ಭಾನುವಾರ, ಏಪ್ರಿಲ್ 18, 2021
33 °C

ಬೆದರಿಕೆ ಸಂದೇಶ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆದರಿಕೆ ಸಂದೇಶ: ಮೂವರ ಬಂಧನ

ಈಶಾನ್ಯ ರಾಜ್ಯಗಳ ನಾಗರಿಕರಲ್ಲಿ ಆತಂಕ ಹುಟ್ಟಿಸುವ ಎಸ್‌ಎಂಎಸ್‌ಗಳ ರವಾನೆಬೆಂಗಳೂರು:
ಸಾಮಾಜಿಕ ಜಾಲ ತಾಣಗಳು ಮತ್ತು ಮೊಬೈಲ್ ಮೂಲಕ ಎರಡು ಸಾವಿರಕ್ಕೂ ಹೆಚ್ಚು ಪ್ರಚೋದನಾಕಾರಿ ಹಾಗೂ ಪ್ರಾಣ ಭೀತಿ ಉಂಟಾಗುವಂತಹ ಸಂದೇಶ ಕಳುಹಿಸಿ ಈಶಾನ್ಯ ರಾಜ್ಯಗಳ ನಾಗರಿಕರಲ್ಲಿ ಆತಂಕ ಸೃಷ್ಟಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಪೊಲೀಸರು ಶನಿವಾರ ಬಂಧಿಸಿದ್ದಾರೆ.ಬೆಂಗಳೂರಿನ ಬಿಟಿಎಂ ಲೇಔಟ್ ಒಂದನೇ ಹಂತದ ಅನೀಸ್ ಪಾಷಾ (26), ಆತನ ಅಣ್ಣ ತನೀಸ್ ನವಾಜ್ (32) ಮತ್ತು ಕೋರಮಂಗಲ ಬಳಿಯ ಟೀಚರ್ಸ್‌ ಕಾಲೊನಿಯ ಸಾಹಿದ್ ಸಲ್ಮಾನ್ ಖಾನ್ (22) ಅವರನ್ನು ಬಂಧಿಸಲಾಗಿದೆ.ಇವರ ವಿರುದ್ಧ ಧರ್ಮ, ಸ್ಥಳ, ವರ್ಣ, ಭಾಷೆಯ ಆಧಾರದಲ್ಲಿ ಕೋಮುಗಳ ನಡುವೆ ದ್ವೇಷ ಮೂಡಿಸಿದ ಕಾರಣಕ್ಕೆ (ಭಾರತ ದಂಡ ಸಂಹಿತೆ 153ಎ) ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ (ಭಾರತ ದಂಡ ಸಂಹಿತೆ 295ಎ) ಆರೋಪದ ಮೇಲೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬಂಧಿತರ ವಿರುದ್ಧ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಈ ಬಗ್ಗೆ ನಗರದಲ್ಲಿ ಶನಿವಾರ ಮಾಹಿತಿ ನೀಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಹಂಗಾಮಿ) ಲಾಲ್‌ರೋಕುಮ್ ಪಚಾವ್, `ಹಲವು ದಿನಗಳಿಂದ ರಾಜ್ಯದಲ್ಲಿ ವದಂತಿಗಳು ಹರಿದಾಡುತ್ತಿರುವ ಪರಿಣಾಮ ಈಶಾನ್ಯ ರಾಜ್ಯಗಳ ನಾಗರಿಕರು ಆತಂಕಗೊಂಡಿದ್ದಾರೆ.ಪ್ರಚೋದನಾಕಾರಿ ಸಂದೇಶ ಮತ್ತು ವಿಡಿಯೊ ತುಣುಕುಗಳನ್ನು ರವಾನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದರಿಂದ ಈಶಾನ್ಯ ರಾಜ್ಯದ ನಾಗರಿಕರಲ್ಲಿ ಆತಂಕ ಕಡಿಮೆಯಾಗಿದೆ. ತಮ್ಮ ರಾಜ್ಯಗಳಿಗೆ ಹಿಂದಿರುಗುತ್ತಿದ್ದ ನಾಗರಿಕರ ಸಂಖ್ಯೆ ಕಡಿಮೆಯಾಗಿದ್ದು, ಶನಿವಾರ 300 ಮಂದಿ ಮಾತ್ರ ಬೆಂಗಳೂರಿನಿಂದ ಹೋಗಿದ್ದಾರೆ~ ಎಂದರು.ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, `ಆರೋಪಿ ಹನೀಸ್ ಕೋರಮಂಗಲದ ಏಳನೇ ಹಂತದಲ್ಲಿ ನ್ಯೂ ಫೆನೋಟೆಕ್ ಎಂಬ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದಾನೆ. ಸಹಚರರ ಜತೆ ಸೇರಿ ಈಶಾನ್ಯ ರಾಜ್ಯಗಳ ನಾಗರಿಕರಿಗೆ ಸಂದೇಶ ಕಳುಹಿಸುವ ಮೂಲಕ ಆತಂಕ ಸೃಷ್ಟಿಸಿದ್ದ. ಬಂಧಿತರಿಂದ 4 ಮೊಬೈಲ್, 1 ಲ್ಯಾಪ್‌ಟಾಪ್, 2 ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

 

ಬಿಗಿ ಬಂದೋಬಸ್ತ್: ಬೆಂಗಳೂರಿನಲ್ಲಿ ನೆಲೆಸಿರುವ ಈಶಾನ್ಯ ರಾಜ್ಯಗಳ ನಾಗರಿಕರ ರಕ್ಷಣೆ ದೃಷ್ಟಿಯಿಂದ ನಗರದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್‌ಎಎಫ್) ಮೂರು ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಆರ್‌ಎಎಫ್ ಸಿಬ್ಬಂದಿ ನಗರದ ಆಡುಗೋಡಿ, ಅಶೋಕನಗರ ಮತ್ತಿತರ ಠಾಣೆಗಳ ವ್ಯಾಪ್ತಿಯಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.ಬೆಂಗಳೂರಿನ 18 ಸಾವಿರ ಪೊಲೀಸರು ಸೇರಿದಂತೆ ಒಂದೂವರೆ ಸಾವಿರ ತರಬೇತಿ ನಿರತ ಪೊಲೀಸರು, ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ), ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಸೇರಿದಂತೆ ಸುಮಾರು 21 ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಈ ನಡುವೆ, ನಗರದಿಂದ ವಲಸೆ ಹೋಗುತ್ತಿರುವ ಈಶಾನ್ಯ ರಾಜ್ಯಗಳ ನಾಗರಿಕರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ. ಯಶವಂತಪುರದಿಂದ ಕೋಲ್ಕತ್ತಕ್ಕೆ ತೆರಳುವ `ಹೌರಾ ಎಕ್ಸ್‌ಪ್ರೆಸ್~ ರೈಲಿನಲ್ಲಿ ಸುಮಾರು 800 ಮಂದಿ ಈಶಾನ್ಯ ರಾಜ್ಯಗಳಿಗೆ ತೆರಳಿದರು.ಮೂರು ದಿನಗಳಲ್ಲಿ (ಬುಧವಾರದಿಂದ ಶುಕ್ರವಾರದವರೆಗೆ) ಮೂರು ದೈನಿಕ ರೈಲುಗಳು ಹಾಗೂ ಎಂಟು ವಿಶೇಷ ರೈಲುಗಳ ಮೂಲಕ 26,184 ಮಂದಿ ನಗರವನ್ನು ತ್ಯಜಿಸಿದ್ದರು. ಆದರೆ, ನಗರ ರೈಲು ನಿಲ್ದಾಣದಲ್ಲಿ ಶನಿವಾರ ಭಾರಿ ಜನದಟ್ಟಣೆ ಕಂಡುಬರಲಿಲ್ಲ. ಕೇಂದ್ರ ರೈಲು ನಿಲ್ದಾಣದಿಂದ ಬುಧವಾರದ ವರೆಗೆ ಗುವಾಹಟಿಗೆ ರೈಲಿನ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಯಶವಂತಪುರದ ಮೂಲಕ ಕಳುಹಿಸಿಕೊಡಲಾಯಿತು.

 

ಸಂದೇಶ ಮೂಲ ಪಾಕ್

ನವದೆಹಲಿ (ಪಿಟಿಐ): ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ನೆಲಸಿರುವ ಈಶಾನ್ಯ ಭಾರತದ ಜನತೆಯಲ್ಲಿ ಭೀತಿ ಮೂಡಿಸಿದ ಎಸ್‌ಎಂಎಸ್ ಸಂದೇಶಗಳಲ್ಲಿ ಬಹುತೇಕ ಪಾಕಿಸ್ತಾನ ಮೂಲದಿಂದ ಬಂದಿವೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ    ಆರ್. ಕೆ. ಸಿಂಗ್ ತಿಳಿಸಿದ್ದಾರೆ.ಒಟ್ಟು 76 ವೆಬ್‌ಸೈಟ್‌ಗಳನ್ನು ಗುರುತಿಸಲಾಗಿದ್ದು, ಬಹುತೇಕ ಸಚಿತ್ರ ಸಂದೇಶಗಳು ಪಾಕಿಸ್ತಾನದಲ್ಲಿ ಅಪ್‌ಲೋಡ್ ಆಗಿವೆ ಎಂದು ಸಿಂಗ್ ಹೇಳಿದರು.ಪಾಕಿಸ್ತಾನ ಮೂಲದ ವೆಬ್‌ಸೈಟ್‌ನಿಂದ ಈ ಸಂದೇಶಗಳು ಎಲ್ಲೆಡೆ ಹರಡಿವೆ ಎಂಬ ವಿಚಾರ ಎಲ್ಲರಿಗೂ ಗೊತ್ತಾಗಬೇಕು ಎಂಬುದು ನಮ್ಮ ಉದ್ದೇಶ. ಆದ್ದರಿಂದ ಇದನ್ನು ಬಹಿರಂಗಪಡಿಸುತ್ತಿದ್ದೇವೆ ಎಂದು ಗೃಹ ಕಾರ್ಯದರ್ಶಿ ಹೇಳಿದರು.ಈ ಸಂದೇಶಗಳು ಮತ್ತಷ್ಟು ಪ್ರಸಾರವಾಗಬಾರದು ಎಂಬ ಉದ್ದೇಶದಿಂದ ಎಲ್ಲಾ 76 ವೆಬ್‌ಸೈಟ್‌ಗಳ ಕಾರ್ಯನಿರ್ವಹಣೆಯನ್ನು ತಡೆಹಿಡಿಯಲಾಗಿದ್ದು, 15 ದಿನಗಳವರೆಗೆ ಸಮೂಹ ಎಸ್‌ಎಂಎಸ್ ಮತ್ತು ಸಚಿತ್ರ ಸಂದೆಶ ರವಾನೆಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು.ಜಗತ್ತಿನ ವಿವಿಧೆಡೆ ಸಂಭವಿಸಿದ ಚಂಡಮಾರುತ ಮತ್ತು ಭೂಕಂಪನದ ಸಾವುಗಳ ಚಿತ್ರವನ್ನು ತೋರಿಸಿ ಅಸ್ಸಾಂನಲ್ಲಿ ಸಂಭವಿಸಿದ ಸಾವು ಎಂಬ ಭಾವನೆ ಬರುವಂತೆ ಸಚಿತ್ರ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

 

 16 ಆರೋಪಿಗಳ ಸೆರೆ

ಈಶಾನ್ಯ ರಾಜ್ಯಗಳ ನಾಗರಿಕರ ಮೇಲೆ ನಗರದಲ್ಲಿ ನಡೆದಿರುವ ಹಲ್ಲೆ  ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 16 ಆರೋಪಿಗಳನ್ನು ಬಂಧಿಸಿದ್ದಾರೆ.   ಹಲ್ಲೆ ಸಂಬಂಧ ಅಶೋಕನಗರ, ಜೆ.ಪಿ. ನಗರ, ಮೈಕೊಲೇಔಟ್, ವಿಲ್ಸನ್‌ಗಾರ್ಡನ್, ಕೋರಮಂಗಲ, ಜಗಜೀವನ್‌ರಾಂನಗರ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 15 ಪ್ರಕರಣಗಳು ದಾಖಲಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.