ಬುಧವಾರ, ಮೇ 25, 2022
22 °C

ಭಾರತಕ್ಕೆ ಒಬ್ಬನೇ ಆನಂದ್...

ಪಿ.ಜಿ. Updated:

ಅಕ್ಷರ ಗಾತ್ರ : | |

ಭಾರತಕ್ಕೆ ಒಬ್ಬನೇ ಆನಂದ್...

ವಿಶ್ವನಾಥನ್ ಆನಂದ್ ಐದನೇ ಸಲ ವಿಶ್ವ ಚೆಸ್ ಕಿರೀಟ ಗೆದ್ದು ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. 1987ರಲ್ಲಿ  ವಿಶ್ವ ಜೂನಿಯರ್ ಚೆಸ್ ಪ್ರಶಸ್ತಿ ಗೆದ್ದಾಗಲೇ ಅವರು ಚೆಸ್ ಲೋಕದ ಗಮನ ಸೆಳೆದಿದ್ದರು. ಯೂರೋಪ್‌ಗೆ ಹೋಗಿ ನೆಲೆಸಿದ ಮೇಲೆ ಅವರ ಚೆಸ್ ಬದುಕಿಗೆ ಹೊಸ ಆಯಾಮ ಸಿಕ್ಕಿತು.ಆದರೆ ಆನಂದ್ ಎಂಬತ್ತರ ದಶಕದಲ್ಲಿ ಭಾರತದಲ್ಲಿದ್ದರಲ್ಲಾ, ಆಗ ಅವರ ಆತ್ಮೀಯ ಗೆಳೆಯರಾಗಿದ್ದ ಡಿ.ವಿ.ಪ್ರಸಾದ್ ಅವರೊಡನೆ ಮೊನ್ನೆ ಮಾತಿಗಿಳಿದಾಗ ಆನಂದ್ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ದೇವಕಿ ವೆಂಕಟರಾಮನ್ ಪ್ರಸಾದ್ ಕೂಡಾ ಸಾಮಾನ್ಯರೇನಲ್ಲ. ಹಿಂದೆ ಎರಡು ಸಲ ರಾಷ್ಟ್ರೀಯ ಚಾಂಪಿಯನ್ ಆಗಿದ್ದವರು. 1985ರಲ್ಲಿ ಆನಂದ್‌ಗೆ ಅರ್ಜುನ ಪ್ರಶಸ್ತಿ ಸಿಕ್ಕಿದ್ದರೆ, 1987ರಲ್ಲಿ ಡಿ.ವಿ.ಪ್ರಸಾದ್ ಆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇಬ್ಬರೂ ಸಮಾನ ವಯಸ್ಕರು ಮತ್ತು ಸಮಾನ ಮನಸ್ಕರು. ಆನಂದ್ ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವರು.

* ಆನಂದ್ ಭಾರತದಲ್ಲಿದ್ದಾಗಿನ ನಿಮ್ಮ ನೆನಪುಗಳು...

ಪ್ರಸಾದ್: ನಾವು ಗೆಳೆಯರು ನಿಜ, ಆದರೆ ನಮ್ಮ ಮಾತುಕತೆ, ಭಾವ, ಕ್ರಿಯೆ ಎಲ್ಲವೂ ಚದುರಂಗ ಲೋಕದೊಳಗಿನದೇ ಆಗಿತ್ತು. ನಾಲ್ಕು ಚೆಸ್ ಒಲಿಂಪಿಯಾಡ್‌ಗಳಲ್ಲಿ ನಾವಿಬ್ಬರೂ ಭಾರತ ತಂಡವನ್ನು ಪ್ರತಿನಿಧಿಸಿದ್ದೆವು.

 

1986ರಲ್ಲಿ  ದುಬೈ, 88ರಲ್ಲಿ ಗ್ರೀಸ್, 90ರಲ್ಲಿ ಯುಗೋಸ್ಲಾವಿಯ, 92ರಲ್ಲಿ ಮನಿಲಾದಲ್ಲಿ ನಡೆದಿದ್ದ ಒಲಿಂಪಿಯಾಡ್‌ಗಳಲ್ಲಿ ನಾವು ಒಗ್ಗೂಡಿ ಆಡಿದ್ದೆವು. ದಿನಗಟ್ಟಲೆ ಒಟ್ಟಿಗೆ ಕುಳಿತು ತಂತ್ರಗಳನ್ನು ಹೆಣೆದಿದ್ದೆವು. ಏಕತಾನತೆ ಹೋಗಿಸಲು ಹೊರಗೆ ತಿರುಗಾಡುತ್ತಿದ್ದೆವು. ಸುಮಾರು 12 ವರ್ಷಗಳ ಕಾಲದ ನಮ್ಮಿಬ್ಬರ ಒಡನಾಟ ಪದಗಳಿಗೆ ನಿಲುಕುವಂತಹದ್ದಲ್ಲ.* ಭಾರತದ ಮಟ್ಟಿಗೆ ಆನಂದ್ ಒಬ್ಬರೇ `ಸೂಪರ್~ ಗ್ರ್ಯಾಂಡ್‌ಮಾಸ್ಟರ್ ಏಕೆ? ಇನ್ನೊಬ್ಬ `ಆನಂದ್~ ಕಾಣುತ್ತಿಲ್ಲವಲ್ಲ ?

ಭಾರತದ ಮಟ್ಟಿಗಂತೂ ಆನಂದ್ ಅವರಿಗೆ ಇನ್ನಾರನ್ನೂ ಹೋಲಿಸಲಿಕ್ಕೆ ಸಾಧ್ಯವೇ ಇಲ್ಲ. ಆತನ ಅದ್ಭುತವಾದ ಜ್ಞಾಪಕಶಕ್ತಿ, ಅರ್ಪಣಾ ಮನೋಭಾವ, ಮಾನಸಿಕ ದೃಢತೆ ಅನನ್ಯವಾಗಿರುವಂತಹದ್ದು. 25 ವರ್ಷಗಳ ಹಿಂದೆ ಅವರು ಪಂದ್ಯ ಒಂದಕ್ಕೆ ಅದೆಷ್ಟು ಗಾಢವಾಗಿ ಸಿದ್ಧತೆ ನಡೆಸುತ್ತಿದ್ದರೋ, ಈಗಲೂ ಅಷ್ಟೇ ತನ್ಮಯತೆಯನ್ನು ಅವರಲ್ಲಿ ಕಾಣಬಹುದಾಗಿದೆ.ತಂತ್ರಗಳಿಗೆ ಸಂಬಂಧಿಸಿದಂತೆ ಅಂದಿನಿಂದ ಇಂದಿನವರೆಗೂ ದಿನದಿಂದ ದಿನಕ್ಕೆ ಸುಧಾರಿಸುತ್ತಲೇ ಇದ್ದಾರೆ. ಇದೆಲ್ಲದರ ಜತೆಗೆ ಅವರಲ್ಲಿ ಹುಟ್ಟುತ್ತಲೇ ಬಂದಿರುವ ಪ್ರತಿಭೆ ಇತರ ಎಲ್ಲರಿಗಿಂತಲೂ ಬಹಳಷ್ಟು ಜಾಸ್ತಿ ಇದೆ. ದಟ್ಟ ಅನುಭವ ಇದೆ.

ಆನಂದ್ ಸೋಮಾರಿತನದಿಂದ ಸುಮ್ಮನೆ ಕೆಲವೊತ್ತು ಕುಳಿತ್ತಿದ್ದನ್ನು ನಾನು ಯಾವತ್ತೂ ನೋಡಿಲ್ಲ.  ಇವುಗಳಲ್ಲಿ ಕೆಲವಾದರೂ ಅಂಶಗಳು ಸಮ್ಮಿಲನಗೊಂಡ ಇನ್ನೊಬ್ಬ ಆಟಗಾರನನ್ನು ಭಾರತದಲ್ಲಿ ನಾನು ಕಂಡಿಲ್ಲ.* ರ‌್ಯಾಪಿಡ್ ಚೆಸ್‌ನಲ್ಲಿ ಆನಂದ್ ಅತ್ಯಂತ ನಿಪುಣ. ಇದು ಅವರ ಬಲು ದೊಡ್ಡ ಶಕ್ತಿ. ಮೊನ್ನೆ ಗೆಲ್ಫಾಂಡ್ ಎದುರಿನ ಕ್ಲಾಸಿಕಲ್ ಗೇಮ್‌ಗಳಲ್ಲಿ ಡ್ರಾ ಮಾಡಿಕೊಳ್ಳುತ್ತಲೇ ಹೋಗಿ ಟೈಬ್ರೇಕರ್ ಸ್ಥಿತಿ ನಿರ್ಮಾಣ ಮಾಡಿ, ಅಲ್ಲಿ ಗೆದ್ದೇಬಿಟ್ಟರಲ್ಲಾ...

ಹೌದು, ರ‌್ಯಾಪಿಡ್ ಚೆಸ್‌ನಲ್ಲಿ ಕಾಲಾವಧಿ ಕಡಿಮೆ ಇರುತ್ತದೆ. ಇಲ್ಲಿ ವೇಗ ಮತ್ತು ಕರಾರುವಾಕ್ಕು ನಡೆಗಳಷ್ಟೇ ಮುಖ್ಯ. ಹುಟ್ಟಾ ಪ್ರತಿಭಾವಂತರು ಮಾತ್ರ ಇಲ್ಲಿ ಯಶಸ್ಸು ಗಳಿಸಲು ಸಾಧ್ಯ. ಆನಂದ್ ತಮ್ಮ ಈ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾ ಬಂದಿದ್ದಾರೆ.* ಈ ಸಲ ವಿಶ್ವ ಅಗ್ರ ಕ್ರಮಾಂಕದ ಆಟಗಾರ ನಾರ್ವೆಯ ಮ್ಯಾಗ್ನಸ್ ಕ್ಯಾಲ್ಸನ್ ಆಡಲಿಳಿಯಲಿಲ್ಲ. ಪ್ರಬಲ ಆಟಗಾರ ಟೊಪೊಲೊವ್ ನಿವೃತ್ತಿ ಹೇಳಿದ್ದಾರೆ. ಅರೋನಿಯನ್, ಕ್ರಾಮ್ನಿಕ್ ಸಮರದಲ್ಲಿಲ್ಲ. ಹೀಗಾಗಿ ಆನಂದ್‌ಗೆ ಗೆಲುವು ಸುಲಭವಾಗಿ ಬಂದಿತು ಎಂಬ ಮಾತೂ ಕೇಳಿ ಬರುತ್ತಿದೆಯಲ್ಲಾ ?ನೋಡಿ ಕ್ಯಾಲ್ಸನ್ ಅಗ್ರ ಕ್ರಮಾಂಕಿತನೇ ಇರಬಹುದು. ಆದರೆ ಆನಂದ್‌ಗೆ ಇರುವಷ್ಟು ಅನುಭವ ಇಲ್ಲ. ಆನಂದ್‌ಗಿಂತ ಕ್ಯಾಲ್ಸನ್ 21 ವರ್ಷ ಚಿಕ್ಕವನು. ಆನಂದ್‌ಗೆ ಗೆಲ್ಫಾಂಡ್ ಸುಲಭದ ತುತ್ತಂತೂ ಆಗಿರಲೇ ಇಲ್ಲ.ಇಂತಹ ಹಂತಗಳಲ್ಲಿ ಆಡುವ ಪ್ರತಿಯೊಬ್ಬರೂ ಒಂದಿಲ್ಲಾ ಒಂದು ರೀತಿ ನಿಪುಣರಾಗಿರುತ್ತಾರೆ, ಅತೀವ ಬುದ್ಧಿಮತ್ತೆ ಉಳ್ಳವರೇ ಆಗಿರುತ್ತಾರೆ. ಮೊನ್ನೆ ಇವರಿಬ್ಬರ ನಡುವಣ ಹಣಾಹಣಿ ಒಂದು ಹಂತದಲ್ಲಿ 6-6ರಿಂದ ಸಮವಾಗಿದ್ದುದೇ ಇದಕ್ಕೆ ನಿದರ್ಶನ ತಾನೆ. ಇಂತಹ ವಿಷಯಗಳಲ್ಲಿ ಯಾವುದೇ ಊಹೆಗಳೂ ಸರಿ ಎನಿಸುವುದಿಲ್ಲ.* ಆನಂದ್‌ಗೆ ವಿಶ್ವ ಪ್ರಶಸ್ತಿ ಬಂದಿರಬಹುದು. ಆದರೆ ಫಿಡೆ ರೇಟಿಂಗ್ ಮಾತ್ರ 2,791ರಲ್ಲೆೀ ನಿಂತಿದೆಯಲ್ಲಾ...

ಹೌದು, ಇತ್ತೀಚೆಗಿನ ದಿನಗಳಲ್ಲಿ ಆನಂದ್ ಪ್ರಮುಖ ಫಿಡೆ ರೇಟೆಡ್ ಟೂರ್ನಿಗಳಲ್ಲಿ ಆಡಲಿಳಿದಿಲ್ಲ. ಅವರು ವಿಶ್ವ ಕಿರೀಟದ ಮೇಲೆಯೇ ಕಣ್ಣು ನೆಟ್ಟಿದ್ದರಿಂದ ಆ ದಿಸೆಯಲ್ಲಿಯೇ ನಿರಂತರ ತರಬೇತಿಯಲ್ಲಿ ಮಗ್ನರಾಗಿದ್ದರು.ಹೀಗಾಗಿ ಅವರ ರೇಟಿಂಗ್ ಪಾಯಿಂಟ್‌ಗಳು ಒಂದಿಷ್ಟು ಕಡಿಮೆಯಾಗಿದೆ. ಮುಂದಿನ ಕೆಲವೇ ಸಮಯದಲ್ಲಿ ಆನಂದ್ ತಮ್ಮ ರೇಟಿಂಗ್ ಹೆಚ್ಚಿಸಿಕೊಳ್ಳಲೂ ಬಹುದು. ಹಿಂದೆ ಹಲವು ಸಲ ಇವರು 2,800ರ ರೇಟಿಂಗ್ ದಾಟಿದ್ದಾರಲ್ಲ.* ಭಾರತಕ್ಕೆ ವಿಶ್ವ ಪ್ರಶಸ್ತಿ ಬಂದಿದೆ. ಆದರೆ ಒಮ್ಮೆಯೂ ಚೆಸ್ ಒಲಿಂಪಿಯಾಡ್‌ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ. ಆನಂದ್ ತಮ್ಮ ವೈಯಕ್ತಿಕ ಸ್ಪರ್ಧೆ ಮತ್ತು ಸವಾಲಿಗೇ ಹೆಚ್ಚು ಒತ್ತು ನೀಡಿದರೇನೋ ಎಂದೆನಿಸುವುದೆ ?

ಅಂತಹ ಆಲೋಚನೆಯೇ ಬೇಡ. ಒಲಿಂಪಿಯಾಡ್‌ನಲ್ಲಿ ಸುಮಾರು 150ಕ್ಕೂ ಹೆಚ್ಚು ರಾಷ್ಟ್ರಗಳ ತಂಡಗಳು ಪಾಲ್ಗೊಳ್ಳುತ್ತವೆ. ಅಲ್ಲಿ ತಂಡದ ಎಲ್ಲರೂ ಅತ್ಯುತ್ತಮ ಸಾಮರ್ಥ್ಯ ತೋರಿದರಷ್ಟೇ ಯಶಸ್ಸು ಸಾಧ್ಯ. 80ರ ದಶಕದಲ್ಲಿ ಆನಂದ್ ಮತ್ತು ನಾನು ಒಗ್ಗೂಡಿ ನಾಲ್ಕು ಒಲಿಂಪಿಯಾಡ್‌ಗಳಲ್ಲಿ ಆಡಿದ್ದೇವೆ.ಆನಂದ್ ಗೆಲುವಿಗಾಗಿ ಶಕ್ತಿಮೀರಿ ಯತ್ನಿಸುತ್ತಿದ್ದರು. ಭಾರತ 1990ರಲ್ಲಿ 10ನೇ ಸ್ಥಾನ ಪಡೆದಿದ್ದರೆ, 2000ದಲ್ಲಿ 8ನೇ ಸ್ಥಾನ ಮತ್ತು ಇಟಲಿಯ ಟ್ಯೂರಿನ್‌ನಲ್ಲಿ 6ನೇ ಸ್ಥಾನ ಗಳಿಸಿದೆ. ಈ ಸಾಧನೆಗಳನ್ನು ಲಘುವಾಗಿ ಕಾಣುವಂತಹದ್ದೇನಿಲ್ಲ. * ಭಾರತದ ಮಟ್ಟಿಗೆ ಸಚಿನ್ ಯಾಕಿನ್ನೂ ನಿವೃತ್ತಿಯಾಗಿಲ್ಲ ಎಂಬ ಪ್ರಶ್ನೆ ಆಗಿಂದಾಗ್ಗೆ ಸದ್ದು ಮಾಡುತ್ತಿರುತ್ತದೆ. ಕ್ಯಾಸ್ಪರೊವ್ ಫಿಡೆ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾಗಲೇ ನಿವೃತ್ತರಾದರು. ಅದೇ ರೀತಿ ಆನಂದ್‌ಗೂ ಪ್ರಶ್ನೆಗಳು ಎದುರಾಗಿರಬಹುದಲ್ಲಾ ?

ಸಹಜ, ಇಂತಹ ಪ್ರಶ್ನೆಗಳು ಕ್ರೀಡಾಪಟುಗಳನ್ನು ಆಗಿಂದಾಗ್ಗ ಕಾಡುತ್ತಲೇ ಇರುತ್ತವೆ. ಮುಖ್ಯ ವಿಷಯ ಏನಪ್ಪಾ ಅಂದ್ರೆ, ಸಚಿನ್‌ಗೂ ಆನಂದ್‌ಗೂ ಹೋಲಿಕೆ ಸರಿಯೇ ಅಲ್ಲ. ಫುಟ್‌ಬಾಲ್ ಅಥವಾ ಕ್ರಿಕೆಟ್‌ಗೆ ದೈಹಿಕ ಫಿಟ್‌ನೆಸ್ ಬಹಳ ಮುಖ್ಯ. ಆದರೆ ಚೆಸ್ ಹಾಗಲ್ಲ, ಇಲ್ಲಿ ಅನುಭವ ಗಳಿಸುತ್ತಾ ಹೋದಂತೆ ಆಟಗಾರ ಹೆಚ್ಚೆಚ್ಚು ಬಲಿಷ್ಠನಾಗುತ್ತಾ ಹೋಗುತ್ತಾನೆ.50 ವರ್ಷಗಳ ನಂತರವೂ ವಿಶ್ವ ಚಾಂಪಿಯನ್ ಗೆದ್ದ ಕಥೆಗಳೇ ಚೆಸ್‌ನಲ್ಲಿವೆಯಲ್ಲ. ಆನಂದ್‌ಗೆ ಇನ್ನೂ 43 ವರ್ಷ ವಯಸ್ಸು ಅವರು ಇನ್ನೂ ಒಂದು ದಶಕಕ್ಕೂ ಹೆಚ್ಚು ಕಾಲ ವಿಶ್ವ ಪ್ರಶಸ್ತಿಯನ್ನು ತಮ್ಮಲ್ಲಿಟ್ಟುಕೊಂಡರೂ ಅಚ್ಚರಿ ಪಡಬೇಕಿಲ್ಲ. ಹೀಗಾಗಿ ನಾವು ಆನಂದ್ ನಿವೃತ್ತಿ ಬಗ್ಗೆ ಮಾತನಾಡುವುದೇ ಅಪ್ರಸ್ತುತ ಎನಿಸುತ್ತದೆ.* ಬಟೊನಿಕ್ ಹಿಂದೆ ಕ್ಯಾಸ್ಪರೊವ್‌ಗೆ ತರಬೇತಿ ನೀಡಿ ವಿಶ್ವದೆತ್ತರ ನಿಲ್ಲಿಸಿದ ಹಾಗೆ, ಕ್ಯಾಸ್ಪರೊವ್ ಈಗ ಕ್ಯಾಲ್ಸನ್‌ಗೆ ತರಬೇತಿ ನೀಡಿ ವಿಶ್ವದ ಅಗ್ರ ಕ್ರಮಾಂಕಿತನನ್ನಾಗಿಸಿದ. ಈ ರೀತಿ ಆನಂದ್ ಭಾರತದಲ್ಲಿ ಅಂತಹ ಪ್ರಯತ್ನಕ್ಕೆ ಕೈಹಾಕಲಿಲ್ಲವಲ್ಲ. ಚಾಂಪಿಯನ್ನರು ಚಾಂಪಿಯನ್ನರನ್ನು ಹುಟ್ಟು ಹಾಕುವ ಸಾಹದತ್ತ ಆನಂದ್ ಗಮನ  ಹರಿಸಿಲ್ಲವಲ್ಲ ?

ಚೆಸ್‌ನಲ್ಲಿ ಆಡೋದೆ ಬೇರೆ, ಕೋಚಿಂಗ್ ನೀಡೋದೆ ಬೇರೆ. ಎರಡನ್ನೂ ಏಕಕಾಲದಲ್ಲಿ ಮಾಡಲು ಸಮಯ ಬಹಳ ಕಡಿಮೆ ಇರುತ್ತೆ. ಆನಂದ್ ವೃತ್ತಿಪರ ಆಟ ನಿಲ್ಲಿಸಿದ ನಂತರ ಈ ಬಗ್ಗೆ ಯೋಚಿಸಬಹುದೇನೊ ಅಂತೆನಿಸುತ್ತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.