ವಾತಾವರಣದಲ್ಲಿ ಏರುತ್ತಿರುವ ಚಳಿ. ಜೊತೆಗೆ ಒಂದೇ ಸಮನೆ ಗಗನಮುಖಿಯಾಗಿರುವ ಪೆಟ್ರೋಲ್, ತರಕಾರಿ ಮತ್ತು ಆಹಾರಧಾನ್ಯದ ಬೆಲೆಗಳು ಜನಸಾಮಾನ್ಯರು ನಡುಗುವಂತೆ ಮಾಡಿವೆ. ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಭಾರತದಲ್ಲಿ ಹಣದುಬ್ಬರದ ಬಗ್ಗೆ ಮತ್ತೆ ಚಿಂತನೆ ಶುರುವಾಗಿದೆ.

ಈ ದರ ಏರಿಕೆಯ ಸರಣಿ ಶುರುವಾಗಿ ಆಗಲೇ 3-4 ವರ್ಷಗಳು ಕಳೆದಿವೆ. ಅದಿನ್ನೂ ಒಂದೇ ಸಮನೆ ಆಟ ಆಡಿಸುತ್ತಿದ್ದು ಓಟದ ಕುದುರೆಗೆ ಕಡಿವಾಣ ಹಾಕುವ ಉಪಾಯ ಹೊಳೆಯದೇ ಸರ್ಕಾರ ಕೂಡಾ ಪರಿತಪಿಸುತ್ತ ಕೂತಿದೆ. ರಫ್ತು ನಿಷೇಧದ ಪಟ್ಟಿಗೆ ಅವಶ್ಯಕ ವಸ್ತುಗಳು ಸೇರ್ಪಡೆಗೊಳ್ಳುತ್ತಲೇ ಇವೆ. ವಿರೋಧ ಪಕ್ಷಗಳು ಪ್ರತಿಭಟನೆಗಳನ್ನು ಮಾಡುವ ಕಡೆ ಲಕ್ಷ್ಯ ವಹಿಸಿದ್ದರೆ ಮಧ್ಯೆ ಪಡಿಪಾಟಲು ಪಡುತ್ತಿರುವವರು ಕೆಳ ಮಧ್ಯಮ ಹಾಗೂ ಕೆಳ ವರ್ಗದ ಜನ.

ಈ ತೈಲ ದರ ಏರಿಕೆ ಭಾರತಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಜಾಗತಿಕವಾಗಿ ಕಚ್ಚಾತೈಲದ ಬೆಲೆ ಏರಿದಾಗಲೆಲ್ಲ ಅದು 120 ಕೋಟಿ ಜನರ ಭಾರ ಹೊತ್ತಿರುವ ಭಾರತದ ಮೇಲೆ ಭೀಮ ಭಾರ ಹೊರಿಸುವುದು ಸಾಮಾನ್ಯ. ಇದೀಗ ಅಂತರ್‌ರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಕಳೆದ ಎರಡು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಬ್ಯಾರೆಲ್‌ಗೆ 90 ಡಾಲರ್. ಹೀಗಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ (ಎಲ್‌ಪಿಜಿ) ಬೆಲೆ ಏರಿಕೆ ಅನಿವಾರ್ಯ ಎಂದು ಸರ್ಕಾರ ಹೇಳಿಕೊಂಡರೂ 41 ಕೋಟಿ ಮಂದಿಯ ನಿತ್ಯದ ಆದಾಯ ಸರಾಸರಿ ್ಙ 50 ಇರುವ ದೇಶದಲ್ಲಿ ಇದರ ಹೊಡೆತ ತಾಳಿಕೊಳ್ಳುವವರು ಬೆರಳೆಣಿಕೆಯ ಮಂದಿ.

ಪೆಟ್ರೋಲ್ ದರ ಏರಿಸದಿದ್ದರೆ ಸರ್ಕಾರಕ್ಕೆ ಸಬ್ಸಿಡಿಯಿಂದಾಗಿ ಮೂರು ತಿಂಗಳಿಗೆ ಬೀಳುವ ಹೊರೆ 5000 ಕೋಟಿ ರೂಪಾಯಿ.‘ಯಾರದ್ದೋ ಕಾರಿಗೆ ಬಳಸುವ ಪೆಟ್ರೋಲ್ ಮೇಲೆ ಸರ್ಕಾರ ಯಾಕೆ ಇಷ್ಟೊಂದು ಹಣ ತೆರಬೇಕು?’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿದೇವ್ರಾ ಪ್ರಶ್ನಿಸಿರುವುದರಲ್ಲೂ ಹುರುಳಿದೆ. ದರ ಏರಿಕೆಯಿಂದ ಸರ್ಕಾರ ವರ್ಷಕ್ಕೆ 25.6 ಶತಕೋಟಿ ಡಾಲರ್ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೊದಲಾದ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸರ್ಕಾರ ನೀಡುವ ರಿಯಾಯ್ತಿಯಿಂದಾಗಿ ಈ ಹೊರೆ ಬೀಳುತ್ತದೆ.

ಈ ದರ ಏರಿಕೆ ವಾಹನ ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರಬಲ್ಲದು? ವಾಹನಗಳ ಮಾರಾಟ ಮುಂದಿನ ವರ್ಷಗಳಲ್ಲಿ ಖಂಡಿತವಾಗಿಯೂ ಹಿನ್ನಡೆ ಸಾಧಿಸಲಿದೆ ಎನ್ನುತ್ತಾರೆ ಅರ್ಥ ತಜ್ಞರು. ಒಂದು ವರದಿಯ ಪ್ರಕಾರ ಇದೇ ರೀತಿ ತೈಲ ಬೆಲೆ ಏರುತ್ತ ಹೋದರೆ ದ್ವಿಚಕ್ರ ವಾಹನಗಳ ಮಾರಾಟ ಶೇ. 20ರಷ್ಟು ಕುಸಿಯಲಿದ್ದು, ಪ್ರಯಾಣಿಕರ ವಾಹನಗಳ ಮಾರಾಟಕ್ಕೂ ಸಾಕಷ್ಟು ಹೊಡೆತ ಬೀಳಲಿದೆ. ಆದರೆ ಸರಕು ಸಾಗಣೆ ವಾಹನಗಳ ಮೇಲೆ ಅಷ್ಟೊಂದು ಪರಿಣಾಮ ಬೀರದು ಎನ್ನುತ್ತದೆ ವರದಿ. ಆದರೆ ಇದು ತಕ್ಷಣದ ಪರಿಣಾಮವಲ್ಲ. ಒಂದೆರಡು ತಿಂಗಳಲ್ಲಿ ಮಾರಾಟದಲ್ಲಿ ಶೇ 5-10ರಷ್ಟು ಕುಸಿತ ಕಾಣಿಸಿಕೊಳ್ಳಬಹುದು.

ಅಧಿಕ ಹಣದುಬ್ಬರದ ಒತ್ತಡದಿಂದ ತೊಂದರೆ ಅನುಭವಿಸುತ್ತಿರುವ ಸಾಮಾನ್ಯ ನಾಗರಿಕರಿಗೆ ಪೆಟ್ರೋಲ್ ದರದಲ್ಲಿ ಶೇ. 5-6ಷ್ಟು ಏರಿಕೆಯಾದರೂ ತೀವ್ರ ತೊಂದರೆಯಾಗಲಿದೆ. ದ್ವಿಚಕ್ರ ವಾಹನದಿಂದ ನಾಲ್ಕು ಚಕ್ರಗಳ ಕಡೆ ಮುಖ ಮಾಡಿದ್ದ ಮಧ್ಯಮ ವರ್ಗದವರು ಕೈ ಕಟ್ಟಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ತಲೆದೋರಬಹುದು.

ಇದು ವಾಹನ ಉದ್ಯಮದ ಮೇಲಂತೂ ವಿಪರೀತ ಪರಿಣಾಮ ಬೀರಲಿದೆ. ಕಳೆದ ಒಂದೆರಡು ವರ್ಷಗಳಲ್ಲಿ ತಲೆದೋರಿದ್ದ ಆರ್ಥಿಕ ಹಿಂಜರಿತದಿಂದ ತತ್ತರಿಸಿದ್ದ ಉದ್ಯಮ ಈಗ ತಾನೇ ಚೇತರಿಸಿಕೊಂಡಿತ್ತು. ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಫೋರ್ಡ್ ಅಥವಾ ಜನರಲ್ ಮೋಟಾರ್ಸ್ ಕಳೆದ ಜುಲೈನಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಕಾರುಗಳ ಮಾರಾಟದಲ್ಲಿ ಸರಾಸರಿ ಶೇ 25ರಷ್ಟು ಏರಿಕೆ ಕಂಡು ಬಂದಿತ್ತು. ಟಾಟಾ ಮೋಟಾರ್ಸ್ ಅಂತೂ ಶೇ 62ರಷ್ಟು ಬೆಳವಣಿಗೆಯನ್ನು ಘೋಷಿಸಿತ್ತು. ದೇಶದಲ್ಲಿ ಸದ್ಯ ಅಂದಾಜು 5.5 ಕೋಟಿ ವಾಹನಗಳಿದ್ದು ನಿತ್ಯ 25 ಲಕ್ಷ ವಾಹನಗಳು ರಸ್ತೆಗಿಳಿಯುತ್ತಿವೆ. ಆದರೆ ತೈಲದ ಬೆಲೆಯ ಮೇಲೆ ನಿಯಂತ್ರಣ ತೆಗೆದು ಹಾಕಿದ ನಂತರ ಈ ಕೆಲವು ತಿಂಗಳಲ್ಲಿ ಗರಿಷ್ಠ ಪರಿಣಾಮ ಕಂಡು ಬಂದಿದೆ.

ಗ್ರಾಹಕರು ಪೆಟ್ರೋಲ್ ಬದಲು ಡೀಸೆಲ್ ಕಾರುಗಳ ಬಗ್ಗೆ ಒಲವು ತೋರಿಸಬಹುದು. ಇನ್ನುಳಿದ ಪರಿಣಾಮಗಳೆಂದರೆ ಕಾರ್ಮಿಕರು ವೇತನ ಹೆಚ್ಚಳ ಬೇಡಿಕೆಗೆ ಮುಂದಾಗಬಹುದು. ಇದರಿಂದ ಹಣದುಬ್ಬರ ಇನ್ನಷ್ಟು ಜಾಸ್ತಿಯಾಗುತ್ತದೆ. ಬಸ್ ಪ್ರಯಾಣ ಇನ್ನಷ್ಟು ತುಟ್ಟಿಯಾಗಬಹುದು.

ಏರಿದ ಈರುಳ್ಳಿ ಬೆಲೆ
ಇನ್ನು ಈರುಳ್ಳಿ ಬೆಲೆ. ಈ ವ್ಯಾಪಕವಾಗಿ ಬಳಸಲಾಗುತ್ತಿರುವ ತರಕಾರಿ ಬೆಲೆ ಏರಿದಾಗಲೆಲ್ಲ ಆಡಳಿತ ಪಕ್ಷಕ್ಕೆ ನಡುಕ. ಈಗ ಆಗಿದ್ದೂ ಹಾಗೇ. 2ಜಿ ತರಂಗಾಂತರ ಹಗರಣದ ಮಧ್ಯೆ ಎರ್ರಾಬಿರ್ರಿ ಏರಿದ ಈರುಳ್ಳಿ ಬೆಲೆ ದೆಹಲಿಯಲ್ಲಿ ಕಂಪನ ಸೃಷ್ಟಿಸಿದೆ. ಈರುಳ್ಳಿ ಬೆಲೆ ಏರಿದಾಗ ಆಹಾರ ಬೆಲೆ ಸೂಚ್ಯಂಕ ಶೇ. 12.13 ಮುಟ್ಟಿತ್ತು. 40- 50- 60 -70 ರೂಪಾಯಿ ಎಂದು ಏರಿದ ಈರುಳ್ಳಿ ಬೆಲೆಯಿಂದಾಗಿ ಕೇಂದ್ರ ಸರ್ಕಾರ ಈ ತರಕಾರಿಯ ರಫ್ತನ್ನು ನಿಷೇಧಿಸಿದರೂ ಮಾರುಕಟ್ಟೆ ಬೆಲೆ ಇನ್ನೂ ಸ್ಥಿರವಾಗಿಲ್ಲ. ಬೆಲೆ ಏರಿಕೆ ಶೇ. 350ರಷ್ಟು. ಜೊತೆ ಬೆಳ್ಳುಳ್ಳಿ ಕೂಡಾ ತಾನೇನು ಎಂದು ಕೆಜಿಗೆ 300 ರೂಪಾಯಿ ಮುಟ್ಟಿ ದಾಖಲೆ ನಿರ್ಮಿಸಿತು. ಇದೆಲ್ಲ ಹಳವಂಡಗಳ ಮಧ್ಯೆ ಟೊಮ್ಯಾಟೊ ದರವೂ ಒಮ್ಮೆಲೇ ಏರಿದ್ದು ಜನಸಾಮಾನ್ಯ ಏನು ಊಟ ಮಾಡಬೇಕು ಎಂದು ಯೋಚಿಸುವಂತಾಗಿದೆ.

ಸಾಮಾನ್ಯವಾಗಿ ಈ ಆಹಾರಧಾನ್ಯ, ತರಕಾರಿಗಳ ಬೆಲೆ ಏರುವುದು ಹಲವಾರು ಕಾರಣಗಳಿಂದ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುವುದು, ಉತ್ಪಾದನೆಯಲ್ಲಿ ಕುಸಿತ, ನೈಸರ್ಗಿಕ ವಿಕೋಪ, ಕಳ್ಳಸಾಗಣೆ, ಕಾಳಸಂತೆ... ಹೀಗೆ ನೂರೆಂಟು ಕಾರಣಗಳಿವೆ. ಪೂರೈಕೆಯಲ್ಲಿ ಕೊರತೆ ಕಂಡು ಬಂದರೆ ಬೆಲೆ ಏರಿಕೆ ತಾತ್ಕಾಲಿಕ. ಆದರೆ ಹಣದುಬ್ಬರದಿಂದ ಈ ಬೆಲೆಯೇರಿಕೆ ಉಂಟಾದರೆ ಅದನ್ನು ನಿಯಂತ್ರಿಸುವುದು ಕಠಿಣ.

ಈಗ ಸರ್ಕಾರವನ್ನು ನಿಯಂತ್ರಿಸುತ್ತಿರುವವರು ಮಾರುಕಟ್ಟೆ ಏರುಪೇರು ಮಾಡುವ ದಲ್ಲಾಳಿಗಳು, ಸಟ್ಟಾಬಾಜಿ, ಕಾರ್ಪೊರೇಟ್ ಜೂಜುಕೋರರು ಎಂಬ ಟೀಕೆಯಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಉಂಟಾಗಿರುವುದು ಎಂಸಿಎಕ್ಸ್‌ನಂಥ ವಸ್ತುಗಳ ವಿನಿಮಯದಿಂದಾಗಿ. ಮಾರುಕಟ್ಟೆ ಕೆಲವೇ ಗಂಟೆಗಳಲ್ಲಿ ಇಂಥವರಿಂದಾಗಿ ಅಲ್ಲೋಲಕಲ್ಲೋಲವಾಗುವುದು ಕಷ್ಟವೇನಲ್ಲ. ಬಯಸಿದ ತಕ್ಷಣ ಪೂರೈಕೆಯಲ್ಲಿ ಕೃತಕ ಕೊರತೆ ಉಂಟು ಮಾಡುವ ಶಕ್ತಿ ಇಂಥವರಿಗಿದೆ. ಉತ್ಪಾದನೆ, ವಿತರಣೆ, ಮುಂಗಾರು ಮೊದಲಾದ ಯಾವುದೇ ವಿಷಯಗಳೂ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ.

ಇದನ್ನೆಲ್ಲ ತಡೆಯಲು ಸಾಧ್ಯವಿಲ್ಲವೇ? ದರ ಏರಿದಾಗ ರಫ್ತು ನಿಷೇಧಿಸಿ ತಾತ್ಕಾಲಿಕವಾಗಿ ನಿಯಂತ್ರಿಸುವ ಸರ್ಕಾರ, ಶಾಶ್ವತ ಕ್ರಮಗಳಿಗೆ ಯಾಕೆ ಮುಂದಾಗುವುದಿಲ್ಲ? ಏರಿಕೆಯಾಗಿ ಒಂದೆರಡು ದಿನಗಳಲ್ಲೇ ಸಾಕಷ್ಟು ನಷ್ಟ ಸಂಭವಿಸಿಬಿಡುತ್ತದೆ.ನಂತರ ಈ ಕಡೆ ಸರ್ಕಾರ ಕಣ್ಣು ಹಾಯಿಸುತ್ತದಷ್ಟೆ. ಮಾಫಿಯಾಗಳ ಹಿಡಿತದಿಂದ ಸರ್ಕಾರ ಈಚೆಗೆ ಬಂದು ರೈತರಿಗೇ ನೇರ ಮಾರಾಟದ ಸ್ವಾತಂತ್ರ್ಯ ನೀಡಬೇಕು. ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಣೆ, ಮಾರಾಟಕ್ಕೆ ಯಾವುದೇ ತೆರಿಗೆ ಇರಬಾರದು.

ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಾರಣ ಹಲವಾರು. ದಶಕಗಳಿಂದ ಆಹಾರ ಧಾನ್ಯಗಳ ವಿಷಯದಲ್ಲಿ ಭಾರತ ಸ್ವಾವಲಂಬಿಯಾಗಿತ್ತು.ಹಣ್ಣು- ತರಕಾರಿ, ಹಾಲಿನ ಉತ್ಪಾದನೆಯಲ್ಲಿ ನಾವೇ ಮುಂಚೂಣಿಯಲ್ಲಿ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದೆವು. ಆದರೆ ಈಗ? ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಅಭಿವೃದ್ಧಿ ತೆವಳುತ್ತ ಸಾಗಿದರೆ, ಹಸಿದಿದ್ದ ಹೊಟ್ಟೆಗಳ ಹಾಹಾಕಾರ ಮುಗಿಲು ಮುಟ್ಟಿದೆ. ಪರಿಣಾಮ ಗೋಧಿ, ಖಾದ್ಯ ತೈಲಗಳ ಆಮದು ಪ್ರಮಾಣ ಜಾಸ್ತಿಯಾಗಿದೆ. ಭಾರತ, ಚೀನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಯಾವಾಗ ಹೆಚ್ಚಿನ ಆಮದಿಗೆ ಬೇಡಿಕೆ ಸಲ್ಲಿಸತೊಡಗಿದವೋ ಆಗಲೇ ಜಾಗತಿಕವಾಗಿ ಆಹಾರ ಧಾನ್ಯ ಹಾಗೂ ಎಣ್ಣೆಯ ಬೆಲೆ ಏರತೊಡಗಿದ್ದು ಎನ್ನುತ್ತಾರೆ ವಿಶ್ಲೇಷಕರು. ಅಗ್ಗದ ದರದಲ್ಲಿ ಅಕ್ಕಿ, ಗೋಧಿ, ತೊಗರಿ ಬೇಳೆಯಂತಹ ದಿನಸಿ ಪದಾರ್ಥಗಳು ಇನ್ನು ಸಿಗುವುದು ಕನಸಿನ ಮಾತೇ ಸರಿ.ಹೀಗಿರುವಾಗ ಬಡವರು, ಮಧ್ಯಮ ವರ್ಗದವರು ಇಂತಹ ಇಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವುದೆಂತು?

ವಿಮಾನ ಪ್ರಯಾಣ ದರ
ಇವಿಷ್ಟು ಬಡವರು, ಕೆಳ ಮಧ್ಯಮ ವರ್ಗದವರ ಪಡಿಪಾಟಲಾದರೆ ಮೇಲ್ ಮಧ್ಯಮ ವರ್ಗದವರ ಸುಲಲಿತ ಓಡಾಟಕ್ಕೂ ಕಡಿವಾಣ ಹಾಕಲು ಹೊರಟಿವೆ ವೈಮಾನಿಕ ಸಂಸ್ಥೆಗಳು. ವಿಮಾನ ಪ್ರಯಾಣ ದರವನ್ನು ಶೇ 300ರಷ್ಟು ಹೆಚ್ಚಿಸುವ ಪ್ರಸ್ತಾವವನ್ನು ಈ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಿವೆ. ದೇಶೀಯ ಪ್ರಯಾಣದ ಮೇಲೆ ಹೊರೆ ಬೀಳಲಿದೆ. ಇದೇನಾದರೂ ಜಾರಿಗೆ ಬಂದರೆ ದೆಹಲಿಯಿಂದ ಮುಂಬೈಗೆ ಹೋಗುವ ವೆಚ್ಚಕ್ಕಿಂತ ಕಡಿಮೆ ಖರ್ಚಿನಲ್ಲಿ ದೆಹಲಿಯಿಂದ ಪ್ಯಾರಿಸ್‌ಗೆ ಹೋಗಬಹುದು.

ಆರ್ಥಿಕ ಹಿಂಜರಿತವಿದ್ದಾಗ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಸ್ಥೆಗಳು ಹೊಸ ವಿಮಾನಗಳನ್ನು ಖರೀದಿಸಲು ಹಣವಿಲ್ಲದೇ ಅಂತರ್ ದೇಶೀಯ ವಿಮಾನ ಸಂಚಾರವನ್ನು ಕಡಿಮೆ ಮಾಡಿ ಅಂತರ್‌ರಾಷ್ಟ್ರೀಯ ಸಂಚಾರದ ಕಡೆ ಗಮನ ಹರಿಸಿದ್ದವು.

ಇದಲ್ಲದೇ ಏವಿಯೇಷನ್ ಟರ್ಬೈನ್ ಇಂಧನ ದರ ಹೆಚ್ಚಳದಿಂದಾಗಿ ಹಲವು ವೈಮಾನಿಕ ಸಂಸ್ಥೆಗಳು ನಷ್ಟ ಅನುಭವಿಸಿದ್ದವು. ಏರ್ ಇಂಡಿಯಾ 2009-10ರಲ್ಲಿ 5551 ಕೋಟಿ ರೂಪಾಯಿ, ಕಿಂಗ್‌ಫಿಶರ್ 419 ಕೋಟಿ ರೂಪಾಯಿ ನಷ್ಟ ತೋರಿಸಿದ್ದವು. ಈ ನಷ್ಟವನ್ನು ಸರಿದೂಗಿಸಲು ಸಂಸ್ಥೆಗಳು ಈ ದರ ಏರಿಕೆಗೆ ಕೈ ಹಾಕಿವೆ. ಜೊತೆಗೆ ಬೇಡಿಕೆ- ಪೂರೈಕೆ ನಡುವಿನ ಅಗಾಧ ಅಂತರವನ್ನು ನಗದು ಮಾಡಿಕೊಳ್ಳಲು ಹೊರಟಿವೆ. ಇವೆಲ್ಲವುಗಳ ಮಧ್ಯೆ ಗಾಯದ ಮೇಲೆ ಬರೆ ಎಂಬಂತೆ ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಳ ಡಿಸೆಂಬರ್ 30ಕ್ಕೆ ನಿರ್ಧಾರವಾಗಲಿದೆ. ಡೀಸೆಲ್ ದರ ಏರಿದರೆ ಅದರಿಂದಾಗುವ ಹಣದುಬ್ಬರದ ಪರಿಣಾಮ ಇನ್ನಷ್ಟು ಹೆಚ್ಚು.ಹಣದುಬ್ಬರವನ್ನು ಶೇ. 5.5ಕ್ಕೆ ತರುವ ಯತ್ನವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕೈಬಿಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.