ಗುರುವಾರ , ಮೇ 19, 2022
25 °C

ಭಾರತ ಉತ್ಸವಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಇಲ್ಲಿನ ಕೆನಡಿ ಸೆಂಟರ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮೂರು ವಾರಗಳ ಭಾರತ ಉತ್ಸವ ‘ಮ್ಯಾಕ್ಸಿಮಮ್ ಇಂಡಿಯಾ’ಗೆ ಚಾಲನೆ ನೀಡಲಾಯಿತು.ಅಮೆರಿಕದಲ್ಲಿರುವ ಗಣ್ಯ ಭಾರತೀಯರಲ್ಲದೆ, ಅಮೆರಿಕದ ಹಿರಿಯ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾರ್ಚ್ 20ರವರೆಗೆ ನಡೆಯುವ ಈ ಉತ್ಸವದಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಕಲೆಗಳ ಪ್ರದರ್ಶನಗೊಳ್ಳಲಿವೆ.ಭಾರತ ಮತ್ತು ಅಮೆರಿಕ ನಡುವಿನ ಸಮಾನ ವಿಚಾರಧಾರೆಗಳ ಕುರಿತು ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿದ ಲೇಖಕ ಸುಕೇತು ಮೆಹ್ತಾ, ತೋರೋ ಚಿಂತನೆಯಿಂದ ಮಹಾತ್ಮಾ ಗಾಂಧಿ ಹಾಗೂ ಮಾರ್ಟಿನ್ ಲೂಥರ್ ಕಿಂಗ್‌ವರೆಗಿನ ಇತಿಹಾಸದ ಪ್ರಮುಖ ಕಾಲಘಟ್ಟಗಳಲ್ಲಿ ಈ ವಿಚಾರಧಾರೆಗಳು ಪರಸ್ಪರರ ಮೇಲೆ ಪ್ರಭಾವ ಬೀರಿತ್ತು ಎಂದರು. ಅಮೆರಿಕದಲ್ಲಿನ ಭಾರತದ ರಾಯಭಾರಿ ಮೀರಾ ಶಂಕರ್ ಮಾತನಾಡಿದರು.ಉತ್ಸವದ ಆರಂಭದ ಭಾಗವಾಗಿ ಭಾರತೀಯ ನರ್ತಕಿಯರಾದ ಮಾಧವಿ ಮುದ್ಗಿಲ್, ಅಲರ್‌ಮೇಲ್ ವಲ್ಲಿ ಅವರ ನೃತ್ಯ ಕಾರ್ಯಕ್ರಮ ನಡೆಯಿತಲ್ಲದೆ ತಬಲಾ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರ ತಬಲಾ ಕಾರ್ಯಕ್ರಮವೂ ಜರುಗಿತು.  ಇದೇ ವೇಳೆ ತಾಜ್ ಹೋಟೆಲ್‌ನ ಪ್ರಶಸ್ತಿ ವಿಜೇತ 12 ಮಂದಿ ಬಾಣಸಿಗರು ತಯಾರಿಸಿದ ಭಾರತದ ವಿವಿಧ ಪ್ರದೇಶಗಳ ವಿಶೇಷ ಅಡುಗೆಯ ರುಚಿಯನ್ನು ಸಮಾರಂಭಕ್ಕೆ ಆಗಮಿಸಿದ ಗಣ್ಯರು ಸವಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.