ಬುಧವಾರ, ಮೇ 12, 2021
20 °C
ವಿಶ್ವದ ಎಂಟನೇ ರ್‍ಯಾಂಕಿಂಗ್‌ನ ಆಟಗಾರ ಪೋನ್ಸಾನಗೆ ಆಘಾತ

ಬ್ಯಾಡ್ಮಿಂಟನ್: ಶ್ರೀಕಾಂತ್ ಮುಡಿಗೆ ಚೊಚ್ಚಲ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್ (ಪಿಟಿಐ): ಬ್ಯಾಡ್ಮಿಂಟನ್ ಜಗತ್ತಿಗೆ ಅಷ್ಟೇನು ಪರಿಚಿತರಲ್ಲದ ಭಾರತದ ಕೆ.ಶ್ರೀಕಾಂತ್ ಅಮೋಘ ಸಾಧನೆಯೊಂದಕ್ಕೆ ಕಾರಣರಾಗಿದ್ದಾರೆ. ಅಚ್ಚರಿ ಹಾಗೂ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದ ಅವರು ಭಾನುವಾರ ಇಲ್ಲಿ ಕೊನೆಗೊಂಡ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.ನಿಮಿಟ್‌ಬಟ್ರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಶ್ರೀಕಾಂತ್ 21-16, 21-12ರಲ್ಲಿ ಥಾಯ್ಲೆಂಡ್‌ನ ಬೂನ್‌ಸಾಕ್ ಪೋನ್ಸಾನ ಅವರಿಗೆ ಆಘಾತ ನೀಡಿ ಟ್ರೋಫಿ ಎತ್ತಿ ಹಿಡಿದರು. ಅಷ್ಟು ಮಾತ್ರವಲ್ಲದೇ, 5.2 ಲಕ್ಷ ರೂಪಾಯಿ ಬಹುಮಾನ ಪಡೆದರು.

ಬ್ಯಾಡ್ಮಿಂಟನ್ ರಂಗದಲ್ಲಿ ಭಾರತ ಯಾವ ರೀತಿ ಪ್ರಗತಿ ಸಾಧಿಸುತ್ತಿದೆ ಎಂಬುವುದಕ್ಕೆ ಈ ಪ್ರದರ್ಶನವೇ ಸಾಕ್ಷಿ. ವಿಶೇಷವೆಂದರೆ ಪೋನ್ಸಾನ ಎಂಟನೇ ರ್‍ಯಾಂಕಿಂಗ್‌ನ ಆಟಗಾರ. ಅವರನ್ನೇ ಶ್ರೀಕಾಂತ್ ಬಗ್ಗುಬಡಿದಿದ್ದಾರೆ. 61ನೇ ರ್‍ಯಾಂಕಿಂಗ್‌ನಲ್ಲಿರುವ ಅವರು ಎರಡೂ ಗೇಮ್‌ಗಳಲ್ಲಿ ಪಾರಮ್ಯ ಮೆರೆದರು.ಶ್ರೀಕಾಂತ್ ಅವರ ಬ್ಯಾಡ್ಮಿಂಟನ್ ಜೀವನದ ಅತ್ಯುತ್ತಮ ಸಾಧನೆ ಇದಾಗಿದೆ. ಏಕೆಂದರೆ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಅವರಿಗೆ ಒಲಿದು ಚೊಚ್ಚಲ ಪ್ರಶಸ್ತಿ ಇದು. ಅವರು ಈ ಹಿಂದೆ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. 2011ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.ಸ್ಥಳೀಯ ಆಟಗಾರ ಪೋನ್ಸಾನ ಅವರನ್ನು ಮಣಿಸಲು ಶ್ರೀಕಾಂತ್ ಕೇವಲ 34 ನಿಮಿಷ ತೆಗೆದುಕೊಂಡರು. ಮೊದಲ ಗೇಮ್ ನಿಕಟ ಪೈಪೋಟಿಯಿಂದ ಕೂಡಿತ್ತು. ಒಂದು ಹಂತದಲ್ಲಿ ಉಭಯ ಆಟಗಾರರು 15-15ರಿಂದ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ಚುರುಕಿನ ಆಟವಾಡಿದ 13ನೇ ಶ್ರೇಯಾಂಕದ ಶ್ರೀಕಾಂತ್ ಮುನ್ನಡೆದರು. ಆದರೆ ಎರಡನೇ ಗೇಮ್‌ನಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಒಂಬತ್ತು ಸ್ಮ್ಯಾಷ್ ಸಿಡಿಸಿದರು.`ಅಂಗಳಕ್ಕೆ ಇಳಿದಾಗ ನನ್ನ ಮನಸ್ಸು ಖಾಲಿಯಾಗಿತ್ತು. ಯಾವುದೇ ಯೋಚನೆ ಇರಲಿಲ್ಲ. ಪೋನ್ಸಾನ ಸ್ಥಳೀಯ ಆಟಗಾರ ಹಾಗೂ ಅವರಿಗೆ ಪ್ರೇಕ್ಷಕರ ಬೆಂಬಲವಿದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಉಭಯ ಆಟಗಾರರಿಗೆ 50-50 ಅವಕಾಶವಿದೆ ಎಂದುಕೊಂಡಿದ್ದೆ. ಅದಕ್ಕಿಂತ ಮಿಗಿಲಾಗಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇತ್ತು' ಎಂದು ಪ್ರಶಸ್ತಿ ಗೆದ್ದ ಬಳಿಕ ಆಂಧ್ರಪ್ರದೇಶದ ಗುಂಟೂರಿನ ಶ್ರೀಕಾಂತ್ ನುಡಿದಿದ್ದಾರೆ.`ಶೇಕಡಾ ನೂರರಷ್ಟು ಪ್ರಯತ್ನ ಹಾಕಿ ಆಡುವುದು ನನ್ನ ಉದ್ದೇಶವಾಗಿತ್ತು. ಈಗ ಆ ಗೆಲುವಿನ ಖುಷಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಪೋಷಕರೊಂದಿಗೆ ಖುಷಿಯನ್ನು ಹಂಚಿಕೊಂಡೆ. ಮೊದಲು ಹೈದರಾಬಾದ್‌ಗೆ ಹೋಗುತ್ತೇನೆ. ಬಳಿಕ ಮುಂದಿನ ಟೂರ್ನಿ ಬಗ್ಗೆ ಯೋಚಿಸುತ್ತೇನೆ' ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.

`ಇದು ಡಬಲ್ ಧಮಾಕಾ'

ಹೈದರಾಬಾದ್ (ಪಿಟಿಐ): `ಇದು ನಮ್ಮ ಕುಟುಂಬಕ್ಕೆ ಡಬಲ್ ಧಮಾಕಾ' -ಹೀಗೆ ಸಂಭ್ರಮಿಸಿದ್ದು `ಥಾಯ್ಲೆಂಡ್ ಓಪನ್' ಪ್ರಶಸ್ತಿ ಗೆದ್ದ ಕೆ. ಶ್ರೀಕಾಂತ್ ಅವರ ಪಾಲಕರು.`ನಮಗೆ ತುಂಬಾ ಸಂತೋಷವಾಗಿದೆ. ಅವನು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾನೆ. ಅವನ ಕಠಿಣ ಅಭ್ಯಾಸವನ್ನು ಪದಗಳಲ್ಲಿ ಬಣ್ಣಿಸಲು ಅಸಾಧ್ಯ' ಎಂದು ಶ್ರೀಕಾಂತ್ ಅವರ ತಂದೆ ಕೆ.ವಿ.ಎಸ್. ಕೃಷ್ಣ ಪ್ರತಿಕ್ರಿಯಿಸಿದ್ದಾರೆ.ಕೆ. ಶ್ರೀಕಾಂತ್ ಸಿಂಗಲ್ಸ್‌ನಲ್ಲಿ ಗೆದ್ದರೆ, ಅವರ ಸಹೋದರ ಕೆ. ನಂದಗೋಪಾಲ್ ಮಾಲ್ಡೀವ್ಸ್‌ನಲ್ಲಿ ಭಾನುವಾರ ನಡೆದ `ಲಿ-ನಿಂಗ್ ಮಾಲ್ಡೀವ್ಸ್ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ'ಯ ಡಬಲ್ಸ್‌ನಲ್ಲಿ ವಿಜಯ ಸಾಧಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.