ಮಂಗಳವಾರ, ಮೇ 11, 2021
21 °C

ಬೆಲೆ ಏರಿಕೆ: ಕಾಂಗ್ರೆಸ್ ನಿರ್ಲಕ್ಷ್ಯ-ಸಿಪಿಎಂ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಹಲವು ಯೋಜನೆಗಳನ್ನು ಘೋಷಿಸಿರುವುದು ಜನಸಾಮಾನ್ಯರಲ್ಲಿ ಅನೇಕ ನಿರೀಕ್ಷೆಗಳನ್ನು ಹುಟ್ಟಿಹಾಕಿದೆ. ಈ ಮೂಲಕ ಸರ್ಕಾರ ಜನತೆಗೆ ತಾತ್ಕಾಲಿಕ ಸಿಹಿಯನ್ನು ಉಣಬಡಿಸಿದ್ದು, ಶಾಶ್ವತ ಪರಿಹಾರ ದೊರಕಿಸಿ ಕೊಡಲು ಗಮನ ಹರಿಸಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಎನ್.ನಾಗರಾಜ್ ಮತ್ತು ವಿ.ಜೆ.ಕೆ.ನಾಯರ್ ಅವರು ಆರೋಪಿಸಿದರು.ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಿಸುವ ಬಗ್ಗೆ ಮಾತನಾಡದಿರುವ ಕಾಂಗ್ರೆಸ್, ಅಗ್ಗದ ದರದಲ್ಲಿ ಅಕ್ಕಿ ವಿತರಣೆ ಬಗ್ಗೆ ಘೋಷಣೆ ಮಾಡಿರುವುದು ಪರಸ್ಪರ ವೈರುಧ್ಯದಿಂದ ಕೂಡಿವೆ ಎಂದು ದೂರಿದರು.ಆರೋಗ್ಯ, ಉದ್ಯೋಗ, ಶಿಕ್ಷಣ, ಕೃಷಿ ಕ್ಷೇತ್ರಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಹೆಸರಿನಲ್ಲಿ ಖಾಸಗೀಕರಣಗೊಳಿಸುವ ಅಭಿಪ್ರಾಯ ರಾಜ್ಯಪಾಲರ ಭಾಷಣದಲ್ಲಿ ವ್ಯಕ್ತವಾಗಿದೆ. ಇದು ಸರಿಯಲ್ಲ. ಜಾಗತಿಕ ಬಂಡವಾಳಗಾರರ ಸಮಾವೇಶ, ಅವರಿಗೆ ಭೂಮಿ, ನೀರು ಒದಗಿಸುವ ಬಗ್ಗೆ ಆಸಕ್ತಿ ತೋರುವ ಸರ್ಕಾರ, ಹಲವು ದಶಕಗಳಿಂದ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡುವ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರು ಮತ್ತು ದಲಿತರಿಗೆ ಭೂ ಹಕ್ಕು ನೀಡುವ ಕುರಿತಾಗಿಯೂ ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಪ್ರಸ್ತಾಪ ಇರಲಿಲ್ಲ. ಕೂಡಲೇ ಭೂಮಿ ಹಕ್ಕು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೈದರಾಬಾದ್ ಕರ್ನಾಟಕದ ಹಿಂದುಳಿದಿರುವುದನ್ನು ತೊಡೆದುಹಾಕಲು `ಭೂಸುಧಾರಣೆ' ಕಾನೂನನ್ನು ಸಮರ್ಥವಾಗಿ ಜಾರಿ ಮಾಡಬೇಕು, ಕರಾವಳಿ ಮತ್ತು ಇತರೆಡೆಗಳಲ್ಲಿ ಜನರ ಮೇಲೆ ಹಲ್ಲೆ ಹಾಗೂ ಆಸ್ತಿ ನಾಶಕ್ಕೆ ಕಾರಣರಾದ ಸಂಘ ಪರಿವಾರದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಭ್ರಷ್ಟಾಚಾರ ಹಗರಣಗಳ ಬಗ್ಗೆ, ಗಣಿ ಬಗೆಗಿನ ಲೋಕಾಯುಕ್ತರ ವರದಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತಾಗಿ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು, ಎಪಿಎಲ್, ಬಿಪಿಎಲ್ ಎಂಬ ಭೇದ ಮಾಡದೆ ಸಾರ್ವತ್ರಿಕ ಪಡಿತರ ಪದ್ಧತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.