ಗುರುವಾರ , ಫೆಬ್ರವರಿ 25, 2021
25 °C

ಬುದ್ಧ ಬೆಳಕಿನ ಬೋಧಿವೃಕ್ಷ

–ದಯಾನಂದ Updated:

ಅಕ್ಷರ ಗಾತ್ರ : | |

ಬುದ್ಧ ಬೆಳಕಿನ ಬೋಧಿವೃಕ್ಷ

ಪ್ರಶಾಂತ ಮುಖಭಾವ, ಅರೆಮುಚ್ಚಿದ ಕಣ್ಣು, ಇಷ್ಟೇ ಅರಳಿದ ತುಟಿಯ ಮೇಲೆ ಗಂಭೀರ ಮಂದಸ್ಮಿತ, ಅರಿವಿನ ದಾರಿಯನ್ನು ಗುರುತಿಸಿದ ಗುರುವಿನ ಅಂತರಂಗದ ಮೆಟ್ಟಿಲು, ಎದೆಯ ಮೇಲೆ ಅರಳಿ ಎಲೆಯ ಹಾರಾಟ, ಒಬ್ಬ ಬುದ್ಧನಿಗಿಂತ ಮತ್ತೊಬ್ಬ ಬುದ್ಧ ವಿಭಿನ್ನ. ‘ಬೋಧಿವೃಕ್ಷ’ದ ಕೆಳಗೆ ಬಹುರೂಪಿ ಬುದ್ಧರು!ಬುದ್ಧ ಎಂದರೆ ಒಮ್ಮೆಲೆ ಕಣ್ಣ ಮುಂದೆ ಮೂಡುವ ಚಿತ್ರ ಗಂಭೀರ ಶಾಂತ ಮುದ್ರೆ. ಲೋಕಕ್ಕೆ ಜ್ಞಾನದ ದೀವಿಗೆ ಹಿಡಿದ ಬುದ್ಧನಿಗೆ ಬೆಳಕನ್ನು ನೀಡಿದ್ದು ಬೋಧಿವೃಕ್ಷ. ಜ್ಞಾನದ ಬೆಳಕಿಗೆ ಹಂಬಲಿಸುವವರನ್ನು ಸದಾ ಕಾಡುವ ಬುದ್ಧ, ಬೆಳಕು ಹಾಗೂ ಬೋಧಿವೃಕ್ಷವನ್ನು ನಗರದ ಚಿತ್ರಕಲಾ ಪರಿಷತ್ತಿನ ಅಂಗಳಕ್ಕೆ ತಂದಿರುವವರು ಹುಬ್ಬಳ್ಳಿ ಮೂಲದ ಕಲಾವಿದ ಎಂ.ಎನ್‌.ಪಾಟೀಲ್‌.‘ಬೋಧಿವೃಕ್ಷ’ ಹೆಸರಿನಲ್ಲಿ ಮೇ 14ರಿಂದ ನಡೆಯುತ್ತಿರುವ ಏಕವ್ಯಕ್ತಿ ಪ್ರದರ್ಶನ ಮೇ 19ರವರೆಗೆ ಕಲಾಸಕ್ತರಿಗೆ ಮುಕ್ತ. ಪ್ರದರ್ಶನದಲ್ಲಿ ಬುದ್ಧನ ಬಗೆ ಬಗೆಯ ಮುಖಗಳು ಅನಾವರಣಗೊಂಡಿವೆ.ವಿವಿಧ ಬಣ್ಣಗಳಲ್ಲಿ ಬುದ್ಧನ ಮುಖಭಾವವನ್ನು ಕಟ್ಟಿಕೊಡಲು ಪ್ರಯತ್ನಿಸಿರುವ ಪಾಟೀಲ್‌ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಹಸಿರು, ಹಳದಿ, ಕಂದು ಹಾಗೂ ಕೆಂಪು ಬಣ್ಣಗಳನ್ನು ಅವರು ಬಳಸಿರುವ ರೀತಿ ಬುದ್ಧತ್ವವನ್ನು ಪ್ರಬುದ್ಧಗೊಳಿಸುವಂತೆ ಕಾಣುತ್ತದೆ.ಗಾಢ ಕಪ್ಪು ಬಣ್ಣದಿಂದ ಬುದ್ಧನ ಮುಖವನ್ನು ಮೂಡಿಸಿರುವ ಚಿತ್ರ ಹಿನ್ನೆಲೆಯ ಬಿಳಿಯ ಗೆರೆಗಳಿಂದ ಚಿತ್ರದ ಎಲ್ಲೆಯನ್ನು ವಿಸ್ತರಿಸುತ್ತದೆ. ಕಂದು ಬಣ್ಣದಲ್ಲಿ ಮೂಡಿರುವ ಬುದ್ಧನ ಚಿತ್ರಗಳು ಮುಖ ಭಾವ ಹಾಗೂ ಬಣ್ಣದ ಕುಶಲತೆಯಿಂದ ಸೆಳೆದುಕೊಳ್ಳುತ್ತವೆ.ಇಟ್ಟಿಗೆ ಗೋಡೆಯ ಬಿರುಕಿನಲ್ಲಿ ಮೂಡಿರುವ ಬುದ್ಧ, ಚಿಟ್ಟೆಗಳ ನಡುವೆ ನಗುವ ಬುದ್ಧ, ಬಲಗೈ ಕಳಚಿರುವ ಬುದ್ಧ ಸೂಕ್ಷ್ಮ ಕುಶಲತೆಯ ಕಾರಣಕ್ಕೆ ವಿಶೇಷವಾಗಿ ಕಂಡರೆ, ಪಾರಿವಾಳ, ಚಿಟ್ಟೆ ಹಾಗೂ ಹಸುವಿನ ಹಿನ್ನೆಲೆಯಲ್ಲಿರುವ ಬುದ್ಧನ ಚಿತ್ರಗಳು ಬುದ್ಧನ ಬಗೆಗಿನ ಅರಿವಿನ ವಿಸ್ತಾರದಂತೆ ಕಾಣುತ್ತವೆ.ಕಾಡುವ ಬುದ್ಧನನ್ನು ಚಿತ್ರವಾಗಿಸಲು ಪಾಟೀಲ್‌ ಆರಿಸಿಕೊಂಡಿರುವ ಮಾರ್ಗ ತೈಲವರ್ಣ. ಗಾಢವಾಗಿ ಉಳಿಯುವ ತೈಲವರ್ಣದಿಂದ ಆಕ್ರಿಲಿಕ್‌ಗಿಂತ ಭಿನ್ನವಾದ ಕಲಾತ್ಮಕತೆ ಮೂಡಿಸಲು ಸಾಧ್ಯ ಎಂಬುದು ಅವರ ನಂಬಿಕೆ.‘ಬುದ್ಧನ ಮುಖದ ಪ್ರಶಾಂತತೆ, ತುಟಿಯ ಮೇಲಿನ ನಗು, ಮೂಗಿನ ಗಾಂಭೀರ್ಯ ಮೊದಲಿನಿಂದಲೂ ನನ್ನನ್ನು ಕಾಡುತ್ತಿದೆ. ಬುದ್ಧನ ಕಲಾಕೃತಿಗಳ ರಚನೆಗೆ ಇದೇ ಪ್ರೇರಣೆ’ ಎನ್ನುತ್ತಾರೆ ಪಾಟೀಲ್‌.2011ರಲ್ಲಿ ಮೊದಲ ಬಾರಿಗೆ ‘ಬೋಧಿವೃಕ್ಷ’ ಪ್ರದರ್ಶನ ನಡೆಸಿದ ಅವರು, ಈಗ ಎರಡನೇ ಬಾರಿಗೆ ಅದೇ ಹೆಸರಿನಲ್ಲಿ ಪ್ರದರ್ಶನ ಆಯೋಜಿಸಿದ್ದಾರೆ. ಸುಮಾರು 35 ಕಲಾಕೃತಿಗಳು ಪ್ರದರ್ಶನದಲ್ಲಿವೆ.ಹುಬ್ಬಳ್ಳಿಯ ವಿಜಯ ಮಹಂತೇಶ ಲಲಿತಕಲಾ ವಿದ್ಯಾಲಯದಲ್ಲಿ ಚಿತ್ರಕಲೆ ಕಲಿತಿರುವ ಪಾಟೀಲ್‌, ಕೆಲ ಕಾಲ ಚಿತ್ರಕಲಾ ಪರಿಷತ್ತಿನಲ್ಲಿ ಕಲಾಕೃತಿಗಳ ಸಂರಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ಪರಿಷತ್ತಿನಲ್ಲಿದ್ದಾಗ ಚಿತ್ರ ರಚನೆ ಹಾಗೂ ಪ್ರದರ್ಶನಗಳ ಸೂಕ್ಷ್ಮತೆ ಅರಿತ ಅವರು ಈಗ ಆ ಕೆಲಸ ಬಿಟ್ಟು ಪೂರ್ಣಾವಧಿ ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.