ಶುಕ್ರವಾರ, ಮೇ 14, 2021
35 °C

ಭರದಿಂದ ನಡೆಯುತ್ತಿರುವ ಕೆರೆ ಸ್ವಚ್ಛತೆ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಉಣಕಲ್ ಕೆರೆಯ ಸ್ವಚ್ಛತೆ ಕೆಲಸ ಭರದಿಂದ ನಡೆಯುತ್ತಿದೆ. ಕೆರೆಯ ಬದಿಯಲ್ಲಿ ಬೆಳೆದು ನಿಂತಿರುವ ಆಚ್, ಅಂತರಗಂಗೆ ಮತ್ತಿತರ ಕಳೆಯನ್ನು ತೆಗೆಯುವ ಕಾರ್ಯ ಒಂದು ವಾರದಿಂದ ನಡೆಯುತ್ತಿದ್ದು ಬಹುತೇಕ ಮುಗಿಯುತ್ತ ಬಂದಿದೆ. ಹೀಗಾಗಿ ಕೆರೆ ಸುಂದರವಾಗಿ ಗೋಚರಿಸತೊಡಗಿದೆ.ಕೊಳೆ ತುಂಬಿದ್ದ ಕೆರೆಗೆ ಮಳೆಗಾಲ ಆರಂಭವಾಗುತ್ತಿದ್ದಂತೆ ಹೆಚ್ಚು ಮಲಿನ ನೀರು ಹಾಗೂ ಕಸ-ಕಡ್ಡಿ ಬಂದು ಸೇರಲು ಆರಂಭವಾಗಿತ್ತು. ಮಲಿನ ನೀರು ತುಂಬಿದಂತೆಲ್ಲ ಕಳೆ ಕೂಡ ಹೆಚ್ಚಾಗತೊಡಗಿತ್ತು. ಇದು ಕೆರೆಯ ಸೌಂದರ್ಯಕ್ಕೆ ಧಕ್ಕೆ ತರುತ್ತಿತ್ತು. ಜಲಚರಗಳ ಜೀವಕ್ಕೂ ಕಂಟಕವಾಗಲಿದೆ ಎಂಬ ಆತಂಕ ಕಾಡತೊಡಗಿತ್ತು.ಈ ಹಿನ್ನೆಲೆಯಲ್ಲಿ ಕಸ-ಕಡ್ಡಿಯನ್ನು ತೆಗೆದು ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿ ಉಣಕಲ್ ಹಾಗೂ ಸುತ್ತುಮುತ್ತಲ ಬಡಾವಣೆಗಳ ನಿವಾಸಿಗಳು ಈಚೆಗೆ ನಗರಪಾಲಿಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿತ್ತು.

ಕೆಲ ದಿನಗಳ ಹಿಂದೆ ಸ್ವಚ್ಛತೆ ಕೆಲಸ ಆರಂಭವಾಗಿತ್ತು. ನಗರದ ಎ.ಬಿ.ಸುರೇಬಾನ ಕನ್‌ಸ್ಟ್ರಕ್ಷನ್ ಕಂಪೆನಿ ಸ್ವಚ್ಛತೆ ಗುತ್ತಿಗೆ ಪಡೆದುಕೊಂಡಿದ್ದು ಸುಮಾರು 30 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ತೆಗೆಯುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಹುಲ್ಲು-ಗಿಡಗಳನ್ನು ಕಿತ್ತು ಬದಿಗೆ ಹಾಕಲಾಗುತ್ತಿದೆ. ನೀರಿನಲ್ಲಿ ತೇಲುತ್ತಿರುವ ಅಂತರಗಂಗೆಯನ್ನು ಸುಲಭವಾಗಿ ತೆಗೆದು ಮೇಲೆ ಹಾಕಲಾಗುತ್ತಿದೆ. ಆಚ್ ಹುಲ್ಲನ್ನು ಕೀಳಲು ಕೆಲಸಗಾರರು ಹರಸಾಹಸಪಡುತ್ತಿರುವ ದೃಶ್ಯ ಸೋಮವಾರ ಕಂಡುಬಂತು.`ಹುಲ್ಲು, ಗಿಡ, ಪಾಚಿ ಹಾಗೂ ಕಸ-ಕಡ್ಡಿಯನ್ನು ತೆಗೆದು ಸ್ವಚ್ಛ ಮಾಡಿಕೊಡಲು ಗುತ್ತಿಗೆ ಪಡೆಯಲಾಗಿದೆ. ಕೆರೆಯಿಂದ ತೆಗೆದು ಮೇಲೆ ಹಾಕಿದ ಹುಲ್ಲು ಒಣಗಿದ ನಂತರ ಬೇರೆಡೆ ಸಾಗಿಸಲಾಗುವುದು. ಅಲ್ಲಿಯ ವರೆಗೆ ಇಲ್ಲಿ ವಾಯು ವಿಹಾರಕ್ಕೆ ಬರುವವರು ಸಹಕರಿಸಬೇಕು.ಆದಷ್ಟು ಬೇಗ ಸ್ವಚ್ಛತೆ ಕೆಲಸವನ್ನು ಮುಗಿಸಿ ಕೆರೆ ಮತ್ತೆ ಸುಂದರವಾಗಿ ಕಂಗೊಳಿಸುವಂತೆ ಮಾಡಲಾಗುವುದು' ಎಂದು ಗುತ್ತಿಗೆದಾರರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.