ಗುರುವಾರ , ಮೇ 6, 2021
31 °C

ಭಾವೈಕ್ಯದ ಎಲ್ಲಮ್ಮದೇವಿ ಕರಗ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಹಿಂದೂ- ಮುಸ್ಲಿಂರ ಭಾವೈಕ್ಯದ ಸಂಖೇತ ಎನ್ನುವಂತೆ ಪ್ರತಿವರ್ಷ ಆಚರಿಸುವ ಇಲ್ಲಿನ ರೇಣುಕಾ ಎಲ್ಲಮ್ಮದೇವಿಯ ಹೂವಿನ ಕರಗವು ಶುಕ್ರವಾರ ನಡೆಯಲಿದೆ.ಕಳೆದ 73 ವರ್ಷಗಳಿಂದ ಪಟ್ಟಣದಲ್ಲಿ ಹೂವಿನ ಹರಗ ಮಹೋತ್ಸವವು ನಡೆಯುತ್ತಿದ್ದು, ಕರಗದ ಪೂಜಾರಿ ಶಿಡ್ಲಘಟ್ಟ ರಾಘವಪ್ಪ 16 ವರ್ಷ, ಪುರಸಭಾ ಮಾಜಿ ಸದಸ್ಯ ಜೆ. ವಿ. ನಾರಾಯಣಪ್ಪ 38 ವರ್ಷ, ಎಂ. ಕೇಶವಪ್ಪ 2 ವರ್ಷ, ಜೆ.ವಿ. ರಾಮಾಂಜಿನಪ್ಪ ಕಳೆದ 17 ವರ್ಷಗಳಿಂದ ಕರಗವನ್ನು ಹೊರುತ್ತಿದ್ದಾರೆ.ಕೋಲಾರ ರಸ್ತೆಯ ಕರಗದ ಕುಂಟೆಯಿಂದ ಶಕ್ತಿದೇವತೆಯ ಆವಾಹನೆ ಮಾಡಿಕೊಂಡು ಶಕ್ತಿ ಪೀಠದಲ್ಲಿ ಕರಗವನ್ನು ಪ್ರತಿಷ್ಠಾಪಿಸುತ್ತಾರೆ. ನಂತರ ಸಂತೆ ಮೈದಾನದ ಬಳಿ ಏಳು ಸುತ್ತಿನ ಕೋಟೆ ಮಾದರಿಯನ್ನು ನಿರ್ಮಿಸಿ ಶಕ್ತಿ ಸ್ಥಳವನ್ನಾಗಿಸುತ್ತಾರೆ.

 

ವಹ್ನಿಕುಲ ಜನಾಂಗದವರೇ ಈ ಆಚರಣೆಯ ಪ್ರಮುಖ ಅಂಗ. ಎಲ್ಲಮ್ಮ ದೇವಾಯಲದಲ್ಲಿ ಪೂಜೆ ನಡೆದ ಬಳಿಕ, ಹೂವಿನ ಕರಗವು ಮಸ್ತಾನ್‌ಸಾಬ್ ದರ್ಗಾದಲ್ಲಿ ಪೂಜೆ ಸ್ವೀಕರಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ಹಿಂದಿರುಗುತ್ತದೆ.  ಗ್ರಾಮ ದೇವತೆ ರೇಣುಕಾ ಎಲ್ಲಮ್ಮ ದೇವಿ, ದ್ರೌಪದಿ, ಎಲ್ಲಮ್ಮ, ದುರ್ಗಮ್ಮ, ಮುತ್ಯಾಲಮ್ಮ  ಮಹೇಶ್ವರಿ ಎಂಬ ಐದು ಅವತಾರವನ್ನು ಹೊಂದಿದ್ದು, ವಹ್ನಿಕುಲ ಕ್ಷತ್ರೀಯರು ದೇವಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ.ಪೌರಾಣಿಕ ಹಿನ್ನೆಲೆ: ಕರಗದ ಆಚರಿಸುವಗೆ ಹಲವು ಪುರಾಣ ಕತೆಗಳಿವೆ. ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ದ್ರೌಪದಿಯು ಪಾಂಡವರೊಡನೆ ಸ್ವರ್ಗದ ಹಾದಿಯಲ್ಲಿ ಸಾಗುತ್ತಿರುವಾಗ ಆಯಾಸದಿಂದ ಮೂರ್ಛೆ ಹೋಗುತ್ತಾಳೆ.

 

ಪಾಂಡವರು ಇದನ್ನು ಗಮನಿಸದೆ ಮಂದೆ ಸಾಗುವ ಸಂದರ್ಭದಲ್ಲಿ ತಿಮಿರಾಸುರ ರಂಬ ರಾಕ್ಷಸ ದ್ರೌಪದಿಯನ್ನು ಕೆಣಕುತ್ತಾನೆ. ಆಗ ತಿಮಿರಾಸುರ ಮತ್ತು ದ್ರೌಪದಿಯ ನಡುವೆ ಯುದ್ಧ ನಡೆದು ದ್ರೌಪದಿ ತ್ರಿಶೂಲದಿಂದ ತಿಮಿರಾಸುರನ ದೇಹಕ್ಕೆ ತಿವಿದಾಗ ರಕ್ತದ ಒಂದೊಂದು ಹನಿಯಲ್ಲಿಯೂ ಒಬ್ಬೊಬ್ಬ ರಾಕ್ಷಸನ ಉದಯವಾಗುತ್ತದೆ.ಇದನ್ನು ಕಂಡ ದ್ರೌಪದಿ ಈ ರಾಕ್ಷಸ ಪಡೆಯನ್ನು ನಾಶಗೊಳಿಸುವ ಸಲುವಾಗಿ ತಲೆಯನ್ನು ಕೆದರಿ ಯಜಮಾನನ್ನು, ಹಣೆಯಿಂದ ಗಣಾಚಾರಿ, ಕಿವಿಗಳಿಂದ ಗೌಡರು, ಬಾಯಿಂದ ಗಂಟೆ ಪೂಜಾರಿ, ತೋಳುಗಳಿಂದ ವೀರಬಾಹು ಕುಮಾರರನ್ನು ಸೃಷ್ಟಿಸಿ ರಾಕ್ಷಸ ಪಡೆಯನ್ನು ನಾಶಗೊಳಿಸಿ ಸ್ವರ್ಗದ ಹಾದಿಯಲ್ಲಿ ಮುನ್ನಡೆಯುತ್ತಾಳೆ.ದ್ರೌಪದಿಯ ಈ ಶಕ್ತಿ ರೂಪ ಕಂಡ ವಹ್ನಿಕುಲ ಕ್ಷತ್ರೀಯರು ವಿಷ್ಣುವಿನ ನಾಮಸ್ಮರಣೆಯನ್ನು ಮಾಡುತ್ತಾ ಗೋವಿಂದ, ಗೋವಿಂದ ಎಂದು  ಆಕೆಯನ್ನು ಹಿಂಬಾಲಿಸಿ ಭೂಲೋಕದಲ್ಲಿ ನೆಲೆಸಲು ಬೇಡಿಕೊಂಡರು. ಆಗ ದ್ರೌಪದಿಯು ಅವರ ಕರೆಗೆ ಓಗೊಟ್ಟು ಅವರನ್ನು ಧರ್ಮಪಾಲನೆ ಮಾಡುವಂತೆ ಹರಸಿ, ಕರಗದ 3 ದಿನಗಳು ಅವರೊಡನೆ ಬಂದು ನೆಲೆಸುವುದಾಗಿ ಆಶ್ವಾಸನೆ ನೀಡಿದಳು. ಅಂದಿನಿಂದ ವಹ್ನಿಕುಲ ಜನಾಂಗ ವಂಶಪಾರಂಪರ್ಯವಾಗಿ ದ್ರೌಪದಮ್ಮನ ಕರಗ ಮಹೋತ್ಸವದ ಆಚರಣೆಯನ್ನು ಮಾಡಿಕೊಂಡು ಬರುತ್ತಿದೆ ಎಂಬ ಪ್ರತೀತಿ ಇದೆ.ಭಾವೈಕ್ಯ: ಕರಗದ ಹಿಂದಿನ ದಿನ ನಡೆಯುವ ದೀಪಾರತಿಯನ್ನು ಮುಸ್ಲಿಂ ಮಹಿಳೆಯರು ಅಲಂಕರಿಸುವರು. ಹಲವು ವರ್ಷಗಳಿಂದ ದಿಲ್‌ಷಾದ್ ಮತ್ತು ಆಕೆಯ ಮಗ ಸಲಾಂ ಈ ಕಾರ್ಯ ಮಾಡುತ್ತಿದ್ದಾರೆ. ದೀಪಾರತಿ ಹೊತ್ತು ಅಗ್ನಿಕೊಂಡ ಪ್ರವೇಶಿಸುವ ಕೆಲವು ಹಿಂದು ಮಹಿಳೆಯರು ದಿಲ್‌ಷಾದ್ ಬಳಿ ದೀಪಾರತಿಗಳನ್ನು ಸಿಂಗರಿಸಿಕೊಳ್ಳುತ್ತಾರೆ. ಹೂವಿನ ಕರಗ ಮಹೋತ್ಸವದಲ್ಲಿ ಎಲ್ಲಾ ಧರ್ಮಿಯರು ಪಾಲ್ಗೊಳ್ಳುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.