ಶನಿವಾರ, ಮೇ 8, 2021
23 °C
ಅಜ್ಜಂಪುರ: ರೈತರ ಪ್ರಬಲ ವಿರೋಧದ ನಡುವೆಯೂ ಆರಂಭ

ಭದ್ರಾ ಮೇಲ್ದಂಡೆ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜ್ಜಂಪುರ: ತಾಲ್ಲೂಕಿನ ರೈತರ ಪ್ರಬಲ ವಿರೋಧದ ನಡುವೆ, ಪೊಲೀಸರ ಸರ್ಪಗಾವಲಿನಲ್ಲಿ ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಯ ಜನರಿಗೆ ಕುಡಿಯುವ ನೀರೊದಗಿಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಶನಿವಾರ ಗುತ್ತಿಗೆದಾರ ಮತ್ತು ಎಂಜಿನಿಯರ್ ಪಟ್ಟಣದ ಸರ್ವೆ ನಂ 23/1ರ ಕೃಷಿ ಭೂಮಿಯಲ್ಲಿ ಶನಿವಾರ ಚಾಲನೆ ನೀಡಿದರು.ಗುತ್ತಿಗೆದಾರ ಉಮೇಶ್, 18ರಿಂದ 20ಮೀ ಆಳದಲ್ಲಿ ಸಾಗುವ ಸುರಂಗ ಕಾಲುವೆ ನಿರ್ಮಾಣಕ್ಕೆ 50ರಿಂದ 100ಮೀ ಅಗಲದಲ್ಲಿ ಕಾಮಗಾರಿ ನಡೆಸಬೇಕಾಗಿದೆ. ಕಾಮಗಾರಿ ನಡೆಸುತ್ತಿರುವ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಕಾಮಗಾರಿ ನಡೆಸಲು ಅವಶ್ಯವಿರುವ ಭೂಮಿ ನೀಡಲು ಕೆಲ ರೈತರು ಒಪ್ಪಿದು, ಪರಿಹಾರ ನೀಡಿಕೆ ಬಾಕಿ ಉಳಿದಿದೆ. ಸರ್ಕಾರ ರೈತರ ತರೀ ಭೂಮಿಗೆ 3ಲಕ್ಷ, ನೀರಾವರಿ ಭೂಮಿಗೆ 5ಲಕ್ಷ, ತೆಂಗು ಮತ್ತು ಅಡಿಕೆ ತೋಟಗಳಿಗೆ 12ಲಕ್ಷ ಪರಿಹಾರ ಘೋಷಿಸಿದೆ. ಇಂದು ಅಜ್ಜಂಪುರ-ಹೆಬ್ಬೂರು ನಡುವಿನ 2.7ಕಿಮೀ ತೆರೆದ ಕಾಲುವೆ ಕಾಮಗಾರಿ ಪ್ರಾರಂಭಗೊಂಡಿದೆ ಎಂದರು.ಮಧ್ಯಾಹ್ನದ ವೇಳೆಗೆ ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ಸುರೇಶ್ ನೇತೃತ್ವದಲ್ಲಿ ನೂರಾರು ರೈತರು ಭದ್ರಾ ಮೇಲ್ದಂಡೆ ಕಾಮಗಾರಿ ಕ್ಯಾಂಪ್‌ಗೆ ಮುತ್ತಿಗೆ ಹಾಕಿ, ಭದ್ರಾ ಮೇಲ್ದಂಡೆ ಕಾಮಗಾರಿ ಬಗ್ಗೆ ಕಳೆದ 17ರಂದು ನೀರಾವರಿ ಸಚಿವರೊಂದಿಗೆ ನಡೆದ ಸಭೆಯಲ್ಲಿ ತಾಲ್ಲೂಕಿಗೆ ಯೋಜನೆಯಲ್ಲಿ 5.5ಟಿಎಂಸಿ ನೀರು ಒದಗಿಸಲು ಒಪ್ಪಗೆ ದೊರೆತಿದೆ. ಅಲ್ಲದೇ ಸುರಂಗ ಮಾರ್ಗ ಬದಲಾವಣೆ ಬಗ್ಗೆ ರಾಜ್ಯ ತಾಂತ್ರಿಕ ಉಪಸಮಿತಿ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರ ಸಹಮತವಿರಬೇಕೆಂಬ ತೀಮಾನಕ್ಕೆ ಬರಲಾಗಿತ್ತು. ಅಂದಿನ ಸಭಾ ನಡಾವಳಿಕೆ ಪ್ರತಿ ಪಡೆದು ನಂತರ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲಿ ಎಂದು ಒತ್ತಾಯಿಸಿ ಉಪವಿಭಾಗಧಿಕಾರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ರೇವಣ್ಣ ಮಾತನಾಡಿ, ತಾಲ್ಲೂಕಿನ ರೈತರ ಸತತ ನಾಲ್ಕು ವರ್ಷಗಳ ಹೋರಾಟದಿಂದ ಎಚ್ಚೆತ್ತ ಮಾನ್ಯ ನೀರಾವರಿ ಸಚಿವ ಎಂ.ಬಿ .ಪಾಟೀಲರು ಉಬ್ರಾಣಿ-ಅಮೃತಾಪುರ ಏತ ನೀರಾವರಿ ಮಾದರಿಯಲ್ಲಿ ತಾಲ್ಲೂಕಿಗೆ ಸಮಗ್ರ ಶಾಶ್ವತ ನೀರಾವರಿ ಕಲ್ಪಿಸುವ ಐತಿಹಾಸಿಕ ನಿಲುವು ತಳೆದಿದ್ದಾರೆ ಎಂದು ಸಚಿವರನ್ನು ಅಭಿನಂದಿಸಿದರು.ತಾ.ಪಂ.ಸದಸ್ಯ ರಾಜ್‌ಕುಮಾರ್ ಮೂರು ದಿನದೊಳಗೆ, ಬೆಂಗಳೂರಿನಲ್ಲಿ ನೀರಾವರಿ ಸಚಿವರೊಂದಿಗಿನ ಚರ್ಚೆಯ ನಡಾವಳಿ ಪಡೆಯದೇ, ಸುರಂಗಮಾರ್ಗ ನಿರ್ಮಾಣಕ್ಕೆ ಮುಂದಾದರೆ ಉಗ್ರ ಹೋರಾಟದ ಮೂಲಕ ಕಾಮಗಾರಿ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಅನುರಾಧಾ, ಭದ್ರಾ ಮೇಲ್ದಂಡೆಯ ವಿರುದ್ದದ ಹೋರಾಟದ ಹಲವಾರು ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಚರ್ಚಿಸಲಾಗಿದೆ. ರೈತರ ಹಿತಾಸಕ್ತಿ ಬಲಿಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ಕಳೆದ 17ರ ಸಭೆಯಲ್ಲಿನ ನಡಾವಳಿಯ ಅಧಿಕೃತ ಆದೇಶದ ಪಡೆದು, ಕಾಮಗಾರಿಯ ವಿವರಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಎಂಜಿನಿಯರ್ ಮಹೇಶ್‌ಕುಮಾರ್ ಅವರಿಗೆ ಸೂಚಿಸಿದರು.ಒಟ್ಟಾರೆ ಕಳೆದ ನಾಲ್ಕು ವರ್ಷಗಳಿಂದ ತಾಲ್ಲೂಕಿನ ರೈತರಿಗೆ ಭದ್ರಾ ಮೇಲ್ದಂದೆ ಯೋಜನೆಯಿಂದ ಮಾರಕವಾಗುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ರೈತರು, ರೈತ ಸಂಘಟನೆಗಳು ನಡೆಸಿದ ಹಲವಾರು ಪ್ರತಿಭಟನೆ, ಜಾಥಾ, ಬಂದ್, ಹೋರಾಟಗಳ ನಡುವೆಯೂ ಶನಿವಾರ ಕಾಮಗಾರಿ ಆರಂಭವಾಗಿದ್ದು ವಿಶೇಷವಾಗಿತ್ತು.ರೈತರ ವಿರೋಧದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಬಾಗಗಳ ಎರಡು ನೂರಕ್ಕೂ ಅಧಿಕ ಸಂಖ್ಯೆಯ ಪೋಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಡಿವೈಎಸ್‌ಪಿ ಸದಾನಂದ್ ನಾಯ್ಕ, ವೃತ್ತ ನಿರೀಕ್ಷಕ ಉಮಾಪತಿ, ಎಸ್‌ಐ ರಘು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಪರಿಸ್ಥಿತಿ ನಿಭಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.