ಗುರುವಾರ , ಜುಲೈ 29, 2021
23 °C

ಮಠಕ್ಕೆ ಅನುದಾನ; ಶೋಭಾ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಂಘ ಸಂಸ್ಥೆಗಳಿಗೆ ಹಾಗೂ ಮಠಮಾನ್ಯಗಳಿಗೆ ಮುಖ್ಯಮಂತ್ರಿಯವರು ಹಣ ನೀಡುತ್ತಿರುವ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’ ಎಂದು ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.ಪರಿವಾರ ಬಂಟರ ಸಂಘವು ಡಾ.ರಾಜ್‌ಕುಮಾರ್ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಅಧಿವೇಶನ ಹಾಗೂ ಬೆಂಗಳೂರು ವಲಯದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.‘ರಾಜ್ಯದಲ್ಲಿ ಎಷ್ಟೋ ಸಮುದಾಯಗಳು ಅಭಿವೃದ್ಧಿ ಕಾಣದೆ ಅವನತಿಯತ್ತ ಸಾಗುತ್ತಿವೆ. ಇಂತಹ ಜನಾಂಗದ ಹಾಗೂ ಸಮಾಜದ ಬೆಳವಣಿಗೆ ದೃಷ್ಟಿಯಿಂದ ಹಣವನ್ನು ನೀಡುತ್ತಿದ್ದಾರೆಯೇ ಹೊರತು ಈ ಹಿಂದೆ ಯಾವುದೇ ಉದ್ದೇಶವಿಲ್ಲ’ ಎಂದು ಪರೋಕ್ಷವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.‘ಪರಿವಾರ ಬಂಟರ ಜನಾಂಗವು ರಾಜ್ಯದಲ್ಲಿ ಅತಿ ಸಣ್ಣ ಸಮುದಾಯವಾಗಿದೆ.  ಕೋಮುಸಂಘರ್ಷಕ್ಕೆ ತಲೆಹಾಕದೆ ಶಾಂತಿಯುತವಾಗಿ ಸಮಾಜದಲ್ಲಿ ಎಲ್ಲಾ ಜನಾಂಗದವರೊಂದಿಗೆ ಸಾಮರಸ್ಯದಿಂದ ಜೀವನ ನಡೆಸುತ್ತಿರುವ ಮಾದರಿ ಜನಾಂಗವಾಗಿದೆ’ ಎಂದರು.‘ರಾಜ್ಯದಲ್ಲಿ ಸಮಾಜದ ಮುಖ್ಯವಾಹಿನಿಗೆ ಬಾರದೆ ಎಷ್ಟೋ ಸಣ್ಣ ಜನಾಂಗಗಳ ಸಂತತಿ ಅವನತಿ ಹೊಂದುತ್ತಿದ್ದು, ಅಂತಹ ಜನಾಂಗಗಳ ಬೆಳವಣಿಗೆಗೆ ಸರ್ಕಾರ ಹೆಚ್ಚಿನ ಗಮನ ನೀಡಬೇಕು’ ಎಂದು ಹೇಳಿದರು.‘ಯಾವುದೇ ಜನಾಂಗ ಸಮಾಜದಲ್ಲಿ ಬಲಿಷ್ಠವಾಗಲು ಜನಸಂಖ್ಯೆ ಮತ್ತು ಶಿಕ್ಷಣ ಅಗತ್ಯ. ಪರಿವಾರ ಸಮುದಾಯವು ಬಲಿಷ್ಠವಾಗಿ ಬೆಳೆಯಲು ಸಮುದಾಯದ ಜನಸಂಖ್ಯೆ ಬೆಳವಣಿಗೆಗೆ ಮಹತ್ವ ನೀಡಬೇಕು’ ಎಂದರು.‘ಕೇಂದ್ರ ಸರ್ಕಾರ ಪ್ರಾಣಿಗಳ ಸಂತತಿ ಹಾಗೂ ಬೆಳವಣಿಗೆಗೆ ಸಾಕಷ್ಟು ಯೋಜನೆ, ಹಣ ವ್ಯಯ ಮಾಡುತ್ತಿದೆ. ಆದರೆ ಇಂತಹ ಸಣ್ಣ ಜನಾಂಗಗಳ ರಕ್ಷಣೆಗೆ ಕಾಳಜಿ ವಹಿಸದಿರುವುದು ದುರದೃಷ್ಟಕರ ಸಂಗತಿ’ ಎಂದು ವಿಷಾದಿಸಿದ ಅವರು, ‘ಸಮಾಜದಲ್ಲಿರುವ ಇಂತಹ ಎಲ್ಲಾ ಜನಾಂಗಗಳ ಪ್ರಗತಿಗೆ ಸರ್ಕಾರ ನೆರವು ನೀಡಲು ಮುಂದಾಗಲಿದೆ’ ಎಂದರು.ಸಂಘದ ಅಧ್ಯಕ್ಷ ಬಿ.ರಾಮಯ ನಾಕ್, ಬೆಂಗಳೂರು ವಲಯದ ಅಧ್ಯಕ್ಷ ಎ.ಚಂದ್ರಶೇಖರ ನಾಕ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಜಯರಾಮ ನಾಕ್, ಬೆಂಗಳೂರು ವಲಯ ಸಮಿತಿ ಕಾರ್ಯದರ್ಶಿ ಎ.ರಘುವೀರ್ ನಾಕ್, ಉಪಸ್ಥಿತರಿದ್ದರು.‘ನಮ್ಮ ಪರಿವಾರ- 2011’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.ಪರಿವಾರ ಬಂಟರೆಂದರೆ?


ಇದೊಂದು ಸಣ್ಣ ಸಮುದಾಯ. ದಕ್ಷಿಣ ಕನ್ನಡ, ಮಂಗಳೂರು, ಕಾಸರಗೋಡು ಪ್ರದೇಶಗಳಲ್ಲಿ ವಾಸವಿರುವ ಜನಾಂಗವಾಗಿದೆ. ರಾಜ್ಯದಲ್ಲಿ ಈ  ಸಮುದಾಯದ ಒಟ್ಟು ಜನಸಂಖ್ಯೆ15 ಸಾವಿರ. ತುಳು ಇವರ ಭಾಷೆ. ಬ್ರಾಹ್ಮಣ ಜನಾಂಗದ ಆಚರಣೆಗಳಂತೆ ಇವರ ಜೀವನ ಶೈಲಿ ಸಹ. ಕೃಷಿ ಮುಖ್ಯ ಕಸುಬಾಗಿದ್ದು, ಇತ್ತೀಚಿನ ದಿನಗಳಲ್ಲಿ ಯುವಕರು ವ್ಯಾಪಾರ, ಉದ್ಯೋಗ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.ಐತಿಹಾಸಿಕ ಹಿನ್ನೆಲೆ: ಈ ಜನಾಂಗದವರು ವಿಜಯನಗರ ಅರಸರ ಕಾಲದ ತುಳು ವಂಶದ ಮೂಲದವರು. ತುಳು ವಂಶದ ದೊರೆ ವೀರನರಸಿಂಹ ನಾಯಕನಿಗೆ ಶೃಂಗೇರಿಯ ಅಂದಿನ ಗುರುಗಳು ‘ಪರಿವಾರ ಬಂಟ’ ಜನಾಂಗಕ್ಕೆ ದೀಕ್ಷೆ ನೀಡಿದರಂತೆ. ವಿಜಯನಗರದ ಅಂದಿನ ಆಳ್ವಿಕೆಯಲ್ಲಿ ಹಿಂದೂ ದೇವಾಲಯಗಳ ಮೇಲೆ ಮುಸ್ಲಿಂ ರಾಜರು ದಾಳಿ ನಡೆಸುತ್ತಿದ್ದರು. ಈ ದಾಳಿಗಳನ್ನು ಹತ್ತಿಕ್ಕಲು ಮತ್ತು ಹಿಂದೂ ಧರ್ಮ ರಕ್ಷಿಸಲು ಅಸ್ಥಿತ್ವಕ್ಕೆ ಬಂದ ಸಮುದಾಯವಾಗಿದೆ.ಸಣ್ಣ ಸಮುದಾಯವಾಗಿದ್ದರೂ ಸಂಘಟನಾತ್ಮಕ ಮನೋಭಾವನೆ  ಇದೆ. ಸಮಾಜ ಸೇವೆ ಮಾಡುವವರಿಗೆ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ ಎಂದು ಸಂಘದ ಪದಾಧಿಕಾರಿಗಳು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.