ಗುರುವಾರ , ಮೇ 19, 2022
24 °C

ಮಕ್ಕಳನ್ನೇ ಕಳ್ಳತನಕ್ಕೆ ಇಳಿಸಿದ ತಂದೆ-ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿರಿವಂತಿಕೆಯ ಕನಸಿಗೆ ಬಲಿ ಬಿದ್ದು ಹೆತ್ತ ಮಕ್ಕಳನ್ನೇ ಸರಗಳ್ಳತನ ಕೃತ್ಯಕ್ಕಿಳಿಸಿದ್ದ ತಂದೆ-ತಾಯಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿರುವ ಸುಬ್ರಹ್ಮಣ್ಯಪುರ ಪೊಲೀಸರು, ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಕಾಡುಗೊಂಡನಹಳ್ಳಿ ಬಳಿಯ ಸುಲ್ತಾನ್‌ಪಾಳ್ಯದ ಅನ್ವರ್ (49), ಆತನ ಮಕ್ಕಳಾದ ಇಮ್ರೋನ್ ಉರುಫ್ ಮ್ಯೋಡಿ (24), ಇರ್ಫಾನ್ (22), ಪತ್ನಿ ನಜ್ಬುನ್ನಿಸಾ (43), ಮುದಾಫೀರ್ (22) ಮತ್ತು ಆದಿ (22) ಬಂಧಿತರು. ಆರೋಪಿಗಳಿಂದ ಒಂದು ಕೆ.ಜಿ ಚಿನ್ನಾಭರಣ, ಎರಡು ಕಾರು ಹಾಗೂ ಮೂರು ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಆರೋಪಿಗಳು ನಗರದ ವಿವಿಧೆಡೆ ಬೈಕ್‌ಗಳಲ್ಲಿ ಸಂಚರಿಸಿ ಮಹಿಳೆಯರ ಸರಗಳನ್ನು ಕಳವು ಮಾಡುತ್ತಿದ್ದರು. ಅಲ್ಲದೇ ಹಲವೆಡೆ ದರೋಡೆ ಸಹ ಮಾಡಿದ್ದರು. ಇಮ್ರೋನ್ ಮತ್ತು ಮುದಾಫೀರ್‌ನನ್ನು ಕಾಡುಗೊಂಡನಹಳ್ಳಿ ಪೊಲೀಸರು 2011ರಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಎಂಟು ತಿಂಗಳು ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅವರು ಪುನಃ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದರು. ಆರೋಪಿಗಳ ವಿರುದ್ಧ ದರೋಡೆ ಹಾಗೂ ಸರಗಳವು ಸೇರಿದಂತೆ ಎರಡು ವರ್ಷಗಳಲ್ಲಿ ಸುಮಾರು 60 ಅಪರಾಧ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.ಅವರು ಕಳವು ಮಾಡಿದ್ದ ಆಭರಣಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ತಲಘಟ್ಟಪುರದ ಬಳಿ ನಿವೇಶನ ಖರೀದಿಸಿ ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸುತ್ತಿದ್ದರು. ಅಲ್ಲದೇ ಎರಡು ಕಾರುಗಳನ್ನು ಸಹ ಖರೀದಿಸಿದ್ದರು.ಇಮ್ರೋನ್ ಮತ್ತು ಮುದಾಫೀರ್ ನೆಲಮಂಗಲ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್ 16ರಂದು ಸರಗಳವು ಮಾಡುವ ಯತ್ನದಲ್ಲಿ ಸ್ಥಳೀಯರು ಅವರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಯತ್ನದಲ್ಲಿದ್ದಾಗ ಇಮ್ರೋನ್ ಶೌಚಾಲಯಕ್ಕೆ ಹೋಗಿ ಬರುವುದಾಗಿ ಸುಳ್ಳು ಹೇಳಿ ಠಾಣೆಯಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ. ನಂತರ ಆತ ಕುಟುಂಬ ಸದಸ್ಯರೊಂದಿಗೆ ಮಧ್ಯಪ್ರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ನೆಲಮಂಗಲ ಪೊಲೀಸರ ವಶದಲ್ಲಿದ್ದ ಮುದಾಫೀರ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇತರೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ. ಈ ಮಾಹಿತಿ ಆಧರಿಸಿ ಆರೋಪಿಗಳು ಮಧ್ಯಪ್ರದೇಶದಲ್ಲಿರುವುದನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.ಪೋಷಕರೇ ಪ್ರೇರಣೆ:
`ಅನ್ವರ್ ದಂಪತಿಯೇ ಸರಗಳವು ಮಾಡುವಂತೆ ಮಕ್ಕಳಿಗೆ ಪ್ರೇರಣೆ ನೀಡುತ್ತಿದ್ದರು. ದಂಪತಿ ಪ್ರತಿನಿತ್ಯ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಮಕ್ಕಳನ್ನು ನಿದ್ರೆಯಿಂದ ಎಚ್ಚರಗೊಳಿಸಿ ಸರಗಳವು ಮಾಡಿಕೊಂಡು ಬರುವಂತೆ ಕಳುಹಿಸುತ್ತಿದ್ದರು.ಅಲ್ಲದೇ, ಕಳವು ಮಾಡಿಕೊಂಡು ಬಂದ ಚಿನ್ನದ ಸರಗಳನ್ನು ದಂಪತಿಯೇ ಮಾರಾಟ ಮಾಡುತ್ತಿದ್ದರು. ಅವರು ಅಪರಾಧ ಕೃತ್ಯಗಳಿಂದ ಸಂಪಾದಿಸಿರುವ ಹಣ ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ~ ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.