ಭಾನುವಾರ, ಜೂಲೈ 12, 2020
28 °C

ಭಾರತಕ್ಕೆ ಹರಿಣಗಳ ಸವಾಲಿನ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್: ಜೊತೆಯಾಟವೊಂದು ಬೆಳೆದಾಗ ಲೆಕ್ಕಾಚಾರಗಳೆಲ್ಲಾ ಬದಲಾಗಿ ಹೋಗುತ್ತವೆ. ಅದಕ್ಕೆ ಸಾಕ್ಷಿ ಜೆನ್ ಪಾಲ್ ಡುಮಿನಿ-ಫಾಫ್ ಡು ಪ್ಲೆಸ್ಸಿಸ್ ಐದನೇ ವಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಬಲ ನೀಡಿದ ರೀತಿ.ನಾಲ್ಕು ವಿಕೆಟ್‌ಗಳು ಪತನಗೊಂಡ ನಂತರ ಇನ್ನೇನು ದಕ್ಷಿಣ ಆಫ್ರಿಕಾದ ಬಾಕಿ ಬ್ಯಾಟ್ಸ್‌ಮನ್‌ಗಳನ್ನು ಭಾರತದವರು ಬಹು ಬೇಗ ಕಟ್ಟಿಹಾಕುತ್ತಾರೆ ಎನ್ನುವ ನಿರೀಕ್ಷೆಯನ್ನೇ ಡುಮಿನಿ (52; 111 ನಿ., 59 ಎ., 2 ಬೌಂಡರಿ) ಮತ್ತು ಚೊಚ್ಚಲ ಏಕದಿನ ಪಂದ್ಯ ಆಡಿ, ಅರ್ಧ ಶತಕದ ಸಂಭ್ರಮ ಪಡೆದ ಪ್ಲೆಸ್ಸಿಸ್ (60; 94 ನಿ., 78 ಎ., 2 ಬೌಂಡರಿ) ಹುಸಿಯಾಗಿಸಿದರು. ಬೆಲೆಯುಳ್ಳ ಜೊತೆಯಾಟವನ್ನು ನೂರರ ಗಡಿಯಾಚೆ (110 ರನ್) ವಿಸ್ತರಿಸಿದ ಇವರಿಬ್ಬರೂ ‘ಹರಿಣ’ಗಳ ಪಡೆಯ ಗೆಲುವಿನ ಆಸೆಗೆ ಬಲ ನೀಡಿದರು.ಪ್ರಯೋಜನಕಾರಿ ಎನಿಸಿದ ಇಂಥದೊಂದು ಜೊತೆಯಾಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡದವರು ಭಾರತದ ಎದುರು 49.2 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 220 ರನ್‌ಗಳನ್ನು ಪೇರಿಸಿಟ್ಟರು.ನ್ಯೂಲೆಂಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ‘ಟಾಸ್’ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡ ಗ್ರೇಮ್ ಸ್ಮಿತ್ ತಪ್ಪು ಮಾಡಿದರೇನೋ? ಎನ್ನುವ ಅನುಮಾನ ಆರಂಭದಲ್ಲಿ ಕಾಡಿತು. ಒಟ್ಟು ಮೊತ್ತವು ಐವತ್ತು ರನ್‌ಗಳ ಗಡಿ ದಾಟುವಷ್ಟರಲ್ಲಿ ಹಾಶೀಮ್ ಆಮ್ಲಾ ಹಾಗೂ ಕಾಲಿನ್ ಇನ್‌ಗ್ರಾಮ್ ನಿರ್ಗಮಿಸಿಯಾಗಿತ್ತು.ಅಬ್ರಹಾಮ್ ಡಿ ವೀಲಿಯರ್ಸ್ ಕೂಡ ಇಪ್ಪತ್ತು ಎಸೆತಗಳಲ್ಲಿ ಗಳಿಸಿದ್ದು ಕೇವಲ 16 ರನ್. ಇಂಥ ಆತಂಕದ ಪರಿಸ್ಥಿತಿಯಲ್ಲಿ ಆರಂಭಿಕ ಆಟಗಾರ ಹಾಗೂ ನಾಯಕ ಗ್ರೇಮ್ ಸ್ಮಿತ್ (43; 102 ನಿ., 79 ಎ., 3 ಬೌಂಡರಿ) ಜಿಗುಟುತನ ತೋರಿದರು. ರನ್ ಗತಿಗೆ ಚುರುಕು ನೀಡುವ ಉತ್ಸಾಹ ತೋರದಿದ್ದರೂ, ಮಂದಗತಿಯಲ್ಲಿಯೇ ಇನಿಂಗ್ಸ್ ಕಟ್ಟುವ ಕೆಲಸವನ್ನು ಯಶಸ್ವಿಯಾಗಿ ಮಾಡಿದರು. ಅವರು ನಿರ್ಗಮಿಸುವ ಹೊತ್ತಿಗೆ ಆತಿಥೇಯ ತಂಡದ ಒಟ್ಟು ಮೊತ್ತ 90 ರನ್.ಸ್ಮಿತ್ ಪೆವಿಲಿಯನ್‌ಗೆ ನಡೆದಾಗ ಮೊಟ್ಟ ಮೊದಲ ಏಕದಿನ ಪಂದ್ಯ ಆಡುವ ಉತ್ಸಾಹದಲ್ಲಿ ಕ್ರೀಸ್‌ಗೆ ಬಂದ ಪ್ಲೆಸ್ಸಿಸ್ ಪ್ರಭಾವಿ ಬ್ಯಾಟ್ಸ್‌ಮನ್ ಆಗಿ ಬೆಳೆಯುವ ಭರವಸೆಯ ಪ್ರಖರ ಕಿರಣ ಮೂಡುವಂತೆ ಮಾಡಿದರು. ಆಕ್ರಮಣಕಾರಿ ಆಟವಾಡದಿದ್ದರೂ, ಭಾರತದ ಬೌಲರ್‌ಗಳು ಚಡಪಡಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.ಪ್ಲೆಸ್ಸಿಸ್ ಮತ್ತು ಡುಮಿನಿ ಜೊತೆಯಾಟಕ್ಕೆ ಅಂತ್ಯ ಹಾಡಲು ಪ್ರವಾಸಿ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ತಂಡದಲ್ಲಿದ್ದ ಪರಿಣತ ಹಾಗೂ ಸಾಂದರ್ಭಿಕ ಬೌಲರ್‌ಗಳನ್ನೆಲ್ಲಾ ಪ್ರಯೋಗಿಸಿದರು. ಆದರೆ ಯಶಸ್ಸು ಸಿಕ್ಕಿದ್ದು 45ನೇ ಓವರ್‌ನಲ್ಲಿ ದಾಳಿ ನಡೆಸಿದ ಮುನಾಫ್ ಪಟೇಲ್ ಎಸೆತದಲ್ಲಿ. ಡುಮಿನಿ ಕೂಡ ನಂತರದ ಓವರ್‌ನಲ್ಲಿ ಜಹೀರ್ ಖಾನ್‌ಗೆ ಬಲಿಯಾದರು. ಸ್ಕೋರ್ ವಿವರ

ದಕ್ಷಿಣ ಆಫ್ರಿಕಾ: 49.2  ಓವರುಗಳಲ್ಲಿ 220

ಗ್ರೇಮ್ ಸ್ಮಿತ್ ಸಿ ವಿರಾಟ್ ಕೊಹ್ಲಿ ಬಿ ಹರಭಜನ್ ಸಿಂಗ್  43

ಹಾಶೀಮ್ ಆಮ್ಲಾ ಬಿ ಜಹೀರ್ ಖಾನ್  16

ಕಾಲಿನ್ ಇನ್‌ಗ್ರಾಮ್ ಸಿ  ಕೊಹ್ಲಿ ಬಿ ಹರಭಜನ್ ಸಿಂಗ್  10

ಎಬಿ ಡಿವಿಲಿಯರ್ಸ್ ಸಿ ಜಹೀರ್ ಬಿ ಯೂಸುಫ್ ಪಠಾಣ್  16

ಜೆನ್ ಪಾಲ್ ಡುಮಿನಿ ಬಿ ಜಹೀರ್ ಖಾನ್  52

ಫಾಫ್ ಡು ಪ್ಲೆಸ್ಸಿಸ್ ಸಿ ಕೊಹ್ಲಿ ಬಿ ಮುನಾಫ್ ಪಟೇಲ್  60

ಜಾನ್ ಬೊಥಾ ಬಿ ಜಹೀರ್ ಖಾನ್  09

ವಯ್ನೆ ಪರ್ನೆಲ್ ರನ್‌ಔಟ್   05

ಡೆಲ್ ಸ್ಟೇನ್ ಸಿ ಸುರೇಶ್ ರೈನಾ ಬಿ ಮುನಾಫ್ ಪಟೇಲ್  05

ಮಾರ್ನ್ ಮಾರ್ಕೆಲ್ ಔಟಾಗದೆ  00

ಲಾನ್‌ವಾಬೊ ತ್ಸೊತ್ಸೊಬೆ ರನ್‌ಔಟ್   00

ಇತರೆ: (ವೈಡ್-4)  04

ವಿಕೆಟ್ ಪತನ: 1-31 (ಹಾಶೀಮ್ ಆಮ್ಲಾ; 6.5), 2-49 (ಕಾಲಿನ್ ಇನ್‌ಗ್ರಾಮ್; 13.1), 3-83 (ಅಬ್ರಹಾಮ್ ಡಿ ವೀಲಿಯರ್ಸ್; 20.3), 4-90 (ಗ್ರೇಮ್ ಸ್ಮಿತ್; 23.2), 5-200 (ಫಾಫ್ ಡು ಪ್ಲೆಸ್ಸಿಸ್; 44.5), 6-202 (ಜೆನ್ ಪಾಲ್ ಡುಮಿನಿ; 45.2), 7-207 (ವಯ್ನೆ ಪರ್ನೆಲ್; 45.5), 8-216 (ಡೆಲ್ ಸ್ಟೇನ್; 48.1), 9-219 (ಜಾನ್ ಬೊಥಾ; 49.1), 10-220 (ಲಾನ್‌ವಾಬೊ ತ್ಸೊತ್ಸೊಬೆ; 49.2).

ಬೌಲಿಂಗ್: ಜಹೀರ್ ಖಾನ್ 9.2-0-43-3 (ವೈಡ್-2), ಮುನಾಫ್ ಪಟೇಲ್ 10-1-42-2, ಆಶಿಶ್ ನೆಹ್ರಾ 7-0-42-0 (ವೈಡ್-1), ಹರಭಜನ್ ಸಿಂಗ್ 9-1-23-2 (ವೈಡ್-1), ಯೂಸುಫ್ ಪಠಾಣ್ 6-0-27-1, ಯುವರಾಜ್ ಸಿಂಗ್ 6-0-30-0, ರೋಹಿತ್ ಶರ್ಮ 1-0-5-0, ಸುರೇಶ್ ರೈನಾ 1-0-8-0  (ವಿವರ ಅಪೂರ್ಣ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.