ಹರಪನಹಳ್ಳಿ: ಗುಹೆಯಂತೆ ಬೆಳೆದು ನಿಂತಿರುವ ಮುಳ್ಳಿನ ಪೊದೆಗಳು. ಕಾಲಿಟ್ಟರೆ ಸಾಕು ಚುಚ್ಚಿಕೊಳ್ಳುವ ಮುಳ್ಳು. ಕಲ್ಲು-ಮುಳ್ಳಿನ ಹಿಂಸೆ ಸಹಿಸಲಾರದೆ ಶಾಲೆ ತೊರೆಯುತ್ತಿರುವ ಮಕ್ಕಳು. ಸಕಾಲಕ್ಕೆ ಚಿಕಿತ್ಸೆಯ ನೆರವು ಸಿಗದೆ ಸಾವಿನ ಮನೆ ಸೇರುತ್ತಿರುವ ರೋಗಿಗಳು...!.

ಇದು ತಾಲ್ಲೂಕಿನ ಅರಸೀಕೆರೆ ಹೋಬಳಿಯ ಜಗಳೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಒಳಪಡುವ ಗುಳೇದಹಟ್ಟಿ ತಾಂಡಾ ಎಂಬ ನತದೃಷ್ಟ ಹಳ್ಳಿಗೆ ಉರುಳಿನಂತೆ ಸುತ್ತಿಕೊಂಡಿರುವ ಭಯಾನಕ ಸಮಸ್ಯೆಯ ಬಳ್ಳಿ.
ಸುಮಾರು 265ಜನಸಂಖ್ಯೆ ಹೊಂದಿರುವ 35ಮನೆಗಳ ಪುಟ್ಟಗ್ರಾಮ ಗುಳೇದಹಟ್ಟಿ ತಾಂಡಾ. ಈ ಗ್ರಾಮಕ್ಕೆ ತಲುಪಲು ಯಾವ ದಿಕ್ಕಿನಿಂದಲೂ ರಸ್ತೆಯೇ ಇಲ್ಲ!. ತಾಂಡಾ ಸುತ್ತಮುತ್ತಲಿನ ಯಾವ ಗ್ರಾಮಕ್ಕೆ ಹೋಗಬೇಕೆಂದರೂ, ಕನಿಷ್ಠ ನಾಲ್ಕಾರು ಕಿ.ಮೀ. ದೂರ ಸೀಳುದಾರಿ ಮೂಲಕ ಕಾಲ್ನಡಿಗೆಯಲ್ಲಿ ಸಂಚರಿಸಲೇಬೇಕಾದ ಅನಿವಾರ್ಯ ಕರ್ಮ ಈ ಗ್ರಾಮಸ್ಥರದು!.

ಇಟ್ಟಗಿ- ಕಂಚಿಕೆರೆ ರಾಜ್ಯ ಹೆದ್ದಾರಿ-151ಕ್ಕೆ ಜೋಡಣೆಯಾಗುವ ರಸ್ತೆಯನ್ನು ಮಾತ್ರ ಮಣ್ಣಿನಿಂದ ಅಭಿವೃದ್ಧಿಪಡಿಸಲಾಗಿದೆ. ಉಳಿದಂತೆ, ನಿತ್ಯದ ವಹಿವಾಟು ಕೇಂದ್ರವಾದ ಕಾವಲಹಳ್ಳಿ ಹಾಗೂ ಗ್ರಾಮ ಪಂಚಾಯಿತ್ ಕೇಂದ್ರಸ್ಥಾನವಾದ ತೌಡೂರು ಗ್ರಾಮ ತಲುಪಬೇಕೆಂದರೆ ರಸ್ತೆಯೇ ಇಲ್ಲ. ರೈತರ ಹೊಲದ ನಡುವಿನ ಬಂಡಿದಾರಿಯಲ್ಲಿಯೇ ಗ್ರಾಮಸ್ಥರು ಸಂಚರಿಸಬೇಕು. ಎರೆಮಣ್ಣಿನಿಂದ ಕೂಡಿರುವ ಈ ಜಮೀನುಗಳ ಮುಖಾಂತರ ಮಳೆಗಾಲದಲ್ಲಿ ಸಂಚರಿಸುವುದು ಸಾಹಸಮಯವಾದ ಕೆಲಸ. ಹೀಗಾಗಿ ಕಾವಲಹಳ್ಳಿ ಕೇವಲ 2ಕಿ.ಮೀ. ಅಂತರದಲ್ಲಿದ್ದರೂ, ಇಲ್ಲಿನ ಕೆಲ ವಿದ್ಯಾರ್ಥಿಗಳು ನಾಲ್ಕಾರು ಕಿ.ಮೀ. ದೂರದಲ್ಲಿರುವ ಕಮ್ಮತ್ತಹಳ್ಳಿ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ.

ಕಮ್ಮತ್ತಹಳ್ಳಿಗೆ ಸಂಪರ್ಕ ಕಲ್ಪಿಸುವ ದಾರಿಯ ಸ್ಥಿತಿಯಂತೂ ಊಹಿಸಿಕೊಳ್ಳಲು ಅಸಾಧ್ಯವಾದಷ್ಟು ಭಯಾನಕವಾಗಿದೆ. ರಸ್ತೆಯ ಎರಡು ಬದಿ ರಾಕ್ಷಸೋಪಾದಿಯಲ್ಲಿ ಬೆಳೆದುನಿಂತಿರುವ ಗಿಡ-ಗಂಟೆಗಳು ಪರಸ್ಪರ ಆವರಿಸಿಕೊಂಡು ಗುಹೆಗಳಂತೆ ಮಾರ್ಪಟ್ಟಿವೆ. ಮುಳ್ಳಿನ ಪೊದೆ ಭೇದಿಸಿ, ನೆಲದಮೇಲೆ ಸುರಿದ ಮುಳ್ಳನ್ನು ಚುಚ್ಚಿಸಿಕೊಳ್ಳುತ್ತಲೇ ಕಮ್ಮತ್ತಹಳ್ಳಿ ತಲುಪಬೇಕು!. ನಿತ್ಯವೂ ಈ ಚಿತ್ರಹಿಂಸೆ ತಾಳಲಾರದ ವಿದ್ಯಾರ್ಥಿಗಳು, ಹೊಲದ ಬದುವಿನ ಮೂಲಕ ಪುಣಭಗಟ್ಟೆ ಗ್ರಾಮ ಸುತ್ತಿಕೊಂಡು ಕಮ್ಮತ್ತಹಳ್ಳಿ ತಲುಪುತ್ತಾರೆ. ಮಳೆಗಾಲದ ಅವಧಿಯಲ್ಲಿ ಈ ಮಕ್ಕಳ ಗೋಳು ಹೇಳತೀರದು. ಈ ನರಕ ಅನುಭವಿಸಲಾರದೆ ಮಕ್ಕಳು ಶಾಲೆ ತೊರೆಯುತ್ತಿದ್ದಾರೆ ಎಂದು ಸಂಕಟ ತೋಡಿಕೊಳ್ಳುತ್ತಾರೆ ಗ್ರಾಮದ ಯುವಕ ವೆಂಕಟೇಶ್, ಕುಬೇಂದ್ರನಾಯ್ಕ ಇತರರು.

ಗರ್ಭಿಣಿಯರು,ಬಾಣಂತಿಯರು ಹಾಗೂ ವಿಷಜಂತು ಕಡಿತಕ್ಕೆ ಒಳಗಾದವರಿಗೆ ತುರ್ತುಚಿಕಿತ್ಸೆ ದೊರಕುವುದು ಕನಸಿನ ಮಾತು. ಇಂತಹ ಎಷ್ಟೋ ಸಂದರ್ಭಗಳಲ್ಲಿ `108ಆರೋಗ್ಯ ಕವಚ~ ಅಂಬುಲೆನ್ಸ್ಗೆ ಕರೆ ಮಾಡಿದರೂ ಬರಲು ದಾರಿಯೇ ಇಲ್ಲ. ಸಕಾಲದಲ್ಲಿ ಚಿಕಿತ್ಸೆ ದೊರಕದೇ ಅನೇಕರು ಸಾವಿನ ಮನೆಯ ಕದ ತಟ್ಟಿದ್ದಾರೆ ಎಂದು ವಿವರಿಸುತ್ತಾರೆ ಗ್ರಾಮದ ಸೀತಾಬಾಯಿ ಹಾಗೂ ಸಾಕಮ್ಮ.

ಸರ್ವಋತು ಸುಸಜ್ಜಿತವಾದ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಕಳೆದ ಫೆ. 27ರಿಂದ ಮಿನಿ ವಿಧಾನಸೌಧ ಮುಂದೆ ಭಾರತ ಕಮ್ಯುನಿಸ್ಟ್ ಪಕ್ಷ(ಎಂಎಲ್) ನೇತೃತ್ವದಲ್ಲಿ ಗ್ರಾಮಸ್ಥರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಆದರೂ, ಸಂಬಂಧಿಸಿದ ಜನಪ್ರತಿನಿಧಿ ಇಲ್ಲವೇ; ಅಧಿಕಾರಿಗಳಿಗಾಗಲಿ ಗ್ರಾಮಸ್ಥರ ಗೋಳು ಕೇಳಿಸಿಲ್ಲ.ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ, `ಅಭಿವೃದ್ಧಿ~ ಪದ ವ್ಯಂಗ್ಯಕ್ಕೆ ಒಳಗಾಗುವ ಮುನ್ನ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಲಿ ಎಂಬುದು ಗ್ರಾಮಸ್ಥರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.