ಶುಕ್ರವಾರ, ಆಗಸ್ಟ್ 7, 2020
23 °C

ಭಕ್ತಿ ಭಾವದ ಸಂಗೀತಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಕ್ತಿ ಭಾವದ ಸಂಗೀತಾರ್ಪಣೆ

`ಸಂಗೀತಕ್ಕೆ ದೈವತ್ವದ ಅನುಭಾವ ನೀಡುವ ಶಕ್ತಿಯಿದೆ. ಭಾವ ತುಂಬಿ ಭಜನೆಗಳನ್ನು ಹಾಡುತ್ತಿದ್ದರೆ ನಿಜಕ್ಕೂ ದೈವ ಹೃದಯಕ್ಕೆ ಮುಟ್ಟುತ್ತದೆ... ದೇವ-ಮಾನವನ ನಡುವಿನ ಸಂಬಂಧ ಅವರ್ಣನೀಯ...~ ಹೀಗೆ ದೈವಕ್ಕೂ ಸಂಗೀತಕ್ಕೂ ಮಾತು ಪೋಣಿಸುತ್ತಿದ್ದರು ಖ್ಯಾತ ಹಿಂದಿ ಗಾಯಕ ಸುರೇಶ್ ವಾಡ್ಕರ್.ನಗರದ ಹಳೆ ಮದ್ರಾಸ್ ರಸ್ತೆಯಲ್ಲಿನ ಆರ್‌ವಿಎಂ ಶಿವಮಂದಿರದಲ್ಲಿ ಸಂಜೆ ಭಕ್ತಿ ಭಾವದ ಪರಾಕಾಷ್ಠೆ ತುಂಬಿಕೊಂಡಿತ್ತು. ಪೂರ್ಣ ಸಂಜೆಯೂ ಅಲ್ಲದ, ಸಂಪೂರ್ಣ ರಾತ್ರಿಯೂ ಅಲ್ಲದ ಆ ಹೊತ್ತಲ್ಲಿ ದೈವ ಮತ್ತು ಭಕ್ತನ ನಡುವಿನ ಸಂಬಂಧವನ್ನು ವರ್ಣಿಸಲು, ಅದನ್ನು ಸಾಕ್ಷಾತ್ಕಾರಗೊಳಿಸಲು- `ಬೆಳಕು ಮತ್ತು ಧ್ವನಿ ಪ್ರದರ್ಶನ~ (ಎ ಯುನಿಕ್ ಲೈಟ್ ಅಂಡ್ ಸೌಂಡ್ ಶೋ) ನಡೆದಿತ್ತು.ಮಂದಿರವನ್ನು ಪೂರ್ಣ ಕತ್ತಲುಗೊಳಿಸಿ ಶಿವ ಮತ್ತು ಭಕ್ತನ ನಡುವಿನ ಸಂಭಾಷಣೆಯ ಧ್ವನಿ ತುಣುಕನ್ನು ನೀಡಿ ಅದಕ್ಕೆ ತಕ್ಕಂತೆ 65 ಅಡಿ ಎತ್ತರದ ಶಿವನ ಮೂರ್ತಿಗೆ ಕೆಂಪು, ನೀಲಿ, ಹಳದಿ, ಹಸಿರು ಬಣ್ಣವನ್ನು ಭಾವಕ್ಕೆ ತಕ್ಕಂತೆ ಬಿಂಬಿಸಿ ಶಿವನೇ ಪ್ರತ್ಯಕ್ಷವಾಗಿದ್ದಾನೆಯೋ ಎಂಬಂತಹ ನೈಜ್ಯ ಸಾಕ್ಷ್ಯ ಚಿತ್ರವನ್ನು ಅಲ್ಲಿ ರೂಪಿಸಲಾಗಿತ್ತು.ದೇವರ ಅಸ್ತಿತ್ವ, ಭಕ್ತನ ಮನಃಸ್ಥಿತಿ, ಆತನ ಇರುವಿಕೆಯನ್ನು ಗುರುತಿಸುವ ಮಾರ್ಗ, ಪ್ರಕೃತಿಯಲ್ಲಿನ ವಿಸ್ಮಯ ಎಲ್ಲವನ್ನೂ  ಸಂಭಾಷಣೆ ಮೂಲಕ ಅಲ್ಲಿಗೆ ಬಂದ ಭಕ್ತರಿಗೆ ಬೆಳಕು- ಧ್ವನಿಯ ಮಿಶ್ರಣದಲ್ಲಿ ಕಟ್ಟಿಕೊಡಲಾಯಿತು.ಸುಮಾರು 10 ನಿಮಿಷಗಳ ಈ ಪ್ರದರ್ಶನ ಇನ್ನು ಮುಂದೆ ನಿತ್ಯವೂ ಸಂಜೆ 7, ರಾತ್ರಿ 8 ಮತ್ತು 9 ಗಂಟೆಗೆ ಭಕ್ತರಿಗೆ ಪ್ರದರ್ಶಿಸಲಾಗುತ್ತದೆ. ಶಿವಮಂದಿರಕ್ಕೆ ಭೇಟಿ ನೀಡಿದ ಭಕ್ತರು ಈ ಪ್ರದರ್ಶನವನ್ನು ನೋಡಬಹುದು. ಈ ಬೆಳಕು ಮತ್ತು ಧ್ವನಿಯ ಸಂಭಾಷಣೆಗಾಗಿ 20 ಬಗೆಯ ಬೆಳಕನ್ನು ಬಳಸಿಕೊಳ್ಳಲಾಗಿದೆ.

 

ಸ್ಟಿರಿಯೋಫೋನಿಕ್ ಸೌಂಡ್ ಮತ್ತು ಲಘು ಸಂಗೀತದೊಂದಿಗೆ ಈ ಪ್ರದರ್ಶನ ಸಿದ್ಧಪಡಿಸಲಾಗಿದೆ. ದೇವರು ಎಲ್ಲೆಲ್ಲೂ ಇದ್ದಾನೆ ಎಂಬುದುನ್ನು ಜನರಿಗೆ ಮನವರಿಕೆ ಮಾಡುವುದೇ ಇದರ ಉದ್ದೇಶ ಎಂದರು ಆರ್‌ವಿಎಂ ಪ್ರತಿಷ್ಠಾನದ ರವಿ. ವಿ. ಮೆಲ್ವಾನಿ.

ಇದೇ ಸಂದರ್ಭದಲ್ಲಿ ಶಿವನಾಮ ಸ್ಮರಣೆಯ ಭಕ್ತಿ ಭಜನೆಗಳ ನೂತನ ಸೀಡಿಯನ್ನು ಬಿಡುಗಡೆ ಮಾಡಲಾಯಿತು. `ಆರ್‌ವಿಎಂ ಶಿವಭಜನೆ~ ಎಂಬ ಹೆಸರಿನ ಈ ಸೀಡಿ ಬಿಡುಗಡೆಗೆ ಹಿಂದಿ ಗಾಯಕ ಸುರೇಶ್ ವಾಡ್ಕರ್ ಆಗಮಿಸಿದ್ದರು.ಶಿವ ಮತ್ತು ಭಕ್ತನ ನಡುವಿನ ಸಂಬಂಧ, ಅಂತಃಕರಣ, ಅನುಭಾವವನ್ನು ಸಾರುವ ಎಂಟು ಹಾಡುಗಳುಳ್ಳ ಸೀಡಿಯನ್ನು ಹೊರತರಲಾಗಿದೆ. ಇದರಲ್ಲಿ ಎಂಟು ಹಾಡುಗಳಿದ್ದು, ಎರಡನ್ನು ಸುರೇಶ್ ವಾಡ್ಕರ್ ಹಾಡಿದ್ದಾರೆ. ಇನ್ನು ಮಿಕ್ಕ ಹಾಡುಗಳನ್ನು ನಾನು ಹಾಡಿದ್ದೇನೆ~ ಎಂದರು ಆರ್‌ವಿಎಂ.`ಭೋಲೆನಾಥ್ ಜೋ ಮೇರೆ ಸಾಥ್, ಜೊ ಭಿ ಭೋಲೆ ಮೈನ್ ಅರ್ಪಣ್ ಕರ್ತಾ ಹೂ~ ಎಂಬ ಸುರೇಶ್ ವಾಡ್ಕರ್ ಅವರು ಹಾಡಿದ್ದ ಹಾಡುಗಳನ್ನು ಇಲ್ಲಿಗೆ ಬಂದ ಭಕ್ತರಿಗೆ ಕೇಳಿಸಲಾಯಿತು.`ಹೋಗಾ ಜೊ ಹೋಗಾ ಕ್ಯೂನ್ ಚಿಂತಾ ಕರೂನ್, ಮೈನ್ ನಹಿ ಕರ್ತಾ ಕುಚ್ ಭಿ ಭೋಲೆ~... `ಭೋಲೆನಾಥ್ ತೇರೆ ದರ್ ಪೆ ಜಬ್ ಆತಾ~... `ಕಲ್ ಐಸೇ ಕುಛ್ ನಾ ಹೋಯೇಗಾ~... `ದೇಖು ತೋ ಭೋಲೆ ಸಚ್ ಮೈನ್~... `ಓಂ ನಮಃ ಶಿವಾಯ~... ಎಂಬ ಈ ಹಾಡುಗಳು ಭಕ್ತರ ಮನವನ್ನು ಪೂರ್ಣ ಭಕ್ತಿರಸದಲ್ಲಿ ತೊಡುಗುವಂತೆ ಮಾಡುತ್ತದೆ ಎನ್ನುವುದು ಪ್ರತಿಷ್ಠಾನದ ವ್ಯಾಖ್ಯಾನ.ಇಲ್ಲಿನ ಭಕ್ತಿ ಹಾಡುಗಳನ್ನು ಹಾಡುತ್ತಲೇ ನಾನು ಭಾವಪರವಶನಾಗಿದ್ದೆ. ಸಂಗೀತ ದೈವತ್ವವನ್ನು ಬೆಸೆಯುವ ರೀತಿ ನಿಜಕ್ಕೂ ಅಚ್ಚರಿ ತರಿಸುತ್ತದೆ. ಅದನ್ನು ಹಾಡಿ, ಆಲಿಸುತ್ತಲೇ ಅನುಭವಿಸಬೇಕು ಎಂದರು ಸುರೇಶ್ ವಾಡ್ಕರ್.`99ರೂಪಾಯಿಯ ಈ ಸೀಡಿಯನ್ನು ಕೊಂಡುಕೊಂಡರೆ ಆ ಹಣವನ್ನು ಆರ್‌ವಿಎಂ ಆಸ್ಪತ್ರೆಗೆ, ನಿರಾಶ್ರಿತರಿಗೆ ನೀಡಲಾಗುವುದು. ಜನರಲ್ಲಿ ಭಕ್ತಿಯ ಮಹತ್ವದ ಬಗ್ಗೆ ಅರಿವು ಮೂಡಬೇಕು, ಇದರಿಂದ ಅವರ ಮನಸ್ಸಿಗೆ ಶಾಂತಿ ದೊರಕಬೇಕು ಎಂಬುದೇ ನಮ್ಮ ಉದ್ದೇಶ~ ಎನ್ನುವುದು ಸಂಸ್ಥೆಯ ಮಾತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.