ಮಂಗಳವಾರ, ಮೇ 24, 2022
30 °C

ಮಠದ ಉದ್ಯಾನದಲ್ಲಿ ಜೀವ ವಿಕಾಸ

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

ಚಿತ್ರದುರ್ಗದ ಮುರುಘಾ ಮಠದ ಉದ್ಯಾನ ಈಗ ಜೀವ ಸಂಕುಲದ ವಿಕಾಸ ಪಕ್ರಿಯೆ, ಶರಣ ಪರಂಪರೆ ಹಾಗೂ ಕಾಯಕ ಸಂಸ್ಕೃತಿಯನ್ನು ಬಿಂಬಿಸುವ ಹತ್ತಾರು ಕಲಾಕೃತಿಗಳ ಮೂಲಕ ನೂರಾರು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ.ಮಾನವನ ಬದುಕು ವಿಕಾಸಗೊಂಡ ಪರಿ, ಕಾಯಕ ಸಂಸ್ಕೃತಿ, ಶರಣ ಪರಂಪರೆ ಹಾಗೂ ಗ್ರಾಮೀಣ ಬದುಕಿನ ಸೊಗಡನ್ನು ಬಿಂಬಿಸುವ ಹತ್ತಾರು ಸಿಮೆಂಟಿನ ಕಲಾಕೃತಿಗಳು ಅಲ್ಲಿ ನಿರ್ಮಾಣಗೊಂಡಿವೆ. ಇಡೀ ಉದ್ಯಾನ ಈಗ ಹೊಸತನದಿಂದ ಕಂಗೊಳಿಸುತ್ತಿದೆ.`ಅಂದಿನಿಂದ-ಇಂದಿನವರೆಗೆ~ ಎಂಬ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಇಲ್ಲಿನ ಕಲಾಕೃತಿಗಳಲ್ಲಿ ಕ್ರಿಸ್ತ ಪೂರ್ವ ಮತ್ತು ನಂತರದ ಜೀವ ವಿಕಾಸದ ಬೆಳವಣಿಗೆಯ ಮಜಲುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.ಅವನತಿ ಹೊಂದಿದ ಪ್ರಾಣಿಗಳು (ಡೈನೋಸಾರ್)ಆದಿ ಮಾನವರ ಜೀವನ ಕ್ರಮಗಳನ್ನು ಬಿಂಬಿಸುವ ಸಿಮೆಂಟಿನ ಕಲಾಕೃತಿಗಳನ್ನು ನಿರ್ಮಿಸಿರುವ ಕಲಾವಿದರು ಅವುಗಳಿಗೆ `ಜೀವ~ ತುಂಬಿದ್ದಾರೆ.ಬೆತ್ತಲೆಯಾಗಿ ಬದುಕುತ್ತಿದ್ದ ಆದಿ ಮಾನವರು, ನಂತರದ ಕಾಲಘಟ್ಟದಲ್ಲಿ ಪ್ರಾಣಿಗಳ ಚರ್ಮವನ್ನು ಹದಗೊಳಿಸಿ ಅದನ್ನೇ ಬಟ್ಟೆಯಂತೆ ಉಪಯೋಗಿಸುವುದನ್ನು ಕಲಿತರು.ಪ್ರಾಣಿಗಳನ್ನು ಬೇಟೆಯಾಡಿ ಹಸಿಮಾಂಸ ತಿನ್ನುತ್ತಿದ್ದ ಅವರು ಕ್ರಮೇಣ ಬೆಂಕಿಯ ಆವಿಷ್ಕಾರಕ್ಕೆ ಮುಂದಾದರು. ಶಿಲಾ ಆಯುಧಗಳನ್ನು ಬಳಸುತ್ತಿದ್ದ ಅವರು ಲೋಹದ ಬಳಕೆ ಕಂಡುಕೊಂಡರು. ಗುಹೆಗಳಲ್ಲಿ ವಾಸಿಸುತ್ತಿದ್ದ ಅವರು ಮನೆಗಳನ್ನು ನಿರ್ಮಿಸಿಕೊಂಡರು.ಕ್ರಮೇಣ ಬೇಸಾಯಕ್ಕೆ ಮುಂದಾದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದಿ ಮಾನವನ ಜೀವನ ವಿಕಾಸದ ವಿವಿಧ ಮಜಲುಗಳನ್ನು ಕಟ್ಟಿಕೊಡುವ ಸಿಮೆಂಟಿನ ಕಲಾಕೃತಿಗಳು ಅತ್ಯಂತ ಆಕರ್ಷಕವಾಗಿವೆ.ಮುರುಘಾ ಮಠ ಪ್ರವೇಶಿಸುತ್ತಿದ್ದಂತೆ ಅನ್ನದಾತನ ಕಾಯಕ ಬದುಕಿನ ಹಲವು ಮುಖಗಳು ಅನಾವರಣಗೊಳ್ಳುತ್ತವೆ. ಜೋಡೆತ್ತಿನ ನೇಗಿಲು ಹೂಡಿಕೊಂಡು ಭೂಮಿ ಉಳುತ್ತಿರುವ ರೈತ, ಅವನಿಗೆ ನೆರವು ನಿಡುತ್ತಿರುವ ರೈತ ಮಹಿಳೆಯರ ಕಲಾಕೃತಿಗಳು ಅಲ್ಲಿ ನಿಜವಾದ ರೈತರೇ ಬೇಸಾಯದಲ್ಲಿ ತೊಡಗಿದ್ದಾರೇನೋ ಎಂದು ಭಾವಿಸುವಷ್ಟು ಜೀವಂತವಾಗಿವೆ.ಸಾವಿರಾರು ವರ್ಷಗಳ ಹಿಂದೆ ಇದ್ದ ದೈತ್ಯಾಕಾರದ ಡೈನೋಸಾರ್‌ಗಳು, ದನ ಕರುಗಳು, ಹಳ್ಳಿಕಾರ್ ತಳಿಯ ಹಾಲುಣಿಸುತ್ತಿರುವ ಹಸು, ಜಿಂಕೆ, ನವಿಲು, ಮೊಸಳೆ, ಜಿರಾಫೆ ಮತ್ತಿತರ ಪ್ರಾಣಿ, ಪಕ್ಷಿಗಳ ಜತೆಯಲ್ಲಿ ಸಹಜೀವನ ಸಂದೇಶ ಸಾರುವ ಹಾವುಗಳ ಹಲವಾರು ಕಲಾಕೃತಿಗಳಿವೆ. ಕದಳೀವನಕ್ಕೆ ಹೊರಟುನಿಂತ ಅಕ್ಕ ಮಹಾದೇವಿ, ಶರಣನೊಬ್ಬನ ಮಾತು ಕೇಳುತ್ತಿರುವ ಗ್ರಾಮೀಣ ಜನರು ಹಾಗೂ ಗ್ರಾಮೀಣ ದೈನಂದಿನ ಬದುಕನ್ನು ಬಿಂಬಿಸುವ ಹಲವು ಕಲಾಕೃತಿಗಳು ಉದ್ಯಾನದಲ್ಲಿ ನಿರ್ಮಾಣಗೊಂಡಿವೆ.ಕೂಡಲಸಂಗಮದ ಐಕ್ಯಮಂಟಪ, ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡುತ್ತಿರವ ಮೊಸಳೆ, ಪೆಂಗ್ವಿನ್, ನೀರಾನೆ ಹಾಗೂ ವಿವಿಧ ಪ್ರಬೇಧಗಳ ಕೊಕ್ಕರೆಗಳನ್ನು ನಿರ್ಮಿಸಲಾಗಿದೆ. ಸಮೀಪದ ಮರದ ಮೇಲೆ ಗೂಬೆ, ಹದ್ದು, ಗಿಡುಗ, ಪಾರಿವಾಳ ಸೇರಿದಂತೆ ಪಕ್ಷಿಗಳ ಸಮೂಹವಿದೆ. ಇವೆಲ್ಲ ಜೀವಂತ ಹಕ್ಕಿಗಳೇನೋ ಎನ್ನಿಸುವಷ್ಟು ಸಹಜತೆಯಿಂದ ಈ ಕಲಾಕೃತಿಗಳು ಮೈತುಂಬಿಕೊಂಡು ನಿಂತಿವೆ. ಕಲಾವಿದರ ಕೈಚಳಕ

ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದ ಕಲಾವಿದ ಸಂಗಮೇಶ ಕತ್ತಿ ಮತ್ತು ಅವರ ಸಂಗಡಿಗರಾದ ಹದಿನೈದು ಕಲಾವಿದರು ಕಳೆದ ಒಂದೂವರೆ ವರ್ಷ ನಿರಂತರವಾಗಿ ದುಡಿದು ಈ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.ಶಿವಮೂರ್ತಿ ಮುರುಘಾ ಶರಣರ ಕಲ್ಪನೆ ಮತ್ತು ಅವರ ಮಾರ್ಗದರ್ಶನದಲ್ಲಿ ಈ ಕಲಾವಿದರು ಸಿಮೆಂಟಿನ  ಕಲಾಕೃತಿಗಳನ್ನು ರೂಪಿಸಿದ್ದಾರೆ.`ನಮ್ಮ ಗುರುಗಳೂ, ನಾಡಿನ ಖ್ಯಾತ ಕಲಾವಿದರೂ ಆದ ಟಿ.ಬಿ. ಸೊಲಬಕ್ಕನವರ ಅವರೇ ನಮಗೆ ಸ್ಫೂರ್ತಿ. ಅವರು ಇಂತಹ ನೂರಾರು ಕಲಾಕೃತಿಗಳನ್ನು ಆಲಮಟ್ಟಿ ಜಲಾಶಯ ಹಾಗೂ ಹುಬ್ಬಳ್ಳಿ ಸಮೀಪದ ರಾಕ್ ಗಾರ್ಡನ್‌ನಲ್ಲಿ ನಿಮಿರ್ದ್ಸಿದ್ದಾರೆ. ಅವರ ಕಲಾಕೃತಿಗಳನ್ನು ನೋಡಿದಾಗ ತಮಗೂ ಇಂತಹ ಕೃತಿಗಳನ್ನು ನಿರ್ಮಿಸಬೇಕು ಎಂಬ ಆಸೆ ಇತ್ತು. ಮುರುಘಾ ಶರಣರು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕಲಾವಿದ ಸಂಗಮೇಶ್ ಹೇಳುತ್ತಾರೆ.ಸುಮಾರು ಎಪ್ಪತ್ತು ಎಕರೆ ವಿಸ್ತೀರ್ಣದಲ್ಲಿರುವ ಮುರುಘಾವನ ಈಗ ಈ ಎಲ್ಲ ಕಲಾಕೃತಿಗಳಿಂದ ಮೈದುಂಬಿಕೊಂಡಿದೆ. ಉದ್ಯಾನ ಕಳೆದ ದಸರಾ ಹಬ್ಬದ ಸಂದರ್ಭದಲ್ಲಿ ಔಪಚಾರಿಕವಾಗಿ ಉದ್ಘಾಟನೆಯಾಯಿತು.ದಸರಾ ಅಂಗವಾಗಿ ನಡೆದ ಸಮಾರಂಭಕ್ಕೆ ಬಂದಿದ್ದ ಸಾವಿರಾರು ಜನರು ಉದ್ಯಾನ ನೋಡಿ ಸಂತೋಷಪಟ್ಟಿದ್ದಾರೆ. ಈ ಉದ್ಯಾನ ಈಗ ಚಿತ್ರದುರ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣದಂತಾಗಿದೆ. ಶಾಲಾ ಮಕ್ಕಳಿಗಳಿಗಂತೂ ಈ ಉದ್ಯಾನ ಅಚ್ಚುಮೆಚ್ಚು. ಚಿತ್ರದುರ್ಗದ ಕೋಟೆ ನೋಡಲು ಬರುವ ಪ್ರವಾಸಿಗರು ಮುರುಘಾ ವನದ ವೀಕ್ಷಣೆಗೂ ಬರುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.