ಬುಧವಾರ, ಏಪ್ರಿಲ್ 14, 2021
25 °C

ಭ್ರಷ್ಟಚಾರದ ವಿರುದ್ಧ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಯುವಜನತೆ ದೇಶದ ವ್ಯವಸ್ಥೆ ನೀತಿಗಳ ವಿರುದ್ಧ ಸಮರಶೀಲ ಹೋರಾಟ ನಡೆಸಲು ದೃಢವಾದ ಹೆಜ್ಜೆಗಳನ್ನಿಡುವುದು ಅಗತ್ಯ ಎಂದು ಡಿವೈಎಫ್‌ಐನ ರಾಜ್ಯ ಉಪಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.ನಗರದ ಬಾಲಭವನದಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಸೆಪ್ಟೆಂಬರ್ 11 ರಿಂದ 15 ರವರೆಗೆ ನಡೆಯಲಿರುವ 9ನೇ ಅಖಿಲ ಭಾರತ ಯುವಜನ ಸಮ್ಮೇಳನದ ಭಾಗವಾಗಿ ನಡೆದ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವ ಜನತೆಯ ಪಾತ್ರ ಎಂಬ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ದೇಶದಲ್ಲಿ ಆಳುವ ವರ್ಗದವರೇ ಭ್ರಷ್ಟಾಚಾರಿಗಳಾಗಿದ್ದು, ಕೇಂದ್ರದಲ್ಲಿ 2ಜಿ ಸ್ಟ್ರೆಕ್ಟ್ರಂ ಹಗರಣ, ರಾಜ್ಯದಲ್ಲಿ ಗಣಿಲೂಟಿ ಮತ್ತಿತರ ಹಗರಣಗಳನ್ನೊಳಗೊಂಡಂತೆ ಶಾಸಕಾಂಗ, ಕಾರ್ಯಾಂಗ ಮಾತ್ರವಲ್ಲ ನ್ಯಾಯಾಂಗವನ್ನೇ ಭ್ರಷ್ಟಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ ಎಂದು ವಿಷಾದಿಸಿದರು.ಮುಕ್ತ ಆರ್ಥಿಕ ನೀತಿಯ ಹಿನ್ನೆಲೆಯಲ್ಲಿ ದೇಶಕ್ಕೆ ಕಾಲಿಟ್ಟ ಕಂಪೆನಿಗಳು ಇಲ್ಲಿನ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ಬಿತ್ತಿ ಈ ಮೂಲಕ ಸಂಪತ್ತನ್ನು ಲೂಟಿ ಹೊಡೆತ್ತಿವೆ ಎಂದು ಆರೋಪಿಸಿದರು.ಜೆಡಿಎಸ್‌ನ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಇಂದಿನ ಸಾಕಷ್ಟು ಯುವಕರಲ್ಲಿ ಹೋರಾಟದ ಮನೋಭಾವವಿದ್ದರೂ, ಸೂಕ್ತ ವೇದಿಕೆಯನ್ನು ರಾಜಕೀಯ ಪಕ್ಷಗಳು ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು.ಹಣ ಸಂಪಾದಿಸಿದರೆ ಚುನಾವಣೆ ಗೆಲ್ಲಬಹುದು ಎಂಬ ಉದ್ದೇಶದಲ್ಲೇ ಇಂದಿನ ವ್ಯವಸ್ಥೆ ಸಾಗುತ್ತಿರುವುದರಿಂದ, ರಾಜಕಾರಣದ ವ್ಯವಸ್ಥೆಯಲ್ಲಿ ಬದಲಾವಣೆಯಾಗದೆ ಪರಿವರ್ತನೆ ಅಸಾಧ್ಯ ಎಂದು ಹೇಳಿದರು.ಜಾತಿ-ಧರ್ಮದ ಹೆಸರಿನಲ್ಲಿ ಶ್ರೇಷ್ಠ ಮತ್ತು ನಿಕೃಷ್ಟ ಭಾವನೆಗಳಿಂದ ಇಂದು ಜನರು ತಮ್ಮ ವಿವೇಚನಾ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಯುವಕರು ಹೋರಾಟದ ಕಿಚ್ಚುಗಳನ್ನು ರೂಢಿಸಿಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.ಡಿವೈಎಫ್‌ಐ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಯುವ ಜನಾಂಗದಲ್ಲಿ ಜಾತಿ ವಿಷಬೀಜ ಬಿತ್ತಿ ಜನಾಂಗೀಯ ದ್ವೇಷದಲ್ಲಿ ಬಲಿಪಶು ಮಾಡಲಾಗುತ್ತಿದೆ. ಯುವಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು  ಹೇಳಿದರು.ಕೊಡಗು ಜಿಲ್ಲಾ ತಲೆಹೊರೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಹಸನಬ್ಬ ಮಾತನಾಡಿದರು.      ಡಿವೈಎಫ್‌ಐನ ಜಿಲ್ಲಾ ಖಜಾಂಚಿ ರಮೇಶ್ ರೈ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.