲಾಗಿದೆ. ಅಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಕಟ್ಟಡಗಳನ್ನು ತೆರವು ಮಾಡುವ ಕೆಲಸ ಆ ಸಮಿತಿಗಳದ್ದು. ಆದರೆ ಸಮಿತಿಗಳು ಆಯ್ದ ಕೆಲವರ ವಿರುದ್ಧ ಮಾತ್ರ ಕ್ರಮ ಕೈಗೊಂಡಂತೆ ಭಾಸವಾಗುತ್ತಿದೆ’ ಎಂದು ಆದೇಶದಲ್ಲಿ ಹೇಳಿದ್ದಾರೆ.‘146 ಅನಧಿಕೃತ ಬಡಾವಣೆಗಳು ಅಲ್ಲಿ ತಲೆ ಎತ್ತಿವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದ ಕಾರ್ಯಪಡೆ ಸರಿಯಾಗಿ ಕೆಲಸ ಮಾಡಿದ್ದರೆ ಈ ಬಡಾವಣೆಗಳು ಅಲ್ಲಿ ನಿರ್ಮಾಣವಾಗುತ್ತಿರಲಿಲ್ಲ. ಸಮಿತಿಗಳೂ ತಮಗೆ ವಹಿಸಿದ್ದ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಈ ಸಮಿತಿಗಳ ಮೇಲೆ ನಿಗಾ ಇಡಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಉಮೇಶ್‌ ನೇತೃತ್ವದಲ್ಲಿ ಉಸ್ತುವಾರಿ ಸಮಿತಿಯನ್ನು ರಚನೆ ಮಾಡುವಂತೆ ನ್ಯಾಯಮೂರ್ತಿಯವರು ಆದೇಶಿಸಿದ್ದಾರೆ.ಅಕ್ರಮ ಕಟ್ಟಡಗಳ ತೆರವು ಕುರಿತಂತೆ ಉಸ್ತುವಾರಿ ಸಮಿತಿಯು ಯಾವುದೇ ಪ್ರಾಧಿಕಾರದ ಸಹಕಾರ ಕೋರಬಹುದು. ಅವರಿಗೆ ಸೂಕ್ತ ಸಹಕಾರ ನೀಡದವರ ವಿರುದ್ಧ ಪ್ರತ್ಯೇಕ ಕ್ರಮ ಜರುಗಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಲಾಗಿದೆ.

ಪ್ರತಿಕ್ರಿಯಿಸಿ (+)