ಶುಕ್ರವಾರ, ಮೇ 14, 2021
31 °C

ಬುಧನ ಸನ್ನಿಧಿಯತ್ತ ಭೂದೂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದು ಸುಪ್ರಸಿದ್ಧ ಬಾಹ್ಯಾಕಾಶ ಸಂಸ್ಥೆ `ನ್ಯಾಸಾ~ ಭೂದೂತ ಒಂದನ್ನು ಬುಧಗ್ರಹದತ್ತ ಕಳುಹಿಸಿತು. ಬುಧನನ್ನು ಸಮೀಪಿಸಿ, ಒಂದು ವರ್ಷ ಬುಧನ ಸನ್ನಿಧಿಯಲ್ಲೇ ಉಳಿದು ಬುಧನ ತನುವಿನ-ಒಡಲಿನ ಗಾಢ ಅಧ್ಯಯನ ನಡೆಸಿ ಭೂಮಿಗೆ ರವಾನಿಸುವ ಕಾರ್ಯಭಾರ ಈ ದೂತನದು.ಈ ಹಿಂದೆ ಬುಧನ ಅಧ್ಯಯನಕ್ಕೆಂದೇ ಕಳುಹಿಸಲಾಗಿದ್ದ `ಮ್ಯಾನಿನರ್-10~ರ ನಂತರ (ಚಿತ್ರ-8) 1974ರಿಂದ 2004ರವರೆಗೆ ಮೂರು ದಶಕಗಳ ನಂತರ ಈ ಗ್ರಹದ ಅಧ್ಯಯನಕ್ಕೆ ತೆರಳಿರುವ `ಮೆಸೆಂಜರ್~ (ದೂತ-ಚಿತ್ರ-1) ಎಂದೇ ಹೆಸರಿಸಲಾಗಿರುವ ಈ ವಿಶಿಷ್ಟ ವ್ಯೋಮನೌಕೆ ಮಾರ್ಚ್-18, 2011ರಂದು ಬುಧನ ಸನ್ನಿಧಿಯನ್ನು ತಲುಪಿ, ನಿರ್ದಿಷ್ಟ ಕಕ್ಷೆಯನ್ನು ಸೇರಿ ಬುಧಗ್ರಹವನ್ನು ಸುತ್ತುತ್ತ ಹೊಸ ಹೊಸ ಹೇರಳ ಚಿತ್ರ- ಮಾಹಿತಿಗಳನ್ನು ಹರಿಸುತ್ತಿದೆ. ಬುಧನ ಸನ್ನಿಧಾನದಲ್ಲಿನ ತನ್ನ ಒಂದು ವರ್ಷದ ಕ್ರಿಯಾಶೀಲ ಅವಧಿಯಲ್ಲಿ ಈ ಭೂದೂತ ಬುಧ ಗ್ರಹದ ಇತಿಹಾಸ, ಸಂಯೋಜನೆ, ಮೇಲ್ಮೈ ಲಕ್ಷಣ, ಆಂತರ್ಯ ಸ್ಥಿತಿ, ಕಾಂತ ಕ್ಷೇತ್ರ ಮತ್ತು ವಾಯುಮಂಡಲ- ಇವುಗಳನ್ನು ಕುರಿತ ವಿಸ್ತಾರ ಅಧ್ಯಯನ ನಡೆಸಲಿದೆ.ನಿಮಗೇ ತಿಳಿದಂತೆ ಬುಧ ನಮ್ಮ ಸೌರವ್ಯೆಹದ್ದೇ ಒಂದು ಗ್ರಹ (ಚಿತ್ರ-2). ಸೌರವ್ಯೆಹದಲ್ಲಿ (ಚಿತ್ರ-5) ಸೂರ್ಯನಿಗೆ ಅತ್ಯಂತ ಸಮೀಪದ ಪ್ರಥಮ ಸ್ಥಾನ ಈ ಗ್ರಹದ್ದು. ಸೂರ್ಯನಿಂದ ಬುಧನಿಗಿರುವ ಸರಾಸರಿ ದೂರ 57.6 ದಶಲಕ್ಷ ಕಿ.ಮೀ. ತುಂಬ ಹಿಗ್ಗಿಸಿದಂತಿರುವ ಅದರ ದೀರ್ಘ ವೃತ್ತ ಪಥದಲ್ಲಿ ಸೂರ್ಯನಿಂದ ಈ ಗ್ರಹದ ಕನಿಷ್ಠ ಅಂತರ 46.4 ದಶಲಕ್ಷ ಕಿ.ಮೀ; ಗರಿಷ್ಠ ಅಂತರ 68.8 ದಶಲಕ್ಷ ಕಿ.ಮೀ.ಬುಧ ನಮ್ಮ ಸೌರವ್ಯೆಹದ ಅತ್ಯಂತ ಚಿಕ್ಕಗ್ರಹ (ಚಿತ್ರ-6 ರಲ್ಲಿ ಭೂಮಿ, ಶುಕ್ರ, ಮಂಗಳ ಮತ್ತು ಬುಧ ಗ್ರಹಗಳ ಗಾತ್ರಗಳ ಹೋಲಿಕೆ ನೋಡಿ). ಅದರ ವ್ಯಾಸ 4720 ಕಿ.ಮೀ. ಭೂಮಿಗೆ ಹೋಲಿಸಿದಂತೆ ನೋಡಿದರಂತೂ (ಚಿತ್ರ-7) ಬುಧನದು ನಮ್ಮ ಚಂದ್ರನನ್ನೇ ಹೋಲುವಂಥ ಗಾತ್ರ. ಬುಧಗ್ರಹದ ವಾಸ್ತವ ಗಾತ್ರ ಭೂಗಾತ್ರದ ಶೇಕಡ ಆರರಷ್ಟಿದೆ ಅಷ್ಟೆ.ಭೂಮಿಯಂತೆಯೇ ಗಟ್ಟಿನೆಲ ನಿರ್ಮಿತಿಯ ಬುಧ ನಮ್ಮ ಸೌರವ್ಯೆಹದ ಹುಟ್ಟಿಗೆ ಆಕರವಾದ ದ್ರವ್ಯರಾಶಿಯಿಂದಲೇ ಅತಿ ಹೆಚ್ಚು ಉಷ್ಣತೆಯಲ್ಲಿ ಭೂಮಿಯ ಜತೆ ಜತೆಗೇ ಜನ್ಮತಳೆದ ಗ್ರಹ (ಚಿತ್ರ-4) ಆದರೆ ಕುದಿಕುದಿವ ಸ್ಥಿತಿಯಲ್ಲೇ ಉಳಿದೆಲ್ಲ ಭೌಮಿಕ ಗ್ರಹಗಳಿಗಿಂತ ಹೆಚ್ಚು ಕಾಲ ಉಳಿದು ನಂತರ ಘನರೂಪ ತಳೆದ ಗ್ರಹ ಅದು. ಈವರೆಗೆ ತಿಳಿದಿರುವಂತೆ ಈ ಗ್ರಹದ್ದು ತ್ರಿಪದರದ ನಿರ್ಮಿತಿ. ಕಬ್ಬಿಣ ತುಂಬಿದ ಗರ್ಭ ಅದನ್ನಾವರಿಸಿರುವ ಕಬ್ಬಿಣ ಮತ್ತು ಗಂಧಕ ಮಿಶ್ರಣದ ಕವಚ. ಅದರ ಹೊರಗೆ ಘನ ಸಿಲಿಕೇಟ್‌ಗಳ ಶಿಲಾಪದರ-ಅದೇ ಬುಧನ ನೆಲ.ಕಬ್ಬಿಣ ಭರಿತ ಬೃಹತ್ ಗರ್ಭದಿಂದಾಗಿಯೇ ಬುಧಗ್ರಹ ತುಂಬ ಶಕ್ತಿಯುತ ಕಾಂತ ಕವಚವನ್ನೂ ಪಡೆದಿದೆ. ಇಡೀ ಸೌರವ್ಯೆಹದಲ್ಲಿ ಬುಧನಿಗಿಂತ ಪ್ರಬಲ ಕಾಂತಕ್ಷೇತ್ರವನ್ನು ಹೊಂದಿರುವ ಗ್ರಹ ಧರೆಯೊಂದೇ.ಬುಧಗ್ರಹದ್ದು ತುಂಬ ವಿಚಿತ್ರ, ವಿಲಕ್ಷಣ ಮೇಲ್ಮೈ ಲಕ್ಷಣ. ಈ ಗ್ರಹದ ನೆಲದ ತುಂಬ-ನಮ್ಮ ಚಂದ್ರನ ನೆಲದಲ್ಲಿ ಇರುವಂತೆಯೇ ಬೋಗುಣಿಯಾಕಾರದ ಚಿಕ್ಕ-ದೊಡ್ಡ ಅಸಂಖ್ಯ ಕುಳಿಗಳು, ಕಣಿವೆ-ಕೊರಕಲುಗಳು (ಚಿತ್ರ 9, 10, 11). `ಕ್ಯಾಲೋರಿಸ್~ ಎಂದು ಹೆಸರಿಸಿರುವ ಕುಳಿಯ ವ್ಯಾಸ 1300 ಕಿ.ಮೀ.ಸೂರ್ಯನ ಸಾಮೀಪ್ಯದಿಂದಾಗಿ ಅಲ್ಲಿನ ಬಿಸಿಲಿನದು ವಿಪರೀತ ತೀಕ್ಷ್ಣತೆ. ಅಲ್ಲಿನ ಹಗಲಿನ ಉಷ್ಣತೆ ನಾಲ್ಕುನೂರು ಡಿಗ್ರಿ ಸೆಲ್ಷಿಯಸ್‌ಗಿಂತ ಅಧಿಕ; ಇರುಳಿನಲ್ಲಿ ನೂರಾ ಎಪ್ಪತ್ಮೂರು ಡಿಗ್ರಿಗಿಂತ ಕಡಿಮೆ. ಭೂಸದೃಶ ವಾತಾವರಣದ ನಾಸ್ತಿತ್ವ ಇದಕ್ಕೆ ಕಾರಣ. ತೀವ್ರ ಬಿಸಿ, ಅಷ್ಟೇ ತೀವ್ರ ಶೀತ-ಈ ವೈಪರೀತ್ಯದ ಜೊತೆಗೆ ಉಲ್ಕೆಗಳ ಅವಿರತ ಧಾಳಿ. ಹಾಗಾಗಿ ಬುಧ ಜಲರಹಿತ, ಜೀವಿ ರಹಿತ (ಚಿತ್ರ-2).ಸೂರ್ಯನಿಗೆ ಸಮೀಪವಾಗಿ ನೆಲೆಗೊಂಡಿರುವ, ಬಂಡೆನೆಲದ ಗ್ರಹವಾಗಿರುವುದರಿಂದ ಸಹಜವಾಗಿಯೇ ಬುಧ ಉಜ್ವಲ ಗ್ರಹ; ಭೂಮಿಯಿಂದಲೇ ಬರಿಗಣ್ಣಿಗೇ ಗೋಚರಿಸುವ ಗ್ರಹ ಕೂಡ. ಆದರೂ ಅದು ಸುಲಭವಾಗಿ ಕಾಣಿಸುವುದಿಲ್ಲ. ಏಕೆಂದರೆ ಅದು ಸೂರ್ಯನ ಜೊತೆ ಜೊತೆಯಲ್ಲೇ, ಸೂರ್ಯನಿಂದ ಕೇವಲ ಇಪ್ಪತ್ತೇಳು ಡಿಗ್ರಿ ಅಂತರದಲ್ಲೇ ಪ್ರತ್ಯಕ್ಷವಾಗುತ್ತದೆ. ಹಾಗಾಗಿ ಸೂರ್ಯನ ಪ್ರಖರತೆಯಿಂದಾಗಿ ಈ ಗ್ರಹವನ್ನು ಗುರುತಿಸುವುದು ಕಷ್ಟ.ಹಾಗಾದ್ದರಿಂದಲೇ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯಾಸ್ತದ ನಂತರ ಕೆಲವೇ ನಿಮಿಷಗಳ ಕಾಲ, ಅದೂ ಪೂರ್ವ ಪಶ್ಚಿಮ ದಿಗಂತಗಳಲ್ಲಿ ಮಾತ್ರ ಬುಧನ ವೀಕ್ಷಣೆ ಸಾಧ್ಯ. ಕೆಲವಾರು ಬಾರಿ ಬುಧಗ್ರಹ ಸೂರ್ಯನ ಮುಖದ ಅಡ್ಡ ಹಾದುಹೋಗುವ ದೃಶ್ಯ (ಚಿತ್ರ-3) ಅದೊಂದು ಅದ್ಭುತ ಚಿತ್ರ.ಬುಧಗ್ರಹದ ಈವರೆಗಿನ ಚಿತ್ರಗಳು ಮಾಹಿತಿಗಳು ಎಲ್ಲಕ್ಕೂ ದೂರದರ್ಶಕಗಳು ಮತ್ತು ಹಳೆಯ ತಂತ್ರಜ್ಞಾನದ ಮ್ಯಾರಿನರ್-10 ವ್ಯೋಮನೌಕೆ-ಇವೇ ಆಧಾರ. ಈಗ ಬುಧನ ಸಾನ್ನಿಧ್ಯದಲ್ಲಿರುವ ಭೂದೂತ ಅತ್ಯಾಧುನಿಕ ನಿರ್ಮಿತಿಯ ಹಲವಾರು ಸಾಧನಗಳನ್ನು ಧರಿಸಿದೆ: “ಕ್ಯಾಮರಾಗಳು, ಲೇಸರ್ ಆಲ್ಟಿಮೀಟರ್, ಅಲ್ಟ್ರಾವಯೊಲೆಟ್ ಸ್ಪೆಕ್ಟ್ರಾಮೀಟರ್, ಎಕ್ಸ್‌ರೇ ಮತ್ತು ಗಾಮಾರೇ ಡಿಟೆಕ್ಟರ್‌ಗಳು ಇತ್ಯಾದಿ”. 1093 ಕಿಲೋ ತೂಕದ `ಮೆಸೆಂಜರ್~ ಬುಧಗ್ರಹದ ಅತ್ಯಂತ ಸ್ಪಷ್ಟ, ಉತ್ಕೃಷ್ಟ, ವಿಸ್ತೃತ ಮಾಹಿತಿಗಳನ್ನು ಒದಗಿಸಲಿದೆ.ಬುಧಗ್ರಹದ ಪರಮ ಸೋಜಿಗ ಒಂದಿದೆ. ಅದು ಒಮ್ಮೆ ಸೂರ್ಯನನ್ನು ಪರಿಭ್ರಮಿಸುವ ವೇಳೆಗೆ ತನ್ನ ಸುತ್ತ ಅರ್ಧವಷ್ಟೇ ಸುತ್ತಿರುತ್ತದೆ. ಎಂದರೆ `ಬುಧನ ಒಂದು ದಿನ ಅದರ ಎರಡು ವರ್ಷಗಳಿಗೆ ಸಮ!~ ಎಂಥ ಸೋಜಿಗ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.