ಮಂಗಳವಾರ, ಮಾರ್ಚ್ 21, 2023
20 °C

ಬೆಳಕು ಮುಚ್ಚುವ ತೂತುಚೀಲ !

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಬೆಳಕು ಮುಚ್ಚುವ ತೂತುಚೀಲ !

ಗೋಣಿಚೀಲದ ತೂತುಗಳನ್ನು ಬಣ್ಣದ ಬಟ್ಟೆಗಳಿಂದ ಮುಚ್ಚಿ, ಅದನ್ನು ಶಿವರಾಜ್‌ಕುಮಾರ್ ಮೇಲೆ ಹಾಕಿ, ಪೀತಾಂಬರವನ್ನು ತೊಡಿಸಿದ್ದೇನೆ ಎಂದು ನಿರ್ದೇಶಕ ಆರ್.ಚಂದ್ರು ಭ್ರಮಿಸಿರುವ ಚಿತ್ರ ‘ಮೈಲಾರಿ’. ವಿವಿಧ ಪದರಗಳ ಫ್ಯಾಷ್‌ಬ್ಯಾಕ್‌ನಲ್ಲಿ ಚಿತ್ರಕಥೆ ನಿರೂಪಿಸುವ ನಿರ್ದೇಶಕರಿಗೆ ಎಲ್ಲಾ ದೃಶ್ಯಗಳನ್ನು ಭದ್ರವಾದ ನೇಯ್ಗೆಯಲ್ಲಿ ಕಟ್ಟಿಹಾಕುವುದು ಸಾಧ್ಯವಾಗಿಲ್ಲ. ಪಾತ್ರಗಳ ವಯಸ್ಸಿನ ವಿಷಯದಲ್ಲಂತೂ ಅವರದ್ದು ದಿವ್ಯವಾದ ಅಜ್ಞಾನ.ಉದಾಹರಣೆಗೆ-

1.ಡಿಗ್ರಿಯಲ್ಲಿ ಓದುತ್ತಿರುವ ನಾಯಕ ಶಿವರಾಜ್‌ಕುಮಾರ್, ಬೆಂಗಳೂರಿನ ಗೆಳೆಯ ಗುರುಪ್ರಸಾದ್ ಮನೆಗೆ ಹೋಗುತ್ತಾರೆ. ಆ ಗೆಳೆಯ ಒಂದು ಕಾಲದಲ್ಲಿ ಶಿವರಾಜ್‌ಕುಮಾರ್ ಸಹಪಾಠಿ. ಅಂದರೆ ಈಗ ಗುರುಪ್ರಸಾದ್ ವಯಸ್ಸು ಅಬ್ಬಬ್ಬಾ ಅಂದರೆ ಇಪ್ಪತ್ತೆರಡು ಇಪ್ಪತ್ತಮೂರು ಇರಲಿಕ್ಕೆ ಸಾಕು. ಆದರೆ, ಅವರಾಗಲೇ ಐದಾರು ವರ್ಷದ ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ. ಇದರರ್ಥ- ಅವರು ತಮ್ಮ ಹದಿನೈದನೇ ವಯಸ್ಸಿನಲ್ಲೇ ಮದುವೆಯಾಗಿರಬೇಕು. ಇಲ್ಲವೇ ಶಿವರಾಜ್‌ಕುಮಾರ್ ಬದುಕಿನುದ್ದಕ್ಕೂ ಐದಾರು ವರ್ಷವಾದರೂ ಫೇಲಾಗಿರಲಿಕ್ಕೆ ಸಾಕು!

2.‘ನಿನ್ನ ತಂಗಿ-ನಾನು ಇಪ್ಪತ್ತು ವರ್ಷದಿಂದ ಪ್ರೀತಿಸ್ತಾ ಇದೀವಿ’ ಎಂದು ನಾಯಕಿಯ ಅಣ್ಣನಿಗೆ ನಾಯಕ ಭಾವುಕನಾಗಿ ಹೇಳುತ್ತಾನೆ. ಈ ಸಂದರ್ಭದಲ್ಲೂ ನಾಯಕ-ನಾಯಕಿ ಡಿಗ್ರಿ ವಿದ್ಯಾರ್ಥಿಗಳು. ಅಂದರೆ, ಇಬ್ಬರಿಗೂ ಒಂದು ಅಥವಾ ಎರಡನೇ ವಯಸ್ಸಿನಲ್ಲಿ ಪ್ರೇಮಾಂಕುರವಾಗಿದೆ ಎಂದು ಪ್ರೇಕ್ಷಕರಾದ ನಾವು ಭಾವಿಸಬಹುದು.ಸಾಮಾನ್ಯ ಪ್ರಜ್ಞೆ, ಸಾಮಾನ್ಯ ಜ್ಞಾನದ ವಿಷಯದಲ್ಲೂ ನಿರ್ದೇಶಕರು ಸಾಕಷ್ಟು ಹಿಂದುಳಿದಿದ್ದಾರೆ. ವಿರೋಧ ಪಕ್ಷದ ನಾಯಕನಿಂದ ಅವರು ಜನತಾದರ್ಶನ ಮಾಡಿಸುತ್ತಾರೆ. ಆ ನಾಯಕ ರೌಡಿಯೊಬ್ಬನನ್ನು ಎನ್‌ಕೌಂಟರ್ ಮಾಡಲು ಆದೇಶ ಕೊಡುವುದಾಗಿ ಸುದ್ದಿಗಾರರ ಮುಂದೆ ತುತ್ತೂರಿ ಊದುತ್ತಾನೆ. ಪಿಯೂಸಿಯಲ್ಲಿ ವಿಜ್ಞಾನ ಓದಿ ಫೇಲಾಗುವ ನಾಯಕ ಆಮೇಲೆ ಆಗುವುದು ಕವಿ. ಕಾಲೇಜಿನ ಆವರಣದ ಕಲ್ಲಿನ ಹಾಸೇ ಕಾವ್ಯರಚನೆಯ ಸ್ಥಾನ. ಮುಂದೆ ಬೆಂಗಳೂರಿಗೆ ಹೋಗಿ ದಿಢೀರ್ ಪತ್ರಕರ್ತನಾಗುವ ಅವನು, ಎರಡು ಪುಸ್ತಕಗಳನ್ನು ಒಂದೇ ಬೀಸಿನಲ್ಲಿ ಬರೆಯುತ್ತಾನೆ.ಆ ಪುಸ್ತಕಗಳು ಹೊರಬಂದ ಕೆಲವೇ ನಿಮಿಷಗಳ ನಂತರ ಕೈಲಿ ಲಾಂಗು ಹಿಡಿದು ವಿರೋಧ ಪಕ್ಷದ ನಾಯಕನನ್ನು ಮೆಜೆಸ್ಟಿಕ್ ಬಸ್‌ಸ್ಟ್ಯಾಂಡಿನ ಮುಂದೆಯೇ ಕೊಲ್ಲುತ್ತಾನೆ.ಹೀಗೆ ಪಾತ್ರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಿಸುವ ನಿರ್ದೇಶಕ ಚಂದ್ರು ಅವರಿಗೆ ಬರಹಗಾರನ ಸೂಕ್ಷ್ಮ ಮನಸ್ಸಿನ ಪರಿಕಲ್ಪನೆಯೇ ಇದ್ದಂತಿಲ್ಲ. ಬಾಲ್ಯದಿಂದಲೇ ಅಪ್ಪನ ಮೂದಲಿಕೆಗೆ ಗುರಿಯಾಗುವ ಹುಡುಗನೊಬ್ಬನ ಮಾನಸಿಕ ತಲ್ಲಣಗಳನ್ನು ತೋರಿಸುವುದು ಅವರ ಉದ್ದೇಶ. ಚಿತ್ರಕಥೆಯನ್ನು ಬೆಳೆಸುತ್ತಾ ಹೋದಂತೆಲ್ಲಾ ಈ ಉದ್ದೇಶ ಸಾಧಿಸಲು ಅಗತ್ಯವಿರುವ ಸಂಯಮ ನಾಪತ್ತೆಯಾಗುತ್ತದೆ. ಕವಿ ಮನಸ್ಸಿನ ವ್ಯಕ್ತಿ ಸೆಂಟ್ರಲ್ ಜೈಲಿನಲ್ಲಿ ರೌಡಿಗಳ ಜೊತೆ ಮದಗಜದಂತೆ ಕಾದಾಡುವುದು, ಅದನ್ನು ತಡೆಯಲು ಒಬ್ಬೇ ಒಬ್ಬ ಪೊಲೀಸ್ ಕೂಡ ಬರದಿರುವುದು, ಗಲ್ಲಿಗೇರಿಸುವ ಹಿಂದಿನ ದಿನ ಜೈಲರ್ ನಾಯಕನನ್ನು ಎದುರಲ್ಲಿ ಕೂರಿಸಿಕೊಂಡು ಅವನ ಬದುಕಿನ ಕಥೆ ಕೇಳುವುದು- ಎಲ್ಲವೂ ಚಂದ್ರು ಪರಿಕಲ್ಪನೆಯ ಬಾಲಿಶತನಕ್ಕೆ ಸಾಕ್ಷಿ.‘ಬಂಗಾರದ ಪಂಜರ’ ಚಿತ್ರದಲ್ಲಿ ರಾಜ್‌ಕುಮಾರ್ ಹೆಸರು ಬೀರ. ಅವರ ಟಗರಿನ ಹೆಸರು ಮೈಲಾರಿ. ಈ ಚಿತ್ರದಲ್ಲಿ ನಾಯಕನ ಹೆಸರು ಮೈಲಾರಿ. ಆತ ಗೆಲ್ಲುವ ಟಗರಿನ ಹೆಸರು ಬೀರ. ಇದು ನಿರ್ದೇಶಕರು ಬಲವಂತವಾಗಿ ಮಾಡಿರುವ ಗಿಮಿಕ್ ಅಷ್ಟೆ. ಮೈಲಾರಿ-ಬೀರನ ನಡುವೆ ಒಂದೂ ಹೃದಯಸ್ಪರ್ಶಿ ಸನ್ನಿವೇಶವನ್ನು ಅವರು ಸೃಷ್ಟಿಸಿಲ್ಲ.ಬದುಕಿನ ಕೆಲವು ಸತ್ಯ ಹಾಗೂ ಕಮರ್ಷಿಯಲ್ ಮೋಹದ ತಾಕಲಾಟದಲ್ಲೇ ಅರೆಬೆಂದ ಸರಕನ್ನು ನಿರ್ದೇಶಕರು ಚಿತ್ರದುದ್ದಕ್ಕೂ ಇರಿಸಿದ್ದಾರೆ. ರಂಗಾಯಣ ರಘು, ಸಂಜನಾ ಪಾತ್ರಗಳಿಗೆ ಚಿತ್ರದಲ್ಲಿ ಸ್ಪಷ್ಟ ಸಮರ್ಥನೆಯೇ ಇಲ್ಲ. ಶಿವರಾಜ್‌ಕುಮಾರ್ ಯಥಾಪ್ರಕಾರ ಕೆಟ್ಟ ಚಿತ್ರದಲ್ಲೂ ಉತ್ಸಾಹದಿಂದ ನಟಿಸಿದ್ದಾರೆ.ಭಾವದ ಕಟ್ಟೆ ಕಟ್ಟುವ ಸುರೇಶ್ ಮಂಗಳೂರು, ಎತ್ತರದ ಆಳು ಜಾನ್ ಕೊಕೇನ್, ಸಪೂರವಾಗಿರುವ ಸದಾ- ಯಾರೂ ಮನಸ್ಸಿನಲ್ಲಿ ಉಳಿಯದಿರಲು ಕಾರಣ ಶಿಥಿಲವಾದ ಚಿತ್ರಕಥೆ. ಪರರ ಮಟ್ಟುಗಳನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ನಿಸ್ಸೀಮರಾದ ಗುರುಕಿರಣ್ ಈ ಚಿತ್ರದಲ್ಲೂ ಅದನ್ನು ಮುಂದುವರಿಸಿದ್ದಾರೆ. ಜನಪ್ರಿಯವಾಗಿರುವ ‘ಮೈಲಾಪುರ ಮೈಲಾರಿ’ ಹಾಡಿನ ಧಾಟಿಯಲ್ಲಿ ದಲೇರ್ ಮೆಹಂದಿಯ ರುಜು ಅವಿತಿದೆ. ಛಾಯಾಗ್ರಾಹಕ ಚಂದ್ರಶೇಖರ್ ಪರಿಣಾಮಕಾರಿ ಕೆಲಸದ ಹೊರತು ‘ಮೈಲಾರಿ’ ಯಾವ ಕಾರಣಕ್ಕೂ ಗಮನ ಸೆಳೆಯುವುದಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.