ಸೋಮವಾರ, ಜನವರಿ 20, 2020
22 °C
ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ

ಬೆದರಿಕೆ ಕರೆ: ರಕ್ಷಣೆಗೆ ಯುವತಿ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ಗುಲ್ಬರ್ಗ ವಿಶ್ವವಿದ್ಯಾಲ­ಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದಶರಥ ನಾಯಕ ಅವರ ಬೆಂಬಲಿಗರಿಂದ ನನಗೆ ಹಾಗೂ ನನ್ನ ಸಹೋದರನಿಗೆ ಬೆದರಿಕೆ ಕರೆಗಳು ಬರುತ್ತಿವೆ. ಆದ್ದರಿಂದ ನಮಗೆ ರಕ್ಷಣೆ ನೀಡಬೇಕು’ ಎಂದು ಕಿರುಕುಳಕ್ಕೆ ಒಳಗಾದ ಸಂಶೋಧನಾ ವಿದ್ಯಾರ್ಥಿನಿ ಒತ್ತಾಯಿಸಿದ್ದಾರೆ.‘‘ಕೋರ್ಸ್ ವರ್ಕ್ ಪೂರ್ಣಗೊಳಿ­ಸಲು ರೂ. 50 ಸಾವಿರ, ಮೆರಿಟ್ ಫೆಲೋಶಿಪ್ ಕೊಡಿಸಲು ಹಾಗೂ ಮಾರ್ಗದರ್ಶಕರಾಗಿ ಮುಂದುವರಿ­ಲು ರೂ. 50 ಸಾವಿರ ಸೇರಿದಂತೆ ಇದುವರೆಗೆ ನನ್ನಿಂದ ರೂ. 1 ಲಕ್ಷ ಹಣ ಪಡೆದಿದ್ದಾರೆ. ಫೆಲೋಶಿಪ್ ನವೀಕರಣಕ್ಕೆ 2013ರ ಸೆಪ್ಟೆಂಬರ್ 13ರಂದು ಮತ್ತೆ ರೂ. 8 ಸಾವಿರ ಕೊಡುವಂತೆ ಒತ್ತಾಯಿಸಿದರು. ಹಣ ಕೊಡಲು ಒಪ್ಪದೇ ಹೋದ ಬಳಿಕ ವಿಭಾಗದಲ್ಲಿ ಅಶ್ಲೀಲ ದೃಶ್ಯಗಳನ್ನು ತೋರಿಸುತ್ತ ಕಿರುಕುಳ ನೀಡಲು ಆರಂಭಿಸಿದರು. ಆದ್ದರಿಂದ, ಕೂಡಲೇ ಅವರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿ­ಪಡಿಸಬೇಕು. ನನಗೂ ನನ್ನ ಕುಟುಂಬದ ಸದಸ್ಯರಿಗೂ ಸೂಕ್ತ ರಕ್ಷಣೆ ನೀಡಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿ­ಯಲ್ಲಿ ಮನವಿ ಮಾಡಿದರು.‘ಕುಲಪತಿ ಈ.ಟಿ.ಪುಟ್ಟಯ್ಯ ನನ್ನೊಂದಿಗೆ ಮಾತನಾಡಿ, ಮಾಧ್ಯಮ­ಗಳ ಮುಂದೆ ಮಾತನಾಡಿದರೆ ವಿ.ವಿ ಹಾಗೂ ನಿನ್ನ ಮರ್ಯಾದೆ ಹೋಗು­ತ್ತದೆ. ಈಗ 371 (ಜೆ) ಕಲಂ ತಿದ್ದು­ಪಡಿಗೆ ರಾಷ್ಟ್ರಪತಿ ಅಂಕಿತ ಹಾಕಿರುವು­ದರಿಂದ ಸಂಶೋಧನೆ ಪೂರ್ಣಗೊಳಿಸಿದ ಬಳಿಕ ಸುಲಭವಾಗಿ ಕೆಲಸ ಸಿಗುತ್ತದೆ. ಆದ್ದರಿಂದ, ದೂರು ವಾಪಸು ಪಡೆದು­ಕೋ ಎಂದು ಸಲಹೆ ನೀಡಿದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪಿ.­ಕೆ.­ಖಂಡೋಬಾ ಕರೆ ಮಾಡಿ ನೀನು ಕೊಟ್ಟಿ­ರುವ ರೂ. 1 ಲಕ್ಷ ಜತೆಗೆ ಇನ್ನೂ ರೂ. 50 ಸಾವಿರ ಸೇರಿಸಿ ಮರಳಿ ಕೊಡಿಸು­ತ್ತೇನೆ. ಆದರೆ, ಮೊದಲು ದೂರನ್ನು ವಾಪಸು ಪಡೆಯಬೇಕು ಎಂದು ಒತ್ತಡ ಹೇರಿ­ದರು. ಇದರಿಂದಾಗಿ ಮಾನ­ಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ಆದ್ದ­ರಿಂದ ನನಗೆ ನ್ಯಾಯ ದೊರಕಿಸಿಕೊಡ­ಬೇಕು’ ಎಂದು ಪೊಲೀಸರನ್ನು ಆಗ್ರಹಿಸಿದರು.ವೀರಶೈವ ಯುವ ಬಳಗದ ಅಧ್ಯಕ್ಷ ಮಲ್ಲಿಕಾರ್ಜುನ ಆರ್.ಗರೂರ ಮಾತನಾಡಿ, ‘ಅರ್ಥಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳದ ಪ್ರಮುಖ ಆರೋಪಿ, ಪ್ರಾಧ್ಯಾಪಕ ದಶರಥ ನಾಯಕ ಅವರನ್ನು ಕೂಡಲೇ ಬಂಧಿಸಬೇಕು. ಕುಲಪತಿ ಈ.ಟಿ.ಪುಟ್ಟಯ್ಯ ಹಾಗೂ ಇತರರು ಸೇರಿ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ಇವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)