ಶುಕ್ರವಾರ, ಜನವರಿ 17, 2020
22 °C
ಕ್ರಿಕೆಟ್‌: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಇಂದು

ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಅಗ್ನಿಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್‌ (ಪಿಟಿಐ): ತವರು ನೆಲದಲ್ಲಿ ನಡೆದ ಪಂದ್ಯಗಳಲ್ಲಿ ರನ್‌ ಮಳೆ ಸುರಿಸಿರುವ ಭಾರತದ ಬ್ಯಾಟ್ಸ್‌ಮನ್‌ ಗಳಿಗೆ ಇದೀಗ ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ.ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಹೋರಾಟ ಇಲ್ಲಿನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ. ವೇಗ ಹಾಗೂ ಬೌನ್ಸ್‌ಗೆ ನೆರವು ನೀಡುವ ಇಲ್ಲಿನ ಪಿಚ್‌ನಲ್ಲಿ ಮಹೇಂದ್ರ ಸಿಂಗ್‌ ದೋನಿ ಬಳಗದ ಬ್ಯಾಟ್ಸ್‌ಮನ್‌ಗಳು ಯಾವ ರೀತಿಯ ಪ್ರದರ್ಶನ ನೀಡುವರು ಎಂಬ ಕುತೂಹಲದಲ್ಲಿ ಅಭಿಮಾನಿಗಳು ಇದ್ದಾರೆ.ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಗೆಲುವು ಪಡೆದ ಆತ್ಮವಿಶ್ವಾಸದೊಂದಿಗೆ ಭಾರತ ದಕ್ಷಿಣ ಆಫ್ರಿಕಾಕ್ಕೆ ಬಂದಿದೆ.ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮ ಪ್ರಸಕ್ತ ಋತುವಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಅಧಿಕ ರನ್‌ ಪೇರಿಸಿದ್ದಾರೆ. ಮಾತ್ರವಲ್ಲ, ಎಲ್ಲರ ಸರಾಸರಿ ಕೂಡಾ 50ಕ್ಕಿಂತ ಮೇಲಿದೆ. ಈ ಮೂವರಲ್ಲದೆ, ಮಹೇಂದ್ರ ಸಿಂಗ್‌ ದೋನಿ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದಾರೆ.ಆದರೆ ಡೇಲ್ ಸ್ಟೇನ್‌, ಮಾರ್ನ್‌ ಮಾರ್ಕೆಲ್‌, ವೆರ್ನಾನ್‌ ಫಿಲಾಂಡರ್‌ ಮತ್ತು ಲೊನ್ವಾಬೊ ಸೊಸೊಬೆ ಅವರನ್ನೊಳಗೊಂಡ ದಕ್ಷಿಣ ಆಫ್ರಿಕಾ ಬೌಲಿಂಗ್‌ ವಿಭಾಗ ಭಾರತ ತಂಡಕ್ಕೆ ಸವಾಲಾಗಿ ಪರಿಣಮಿಸುವುದು ಖಚಿತ.

‘ವೇಗ ಹಾಗೂ ಬೌನ್ಸ್‌ಗೆ ನೆರವು ನೀಡುವ ದಕ್ಷಿಣ ಆಫ್ರಿಕಾದ ಪಿಚ್‌ಗಳಿಗೆ ಹೊಂದಿಕೊಳ್ಳುವುದು ಸವಾಲಿನ ಸಂಗತಿ’ ಎಂದು ದೋನಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿರುವ  ಸುರೇಶ್‌ ರೈನಾ  ಮತ್ತು ಯುವರಾಜ್‌ ಸಿಂಗ್‌ ಅವರಿಗೂ ಮೂರು ಪಂದ್ಯಗಳ ಈ ಸರಣಿ ಮಹತ್ವದ್ದಾಗಿದೆ. ಈ ಹಿಂದಿನ ಒಂಬತ್ತು ಇನಿಂಗ್ಸ್‌ಗಳಲ್ಲಿ ಇವರಿಗೆ ಕ್ರಮವಾಗಿ 22.42 ಹಾಗೂ 19.66 ರ ಸರಾಸರಿಯಲ್ಲಿ ರನ್‌ ಪೇರಿಸಲು ಮಾತ್ರ ಸಾಧ್ಯವಾಗಿದೆ.ಭಾರತದ ವೇಗಿಗಳೂ ಇಲ್ಲಿನ ಪಿಚ್‌ಗಳ ಲಾಭ ಎತ್ತಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಮೊಹಮ್ಮದ್‌ ಶಮಿ ಮತ್ತು ಭುವನೇಶ್ವರ್‌ ಕುಮಾರ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾಗುವರೇ ಎಂಬುದನ್ನು ನೋಡಬೇಕು.ಹಾಶಿಮ್‌ ಆಮ್ಲಾ, ಎಬಿ ಡಿವಿಲಿಯರ್ಸ್‌ ಮತ್ತು ಜೆಪಿ ಡುಮಿನಿ ಆತಿಥೇಯ ತಂಡದ ಬ್ಯಾಟಿಂಗ್‌ನ ಬಲ ಎನಿಸಿಕೊಂಡಿದ್ದಾರೆ.ತಂಡಗಳು ಇಂತಿವೆ

ಭಾರತ: ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ಆರ್‌. ಅಶ್ವಿನ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌, ಇಶಾಂತ್‌ ಶರ್ಮ, ಅಮಿತ್‌ ಮಿಶ್ರಾ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ.

ದಕ್ಷಿಣ ಆಫ್ರಿಕಾ: ಎಬಿ ಡಿವಿಲಿಯರ್ಸ್‌ (ನಾಯಕ), ಹಾಶಿಮ್‌ ಆಮ್ಲಾ, ಕ್ವಿಂಟನ್‌ ಡಿ ಕಾಕ್‌, ಜೆಪಿ ಡುಮಿನಿ, ಇಮ್ರಾನ್‌ ತಾಹಿರ್‌, ಜಾಕ್‌ ಕಾಲಿಸ್‌, ರ್‍್ಯಾನ್ ಮೆಕ್‌ಲಾರೆನ್‌, ಡೇವಿಡ್‌ ಮಿಲ್ಲರ್‌, ಮಾರ್ನ್‌ ಮಾರ್ಕೆಲ್‌, ವೇಯ್ನ್‌ ಪಾರ್ನೆಲ್‌, ವೆರ್ನಾನ್‌ ಫಿಲಾಂಡರ್‌, ಗ್ರೇಮ್‌ ಸ್ಮಿತ್‌, ಡೇಲ್‌ ಸ್ಟೇನ್‌, ಲೊನ್ವಾಬೊ ಸೊಸೊಬೆ

ಪಂದ್ಯದ ಆರಂಭ: ಸಂಜೆ 5.00ಕ್ಕೆ

(ಭಾರತೀಯ ಕಾಲಮಾನ)

ಪ್ರತಿಕ್ರಿಯಿಸಿ (+)