ಬುಧವಾರ, ಏಪ್ರಿಲ್ 14, 2021
24 °C

ಬೇಸಾಯಕ್ಕೆ ಪೂರಕ ಮೊಲ ಸಾಕಣೆ

ರಮೇಶ ಕಂಚೀಪುರ Updated:

ಅಕ್ಷರ ಗಾತ್ರ : | |

ಸಣ್ಣ ಮತ್ತು ಅತಿ ಸಣ್ಣ ರೈತರು ಬೇಸಾಯದ ಜೊತೆಗೆ ಮೊಲಗಳನ್ನು ಸಾಕಿ ಒಂದಷ್ಟು ಹಣ ಸಂಪಾದಿಸಬಹುದು. ಬೇಸಾಯದಲ್ಲಿ ನಷ್ಟವಾದರೆ ಅದನ್ನು ಸರಿದೂಗಿಸಬಹುದು. ಕಡಿಮೆ ಖರ್ಚಿನಲ್ಲಿ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಬಹುದು. ಮೊಲ ಸಾಕುವವರು ಮೊದಲು ಅವುಗಳ ಗುಣ, ಸ್ವಭಾವ ಇತ್ಯಾದಿಗಳ ಬಗ್ಗೆ  ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಿಕೊಂಡು, ತಜ್ಞರ ಜತೆಯಲ್ಲಿ ಚರ್ಚಿಸಿ ಮುಂದುವರಿಯುವುದು ಸೂಕ್ತ.ಭಾರತದಲ್ಲಿ  ಮೊಲಗಳನ್ನು ಮಾಂಸ, ಚರ್ಮ ಹಾಗೂ ಉಣ್ಣೆಗಳಿಗಾಗಿ ಸಾಕುವ ಪರಿಪಾಠವಿದೆ.  ಮೊಲ ಸಾಕಲು ಸ್ವಲ್ಪ ಜಾಗ ಇದ್ದರೆ ಸಾಕು. ಹೆಚ್ಚು ಜಾಗ ಇದ್ದವರು ಹೆಚ್ಚು ಮೊಲಗಳನ್ನು ಸಾಕಬಹುದು. ಮನೆಯ ಹಿತ್ತಲಲ್ಲಿ ಸ್ವಲ್ಪ ಜಾಗ ಇದ್ದರೆ ಅಲ್ಲಿ ಸಾಕಬಹುದು. ಮೊಲಗಳ ವಂಶಾಭಿವೃದ್ಧಿ ಶೀಘ್ರವಾಗಿ ನಡೆಯುತ್ತದೆ. ಐದಾರು ತಿಂಗಳಲ್ಲಿ ಮೊಲಗಳು ಬೆಳೆದು ಪ್ರಾಯಕ್ಕೆ ಬರುತ್ತವೆ. ವಯಸ್ಕ ಮೊಲವೊಂದು  ವರ್ಷದಲ್ಲಿ 4 ರಿಂದ 5 ಸಲ ಮರಿ ಹಾಕುತ್ತದೆ.ಪ್ರತಿ ಸೂಲಿನಲ್ಲೂ 7-8 ಮರಿ ಹಾಕುತ್ತದೆ. ಒಂದು ಹೆಣ್ಣು ಮೊಲದಿಂದ 35 ರಿಂದ 40 ಮರಿಗಳನ್ನು ಪಡೆಯಬಹುದು. ಮೊಲಗಳ ಹಿಕ್ಕೆ ಅತ್ಯಂತ ಸಾರವತ್ತಾದ ಗೊಬ್ಬರ.  ಪ್ರಮುಖ ತಳಿಗಳು: ಫ್ರೆಂಚ್ ಅಂಗೋರಾ, ಬ್ರಿಟಿಷ್ ಅಂಗೋರಾ, ಜರ್ಮನ್ ಅಂಗೋರಾ ಮತ್ತು ರಷ್ಯನ್ ಅಂಗೋರಾ ಮೊದಲಾದ ತಳಿಗಳ ಮೊಲಗಳನ್ನು  ಉಣ್ಣೆ ಮತ್ತು ಚರ್ಮಕ್ಕೋಸ್ಕರ ಸಾಕುತ್ತಾರೆ.ರಷ್ಯನ್ ಗ್ರೇ ಜಯಂಟ್, ರಷ್ಯನ್ ವೈಟ್ ಜಯಂಟ್, ಸೋವಿಯತ್ ಚಿಂಚಿಲಾ, ಫ್ಲೆಮಿಷ್ ಜಯಂಟ್, ನ್ಯೂಜಿಲ್ಯಾಂಡ್ ವೈಟ್, ಕ್ಯಾಲಿಫೋರ್ನಿಯನ್ ವೈಟ್ ಇತ್ಯಾದಿ ತಳಿಗಳ ಮೊಲಗಳನ್ನು ಮಾಂಸಕ್ಕಾಗಿ ಸಾಕಬಹುದು.ಪೊಲ್ಯಾಂಡ್, ಫಾಲೋಮಿನಾ, ಫ್ಲೋರಿಡಾ, ವೈಟ್‌ಟಾನ್ ಹವಾನಾ, ಇಂಗ್ಲಿಷ್ ಬ್ಲಾಕ್ ಮತ್ತು ಇಂಗ್ಲಿಷ್ ವೈಟ್ ತಳಿಯ ಮೊಲಗಳನ್ನು ಹವ್ಯಾಸಕ್ಕಾಗಿ ಸಾಕುತ್ತಾರೆ. ಇವು ನೋಡಲು ಮುದ್ದಾಗಿ ಕಾಣುತ್ತವೆ. ವಾತಾವರಣದ ಉಷ್ಣಾಂಶ 320 ಸೆಂಟಿಗ್ರೇಡ್‌ಗಿಂತ ಹೆಚ್ಚಾಗಿದರೆ ಮೊಲಗಳು ಉಷ್ಣದ ತಾಪದಿಂದ ಸೊರಗುತ್ತವೆ. ಇದರಿಂದ ಆದಾಯ ಕಡಿಮೆಯಾಗುತ್ತದೆ. 18 ರಿಂದ 220 ಸೆಂಟಿಗ್ರೇಡ್‌ನಷ್ಟು ಉಷ್ಣಾಂಶದಲ್ಲಿ ಮೊಲಗಳು ಉತ್ತಮವಾಗಿ ಬೆಳೆಯುತ್ತವೆ. ಇದರ ಜತೆಗೆ ಗಾಳಿ ಮತ್ತು ಬೆಳಕು ಹೆಚ್ಚಾಗಿರಬೇಕು. ಜನ ಸಂದಣಿ ಕಡಿಮೆ ಇರುವ, ಆದಷ್ಟೂ ನಿಶ್ಯಬ್ಧದ ವಾತಾವರಣ, ಮರಗಳ ನೆರಳು ಹಾಗೂ ಚರಂಡಿ ವ್ಯವಸ್ಥೆ ಇರುವ ಪರಿಸರದಲ್ಲಿ ಮೊಲಗಳನ್ನು ಸಾಕುವ ಮನೆ (ಗೂಡು)ಗಳನ್ನು ನಿರ್ಮಿಸಿಕೊಳ್ಳಬೇಕು. ಇವುಗಳ ಸಮೀಪದಲ್ಲಿ ನಾಯಿ, ಬೆಕ್ಕು, ಹೆಗ್ಗಣ ಇತ್ಯಾದಿಗಳು ಹೋಗದಂತೆ ನಿಯಂತ್ರಿಸಬೇಕು.ಮೊಲಗಳು ವಿಸರ್ಜಿಸಿದ ಮಲ ಮೂತ್ರ ಹೊರಕ್ಕೆ ಬಸಿದು ಹೋಗುವಂತೆ ಇರಬೇಕು. ಪ್ರತಿಯೊಂದು ಮೊಲಕ್ಕೂ ಪ್ರತ್ಯೇಕ ಗೂಡು ಇಲ್ಲವೇ ಹಲವು ಮೊಲಗಳನ್ನು ಒಟ್ಟಿಗೆ ಬಿಟ್ಟು ಸಾಕುವ ವ್ಯವಸ್ಥೆ ಮಾಡಬಹುದು. ಮೊಲಗಳ ಆಹಾರ: ಮೊಲಗಳು ಗರಿಕೆ, ಕೆಲವು ಕಳೆ ಸಸ್ಯಗಳು, ಒಣ ಮೇವು, ಹಸಿರೆಲೆ ಸೊಪ್ಪು, ತರಕಾರಿ, ಗೆಡ್ಡೆ ಗೆಣಸು, ಮೊಳಕೆ ಕಾಳು ತಿಂದು ಬೆಳೆಯುತ್ತವೆ. ಮೊಳಕೆ ಕಾಳುಗಳು, ಕಡಲೆ ಕಾಳು, ಕುದುರೆ ಮಸಾಲೆಸೊಪ್ಪು ಮತ್ತು ಗಜ್ಜರಿಗಳನ್ನು ಇಷ್ಟಪಟ್ಟು ತಿನ್ನುತ್ತವೆ. ಈಗ ಆಹಾರ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಮೆಕ್ಕೆಜೋಳ, ಅಕ್ಕಿ ನುಚ್ಚು, ಗೋಧಿ ಬೂಸಾ, ಕಡಲೆ ಕಾಯಿ ಹಿಂಡಿ ಇತ್ಯಾದಿಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರ ಮಾಡಿ ಮನೆಯಲ್ಲಿಯೇ ಆಹಾರ ತಯಾರಿಸಬಹುದು. ಉತ್ತಮ ಆಹಾರದ ಜತೆಗೆ  ಶುದ್ಧ ಕುಡಿಯುವ ನೀರು ಒದಗಿಸಬೇಕು.ಬೆದೆಗೆ ಬಾರದ ಸಮಯದಲ್ಲಿ ಹೆಣ್ಣು ಮತ್ತು ಗಂಡು ಮೊಲಗಳನ್ನು ಜೊತೆಯಲ್ಲಿ ಬಿಡಬಾರದು. ಸಂತಾನೋತ್ಪತ್ತಿ ಸಮಯದಲ್ಲಿ ಹೆಣ್ಣು ಮೊಲವನ್ನು ಗಂಡು ಮೊಲದ ಗೂಡಿನಲ್ಲಿ ಬಿಡಬೇಕು. ಇದಕ್ಕೆ ಮುಂಜಾನೆ ಅಥವಾ ಸಂಜೆ ಪ್ರಶಸ್ತ ಸಮಯ. ಗರ್ಭ ಧರಿಸಿದ ಮೊಲಗಳ ನಿರ್ವಹಣೆ: ಮೊಲಗಳಲ್ಲಿ ಗರ್ಭಾವಧಿ 29-35 ದಿನಗಳು. ಗರ್ಭ ಧರಿಸಿದ ಮೊಲಗಳನ್ನು ಎಚ್ಚರಿಕೆಯಿಂದ ಗಮನಿಸಿಕೊಳ್ಳಬೇಕು. ಗರ್ಭಧರಿಸಿದ ಮೊಲಗಳನ್ನು ಪದೇ ಪದೇ ಗೂಡಿನಿಂದ ಎತ್ತಿ  ಬಿಡುವುದನ್ನು ಮಾಡಬಾರದು. ಈ ಸಮಯದಲ್ಲಿ ಪ್ರತಿ ಮೊಲಕ್ಕೆ 25-50 ಗ್ರಾಂನಷ್ಟು ಸಮತೋಲನ ಆಹಾರ ನೀಡಬೇಕು. ಮೊಳಕೆ ಬಂದ ಕಾಳುಗಳನ್ನು ನೀಡುವುದರಿಂದ ಹುಟ್ಟುವ ಮರಿಗಳಲ್ಲಿ ಸಾವಿನ ಪ್ರಮಾಣ ತಡೆಗಟ್ಟಬಹುದು.ಮರಿ ಹಾಕಿದ ಒಂದು ತಿಂಗಳವರೆಗೂ ತಾಯಿ ಮೊಲವೇ ಅವುಗಳನ್ನು ಪಾಲನೆ ಮಾಡಿದರೆ ಒಳ್ಳೆಯದು. ಮರಿಗಳು ಹುಟ್ಟಿದ ಒಂದೆರಡು ಗಂಟೆಗಳಲ್ಲಿ ತಾಯಿಯ ಹಾಲು ಕುಡಿಯಲು ಆರಂಭಿಸುತ್ತವೆ. ಹದಿನೈದು ದಿನಗಳ ನಂತರ ಸೊಪ್ಪು ತಿನ್ನಲು ಪ್ರಾರಂಭಿಸುತ್ತವೆ. ಆದರೆ ಮರಿಗಳಿಗೆ ತಾಯಿಯ ಹಾಲೇ ಶ್ರೇಷ್ಠ. ಕನಿಷ್ಠ 30 ದಿನಗಳವರೆಗೆ ಹಾಲು ಸಿಗುವಂತೆ ನೋಡಿಕೊಳ್ಳಬೇಕು. ತಾಯಿ ಹಾಲು ಕಡಿಮೆ ಇದ್ದರೆ ಅದೇ ಸಮಯದಲ್ಲಿ ಮರಿ ಹಾಕಿದ ಮತ್ತೊಂದು ಮೊಲದ ಹಾಲು ಕುಡಿಯಲು ಮರಿಗಳನ್ನು ಬಿಡಬಹುದು. ಆದರೆ ಅಂತಹ ಮೊಲ ತನ್ನ ಮರಿಗಳಿಗೆ ಕುಡಿಸಿದ ನಂತರವೂ ಉಳಿಯುವಷ್ಟು ಹಾಲಿರಬೇಕು. ಮರಿಗಳಿಗೆ ಹಸು, ಎಮ್ಮೆ ಇಲ್ಲವೇ ಮೇಕೆ ಹಾಲನ್ನು 5ರಿಂದ 10 ಮಿಲಿಯಷ್ಟು ಕುಡಿಸಬಹುದು.ಕಾಕ್ಸಿಡಿಯೋಸಿಸ್, ಪಾಸ್ಚುರೆಲ್ಲೋಸಿಸ್, ಕಿವಿಯ ಚರ್ಮ ರೋಗ ಇತ್ಯಾದಿಗಳು ಮೊಲಗಳಿಗೆ  ಬರುವ ಸಾಮಾನ್ಯ ರೋಗಗಳು. ಅಂತಹ ಸಂದರ್ಭದಲ್ಲಿ ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು.ಮೊಲ ಸಾಕಣೆ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ ಬೆಂಗಳೂರು ಪಶು ವೈದ್ಯಕೀಯ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಬಿ. ಶ್ರೀಧರ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್ : 94480 59777.                      

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.