ಶುಕ್ರವಾರ, ಜೂನ್ 5, 2020
27 °C

ಬೊಂಬೆಯಾಟವಯ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಂಬೆಯಾಟವಯ್ಯಾ

ಈ ಬೊಂಬೆಗಳು ಚಲಿಸುತ್ತವೆ. ಕುಣಿದು, ಕುಪ್ಪಳಿಸುತ್ತವೆ. ಮಾತನಾಡುತ್ತವೆ. ಕಥೆ ಹೇಳುತ್ತವೆ. ರಂಗತಂತ್ರದ ಅನೇಕ ಅದ್ಭುತಗಳನ್ನೂ ಮಾಡಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ನಮ್ಮೆದುರಿಗೆ ಜೀವಂತವಾಗಿ ಬಂದುಬಿಡುತ್ತವೆ! ಅಷ್ಟೇ ಅಲ್ಲ, ಗಡಿನಾಡಿನ ಈ ಬೊಂಬೆಗಳು ವಿದೇಶದ ರಂಗದ ಮೇಲೂ ದಿಂಗಣ ಹಾಕಿಬಂದಿವೆ. ಜಾಗತಿಕ ಮಟ್ಟದಲ್ಲಿ ಪ್ರದರ್ಶನ ನೀಡಿ, ಉತ್ಸವಗಳಲ್ಲಿ ಭಾಗಿಯಾಗಿ ಕನ್ನಡ ಹಾಗೂ ಕರ್ನಾಟಕದ ಹೆಮ್ಮೆಯ ಕಿರೀಟವಾಗಿ ಮೆರೆದಿವೆ.ಬಲ್ಲಿರೇನಯ್ಯ...?

ಯಕ್ಷ ಪ್ರಕಾರದ ಭಾಗವಾಗಿರುವ ಯಕ್ಷಗಾನ ‘ಬೊಂಬೆಯಾಟ’ದ ವಿಶೇಷವೇ ಅದು. ಈ ಹಿಂದೆ ಸಲಾಕೆ, ಈಗ ಸೂತ್ರದ ಮೂಲಕ ಬೊಂಬೆಗಳಿಗೆ ಜೀವ ನೀಡಿ, ಕುಣಿಸಿ ಪ್ರೇಕ್ಷಕರಿಗೆ ಮುದನೀಡುವ ಈ ಕಲೆ, ಇತ್ತೀಚಿನ ದಿನಗಳಲ್ಲಿ ಅಪರೂಪ ಆಗುತ್ತಿದೆ.ಕರಾವಳಿಯ ರಂಗ ಕಲೆ ಯಕ್ಷಗಾನವನ್ನು ಉಳಿಸುವ ನಿಟ್ಟಿನಲ್ಲಿ ಯಕ್ಷ ಕರ್ಮಿಗಳದ್ದು ಹಗಲಿರುಳ ಸೇವೆ. ಈ ನಿಟ್ಟಿನಲ್ಲಿ ತುಳುನಾಡಿನಲ್ಲಿರುವ (ಈಗ ಅಸ್ತಿತ್ವದಲ್ಲಿ ಉಳಿದಿರುವ) ಎರಡು ಯಕ್ಷಗಾನ ಬೊಂಬೆಯಾಟ ತಂಡಗಳ (ತೆಂಕುತಿಟ್ಟಿನ ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಮತ್ತು ಬಡಗುತಿಟ್ಟಿನ ಉಪ್ಪಿನಕುದ್ರು ಗಣೇಶ ಯಕ್ಷಗಾನ ಬೊಂಬೆಯಾಟ ತಂಡ) ಕೊಡುಗೆ ಉಲ್ಲೇಖನೀಯ.ಇದೀಗ 30 ವರ್ಷ ತುಂಬಿರುವ ಕರ್ನಾಟಕ-ಕೇರಳ ಗಡಿಯ ಪಿಲಿಕುಂಜೆಯ ಗೋಪಾಲಕೃಷ್ಣ ಯಕ್ಷಗಾನ ಬೊಂಬೆ ಯಾಟ ತಂಡ, ಈ ನೆನಪಿಗಾಗಿ ಚಿಣ್ಣರ ಅಂಗಳಕ್ಕೆ ‘ಪುತ್ಥಳಿ ಯಾತ್ರೆ’ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಕೇರಳ- ಕರ್ನಾಟಕ ರಾಜ್ಯದ ಆಯ್ದ 30 ಶಾಲೆಗಳಲ್ಲಿ ಯಕ್ಷಗಾನ ಬೊಂಬೆಯಾಟ ಅಭಿಯಾನವಿದು. ಈ ಸಂಭ್ರಮದ ಮಧ್ಯೆ ತಂಡದ ಸೂತ್ರಧಾರಿ- ನಿರ್ದೇಶಕ ಕೆ.ವಿ. ರಮೇಶ್, ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದದ್ದು ತಂಡದ ಪಾಲಿಗೆ ಹೆಮ್ಮೆಯ ಸಂಗತಿ.ಬೊಂಬೆಗಳ ಮೂಲಕ ಆಟ ಆಡಿಸಿ ಯಕ್ಷಗಾನ ಉಳಿಸುವ ಪಣ ತೊಟ್ಟು, ಕಳೆದ ಮೂರು ದಶಕಗಳಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಸಕ್ರಿಯವಾಗಿದೆ. ಜತೆಗೆ ಬೊಂಬೆಯಾಟವನ್ನೂ ಬೆಳೆಸಿದೆ. ದೇಶ-ವಿದೇಶಗಳಲ್ಲಿ 2200ಕ್ಕೂ ಹೆಚ್ಚು ಪ್ರದರ್ಶನ ನೀಡಿ ಗುರುತಿಸಿಕೊಂಡಿದೆ. ತೆರೆಮರೆಯ ಹಾದಿಯಲ್ಲಿರುವ ‘ಬೊಂಬೆಯಾಟ’ ಎಂಬ ಅಪೂರ್ವ ಕಲೆಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸಬೇಕು ಎಂಬ ಸದುದ್ದೇಶದಿಂದ ಈಗ ‘ಪುತ್ಥಳಿ ಯಾತ್ರೆ’ ಕೈಗೊಂಡಿದೆ.ಯಕ್ಷಗಾನದ ಪಿತಾಮಹ ಎಂದೇ

ಇತಿಹಾಸದ ಪುಟಗಳಲ್ಲಿ ದಾಖಲಾದ ಕುಂಬಳೆ ಪಾರ್ತಿಸುಬ್ಬ, ಅನೇಕ ಯಕ್ಷಗಾನ ಪ್ರಸಂಗ ರಚಿಸಿ ಆ ಕಲೆಯನ್ನು ಪೋಷಿಸಿ ಬೆಳೆಸಿದ್ದರು. ಪಾರ್ತಿಸುಬ್ಬ ಅವರ  ವಂಶಸ್ಥರೂ ಸ್ವತಃ ಕಲಾವಿದರೂ, ದೇವಸ್ಥಾನಗಳ ವಸಂತಕಟ್ಟೆಗಳನ್ನು ಸಿಂಗರಿಸುವಲ್ಲಿ ಸಿದ್ಧಹಸ್ತರಾಗಿದ್ದ ವಿದ್ವಾನ್ ಲಕ್ಷ್ಮಿನಾರಾಯಣಯ್ಯ- ಅಕ್ಕಮ್ಮ ದಂಪತಿ ಬೊಂಬೆಯಾಟದ ಬಗ್ಗೆ ಕನಸು ಕಂಡಿದ್ದರು. ಅವರ ಕರುಳು ಬಳ್ಳಿ ಕಾಸರಗೋಡಿನ ಸಿರಿಗನ್ನಡ ಮುದ್ರಣಾಲಯದ ಕೆ. ವೆಂಕಟಕೃಷ್ಣಯ್ಯ- ಗಿರಿಜ ದಂಪತಿ ಬೊಂಬೆಯಾಟಕ್ಕೆ ಪ್ರೇರಕ ಶಕ್ತಿಯಾದರು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಹುಟ್ಟು ಹಾಕಿದರು.ಸಂಘಕ್ಕೆ ಅವರ ಪುತ್ರರಾದ ರಮೇಶ್- ಸುರೇಶ್ ಪ್ರಧಾನ ಸೂತ್ರಧಾರಿಗಳು. ಇಬ್ಬರೂ ಬೊಂಬೆಗಳ ನಿರ್ಮಾಣದಲ್ಲಿ ನಿಷ್ಣಾತರು. ಸಂಘವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದವರು ಬೆಂಗಳೂರಿನ ವೇಣುಗೋಪಾಲ ಪಿ.ಕೆ. (ರಮೇಶ್ ಸೋದರಿಯ ಪತಿ). ಆದರೆ ಇತ್ತೀಚೆಗೆ ಸುರೇಶ್ ಮತ್ತು ವೇಣುಗೋಪಾಲ್ ಆಕಸ್ಮಿಕವಾಗಿ ಅಗಲಿದ್ದು, ಸಂಘ ಮತ್ತೆ ಪುನಃಶ್ಚೇತನದ ಹಾದಿಯಲ್ಲಿದೆ ಎನ್ನುತ್ತಾರೆ ರಮೇಶ್. ಕರ್ನಾಟಕ-ಕೇರಳ ಗಡಿಯ ಪಿಲಿಕುಂಜೆ ಎಂಬಲ್ಲಿ 1981ರ ಸೆ. 13ರಂದು ‘ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ’ ಆರಂಭವಾಯಿತು. ಅಲ್ಲಿಂದ ಹಂತ ಹಂತವಾಗಿ ಬೆಳೆದು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತಾ ಬಂದಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ನವದೆಹಲಿ ಮತ್ತಿತರ ರಾಜ್ಯಗಳ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಪ್ರದರ್ಶನ ನೀಡಿದೆ.1998ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ 4ನೇ ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ಭಾಗವಹಿಸುವ ಮೂಲಕ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಲೋಕ ಪ್ರವೇಶಿಸಿತು. ಅಲ್ಲಿ32ಕ್ಕೂ ಹೆಚ್ಚು ದೇಶಗಳ 100ಕ್ಕೂ ಹೆಚ್ಚು ಬೊಂಬೆಯಾಟ ತಂಡಗಳು ಪ್ರದರ್ಶನ ನೀಡಿದ್ದವು.ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ 2004ರಲ್ಲಿ ನಡೆದ ಉತ್ಸವದಲ್ಲೂ ಭಾಗವಹಿಸುವ ಅವಕಾಶ ಈ ತಂಡಕ್ಕೆ ಸಿಕ್ಕಿತು. ದುಬೈಯಲ್ಲಿ 2009ರಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಬೊಂಬೆಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. 2010 ಮೇ 3ರಿಂದ ಜೂ. 6ರವರೆಗೆ ಯುರೋಪಿನ ಜೆಕೋಸ್ಲಾವೇಕಿಯಾ ರಾಜಧಾನಿ ಪ್ರಾಗ್‌ನಲ್ಲಿ ನಡೆದ 14ನೇ ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ತಂಡದ ಪ್ರದರ್ಶನ ಮೆಚ್ಚುಗೆಗೆ ಗಳಿಸಿತು. ಅಷ್ಟೇ ಅಲ್ಲ ಪ್ರಾಗ್‌ನಲ್ಲಿ 38 ರಾಷ್ಟ್ರಗಳಿಂದ ಬಂದ 100ಕ್ಕೂ ಅಧಿಕ ತಂಡಗಳ ಜತೆ ಸ್ಪರ್ಧಿಸಿ ‘ಬೆಸ್ಟ್ ಟ್ರೆಡಿಷಶನಲ್ ಪಪೆಟ್ ಪರ್ಫಾರ್ಮರ್’ ಎಂಬ ಅಂತರರಾಷ್ಟ್ರೀಯ ಪ್ರಶಸ್ತಿಗೂ ಭಾಜನವಾಯಿತು.ಅಮೆರಿಕಾ, ಟರ್ಕಿ, ಪಾಕಿಸ್ತಾನ, ಪ್ಯಾರಿಸ್, ಪೊಲೆಂಡ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಜರ್ಮನಿ, ಜೆಕೋಸ್ಲೋವೇಕಿಯಾ ಮತ್ತಿತರ ದೇಶಗಳ ಮ್ಯೂಸಿಯಂಗಳಲ್ಲಿ ತಂಡದ ಯಕ್ಷಗಾನ ಗೊಂಬೆಗಳು ಪ್ರದರ್ಶನಕ್ಕೆ ಇಡಲಾಗಿದೆ. ದೇಶ ವಿದೇಶಗಳ ಪ್ರವಾಸಿಗರು ಪಿಲಿಕುಂಜೆಯ ಸಂಘದ ಕೇಂದ್ರಕ್ಕೆ ಭೇಟಿ ನೀಡಿ ಬೊಂಬೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅಳಿಯುತ್ತಿರುವ ಯಕ್ಷಗಾನ ಬೊಂಬೆಯಾಟ ಕಲೆಗೆ ಆಸರೆ ಬೇಕು. ಬೊಂಬೆಯಾಟವನ್ನು ಜನಪ್ರಿಯಗೊಳಿಸಬೇಕು, ಸಂರಕ್ಷಿಸಬೇಕು.ಈ ಕಲೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು. ಸಾವಿರ ಯಕ್ಷಗಾನ ಬೊಂಬೆ ನಿರ್ಮಿಸಿ ವ್ಯವಸ್ಥಿತವಾಗಿ ಪ್ರದರ್ಶಿಸಲು ಸುಸಜ್ಜಿತ ಮ್ಯೂಜಿಯಂ ನಿರ್ಮಿಸಬೇಕು. ಈ ಕಲೆಗೆ ಸಂಬಂಧಿಸಿದ ಸಾಹಿತ್ಯ, ಉಪಕರಣ ಸಂಗ್ರಹಿಸುವ ಜತೆಗೆ ಆಸಕ್ತರಿಗೆ ಬೊಂಬೆಯಾಟ ತರಬೇತಿ ನೀಡಬೇಕು ಎನ್ನುವುದು ರಮೇಶ್ ಅವರ ಆಶಯ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.