ಗುರುವಾರ , ಮಾರ್ಚ್ 4, 2021
30 °C

ಭೂಮಿಗೊಂದು ದಿನ

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಭೂಮಿಗೊಂದು ದಿನ

ವಿಶ್ವ `ಪೃಥ್ವಿ ದಿನ~ದ (ಏ. 22) ಹೊಸ್ತಿಲಲ್ಲಿರುವ ನಾವು ಭೂಮಿಯ ವೈಶಿಷ್ಟ್ಯವನ್ನು ಮನದಟ್ಟು ಮಾಡಿಕೊಳ್ಳುವ ಜರೂರತ್ತು ಎಂದಿಗಿಂತ ಇಂದು ಹೆಚ್ಚಾಗಿದೆ. 1970ರಿಂದ ಪ್ರತಿ ವರ್ಷವೂ ಏಪ್ರಿಲ್ 22ರಂದು `ಪೃಥ್ವಿ ದಿನ~ ಆಚರಿಸಲಾಗುತ್ತಿದೆ. ನಮ್ಮ ದುರಾಸೆಗೆ ಭೂಮಿ ಪರಿಸರವನ್ನು ನಾಶದ ಬಗೆ, ಭವಿಷ್ಯದಲ್ಲಿ ಇದರ ಪರಿಣಾಮದ ಕುರಿತು ಜಾಗೃತಿ ಮೂಡಿಸಲು ಇದು ಸಕಾಲ. ಭೂಮಿಯ ರಕ್ಷಣೆಗೆ ಕಟ್ಟುನಿಟ್ಟಿನ ನಿಯಾಮವಳಿ ಅನುಷ್ಠಾನಕ್ಕೆ ತರಬೇಕು. ಭೂಮಿಯ ಪರಿಸರದ ರಕ್ಷಣೆ ಸ್ಥಳೀಯ ಮಟ್ಟದಿಂದಲೇ ಶುರುವಾಗಬೇಕು.

1960ರಲ್ಲಿ ನೆಲ ಮತ್ತು ಪೆಸಿಫಿಕ್ ಸಮುದ್ರ ದ್ವೀಪಗಳಲ್ಲಿ ಯುದ್ಧಾಸ್ತ್ರ, ಪರಮಾಣು ಬಾಂಬ್ ಪರೀಕ್ಷೆ ನಡೆಸಲಾಗಿತ್ತು.

ಈ ದಶಕದಲ್ಲಿಯೇ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸುವ್ಯವಸ್ಥಿತ ಪರಿಸರ ಸಂರಕ್ಷಣಾ ಸಂಸ್ಥೆಗಳಿರಲಿಲ್ಲ. ಏಷ್ಯಾ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಜನಸಾಂದ್ರತೆಯು ಹೆಚ್ಚಿತ್ತು. ಈ ಎಲ್ಲ ವಿಷಯಗಳ ಬಗ್ಗೆ ಅಮೆರಿಕದ ಸೆನೆಟರ್ ಗೆಲಾರ್ಡ್ ನೆಲ್ಸನ್ ಮೊದಲ ಬಾರಿಗೆ ಧ್ವನಿ ಎತ್ತಿ ಚಳವಳಿ ಆರಂಭಿಸಿದರು. ನಂತರ ಈ ಚಳವಳಿ ವಿಶ್ವ `ಪೃಥ್ವಿ ದಿನ~ದ ಹೆಸರು ಪಡೆಯಿತು. ಕೊಲಂಬಿಯಾ ಮತ್ತು ಪೆನ್ಸಿಲ್ವೆನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದರಿಂದ ಪ್ರೇರೇಪಣೆಗೊಂಡು ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿದರು. ಮಿತಿಮೀರಿದ ವಾಹನಗಳು, ಕೈಗಾರಿಕೆಗಳಿಂದ ಆಗುವ ವಾಯುಮಾಲಿನ್ಯ, ವಿಷಕಾರಿ ರಾಸಾಯನಿಕಗಳು ಮತ್ತು ಕ್ರಿಮಿನಾಶಕಗಳಿಂದ ನೀರು ಯಾವ ರೀತಿ ಮಲಿನವಾಗುತ್ತಿದೆ ಎನ್ನುವುದರ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ಪ್ರಯತ್ನಕ್ಕೆ 1970 ಏಪ್ರಿಲ್ 22ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

ನಮ್ಮ ಅರಿವಿಗೆ ಬಾರದೆ ಭೂಮಿ ಮೇಲಿನ ಸಂಪನ್ಮೂಲವನ್ನು ವ್ಯರ್ಥವಾಗಿ ಹಾಳು ಮಾಡಲಾಗುತ್ತಿದೆ. ಎಲ್ಲೆಡೆಯೂ ಲಭ್ಯವಿರುವ ನೀರಿನಲ್ಲಿ ಶೇ 60ರಷ್ಟು ಶೌಚಾಲಯ, ಉದ್ಯಾನ, ವಾಹನಗಳ ಸ್ವಚ್ಛತೆ ಸೇರಿದಂತೆ ಇತರೆ ಕಾರ್ಯಕ್ಕೆ ಬಳಸಲಾಗುತ್ತಿದೆ. ಶೇ 40ರಷ್ಟು ನೀರನ್ನು ಮಾತ್ರ ಕುಡಿಯಲು, ಆಹಾರ ತಯಾರಿಸಲು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ನೀರಿನ ಕೊರತೆ ಎದುರಾಗಿದೆ.

ಭೂಮಿ ಮೇಲೆ ಮಾಲಿನ್ಯಕ್ಕೆ ನಗರೀಕರಣವೂ ಪ್ರಮುಖ ಕಾರಣ. ನಗರಗಳು ಬೆಳೆದಂತೆಲ್ಲಾ ಬೇಡಿಕೆಗಳು ಹೆಚ್ಚುತ್ತವೆ. ಅದು ಸಹಜವಾಗಿಯೇ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಪರಿಣಾಮ ಬೀರುತ್ತದೆ. ಕಳೆದ ಶತಮಾನದಲ್ಲಿ ಕೇವಲ 29 ಚದರ ಕಿ.ಮೀ ಭೌಗೋಳಿಕ ವಿಸ್ತೀರ್ಣ ಹೊಂದಿದ್ದ ಬೆಂಗಳೂರು 1997ರ ಹೊತ್ತಿಗೆ 482 ಚದರ ಕಿ.ಮೀನಷ್ಟು ಬೆಳೆದಿದೆ. 1901ರಲ್ಲಿ ಕೇವಲ 1.63 ಲಕ್ಷ ಇದ್ದ ಜನಸಂಖ್ಯೆ 1997ನೇ ವರ್ಷಕ್ಕೆ 52 ಲಕ್ಷ ದಾಟಿತ್ತು. ಸದ್ಯಕ್ಕೆ ಬೆಂಗಳೂರಿನ ಒಟ್ಟು ಜನಸಂಖ್ಯೆ 1 ಕೋಟಿಯ ಆಸುಪಾಸಿನಲ್ಲಿದೆ.

ನೀರು ಮೊಗೆಯುವ ಪ್ರಕ್ರಿಯೆ ನಗರದಲ್ಲೂ ಈಗ ವ್ಯಾಪಕವಾಗಿದೆ. ಬೋರ್‌ವೆಲ್ ತೋಡಿಸುವವರು ಭೂತಳದ ಅತಿ ಆಳದ ನೀರಿಗೂ ಗಾಳ ಹಾಕುತ್ತಿದ್ದಾರೆ. ಭೂವಿಜ್ಞಾನಿಗಳು ಇದನ್ನು `ನೀರಿನ ಗಣಿಗಾರಿಕೆ~ ಎಂದು ಕರೆದಿದ್ದಾರೆ. ನಗರದಲ್ಲಿ ತಲೆಎತ್ತಿರುವ ವಸತಿ ಸಂಕೀರ್ಣಗಳು, ಮಾಲ್‌ಗಳು ಮಾಡುತ್ತಿರುವುದು `ನೀರಿನ ಗಣಿಗಾರಿಕೆ~ಯನ್ನೇ. ಭೂಮಿಯ ಅತಿ ತಳಭಾಗದ ಸ್ತರದಲ್ಲಿರುವ ನೀರು ಮರುಭರ್ತಿ ಆಗಬೇಕಾದರೆ ಶತಮಾನಗಳೇಬೇಕು. ಅಂದರೆ, ಶತಮಾನಗಳಷ್ಟು ಹಳೆಯ ನೀರಿನ ಆಸ್ತಿಯನ್ನು ನಾವು ಬಳಸತೊಡಗಿದ್ದೇವೆ ಎನ್ನುತ್ತಾರೆ ಭೂವಿಜ್ಞಾನಿಗಳು.

ಹೀಗೆ ಶೀಘ್ರ ಗತಿಯಲ್ಲಿ ನಗರ ಬೆಳೆದಂತೆಲ್ಲ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ ಮರಗಳು ಇಲ್ಲವಾಗಿ ಕಾಂಕ್ರೀಟ್ ಕಟ್ಟಡ ಎದ್ದು ನಿಂತಿವೆ. ಹಲವು ಕೆರೆಗಳು ಭೂಗಳ್ಳರ ಪಾಲಾಗಿವೆ. ಇಡೀ ನಗರವೆಲ್ಲ ಕಾಂಕ್ರೀಟ್‌ಮಯ ಆಗಿರುವುದರಿಂದ ಸಹಜವಾಗಿಯೇ ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ. ಇದರಿಂದಾಗಿ ತಗ್ಗು ಪ್ರದೇಶಗಳು ಪ್ರತಿ ಮಳೆಗಾಲದಲ್ಲೂ ಸಮಸ್ಯೆಗೆ ಒಳಗಾಗುವಂತಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ನೀರಿನಲ್ಲಿ ಲವಣಾಂಶಗಳು ಇಲ್ಲದಂತಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಇಸ್ರೇಲ್‌ನಲ್ಲಿ ತ್ಯಾಜ್ಯ ನೀರನ್ನು ಪುನರ್ ಬಳಕೆಗೆ ಯೋಗ್ಯಗೊಳಿಸುವ ವ್ಯವಸ್ಥೆ ಇದೆ. ಆದರೆ, ನಮ್ಮಲ್ಲಿ ಅಂತಹ ಯಾವುದೇ ವಿಧಾನ ಇಲ್ಲ.

ಪೈಪ್‌ಲೈನ್ ಸೇರಿದಂತೆ ವಿವಿಧ ಸಾಧನಗಳಿಂದ ಕುಡಿಯುವ ನೀರು ಸರಬರಾಜು ಮಾಡಲು ಪ್ರತಿವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದು ಕೇವಲ ಸಿಲಿಕಾನ್ ಸಿಟಿಯೊಂದರ ಕಥೆಯಲ್ಲ. ಬಹುತೇಕ ಮಹಾನಗರಗಳಲ್ಲಿ ಇಂಥದ್ದೇ ಪರಿಸ್ಥಿತಿ ಇದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಗಂಡಾಂತರ ತಪ್ಪಿದ್ದಲ್ಲ. ಇದಕ್ಕೆ ವಿಶ್ವ ಪೃಥ್ವಿ ದಿನ ಪ್ರೇರಣೆಯಾಗಲಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.