ಮಂಗಳವಾರ, ಮಾರ್ಚ್ 9, 2021
31 °C

ಮಕ್ಕಳ ಪ್ರತಿಭೆಗೆ ವೇದಿಕೆಯಾದ ಡಿಎಚ್ಐಇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಪ್ರತಿಭೆಗೆ ವೇದಿಕೆಯಾದ ಡಿಎಚ್ಐಇ

ಧಾರವಾಡ: ‘ಡೆಕ್ಕನ್‌ ಹೆರಾಲ್ಡ್‌ ಹಾಗೂ ಪ್ರಜಾವಾಣಿ ಪತ್ರಿಕಾ ಸಮೂಹವು ಪ್ರತಿವರ್ಷ ಹಮ್ಮಿಕೊಳ್ಳುತ್ತಾ ಬಂದಿರುವ ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಶನ್‌ (ಡಿಎಚ್ಐಇ) ಸ್ಪರ್ಧೆಯು ಮಕ್ಕಳ ಪ್ರತಿಭೆಯನ್ನು ಗುರುತಿಸಿ ನೀರೆರೆದು ಪೋಷಿಸುವ ಕೆಲಸ ಮಾಡುತ್ತಿದೆ’ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಪಿ.ರವಿಕುಮಾರ್‌ ಶ್ಲಾಘಿಸಿದರು.ಸೋಮವಾರ ಇಲ್ಲಿ ನಡೆದ ಡಿಎಚ್‌ಐಇ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ವಿವಿಧ ಶಾಲೆಗಳ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಅವರು, ‘ಈ ಪತ್ರಿಕೆಗಳು ತಮ್ಮ ದೈನಂದಿನ ಪತ್ರಿಕಾ ಕೆಲಸದ ಮಧ್ಯೆಯೂ ಮಕ್ಕಳಲ್ಲಿ ಹುದುಗಿದ ಸೃಜನಶೀಲತೆ­ಯನ್ನು ಹೊರಗೆ ತೆಗೆದು ಜಗತ್ತಿಗೆ ಮಕ್ಕಳ ಪ್ರತಿಭೆಯನ್ನು ತೋರಿಸುತ್ತಿದೆ. ಇದೊಂದು ಅತ್ಯುತ್ತಮ ಪ್ರಯತ್ನ’ ಎಂದರು.‘ಧಾರವಾಡದಲ್ಲಿ ಇಂದು ದೇಶದ ಎಲ್ಲ ಭಾಗದ ಜನರನ್ನೂ ನೋಡಿದಂತಾಯಿತು. ವಿದ್ಯಾರ್ಥಿನಿಯರು ಉತ್ತರ ಭಾರತ, ದಕ್ಷಿಣ ಭಾರತದ ನೃತ್ಯಗಳನ್ನು ಪ್ರಸ್ತುತಪಡಿಸುವ ಮೂಲಕ ದೇಶದ ವೈವಿಧ್ಯಮಯ ಕಲೆಯ ರಸಗವಳ ಉಣಬಡಿಸಿದರು’ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕೆಯ ಪ್ರಸರಣ ವಿಭಾಗದ ವ್ಯವಸ್ಥಾಕ ಶ್ಯಾಮರಾವ್‌ ಕುಲಕರ್ಣಿ, ‘ಪ್ರತಿವರ್ಷವೂ ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ನಡೆಸುವ ಈ ಸ್ಪರ್ಧೆಗಳಲ್ಲಿ ವಿವಿಧ ಜಿಲ್ಲೆಗಳ ಸುಮಾರು 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದಲ್ಲದೇ, ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ಕಾಮೆಡ್‌ ಕೆ ಪರೀಕ್ಷೆ ಎದುರಿಸುವ ಬಗೆ, ವೃತ್ತಿಪರ ಕೋರ್ಸ್‌ ನಂತರ ದೊರೆಯುವ ಉದ್ಯೋಗಾವ­ಕಾಶಗಳ ಬಗ್ಗೆಯೂ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ನಾಗರಿಕರು ತಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಎದುರು ಹೇಳಿಕೊಳ್ಳುವ ವೇದಿಕೆಯಾಗಿ ಜನಸ್ಪಂದನ ಕಾರ್ಯಕ್ರಮವೂ ನಡೆಯುತ್ತದೆ’ ಎಂದರು.ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಶಿವರಾಜ ನರೋಣಾ, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ದಿವಾಕರ್‌ ವೇದಿಕೆಯಲ್ಲಿದ್ದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಣೆ ­ಮಾಡಿದರು.ಸ್ಪರ್ಧೆ ನಿರ್ಣಾಯಕರು

ಗಾಯನ ಸ್ಪರ್ಧೆಗೆ ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ.ಜಯದೇವಿ ಜಂಗಮಶೆಟ್ಟಿ, ನೃತ್ಯ ಸ್ಪರ್ಧೆಗೆ ವಿದುಷಿ ರೋಹಿಣಿ ಇಮಾರತಿ, ಚಿತ್ರಕಲಾ ಸ್ಪರ್ಧೆಗೆ ಸರ್ಕಾರಿ ಚಿತ್ರಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎನ್‌.ಎಂ.ದಾಟನಾಳ, ಕ್ವಿಜ್‌ ಸ್ಪರ್ಧೆಗೆ ಫಕ್ಕೀರೇಶ ಇಂಗಳಗಿ, ಪಿಕ್‌ ಅಂಡ್‌ ಆ್ಯಕ್ಟ್‌ ಸ್ಪರ್ಧೆಗೆ ರವಿ ಕುಲಕರ್ಣಿ ಅವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಪುಟಿದ ನವೋಲ್ಲಾಸ

ಬೆಳಿಗ್ಗೆಯಿಂದ ಮಧ್ಯಾಹ್ನ ಮೂರು ಗಂಟೆಯವರೆಗೂ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಅತ್ಯಂತ ಉತ್ಸಾಹ, ಸಂಭ್ರಮದಿಂದ ಭಾಗವಹಿಸಿದ್ದರು. ನೃತ್ಯಗಾರ್ತಿಯರು ಮನೆಯಿಂದಲೇ ತಮ್ಮ ಪೋಷಾಕನ್ನು ಧರಿಸಿಕೊಂಡು ಬಂದಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಬಂದು ಜಡೆಗೆ ಹೂ ಮುಡಿಯುವ, ಉಗುರಿಗೆ ನೇಲ್ ಪಾಲಿಷ್‌ ಮಾಡಿಕೊಳ್ಳುವ ಪುಟ್ಟ ವನಿತೆಯರೂ ಇದ್ದರು. ಪ್ರಶಸ್ತಿ ಬಂದ ತಂಡದವರು ಪ್ರಮಾಣಪತ್ರ ಪಡೆಯಲು ವೇದಿಕೆಯತ್ತ ತೆರಳುತ್ತಿದ್ದಂತೆಯೇ ಇತ್ತ ಅವರ ಶಾಲೆಯ ಮಕ್ಕಳು ಕೇಕೆ ಹಾಕಿ ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಿದ್ದರು.ವಿದ್ಯಾರ್ಥಿ–ಪೋಷಕರ ಅನಿಸಿಕೆಡೆಕ್ಕನ್‌ ಹೆರಾಲ್ಡ್‌ ಪ್ರೀತಿಯ ಪತ್ರಿಕೆ

‘ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯು ಸರಳ ಇಂಗ್ಲಿಷ್‌ ಭಾಷೆ ಹೊಂದಿದ್ದು, ವಿದ್ಯಾರ್ಥಿಗಳಿಗೆ ಸರಳ ರೀತಿಯ ಮೂಲಕ ಇಂಗ್ಲಿಷ್ ಭಾಷೆ ಕಲಿಸಿಕೊಡುವ ಪತ್ರಿಕೆಯಾಗಿದೆ. ಶಾಲಾ ವಿದ್ಯಾರ್ಥಿಗಳಿಗಾಗಿಯೇ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ವಿಶೇಷ ಸಂಚಿಕೆ ಬರುತ್ತಿದ್ದು, ಅದರಲ್ಲಂತೂ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ವಿಷಯಗಳಿರುತ್ತವೆ.

ಆದ್ದರಿಂದಲೇ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯನ್ನು ನಾವು ಪ್ರೀತಿಸುತ್ತೇವೆ. ಕೇವಲ ಜ್ಞಾನಾರ್ಜನೆ ಅಷ್ಟೇ ಅಲ್ಲದೇ ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪತ್ರಿಕೆಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕುವ ನಿಟ್ಟಿನಲ್ಲಿ ಅವರಿಗೊಂದು ವಿಶೇಷವಾದ ವೇದಿಕೆ ಒದಗಿಸಿಕೊಟ್ಟು ಅವರ ಪ್ರತಿಭೆ ಅನಾವರಣ ಮಾಡುತ್ತಿರುವ ಕಾರ್ಯ ಮಹತ್ವವಾದದ್ದು. ಪ್ರತಿವರ್ಷ ಈ ರೀತಿಯಾದಂಥ ಕಾರ್ಯಕ್ರಮವನ್ನು ಈ ಎರಡೂ ಪತ್ರಿಕೆಗಳು ಆಯೋಜಿಸುವುದರಿಂದ ಮಕ್ಕಳಿಗೆ ಖುಷಿ ಉಂಟಾಗುತ್ತದೆ’

-ವೀಣಾ ಗೋಂದಕರಪ್ರತಿಭೆ ಅನಾವರಣಕ್ಕೆ ಅವಕಾಶ


‘ಮೊಟ್ಟ ಮೊದಲ ಬಾರಿಗೆ ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪತ್ರಿಕೆಗಳಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸಬೇಕು. ಏಕೆಂದರೆ ವಿಭಿನ್ನವಾದ ಕಾಯರ್ಕ್ರಮಗಳ ಮೂಲಕ ಮಕ್ಕಳನ್ನು ಗುರುತಿಸಿ ಅವರ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟಿವೆ.

ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪಾಲಕರ ಮತ್ತು ಪೋಷಕರ ಪರವಾಗಿ ಈ ಎರಡೂ ಪತ್ರಿಕೆಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ವಿದ್ಯಾರ್ಥಿಗಳ ವಿಭಿನ್ನ ಕಾರ್ಯಕ್ರಮಕ್ಕೆ ವೇದಿಕೆ ಕಲ್ಪಿಸಿಕೊಟ್ಟ ಪತ್ರಿಕೆಗಳು ವಿದ್ಯಾರ್ಥಿ ಸ್ನೇಹಿ ಪತ್ರಿಕೆಗಳಾಗಿವೆ’.

-ವಾಣಿಶ್ರೀ ಮೋಟೆಕರಇದು ಮಹತ್ವದ ವೇದಿಕೆ


ನಾನಾ ರೀತಿಯ ಪ್ರತಿಭೆ ಹೊಂದಿದ ವಿದ್ಯಾರ್ಥಿಗಳಿಗೆ ಈ ಎರಡೂ ಪತ್ರಿಕೆಗಳು ಅವಕಾಶ ಕಲ್ಪಿಸಿದ್ದವು. ನಮ್ಮ ಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳಲು ಇದು ನಮಗೆ ದೊರೆತ ಮಹತ್ವದ ವೇದಿಕೆಯಾಗಿತ್ತು. ಬೆಳಿಗ್ಗೆಯಿಂದಲೇ ನಾವು ಖಷಿಯಾಗಿದ್ದೆವು. ವೇದಿಕೆ ಹತ್ತುವ ಮುನ್ನ ಕೊಂಚ ಭಯವೆನಿಸಿದರೂ ಸೇರಿದ್ದ ಪ್ರೇಕ್ಷಕರ ಮುಂದೆ ನಮ್ಮ ಪ್ರತಿಭೆ ತೋರಿಸಿಕೊಳ್ಳುವುದು ಹೆಮ್ಮೆಯ ವಿಷಯ.

-ವರ್ಷಿಣಿ ಜಿ. ಸೇಂಟ್‌ ಜೊಸೆಫ್‌ನಿರ್ಣಾಯಕರಿಂದ ಯೋಗ್ಯ ನಿರ್ಣಯ


ಕಳೆದ ಮೂರು ವರ್ಷಗಳಿಂದ ನಾನು ಡೆಕ್ಕನ್‌ ಹೆರಾಲ್ಡ್‌ ಓದುತ್ತಿದ್ದೇನೆ. ಈ ಪತ್ರಿಕೆಯಲ್ಲಿ ಮಕ್ಕಳಿಗೆ ಉಪಯುಕ್ತವಾಗುವ ವಿಷಯಗಳೇ ಇರುತ್ತವೆ. ಇದರ ಮೂಲಕ ಇಂಗ್ಲಿಷ್‌ ಭಾಷೆಯನ್ನು ಮಕ್ಕಳು ವೃದ್ಧಿಸಿಕೊಳ್ಳ­ಬಹುದು. ಸದ್ಯ ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪತ್ರಿಕೆಗಳ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮ ಮಕ್ಕಳ ಪ್ರತಿಭೆಗೆ ತಕ್ಕ ವೇದಿಕೆಯಾಗಿ ಪರಿಣಮಿಸಿತ್ತು. ಈ ಕಾರ್ಯಕ್ರಮದಲ್ಲಿ ನಿರ್ಣಾಯಕರು ಯೋಗ್ಯ ನಿರ್ಣಯಗಳನ್ನೇ ನೀಡಿದ್ದಾರೆ.

-ಶಾರದಾ ದೊಡಮನಿಮಕ್ಕಳು ಅಪಾರ ಖುಷಿ ಪಟ್ಟರು


ಶಾಲಾ ಮಕ್ಕಳಿಗೆ ಇದೊಂದು ಮಹತ್ವದ ಕಾರ್ಯಕ್ರಮವಾಗಿತ್ತು. ಮುಕ್ತವಾದ ವೇದಿಕೆ ಇಲ್ಲಿ ನಿಮಾರ್ಣವಾಗಿ ಮಕ್ಕಳ ಕಲೆ, ಪ್ರತಿಭೆ ಅನಾವರಣಗೊಂಡವು. ಇದರಿಂದ ಮಕ್ಕಳೂ ಸಹ ಸಾಕಷ್ಟು ಖುಷಿ ಪಟ್ಟರು.

-ಜಯಶ್ರೀ ಚೌಗಲೆಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ


‘ನಾನು ಎಂದೂ ನಮ್ಮ ಸಮೂಹ ನೃತ್ಯ ಪ್ರಶಸ್ತಿ ಪಡೆದುಕೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಜಾನಪದ ನೃತ್ಯವನ್ನು ಮಾಡಿದ ನಮಗೆ ಸಾಕಷ್ಟು ಖುಷಿ ಆಯಿತು. ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪತ್ರಿಕೆಗಳು ಪ್ರತಿವರ್ಷ ಹೀಗೆ  ನಮಗೆ ಮುಕ್ತವಾದ ವೇದಿಕೆ ಕಲ್ಪಿಸಿಕೊಡಬೇಕು’

-ನೀಲಮ್ಮ ಜಂತ್ಲಿ, ಜವಾಹರ ನವೋದಯ ವಿದ್ಯಾಲಯವೇದಿಕೆಯಲ್ಲಿ ಹಾಡಿದ್ದೇ ಖುಷಿ ನನಗೆ


‘ನಾನು ಹಾಡಗಾರಿಕೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ನನಗೆ ಯಾವುದೇ ಪ್ರಶಸ್ತಿ ಲಭಿಸದಿದ್ದರೂ ಪ್ರಶಸ್ತಿ ಪಡೆದವರಿಗಿಂತ ಹೆಚ್ಚು ನಾನು ಖುಷಿ ಪಟ್ಟೆ. ಏಕೆಂದರೆ ಎಂದೂ ವೇದಿಕೆಯನ್ನೇ ಹತ್ತದ ನನಗೆ ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪತ್ರಿಕೆಗಳು ವೇದಿಕೆ ಹತ್ತಲು ಅವಕಾಶ ಕಲ್ಪಿಸಿಕೊಟ್ಟವು. ಸೇರಿರುವ ಪ್ರೇಕ್ಷಕರ ಮುಂದೆ ಹೇಗೆ ಹಾಡೋದು ಎಂದು ಕೆಲ ಕಾಲ ನಾನು ಹೆದರಿದ್ದೆ. ಆದರೆ, ಅಲ್ಲಿ ಸೇರಿದ್ದ ಎಲ್ಲ ವಿದ್ಯಾರ್ಥಿಗಳು ಹಾಡುವುದನ್ನು ಕಂಡು ನನ್ನಲ್ಲಿ ಮೂಡಿದ್ದ ಹೆದರಿಕೆ ಮಾಯವಾಯಿತು. ವೇದಿಕೆ ಮೇಲೆ ನಿಲ್ಲಲು ಅವಕಾಶ ಮಾಡಿಕೊಟ್ಟ ಈ ಎರಡೂ ಪತ್ರಿಕೆಗೆ ನನ್ನ ಧನ್ಯವಾದ’

-ತೇಜಶ್ರೀ ಎನ್‌.ಜಿ. ಜವಾಹರ ನವೋದಯ ವಿದ್ಯಾಲಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.