ಶುಕ್ರವಾರ, ಜೂನ್ 18, 2021
28 °C

ಬಿಸಿಲು ನಾಡಿನಲ್ಲಿ ಬಣ್ಣದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ:  ಕೆಂಪು, ನೀಲಿ, ಹಸಿರು, ಹಳದಿ ಬಣ್ಣಗಳು... ಬಣ್ಣ ಹಚ್ಚಿ ಹಬ್ಬದ ಸಂಭ್ರಮದ ವಿನಿಮಯ... ಚಿಣ್ಣರ ಲೋಕದಲ್ಲಿ ಬಣ್ಣಗಳ ಜಾತ್ರೆ... ಸುಡುವ ಬಿಸಿಲಿನ ಮಧ್ಯೆ ತಂಪೆರೆದ ಬಣ್ಣಗಳ ಮಳೆ...ಬಿಸಿಲು ನಾಡು ಎಂದೇ ಖ್ಯಾತವಾದ ಯಾದಗಿರಿ ಜಿಲ್ಲೆಯಲ್ಲಿ ಗುರುವಾರ ಕಂಡು ಬಂದ ಹೋಳಿ ಹುಣ್ಣಿಮೆಯ ಸಂಭ್ರಮವಿದು. ಬೆಳಿಗ್ಗೆಯಿಂದಲೇ ಯುವಕರು, ಮಕ್ಕಳು, ಹಿರಿಯರು ಗುಂಪು ಗುಂಪಾಗಿ ಬಣ್ಣದಾಟದಲ್ಲಿ ನಿರತರಾಗಿದ್ದರು. ಚಿಕ್ಕ ಮಕ್ಕಳೂ ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ರಂಗಿನಾಟದಲ್ಲಿ ತಲ್ಲೆನರಾಗಿದ್ದಾರು.ನಗರದಲ್ಲಂತೂ ಹೋಳಿ ಹುಣ್ಣಿಮೆಯನ್ನು ಪ್ರತಿ ಬಾರಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಎಲ್ಲ ವರ್ಗದ ಜನರು ಈ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮವನ್ನು ಇಮ್ಮಡಿಸುವಂತೆ ಮಾಡುತ್ತಾರೆ. ಇದಕ್ಕೆ ಇಲ್ಲಿಯ ನಗರ ಪೊಲೀಸ್ ಠಾಣೆ ವೇದಿಕೆ ಆಗುತ್ತದೆ. ಗುರುವಾರ ಬೆಳಿಗ್ಗೆ ನಗರ ಠಾಣೆಯಲ್ಲಿ ಸೇರಿದ ವಿವಿಧ ಸಮುದಾಯಗಳ ಪ್ರಮುಖರು, ಜನರು, ಯುವಕರು, ಸೌಹಾರ್ದ ಹೋಳಿ ಆಚರಿಸಿದರು. ಪರಸ್ಪರ ಬಣ್ಣ ಹಚ್ಚಿ, ಹಬ್ಬದ ಸಂಭ್ರಮವನ್ನು ವಿನಿಮಯ ಮಾಡಿಕೊಂಡರು. ನಂತರ ಹಾಲು, ತಿಂಡಿ ಸೇವಿಸಿ, ಬಣ್ಣದಾಟವನ್ನು ಆರಂಭಿಸಿದರು.

ಇದಾದ ನಂತರ ಹೋಳಿ ಹಬ್ಬದ ರಂಗಿನಾಟ ಚುರುಕುಗೊಂಡಿತು. ಗಾಂಧಿ ವೃತ್ತದಲ್ಲಿ ಯುವಕರು ಗುಂಪು ಕೇಕೆ ಹಾಕುತ್ತ, ಹಲಗೆ ಬಾರಿಸಿ ಕುಣಿದು ಕುಪ್ಪಳಿಸಿದರು. ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಒಂದೆಡೆ ಬಿಸಿಲು ಏರುತ್ತಿದ್ದರೂ, ಯುವಕರ ಉತ್ಸಾಹ ಮಾತ್ರ ಕಡಿಮೆ ಆಗಲಿಲ್ಲ. ಮಧ್ಯಾಹ್ನದವರೆಗೂ ಬಣ್ಣದಾಟ ನಡೆದೇ ಇತ್ತು.ಇತ್ತ ಸ್ಟೇಶನ್ ಬಜಾರ್‌ನಲ್ಲಿಯೂ ಬಣ್ಣದಾಟ ಸಂಭ್ರಮ ಮುಗಿಲು ಮುಟ್ಟಿತ್ತು. ವಿನಾಯಕ ಸೇವಾ ಸಮಿತಿ ಹಾಗೂ ಹಿಂದೂ ಸೇವಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.ಸಾಂಕೇತಿಕವಾಗಿ ಪರಸ್ಪರ ಬಣ್ಣ ಹಾಕಿ, ಹಬ್ಬದ ಆಚರಣೆಯನ್ನು ಆರಂಭಿಸಿದ ಯುವಕರು, ನಂತರ ನಗರದ ವಿವಿಧೆಡೆ ತೆರಳಿ, ತಮ್ಮ ಸ್ನೇಹಿತರು, ಆಪ್ತರನ್ನು ಮನೆಯಿಂದ ಕರೆತಂದು ಬಣ್ಣದ ಆಟದಲ್ಲಿ ತೊಡಗಿಸಿದರು.ಚಿಣ್ಣರೂ ಕಮ್ಮಿ ಇಲ್ಲ: ಒಂದೆಡೆ ಯುವಕರು ಗುಂಪು ಬಣ್ಣದ ಓಕುಳಿಯಾಟದಲ್ಲಿ ನಿರತರಾಗಿದ್ದರೆ, ಚಿಣ್ಣರ ತಂಡಗಳೂ ನಾವೇನು ಕಮ್ಮಿ ಇಲ್ಲ ಎನ್ನುವಂತೆ ತಮ್ಮ ಬಡಾವಣೆಗಳಲ್ಲಿ ತಂಡೋಪತಂಡವಾಗಿ ಬಣ್ಣದಾಟ ಆಡಿದರು.ರಸ್ತೆ ಬದಿಯಲ್ಲಿ ನಿಂತು ಹಾಯ್ದು ಹೋಗುವ ಜನರಿಗೆ ಬಣ್ಣ ಎರಚಿ ಸಂತಸ ಪಟ್ಟರು. ಇದೇ ಅವಕಾಶ ಎಂದು ಅಕ್ಕಪಕ್ಕದ ಮನೆಯ ಹಿರಿಯರಿಗೂ ಬಣ್ಣ ಸಿಡಿಸಿ, ಕೇಕೆ ಹಾಕಿದರು. ಕೈಯಲ್ಲಿ ಪಿಚಕಾರಿ ಹಿಡಿದು, ದೂರದಲ್ಲಿರುವವರಿಗೂ ಬಣ್ಣ ಹಚ್ಚಿದರು. ಕೆಲವೆಡೆ ಮಕ್ಕಳು ದಾರಿಗೆ ಅಡ್ಡಗಟ್ಟಿ, ವಾಹನ ಸವಾರರಿಂದ ಹಬ್ಬಕ್ಕೆ ಹಣ ವಸೂಲಿ ಮಾಡಿದ್ದೂ ಆಯಿತು. ಜನರೂ ಖುಷಿಯಿಂದಲೇ ಹಣಕೊಟ್ಟು ಮಕ್ಕಳು ಸಂಭ್ರಮವನ್ನು ಇಮ್ಮಡಿಗೊಳಿಸಿದರು.ಬಂಡಿಯ ಮೆರವಣಿಗೆ:  ನಗರದ ಸಂಪ್ರದಾಯದ ಪ್ರಕಾರ ಬಣ್ಣದ ಬಂಡಿಯ ಮೆರವಣಿಗೆಗೆ ವಿಶೇಷ ಮಹತ್ವವಿದೆ. ಬಣ್ಣದ ಬಂಡಿ ಹಾಯ್ದು ಹೋದ ಕಡೆಗಳಲ್ಲಿ ಬಣ್ಣದ ಆಟಕ್ಕೆ ವಿರಾಮ ನೀಡಲಾಗುತ್ತದೆ.ಗುರುವಾರ ನಗರದ ಮೈಲಾಪುರ ಅಗಸಿ ಹಾಗೂ ಸ್ಟೇಶನ್‌ಗಳಿಂದ ಎರಡು ಪ್ರತ್ಯೇಕ ಬಣ್ಣದ ಬಂಡಿಗಳ ಮೆರವಣಿಗೆ ನಡೆಯಿತು. ರತಿ-ಕಾಮಣ್ಣರ ಮೂರ್ತಿಗಳನ್ನು ಹೊತ್ತ ಬಂಡಿಗಳಲ್ಲಿ, ಬಣ್ಣದ ಬ್ಯಾರೆಲ್‌ಗಳನ್ನು ಇರಿಸಲಾಗುತ್ತದೆ. ಮೆರವಣಿಗೆಯುದ್ದಕ್ಕೂ, ಅಕ್ಕಪಕ್ಕದ ಜನರಿಗೆ ಹೋಳಿ ಹಬ್ಬದ ಕೊನೆಯ ಬಣ್ಣವನ್ನು ಎರಚಲಾಗುತ್ತದೆ. ಅದಾದ ನಂತರ ಎಲ್ಲರೂ ತಮ್ಮ ಮನೆಗಳಿಗೆ ತೆರಳಿ ಸ್ನಾನ ಮಾಡುತ್ತಾರೆ.ಬಿಸಿಲಿ ಧಗೆ:   ಮೊದಲೇ ಬಿಸಿಲಿಗೆ ಹೆಸರಾಗಿರುವ ಯಾದಗಿರಿಯಲ್ಲಿ ಗುರುವಾರ ಬಿಸಿಲಿನ ಪ್ರಖರತೆ ತೀವ್ರವಾಗಿತ್ತು. ಬೆಳಿಗ್ಗೆಯಿಂದಲೇ ಬಿಸಿಲನ್ನು ಲೆಕ್ಕಿಸದೇ ಬಣ್ಣ ಆಡುತ್ತಿದ್ದ ಯುವಕರು, ದಾಹ ತೀರಿಸಿಕೊಳ್ಳಲು ಸಾಕಷ್ಟು ಪರದಾಡಬೇಕಾಯಿತು.ನಗರದಲ್ಲಿ ಹೋಳಿ ಹಬ್ಬದ ನಿಮಿತ್ತ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ಚಹಾ, ತಿಂಡಿ, ನೀರಿಗಾಗಿ ಹುಡುಕಾಡಬೇಕಾಯಿತು. ಕೆಲವೇ ಕಡೆಗಳಲ್ಲಿ ಗೂಡಂಗಡಿಗಳು ತೆರೆದಿದ್ದು, ಯುವಕರು ಹಸಿವು, ಬಾಯಾರಿಕೆಯನ್ನು ನೀಗಿಸಿದವು. ಇನ್ನೂ ಕೆಲವೆಡೆ ಯುವಕರು, ಕಲ್ಲಂಗಡಿ ಹಣ್ಣು ತಿಂದು ತಮ್ಮ ಬಾಯಾರಿಕೆಯನ್ನು ನಿವಾರಿಸಿಕೊಂಡರು.ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುರುವಾರ ಹೋಳಿ ಹಬ್ಬವನ್ನು ಆಚರಿಸಲಾಯಿತು. ಆದರೆ ಕೆಂಭಾವಿ ಸುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ (ಮಾ.9) ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.